ETV Bharat / state

ಮಹಿಳೆಯರು ರಥ ಎಳೆಯುವ ಕೊಂಡಗೂಳಿ, ಬಡಿಗೆಗಳಿಂದ ಹೊಡೆದಾಡವ ಜುಮ್ಮಣ್ಣ ಅಜ್ಜನ ಜಾತ್ರೆ - Vijayapura Jatra

author img

By ETV Bharat Karnataka Team

Published : May 27, 2024, 12:46 PM IST

ವಿಜಯಪುರ ಜಿಲ್ಲೆಯಲ್ಲಿ ವಿಭಿನ್ನ ರೀತಿಯಲ್ಲಿ ಹಲವು ಜಾತ್ರೆಗಳು ನಡೆಯುತ್ತವೆ. ಪ್ರತೀ ಜಾತ್ರೆಗೂ ಅದರದೇ ಆದ ಇತಿಹಾಸವಿದೆ.

ಕೊಂಡಗೂಳಿ ಹಾಗೂ ಜುಮ್ಮಣ್ಣ ಅಜ್ಜನ ಜಾತ್ರೆ
ಕೊಂಡಗೂಳಿ ಹಾಗೂ ಜುಮ್ಮಣ್ಣ ಅಜ್ಜನ ಜಾತ್ರೆ (ETV Bharat)

ಜುಮ್ಮಣ್ಣ ಅಜ್ಜನ ಜಾತ್ರೆ (ETV Bharat)

ವಿಜಯಪುರ: ಜಾತ್ರೆ ಎಂದರೆ ಊರಿನಲ್ಲಿ ಸಡಗರ, ಸಂಭ್ರಮ ಮನೆ ಮಾಡುತ್ತದೆ. ಅದ್ರಲ್ಲೂ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಜಾತ್ರೆ ಇನ್ನೂ ವಿಶೇಷ. ಅಂಥದ್ದೊಂದು ವಿಶಿಷ್ಟ ಜಾತ್ರೆ ವಿಜಯಪುರದಲ್ಲಿ ನಡೆಯುತ್ತದೆ.

ಮಹಿಳೆಯರ ಜಾತ್ರೆ ಎಂದೇ ಪ್ರಸಿದ್ಧಿ: ಈ ಜಾತ್ರೆಯನ್ನು ಕೊಂಡಗೂಳಿ ಜಾತ್ರೆ ಅಥವಾ ಚಂದ್ರಶೇಖರ ಮಹಾಶಿವಯೋಗಿಗಳ ಜಾತ್ರೆ ಎಂದೂ ಕರೆಯಲಾಗುತ್ತದೆ. ದೇವರ ಹಿಪ್ಪರಗಿ ತಾಲೂಕಿನ ಕೊಂಡಗೂಳಿ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಗೊಂಬೆಗಳ ನೃತ್ಯ, ಕುದುರೆ ಕುಣಿತ, ಕರಡಿ ಮಜಲು, ಡೊಳ್ಳು ಕುಣಿತ, ಭಜನಾ ಮೇಳ ಮೇಳೈಸಿತು. ಭಜನಾ ಮೇಳ ಹಾಗೂ ಸಾವಿರಾರು ಮುತ್ತೈದೆಯರಿದ್ದ ಕುಂಭಮೇಳದೊಂದಿಗೆ ಮಹಾಪಲ್ಲಕ್ಕಿ ಉತ್ಸವ ಊರ ಪ್ರಮುಖ ಬೀದಿಯಲ್ಲಿ ಸಾಗಿತು. ಚಳಕಾಪುರ ಮಠದ ಶಂಕರಾನಂದ ಮಹಾಶಿವಯೋಗಿಗಳು, ಗದಗ ಜಿಲ್ಲೆಯ ಶ್ರೀ ಮಡಿವಾಳೇಶ್ವರ ಕಲ್ಮಟದ ಪೀಠಾಧಿಪತಿ ಪ್ರಶಾಂತ ದೇವರ ಭವ್ಯ ಮೆರವಣಿಗೆ ನಡೆಯಿತು.

ರಥೋತ್ಸವ ವೈಭವ: ರಥೋತ್ಸವದಲ್ಲಿ ಊರಿನ ಮಹಿಳೆಯರು ಮಾತ್ರವಲ್ಲದೇ, ಅಕ್ಕಪಕ್ಕದ ರಾಜ್ಯಗಳ ಮಹಿಳೆಯರೂ ಪಾಲ್ಗೊಂಡಿದ್ದರು. ಸುಮಾರು 800 ಮೀ.ವರೆಗೆ ಮಹಿಳೆಯರೇ ಭವ್ಯ ರಥ ಎಳೆಯುವುದು ಇಲ್ಲಿ ಸಾಕಷ್ಟು ವಿಶೇಷ. ಅಂತೆಯೇ, ಸುಮಾರು 5 ಟನ್​ಗೂ ಅಧಿಕ ಭಾರದ ರಥವನ್ನು ಮಹಿಳೆಯರೇ ಸರಾಗವಾಗಿ ಎಳೆದು ಖುಷಿಪಟ್ಟರು. ಹೀಗಾಗಿ, ಇದು ಹೆಣ್ಣುಮಕ್ಕಳ ಜಾತ್ರೆಯೆಂದೇ ಪ್ರಸಿದ್ಧಿ.

ಕವಡಿಮಟ್ಟಿ ಜುಮ್ಮಣ್ಣ ಅಜ್ಜನ ಜಾತ್ರೆ: ಇದೇ ಜಿಲ್ಲೆಯಲ್ಲಿ ಮತ್ತೊಂದು ವಿಶೇಷ ಜಾತ್ರೆ ಗಮನ ಸೆಳೆಯುತ್ತದೆ. ಇದು ಪ್ರತೀ ಮೂರು ವರ್ಷಕ್ಕೊಮ್ಮೆ ನಡೆಯುವ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಜುಮ್ಮಣ್ಣ ಅಜ್ಜನ ಜಾತ್ರೆ. ಇದನ್ನು ಬಡಿಗೆ ಜಾತ್ರೆ ಎಂತಲೂ ಕರೆಯಲಾಗುತ್ತದೆ. ಪರಸ್ಪರ ಬಡಿಗೆಯಿಂದ ಹೊಡೆದಾಡುತ್ತಾ ಜಾತ್ರೆ ಆಚರಿಸುವುದು ಇಲ್ಲಿನ ವಿಶೇಷತೆ. ಬಡಿಗೆಗಳೂ ಮುರಿದು ಹೋದರೂ ಜನರಿಗೆ ಗಾಯವಾಗುವುದಿಲ್ಲವಂತೆ. ಭಂಡಾರ ಹಾರಿಸುವ ಮೂಲಕ ಜಾತ್ರೋತ್ಸವ ನಡೆಯುತ್ತದೆ.

ಇತಿಹಾಸ: ಬ್ರಿಟಿಷರ ಕಾಲದಲ್ಲಿ ತೆರಿಗೆ ಕೇಳಲು ಬಂದಾಗ ಜುಮ್ಮಣ್ಣ ಅಜ್ಜ ಬಡಿಗೆಗಳಿಂದ ಹೋರಾಟ ಮಾಡಿ ಅವರನ್ನು ಎದುರಿಸುತ್ತಿದ್ದರಂತೆ. ಹಾಗಾಗಿ ಇಂದಿಗೂ ಅವರ ನೆನಪಿಗಾಗಿ ಬಡಿಗೆಗಳಿಂದ ಆಟವಾಡುತ್ತಾ ಜನ ಜಾತ್ರೆ ಮಾಡುತ್ತಾರೆ. ಶತಮಾನಗಳಿಂದಲೂ ಈ ಜಾತ್ರೋತ್ಸವ ನಡೆಸುತ್ತಿರುವ ಕವಡಿಮಟ್ಟಿ ಗ್ರಾಮಸ್ಥರು, 1001 ಬಡಿಗೆಗಳನ್ನು ಹಿಡಿದು ಪರಸ್ಪರ ಬಡಿದಾಡಿಕೊಳ್ಳುತ್ತಾರೆ.

ಇದನ್ನೂ ಓದಿ: ಬಾಗಲಕೋಟೆ: ಹುಲ್ಲೇಶ್ವರ ಜಾತ್ರೆಯಲ್ಲಿ ಮರವೇರಿ ಮಳಿಯಪ್ಪಜ್ಜನ ಮಳೆ-ಬೆಳೆ ಭವಿಷ್ಯ - Hulleshwar Temple Jatra

ETV Bharat Logo

Copyright © 2024 Ushodaya Enterprises Pvt. Ltd., All Rights Reserved.