ETV Bharat / state

ಲೋಕಸಭಾ ಚುನಾವಣೆ: ಬಳ್ಳಾರಿ ಕ್ಷೇತ್ರದಲ್ಲಿ ಕೈ - ಕಮಲದ ಕೊನೆ ಹಂತದ ಟಿಕೆಟ್​ ಲೆಕ್ಕಾಚಾರ ಜೋರು

author img

By ETV Bharat Karnataka Team

Published : Mar 11, 2024, 11:41 AM IST

Updated : Mar 11, 2024, 1:05 PM IST

ಲೋಕಸಭಾ ಚುನಾವಣೆ ಹಿನ್ನೆಲೆ ಬಳ್ಳಾರಿ ಕ್ಷೇತ್ರದಲ್ಲಿ ಕೈ ಅಭ್ಯರ್ಥಿಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್-ಬಿಜೆಪಿಯಲ್ಲಿ ಕೊನೆ ಹಂತದ ಟೆಕೆಟ್​ ಪಡೆಯಲು ಲೆಕ್ಕಾಚಾರ ಜೋರಾಗಿಯೇ ನಡೆಯುತ್ತಿದೆ.

Lok Sabha Elections Bellary  Congress  BJP Congress and BJP in the last stage of calculation is fierce
ಲೋಕಸಭಾ ಚುನಾವಣೆ: ಬಳ್ಳಾರಿ ಕ್ಷೇತ್ರದಲ್ಲಿ ಕೈ- ಕಮಲದ ಕೊನೆ ಹಂತದ ರಾಜಕೀಯ ಲೆಕ್ಕಾಚಾರ ಜೋರು

ಲೋಕಸಭಾ ಚುನಾವಣೆ: ಬಳ್ಳಾರಿ ಕ್ಷೇತ್ರದಲ್ಲಿ ಕೈ - ಕಮಲದ ಕೊನೆ ಹಂತದ ಟಿಕೆಟ್​ ಲೆಕ್ಕಾಚಾರ ಜೋರು

ಬಳ್ಳಾರಿ: ಲೋಕಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಉಳಿದಿರುವ ಹಿನ್ನೆಲೆ ಕೈ ಮತ್ತು ಕಮಲ ಪಾಳೆಯದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ದೇಶ, ರಾಜ್ಯದಲ್ಲಿ ಚುನಾವಣಾ ಅಖಾಡ ರಂಗೇರುತ್ತಿರುವ ಈ ಹೊತ್ತಿನಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಕಣಕ್ಕಿಳಿಯಲಿರುವ ಅಭ್ಯರ್ಥಿಗಳು ಯಾರು ಎನ್ನುವ ಬಗ್ಗೆ ತೀವ್ರ ಕುತೂಹಲ ಮೂಡಿದೆ.

1999ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಯಕಿ ಸೋನಿಯಾ ಗಾಂಧಿ ಹಾಗೂ ಬಿಜೆಪಿಯ ಸುಷ್ಮಾ ಸ್ವರಾಜ್ ಅವರ ನಡುವಿನ ಸ್ಪರ್ಧೆಯಿಂದ ಇಡೀ ದೇಶದ ಗಮನ ಸೆಳೆದಿದ್ದ ಬಳ್ಳಾರಿ ಕ್ಷೇತ್ರ, ಈ ಬಾರಿ ಕೂಡ ತುರುಸಿನ ಸ್ಪರ್ಧೆ ಕಾಣಲಿದೆ. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳ ಆಯ್ಕೆಗೆ ಭಾರಿ ಕಸರತ್ತು ನಡೆಸಿವೆ.

ಟಿಕೆಟ್‌ಗಾಗಿ ಕಾಂಗ್ರೆಸ್ ಆಕಾಂಕ್ಷಿಗಳಲ್ಲಿ ಪೈಪೋಟಿ: ಬಳ್ಳಾರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8ರ ಪೈಕಿ 6 ವಿಧಾನಸಭಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿರುವ ಕಾಂಗ್ರೆಸ್, ಎಂಪಿ ಸ್ಥಾನವನ್ನೂ ತನ್ನದಾಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ಕ್ಷೇತ್ರದಲ್ಲಿ ಈ ಬಾರಿ ಪಕ್ಷಕ್ಕೆ ಪೂರಕ ವಾತಾವರಣ ಇದೆ ಎಂಬುದು ಕಾಂಗ್ರೆಸ್‌ನವರ ಮನಸ್ಥಿತಿ. ಇದರ ಲಾಭ ಪಡೆಯಬೇಕು ಎಂಬುದು ರಾಜ್ಯ ಕೈ ನಾಯಕರ ನಿಲುವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಆಕಾಂಕ್ಷಿಗಳಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಬಿಜೆಪಿಯಿಂದ ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ ಎಚ್ಚರದ ಹೆಜ್ಜೆಗಳನ್ನು ಇಡುತ್ತಿದೆ. ವಿಧಾನಸಭೆ-ಲೋಕಸಭೆ ಚುನಾವಣೆ ಸನ್ನಿವೇಶಗಳೇ ಬೇರೆ. ಕಳೆದ ಬಾರಿ ಉಪಚುನಾವಣೆಯಲ್ಲಿ ಉಗ್ರಪ್ಪ ಭಾರಿ ಅಂತರದಲ್ಲಿ ಗೆದ್ದರೂ ಸಾರ್ವತ್ರಿಕ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಸೋತರು. ಅದೂ ಅಲ್ಲದೇ ಈ ಬಾರಿ ಶ್ರೀರಾಮುಲು ಸೋಲಿನ ಸಹಾನುಭೂತಿ ವಾಲ್ಮೀಕಿ ಸಮುದಾಯದಲ್ಲಿ ಮನೆ ಮಾಡಿದೆ. ಹೀಗಾಗಿ ಬಳ್ಳಾರಿ ಲೋಕಸಭಾ ಕ್ಷೇತ್ರ ಕಾಂಗ್ರೆಸ್‌ಗೆ ಸಂಕೀರ್ಣವಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಎಸ್ಟಿ ಮೀಸಲು ಕ್ಷೇತ್ರವಾದ ಬಳ್ಳಾರಿಯಲ್ಲಿ ಕಾಂಗ್ರೆಸ್‌ನ ಟಿಕೆಟ್ ರೇಸ್‌ನಲ್ಲಿ ಸಚಿವ ಬಿ. ನಾಗೇಂದ್ರ ಅವರ ಸಹೋದರ ಬಿ. ವೆಂಕಟೇಶ್ ಪ್ರಸಾದ್, ವಿ.ಎಸ್. ಉಗ್ರಪ್ಪ, ಸಂಡೂರು ಶಾಸಕ ತುಕಾರಾಂ ಪುತ್ರಿ ಸೌಪರ್ಣಿಕಾ, ಹೊಸಪೇಟೆಯ ವಕೀಲ ಗುಜ್ಜಲ್ ನಾಗರಾಜ್ ಇದ್ದಾರೆ. ಇನ್ನೂ ಮೊಳಕಾಲ್ಮೂರು ಶಾಸಕ ಎನ್. ವೈ. ಗೋಪಾಲಕೃಷ್ಣ ಅವರ ಹೆಸರೂ ಕೂಡಾ ಕೇಳಿಬರುತಿತ್ತು. ಆದ್ರೇ ಇದನ್ನು ಅಲ್ಲಗೆಳೆದಿರುವ ಅವರು, 'ನಾನು ಸ್ಪರ್ಧಿಸಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಸಚಿವ ಬಿ. ನಾಗೇಂದ್ರ ಅವರನ್ನು ಕಣಕ್ಕಿಳಿಸಲು ಪಕ್ಷ ಬಯಸಿತ್ತು. ಆದರೆ, ಅವರು ಸ್ಪರ್ಧಿಸಲು ಒಪ್ಪದೇ, ಅವರ ಸಹೋದರ ಬಿ. ವೆಂಕಟೇಶ್ ಪ್ರಸಾದ್ ಅವರಿಗೆ ಟಿಕೆಟ್ ಕೊಡಿಸುವ ಒಲವು ತೋರಿದ್ದಾರೆ. ಇನ್ನೂ ಕಳೆದ ಬಾರಿ ಸ್ಪರ್ಧಿಸಿ ಸೋತ್ತಿದ್ದ ವಿ.ಎಸ್.ಉಗ್ರಪ್ಪ ಅವರು 'ನಾನೇ ಅಭ್ಯರ್ಥಿ' ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ. ಹಾಗೆಯೇ ಸಂಡೂರು ಶಾಸಕ ತುಕಾರಾಂ ಅವರು ತಮ್ಮ ಪುತ್ರಿ ಸೌಪರ್ಣಿಕಾರಿಗೆ ಟಿಕೆಟ್ ಕೊಡಿಸುವ ಉತ್ಸುಕತೆಯಲ್ಲಿದ್ದು, ಅವರಿಗೆ ಸಚಿವ ಸಂತೋಷ್ ಲಾಡ್ ಬೆಂಬಲವಿದೆ. ಇಷ್ಟೆಲ್ಲ ಪೈಪೋಟಿ ಮಧ್ಯೆ ಸ್ಥಳೀಯ ಮುಖಂಡ ಗುಜ್ಜಲ್ ನಾಗರಾಜ್ ಕೂಡ ಆಕಾಂಕ್ಷಿ ಆಗಿದ್ದಾರೆ.

ಕಾಂಗ್ರೆಸ್ ಆಂತರಿಕ ವಲಯದಲ್ಲಿ ಈ ಕುರಿತು ಸಾಕಷ್ಟು ಚರ್ಚೆ ಆಗುತ್ತಿದೆ. ನಾಲ್ಕು ಮಹಿಳೆಯರಿಗಿಂತ ಹೆಚ್ಚು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎಂಬುದು ರಾಜಕೀಯ ಪರಿಣಿತರ ಅಭಿಪ್ರಾಯವಾಗಿದೆ. ಈಗಾಗಲೇ ಗೀತಾ ಶಿವರಾಜ್‌ಕುಮಾರ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಕುಸುಮಾ, ಅಂಜಲಿ ನಿಂಬಾಳ್ಕರ್, ವೀಣಾ ಕಾಶಪ್ಪನವರ್ ಅವರಿಗೂ ಟಿಕೆಟ್ ನೀಡುವ ಸಾಧ್ಯತೆ ಇದೆ. ಹೀಗಾಗಿ ಸೌಪರ್ಣಿಕಾ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ವಿರಳ ಎಂದು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.

ಮುಂಚೂಣಿಯಲ್ಲಿ ವೆಂಕಟೇಶ ಪ್ರಸಾದ್, ಉಗ್ರಪ್ಪ ಹೆಸರು: ಹಾಗೆಯೇ ಸೌಪರ್ಣಿಕಾ ಅವರು ಸಂಡೂರು ಹೊರತಾಗಿ ಇತರ ಕ್ಷೇತ್ರಗಳಲ್ಲಿ ಅಷ್ಟಾಗಿ ಪರಿಚಿತರಲ್ಲ. ಇದು ಕೂಡಾ ಅವರ ಅವಕಾಶಕ್ಕೆ ಅಡ್ಡಿಯಾಗಬಹುದು. ಇನ್ನು ಗುಜ್ಜಲ್ ನಾಗರಾಜ್ ಅವರು ಈ ಹಿಂದಿನ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವುದನ್ನು ಕಾಂಗ್ರೆಸ್ ಪಕ್ಷದ ವರಿಷ್ಠರು ಮರೆತಿಲ್ಲ. ಈ ಅಂಶ ಅವರಿಗೆ ಋಣಾತ್ಮಕವಾಗಿ ಪರಿಣಮಿಸಬಲ್ಲದು ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಾಗಿ ವೆಂಕಟೇಶ ಪ್ರಸಾದ್ ಹಾಗೂ ಉಗ್ರಪ್ಪ ಅವರ ಹೆಸರು ಮುಂಚೂಣಿಯಲ್ಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಚಿವರೇ ಕಣಕ್ಕೆ ಇಳಿದರೆ ಗೆಲುವಿನ ಅವಕಾಶ ಅಧಿಕ ಎಂಬ ಅಭಿಪ್ರಾಯ ಇರುವುದರಿಂದ ವೆಂಕಟೇಶ್ ಪ್ರಸಾದ್ ಅವರನ್ನು ಗೆಲ್ಲಿಸಿಕೊಂಡು ಬರುವ ಭರವಸೆಯನ್ನು ಸಚಿವ ನಾಗೇಂದ್ರ ಅವರು ಹೇಗೆ ನಿಭಾಯಿಸಿಕೊಂಡು ಹೋಗುತ್ತಾರೆ ಎಂಬ ಕುತೂಹಲವಂತೂ ಇದ್ದೇ ಇದೆ. ಸಚಿವ ನಾಗೇಂದ್ರ ಅವರೇ ಸ್ವತಃ ಕಣಕ್ಕೆ ಇಳಿದರೇ ಚುನಾವಣಾ ಕಣದ ಚಿತ್ರಣವೇ ಬದಲಾಗುತ್ತದೆ ಎಂಬುದು ಕಾಂಗ್ರೆಸ್ ವಲಯದ ಮಾತು.

ಮತ್ತೊಂದೆಡೆಯಲ್ಲಿ ವಿ.ಎಸ್. ಉಗ್ರಪ್ಪ ಅವರು ಅಪಾರ ಕಾನೂನು ಜ್ಞಾನ ಹೊಂದಿದ್ದಾರೆ. ಬಳ್ಳಾರಿಯಲ್ಲಿ ಉಪಚುನಾವಣೆಯಲ್ಲಿ ಗೆದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಸೋತ್ತಿದ್ದಾರೆ. ಮತ್ತೊಮ್ಮೆ ಅವಕಾಶ ದೊರೆತರೇ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ಹುಮ್ಮಸ್ಸಿನಲ್ಲಿದ್ದಾರೆ. ಆದ್ರೆ, ಅವರ ಬೆಂಬಲಕ್ಕೆ ಶಾಸಕರು, ಕಾರ್ಯಕರ್ತರ ಪಡೆ ಅಷ್ಟಾಗಿ ಇಲ್ಲ. ಇವರಲ್ಲಿ ಯಾರಿಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆ ಎಂಬುದೇ ಸದ್ಯದ ಕುತೂಹಲ. ಪಕ್ಷ ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬ ಕುತೂಹಲ ಕ್ಷೇತ್ರದಲ್ಲಿ ಮನೆ ಮಾಡಿದೆ. ಕೊನೆ ಕ್ಷಣದಲ್ಲಿ ಅನಿರೀಕ್ಷಿತ ಹೆಸರು ಪ್ರಸ್ತಾಪವಾದರೂ ಅಚ್ಚರಿಯೆನಿಲ್ಲ.

ಶ್ರೀರಾಮುಲುಗೆ ಟಿಕೆಟ್ ಸಾಧ್ಯತೆ?: ಬಿಜೆಪಿಯಿಂದ ಹಾಲಿ ಸಂಸದ ವೈ. ದೇವೇಂದ್ರಪ್ಪ ಅವರನ್ನು ಮತ್ತೆ ಕಣಕ್ಕೆ ಇಳಿಸಲಾಗುತ್ತದೆಯೋ ಅಥವಾ ಬಿ.ಶ್ರೀರಾಮುಲು ಅವರಿಗೆ ಟಿಕೆಟ್ ನೀಡಲಾಗುತ್ತದೆಯೋ ಎಂಬ ಕುತೂಹಲ ಮೂಡಿದೆ. ಮೋದಿಯ ಪ್ರಭಾವವನ್ನು ಹೆಚ್ಚು ನಂಬಿಕೊಂಡಿರುವ ಬಿಜೆಪಿಯು, ಬಳ್ಳಾರಿ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಅವರು ಗೆಲುವು ಸಾಧಿಸುತ್ತಾರೆ ಎಂಬ ನಂಬಿಕೆಯಲ್ಲಿದೆ. ಬಿಜೆಪಿ ಪಕ್ಷದಲ್ಲಿ ನರೇಂದ್ರ ಮೋದಿ ಅವರೇ ಪಕ್ಷದ ಮುಖ, ಅಭ್ಯರ್ಥಿಗಳು ಗೌಣ. ಹೀಗಾಗಿ ಹಾಲಿ ಸಂಸದ ದೇವೇಂದ್ರಪ್ಪ ನಿಂತರೂ ಅಷ್ಟೇ ಶ್ರೀರಾಮುಲು ನಿಂತರೂ ಅಷ್ಟೇ. ನರೇಂದ್ರ ಮೋದಿ ಅವರ ವರ್ಚಸ್ಸೇ ಅವರಿಗೆ ರಕ್ಷಾ ಕವಚವಾಗಿರುತ್ತದೆ ಎಂದು ಬಿಜೆಪಿ ಹೇಳುತ್ತಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಮಾಜಿ ಸಚಿವ ಶ್ರೀರಾಮುಲು ಅವರು ಈ ಬಾರಿ ಲೋಕಸಭಾ ಅಖಾಡಕ್ಕೆ ಇಳಿದು ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಮತ್ತೊಂದೆಡೆ ದೇವೆಂದ್ರಪ್ಪ ಅವರು ಕೂಡ ತಮಗೆ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಯಾರಿಗೆ ಟಿಕೆಟ್ ಸಿಕ್ಕರೂ ಅವರನ್ನು ಗೆಲ್ಲಿಸುವುದಕ್ಕೆ ಕಾರ್ಯಕರ್ತರು ಸಜ್ಜಾಗಿದ್ದಾರೆ. ಬೂತ್ ಮಟ್ಟದಲ್ಲಿ ಸಂಘಟನೆ ಬಲವಾಗಿದ್ದು, ಎಲ್ಲರೂ ಚುರುಕಿನಿಂದ ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿಯ ಜಿಲ್ಲಾ ಘಟಕ ಸಿದ್ಧತೆ ನಡೆಸಿದೆ.

ಇದನ್ನೂ ಓದಿ: ಸಂವಿಧಾನ ಕುರಿತ ಅನಂತ್ ಕುಮಾರ್ ಹೆಗಡೆ ಹೇಳಿಕೆ ವೈಯಕ್ತಿಕ ಅಲ್ಲ, ಬಿಜೆಪಿಯ ಗುಪ್ತ ಅಜೆಂಡಾ: ಸಿಎಂ

Last Updated : Mar 11, 2024, 1:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.