ETV Bharat / state

ನಿಗಮ ಮಂಡಳಿ ನೇಮಕಾತಿಯಲ್ಲಿ ಡಿಕೆಶಿ ಮೇಲುಗೈ; ಸಿದ್ದರಾಮಯ್ಯ, ಖರ್ಗೆ ಬೆಂಬಲಿಗರಿಗೂ ಅಧಿಕಾರ

author img

By ETV Bharat Karnataka Team

Published : Feb 29, 2024, 9:28 PM IST

ನಿಗಮ ಮಂಡಳಿಗಳಿಗೆ ನೇಮಕ
ನಿಗಮ ಮಂಡಳಿಗಳಿಗೆ ನೇಮಕ

ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಪಕ್ಷಕ್ಕಾಗಿ ಶ್ರಮಿಸಿದ 44 ಕಾಂಗ್ರೆಸ್ ಮುಖಂಡರಿಗೆ ಅವಕಾಶ ನೀಡಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ 9 ತಿಂಗಳುಗಳ ಬಳಿಕ ನಿಗಮ ಮಂಡಳಿಗೆ ಪಕ್ಷದ ಕಾರ್ಯಕರ್ತರ ನೇಮಕ ಮಾಡಲಾಗಿದೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಪಕ್ಷಕ್ಕಾಗಿ ಶ್ರಮಿಸಿದ 44 ಕಾಂಗ್ರೆಸ್ ಮುಖಂಡರುಗಳಿಗೆ ಅಧಿಕಾರದ ಗದ್ದುಗೆ ಸಿಕ್ಕಿದೆ.

ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮೇಲುಗೈ ಸಾಧಿಸಿದ್ದು, ತಮ್ಮ ಹೆಚ್ಚಿನ ಬೆಂಬಲಿಗರಿಗೆ ಅಧಿಕಾರವನ್ನು ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಜಿ ಮೇಯರ್​​ಗಳಾದ ಸಂಪತ್ ರಾಜ್ (ಅಂಬೇಡ್ಕರ್ ಅಭಿವೃದ್ಧಿ ನಿಗಮ ಅಧ್ಯಕ್ಷ), ಪದ್ಮಾವತಿ (ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷ), ಆರ್.ಮಂಜುನಾಥ್ ಗೌಡ (ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ), ಎಸ್.ಮನೋಹರ್ (ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ), ಜೆ.ಎಸ್.ಆಂಜನೇಯಲು (ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ), ರಘುನಂದನ್ ರಾಮಣ್ಣ (ಬೆಂಗಳೂರು- ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ ಅಧ್ಯಕ್ಷ) ಸೇರಿದಂತೆ ಹಲವು ಆಪ್ತರಿಗೆ ನಿಗಮ ಮಂಡಳಿಗಳ ಅಧ್ಯಕ್ಷರ ಹುದ್ದೆ ದೊರೆತಿದೆ.

ನಿಗಮ ಮಂಡಳಿ ನೇಮಕ
ನಿಗಮ ಮಂಡಳಿ ನೇಮಕ

ಕಾಂಗ್ರೆಸ್ ಪಕ್ಷದ ಮುಖಂಡರಾದ ಕೇಶವ ರೆಡ್ಡಿ (ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು), ತಾಜ್ ಫೀರ್ (ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು), ಸವಿತಾ ರಘು (ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರು), ಡಾ.ಅಂಶುಮತ್ (ಭದ್ರಾ ಕಾಡಾ ಅಧ್ಯಕ್ಷರು), ಪಲ್ಲವಿ ಜಿ (ಕರ್ನಾಟಕ ಸಾಂಬಾರು ಪದಾರ್ಥ ಅಭಿವೃದ್ಧಿ ಮಂಡಳಿ ಅಧ್ಯಕ್ಷರು), ಸದಾಶಿವ ಉಲ್ಲಾಳ್ (ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು) ಕೂಡಾ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಪ್ತವಲಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ.

ಇದನ್ನೂ ಓದಿ: ಐದು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾಗಿ ಹೆಚ್ ಎಂ ರೇವಣ್ಣ ಆಯ್ಕೆ; ನಿಗಮ ಮಂಡಳಿಗೆ 45 ಕೈ ಮುಖಂಡರ ನೇಮಕಕ್ಕೆ ಸಿಎಂ ಅಸ್ತು

ಸಿಎಂ ಸಿದ್ದರಾಮಯ್ಯ ಬೆಂಬಲಿಗರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗರಿಗೂ ನಿಗಮ ಮಂಡಳಿ ನೇಮಕಾತಿಯಲ್ಲಿ ಮನ್ನಣೆ ಸಿಕ್ಕಿದೆ. ಆದರೆ ಡಿ.ಕೆ.ಶಿವಕುಮಾರ್ ಬೆಂಬಲಿಗರಿಗೆ ಸಿಕ್ಕಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅವಕಾಶ ದೊರೆತಿಲ್ಲ. ಸಿದ್ದರಾಮಯ್ಯ ಆಪ್ತವಲಯದಲ್ಲಿ ಗುರುತಿಸಿಕೊಂಡು ನಿಗಮ ಮಂಡಳಿಗಳ ಅಧಿಕಾರ ಗಿಟ್ಟಿಸಿಕೊಂಡ ಕಾಂಗ್ರೆಸ್ ಮುಖಂಡರ ವಿವರ ಹೀಗಿದೆ.

ನಿಗಮ ಮಂಡಳಿ ನೇಮಕ
ನಿಗಮ ಮಂಡಳಿ ನೇಮಕ

ವಿನೋದ್ ಅಸೂಟಿ (ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ), ಮರಿಸ್ವಾಮಿ (ಕಾಡಾ ಮೈಸೂರು ಅಧ್ಯಕ್ಷ), ಜಯಸಿಂಹ (ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ), ಕಾಂತಾನಾಯ್ಕ (ಕೌಶಲ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ), ಮುಂಡರಗಿ ನಾಗರಾಜ್ (ಲಿಡ್ಕರ್ ಅಧ್ಯಕ್ಷ), ಯೋಗೇಶ್ ಬಾಬು (ದ್ರಾಕ್ಷಾರಸ ಮಂಡಳಿ ಅಧ್ಯಕ್ಷರು), ಮಾಲಾ ನಾರಾಯಣರಾವ್ (ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ), ಶಾಕಿರ್ ಸನದಿ (ಹುಬ್ಬಳ್ಳಿ - ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ), ವಿಧಾನ ಪರಿಷತ್ ಮಾಜಿ ಸದಸ್ಯ ಶ್ರೀನಿವಾಸ್ (ಪ್ರವಾಸೋದ್ಯಮ ನಿಗಮದ ಅಧ್ಯಕ್ಷ), ಸೋಮಣ್ಣ ಬೇವಿನಮರದ (ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಅಧ್ಯಕ್ಷ), ಜಿ.ಎಸ್.ಮಂಜುನಾಥ್ (ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ), ಲಲಿತಾ ರಾಘವ್ (ವಿದ್ಯುತ್ ಕಾರ್ಖಾನೆ ಅಧ್ಯಕ್ಷೆ).

ಎಐಸಿಸಿ ಅದ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಶಿಫಾರಸು ಮೂಲಕ ಒತ್ತಡ ಹಾಕಿದವರಿಗೂ ನಿಗಮ ಮಂಡಳಿಗಳ ನೇಮಕಾತಿಯಲ್ಲಿ ಅವಕಾಶ ದೊರೆತಿದೆ. ಸಚಿವರು, ಶಾಸಕರು ತಮ್ಮ ಕಡೆಯ ಬೆಂಬಲಿಗರನ್ನು ನೇಮಕ ಮಾಡುವಂತೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದರೂ ಹೆಚ್ಚಿನ ಸಂಖ್ಯೆಯ ಮನವಿಗಳನ್ನು ಪರಿಗಣಿಸಲಾಗಿಲ್ಲ ಎಂದು ಹೇಳಲಾಗಿದೆ. ನಿಗಮ ಮಂಡಳಿಗಳ ನಿರ್ದೇಶಕರ ನೇಮಕ ಸಂದರ್ಭದಲ್ಲಿ ಸಚಿವರ, ಶಾಸಕರ ಬೆಂಬಲಿಗರಿಗೆ ಅವಕಾಶ ನೀಡುವ ಸಾಧ್ಯತೆಗಳು ಇವೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.