ETV Bharat / state

18 ತಿಂಗಳಲ್ಲಿ 71 ಭ್ರಷ್ಟ ಅಧಿಕಾರಿ, ಸಿಬ್ಬಂದಿಗಳಿಗೆ ಜೈಲಿನ ದಾರಿ ತೋರಿಸಿದ ಲೋಕಾಯುಕ್ತ ಪೊಲೀಸರು - Lokayuktha Cases

author img

By ETV Bharat Karnataka Team

Published : May 25, 2024, 9:54 PM IST

ಕಳೆದ 18 ತಿಂಗಳಲ್ಲಿ 71 ಭ್ರಷ್ಟರಿಗೆ ಶಿಕ್ಷೆ ಕೊಡಿಸುವಲ್ಲಿ ಲೋಕಾಯುಕ್ತ ಅಧಿಕಾರಿಗಳು ಯಶಸ್ಸು ಕಂಡಿದ್ದಾರೆ.

ಲೋಕಾಯುಕ್ತ
ಲೋಕಾಯುಕ್ತ (ETV Bharat)

ಬೆಂಗಳೂರು: ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಬಲವರ್ಧನೆ ಬಳಿಕ ಭ್ರಷ್ಟರ ವಿರುದ್ಧ ಸಮರ ತೀವ್ರಗೊಳಿಸಿರುವ ಅಧಿಕಾರಿಗಳು ಕಳೆದ 18 ತಿಂಗಳಲ್ಲಿ 71 ಮಂದಿ ಭ್ರಷ್ಟರಿಗೆ ಶಿಕ್ಷೆ ಕೊಡಿಸುವಲ್ಲಿ ಯಶ ಕಂಡಿದ್ದಾರೆ.

2022ರ ಜೂನ್ ನಿಂದ 2024ರ ಏಪ್ರಿಲ್ ಅಂತ್ಯಕ್ಕೆ ದಾಖಲಾಗಿದ್ದ 253 ಪ್ರಕರಣಗಳಲ್ಲಿ 71 ಮಂದಿಗೆ ಅಧಿಕಾರಿಗಳು ಜೈಲಿನ ದಾರಿ ತೋರಿಸಲಾಗಿದೆ. ಸಾಕ್ಷ್ಯಾಧಾರ ಕೊರತೆ ಹಾಗೂ ಸೂಕ್ತ ದಾಖಲಾತಿವಿಲ್ಲದೆ 129 ಪ್ರಕರಣಗಳನ್ನ ಖುಲಾಸೆಗೊಳಿಸಲಾಗಿದೆ. ಇನ್ನುಳಿದ 53 ಪ್ರಕರಣಗಳನ್ನ ಇತ್ಯರ್ಥಪಡಿಸಲಾಗಿದೆ‌. ಲಂಚಗುಳಿತನ‌, ಅಧಿಕಾರ ದುಬರ್ಳಕೆ‌ ಮಾಡಿ ಸರ್ಕಾರಿ ಕಚೇರಿಗಳಿಗೆ ಬರುವ ಮುಗ್ಧ ಜನರಿಂದ ಅವರ ಕೆಲಸ‌ ಮಾಡಿಸಿಕೊಡಲು ಹಣ ಪಡೆದು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವುದು ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿ ತೆರಿಗೆ ಪಾವತಿಸದೇ ಸರ್ಕಾರಕ್ಕೆ ವಂಚಿಸಿದ ಅಪಾದನೆ ಪ್ರಕರಣಗಳಲ್ಲಿ 71 ಮಂದಿಗೆ ಜೈಲು ಶಿಕ್ಷೆ ಕೊಡಿಸಿದ್ದು, ಈ ಮೂಲಕ ಶಿಕ್ಷೆ ಪ್ರಮಾಣ ಶೇ.35ರಷ್ಟಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ‌.

ಸಾರ್ವಜನಿಕ ಸೇವೆಯಲ್ಲಿರುವ ನೌಕರರ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣಗಳ ತನಿಖೆ ನಡೆಸಲು ರಚಿಸಲಾಗಿದ್ದ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ರದ್ದುಗೊಳಿಸಿ ಮತ್ತೆ ಲೋಕಾಯುಕ್ತಕ್ಕೆ ಎಫ್ಐರ್ ದಾಖಲಿಸಿ ತನಿಖೆ ನಡೆಸಬೇಕೆಂದು 2020 ಆಗಸ್ಟ್ 11ರಂದು ಹೈಕೋರ್ಟ್ ತೀರ್ಪು ನೀಡಿತ್ತು‌‌‌‌.‌ ಇದರಂತೆ ತನಿಖಾ ಹಂತದಲ್ಲಿದ್ದ 1171 ಪ್ರಕರಣ ಸೇರಿದಂತೆ ಒಟ್ಟು 2159 ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿತ್ತು. ಲೋಕಾಯುಕ್ತಕ್ಕೆ ಅಧಿಕಾರ ನೀಡುತ್ತಿದ್ದಂತೆ ಇದುವರೆಗೂ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರ ಮೇಲೆ ದಾಳಿ ಮಾಡಿ 118 ಪ್ರಕರಣ ದಾಖಲಿಸಲಾಗಿದೆ.

398 ಟ್ರ್ಯಾಪ್ ಪ್ರಕರಣಗಳು ಹಾಗೂ 52 ಇನ್ನಿತರ ಪ್ರಕರಣ ಒಳಗೊಂಡಂತೆ ಒಟ್ಟು 568 ಪ್ರಕರಣ ದಾಖಲಿಸಿದೆ. ಇಷ್ಟು ಪ್ರಕರಣಗಳ ಪೈಕಿ 299 ಕೇಸ್​ಗಳಲ್ಲಿ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದರೆ, ಇನ್ನುಳಿದ 269 ಕೇಸ್​ಗಳಲ್ಲಿ ವಿಚಾರಣ ಹಂತದಲ್ಲಿದೆ ಎಂದು ಅಧಿಕಾರಿಗಳೇ ನೀಡಿದ ಅಂಕಿ-ಅಂಶಗಳೇ ಸ್ಪಷ್ಟಪಡಿಸುತ್ತವೆ.

ಬಾಕಿ ವಿಚಾರಣೆ ಹಂತದಲ್ಲಿರುವ 1486 ಪ್ರಕರಣಗಳು: ಲೋಕಾಯುಕ್ತಕ್ಕೆ ಅಧಿಕಾರ ನೀಡಿ ಬಹುತೇಕ ಎರಡು ವರ್ಷವಾಗುತ್ತಿದೆ. ಪ್ರಕರಣಗಳ ಹಸ್ತಾಂತರ, ಸಿಬ್ಬಂದಿ ಕೊರತೆ ಹಾಗೂ ಲಾಜೆಸ್ಟಿಕ್ ಸಮಸ್ಯೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಆರಂಭದಲ್ಲಿ ಕೊಂಚ ಮಂದಗತಿಯಲ್ಲಿ ಲೋಕಾಯುಕ್ತ ಪೊಲೀಸರ ತನಿಖೆ ಸಾಗಿತ್ತು. ಅನಂತರ ಅಧಿಕಾರಿ - ಸಿಬ್ಬಂದಿ ನಿಯೋಜನೆ, ಆಯಕಟ್ಟಿನ ಜಾಗಗಳಲ್ಲಿ ಅಧಿಕಾರಿಗಳ ನೇಮಕ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಿದ ಬಳಿಕ ಲೋಕಾಯುಕ್ತ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಎಂದಿನಂತೆ ಅಧಿಕಾರಿ ಮನೆಗಳ ಮೇಲೆ ದಾಳಿ, ಲಂಚಕ್ಕೆ‌ ಕೈಯೊಡ್ಡಿದ್ದ ಭ್ರಷ್ಟ ಅಧಿಕಾರಿಗಳ ಬಲೆಗೆ ಬೀಳಿಸುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು.

ಸದ್ಯ ಹೊಸದಾಗಿ ಲೋಕಾದಲ್ಲಿ ದಾಖಲಾಗಿದ್ದ 537 ಕೇಸ್​ಗಳು ಒಳಗೊಂಡಂತೆ ಒಟ್ಟು ಏಪ್ರಿಲ್ ಅಂತ್ಯಕ್ಕೆ 1486 ಪ್ರಕರಣಗಳು ತನಿಖಾ ಹಂತದಲ್ಲಿವೆ. 244 ಪ್ರಕರಣಗಳನ್ನ ಇಲಾಖಾ ತನಿಖೆಗೆ ವಿಚಾರಣೆಗೆ ಶಿಫಾರಸು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 178 ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ಅನುಮತಿಗೆ ಬಾಕಿ ಇದೆ. ನ್ಯಾಯಾಲಯದ ವಿಚಾರಣೆಗೆ ಅನುಮತಿ ನೀಡುವಂತೆ ಆಯಾ ಇಲಾಖೆಗಳಿಗೆ ಸಲ್ಲಿಸಲಾಗಿದ್ದ 391 ಪ್ರಕರಣಗಳಲ್ಲಿ ಸಂಬಂಧಿಸಿದಂತೆ ಆಯಾ ಇಲಾಖೆಗಳಿಗೆ ಅನುಮತಿ ನೀಡುವಂತೆ ಕೋರಿದ್ದು, ಈ ಪೈಕಿ 314 ಪ್ರಕರಣಗಳಲ್ಲಿ ಭ್ರಷ್ಟ ಅಧಿಕಾರಿ ಅಥವಾ ಸಿಬ್ಬಂದಿ ಮೇಲೆ ಪ್ರಾಸ್ಯಿಕೂಷನ್ ನಡೆಸಲು ಅನುಮತಿ ಪಡೆಯಲಾಗಿದೆ.

178 ಪ್ರಕರಣಗಳಲ್ಲಿ ಪ್ರಾಸಿಕ್ಯೂಷನ್ ವಿಚಾರಣೆ ಬಾಕಿಯಿದೆ. ಟ್ರ್ಯಾಪ್ ಪ್ರಕರಣಗಳಲ್ಲಿ ಬಹುತೇಕರು ವಿಚಾರಣಾ ಹಂತದಲ್ಲಿರುವಾಗ ಭ್ರಷ್ಟ ನೌಕರರ ಮೇಲೆ ದೂರು ನೀಡಿದ್ದ ದೂರುದಾರರು ನ್ಯಾಯಾಲಯದಲ್ಲಿ ರಾಜಿ ಮಾಡಿಕೊಳ್ಳುವುದು, ಅಥವಾ ವಿಚಾರಣೆ ಇರುವಾಗ ತನಿಖಾಧಿಕಾರಿ ಅಥವಾ ಕೋರ್ಟ್ ಗೈರಾಗುವುದು ಸೇರಿದಂತೆ ವಿವಿಧ ಕಾರಣಗಳಿಂದಾಗಿ ಆರೋಪಿತರ ವಿರುದ್ಧ ಶಿಕ್ಷೆ ಕೊಡಿಸುವ ಪ್ರಮಾಣ ಕೊಂಚ ತಗ್ಗಿದೆ. ಈ ಹಿಂದೆಗಿಂತ ಹೋಲಿಸಿದರೆ ಕಳೆದ ಎರಡು ವರ್ಷಗಳಲ್ಲಿ ಶೇ.35ರಷ್ಟು ಶಿಕ್ಷೆ ಪ್ರಕಟ ಪ್ರಮಾಣ ಅಧಿಕವಾಗಿರುವುದು ಅಧಿಕಾರಿಗಳ ನಿಷ್ಪಕ್ಷಪಾತ ಕಾರ್ಯದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸಂಚಾರ ಪೊಲೀಸರ ವಿಶೇಷ ಕಾರ್ಯಾಚರಣೆ; 386 ಪಾನಮತ್ತ ಚಾಲಕರ ವಿರುದ್ಧ ಕೇಸ್​ - DRUNK AND DRIVE CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.