ETV Bharat / state

ಇಂಡಿಯನ್ ಕೋಸ್ಟ್ ಗಾರ್ಡ್ ಡೇ: ಅರಬ್ಬಿ ಸಮುದ್ರದಲ್ಲಿ ರೋಮಾಂಚಕ ಅಣಕು ಕಾರ್ಯಾಚರಣೆ

author img

By ETV Bharat Karnataka Team

Published : Feb 4, 2024, 8:44 AM IST

Updated : Feb 4, 2024, 2:11 PM IST

Arabian Sea  ಅರಬ್ಬಿ ಸಮುದ್ರದ  ಉತ್ತರ ಕನ್ನಡ  Uttara Kannada  ಅರಬ್ಬಿ ಸಮುದ್ರದಲ್ಲಿ ರಕ್ಷಣಾ ಕಾರ್ಯ
ಇಂಡಿಯನ್ ಕೋಸ್ಟ್ ಗಾರ್ಡ್ ಡೇ: ಕೋಸ್ಟ್ ಗಾರ್ಡ್ಸ್​ನಿಂದ ಅಣುಕು ಕಾರ್ಯಾಚರಣೆ

ಇಂಡಿಯನ್ ಕೋಸ್ಟ್ ಗಾರ್ಡ್ ದಿನದ ಹಿನ್ನೆಲೆಯಲ್ಲಿ ಕೋಸ್ಟ್ ಗಾರ್ಡ್ಸ್ ಸಿಬ್ಬಂದಿ ಅರಬ್ಬಿ ಸಮುದ್ರದಲ್ಲಿ ಅಣಕು ಕಾರ್ಯಾಚರಣೆ ನಡೆಸಿದರು.

ಇಂಡಿಯನ್ ಕೋಸ್ಟ್ ಗಾರ್ಡ್ ಡೇ: ಅರಬ್ಬಿ ಸಮುದ್ರದಲ್ಲಿ ರೋಮಾಂಚಕ ಅಣಕು ಕಾರ್ಯಾಚರಣೆ

ಕಾರವಾರ: ಅರಬ್ಬಿ ಸಮುದ್ರಕ್ಕೆ ಶನಿವಾರ ದಿಢೀರ್ ಆಗಮಿಸಿದ ಗಸ್ತು ಹಡಗುಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದವು. ಕಿಲೋಮೀಟರ್‌ಗಟ್ಟಲೆ‌ ದೂರ ಸಾಗಿ ಬೋಟ್‌ಗಳ ಪರಿಶೀಲನೆ, ಜೆಮಿನಿ ಬೋಟ್‌ಗಳ ಮೂಲಕ ರಕ್ಷಣಾ ಕಾರ್ಯ, ಬೆಂಕಿ ಅನಾಹುತ ನಡೆಯದಂತೆ ವಾಟರ್ ಫೈರ್ ಹಾಗೂ ಬುಲೆಟ್ ಫೈರಿಂಗ್ ಕಾರ್ಯಾಚರಣೆಗಳು ನಡೆದವು.

ಸಮುದ್ರ ಸಂಪೂರ್ಣ ಸುರಕ್ಷಿತವಾಗಿ ತಮ್ಮ ಸುಪರ್ದಿನಲ್ಲಿದೆ ಎಂಬುದನ್ನು ದೃಢೀಕರಿಸಿಕೊಂಡ ಬಳಿಕವಷ್ಟೇ ಆ ಹಡಗುಗಳು ಹಿಂತಿರುಗಿದವು. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿರುವ ಕೋಸ್ಟ್‌ಗಾರ್ಡ್ಸ್ ಬಂದರಿನಿಂದ ಬೆಳಿಗ್ಗೆ ಜನರನ್ನು ಹೊತ್ತುಕೊಂಡು ಒಂದರ ಹಿಂದೊಂದರಂತೆ ಗಸ್ತು ಹಡಗುಗಳಾದ ಕಸ್ತೂರ್ ಬಾ ಗಾಂಧಿ, ಸಾವಿತ್ರಿ ಬಾಯಿ ಪುಲೆ, ಸಿ-448, ಐಎನ್‌ಎಸ್ ವಿಕ್ರಮ್ ಸಮುದ್ರದತ್ತ ಧಾವಿಸಿದ್ದವು.

6 ನಾಟಿಕಲ್ ಮೈಲು ದೂರ ಸಾಗುತ್ತಿದ್ದಂತೆ ಈ ಹಡಗುಗಳು ತಮ್ಮ ಪ್ರಯಾಣದ ವೇಗ ಕಡಿಮೆಗೊಳಿಸಿದವು. ಕೊಂಚ ಹೊತ್ತಿನಲ್ಲಿ ದೂರದಲ್ಲಿ ಕಾಣುತ್ತಿದ್ದ ಹಡಗೊಂದರ ಸುತ್ತಲೂ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಕೋಸ್ಟ್ ‌ಗಾರ್ಡ್ ಸಿಬ್ಬಂದಿ ಎರಡು ಜೆಮಿನಿ ಬೋಟ್‌ನಲ್ಲಿ ತಿರುಗಲಾರಂಭಿಸಿದರು. ಆ ಹಡಗುಗಳು ಸುರಕ್ಷಿತವಾಗಿವೆ ಎಂದು ಅರಿತ ಬಳಿಕ ನೀರಿಗೆ ಬಿದ್ದು ಸ್ಮೋಕ್ ಮೂಲಕ ಸಿಗ್ನಲ್ ಕೊಡುತ್ತಿದ್ದ ವ್ಯಕ್ತಿಯೋರ್ವನನ್ನು ಸಿಬ್ಬಂದಿ ಸುತ್ತುವರಿದು ರಕ್ಷಿಸಿದರು. ಇದನ್ನೆಲ್ಲವನ್ನೂ ನೆರೆದಿದ್ದ ಜನರು ಕಣ್ಣು ಮಿಟುಕಿಸದೆ ದೂರದಿಂದ ನೋಡುತ್ತಿದ್ದರು.

ಅಷ್ಟರಲ್ಲಿ ವಾಟರ್ ಕೆನನ್ ಮೂಲಕ ಭಾರಿ ಪ್ರಮಾಣದಲ್ಲಿ ದೂರಕ್ಕೆ ನೀರು ಚಿಮ್ಮಿಸುವ ಮೂಲಕ ಅಗ್ನಿ ಅವಘಡ ನಡೆಯದಂತೆ ನೋಡಿಕೊಳ್ಳಲಾಯಿತು. ಆಕಾಶದಲ್ಲಿ ಸಿಗ್ನಲ್‌ಗಳನ್ನು ಹಾರಿಸಿದ ಬಳಿಕ ದೊಡ್ಡ ಗನ್ ಮೂಲಕ ಸಮುದ್ರದಲ್ಲಿ ಭಾರಿ ಪ್ರಮಾಣದಲ್ಲಿ ಬುಲೆಟ್ ಫೈರಿಂಗ್ ನಡೆಯಿತು. ಸಮುದ್ರದಲ್ಲಿ ಭಾರತದ ಗಡಿ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ದೃಢೀಕರಿಸಿಕೊಂಡ ನಂತರ ಗಸ್ತು ಹಡಗುಗಳು ಸ್ವಸ್ಥಾನಕ್ಕೆ ಹಿಂತಿರುಗಿದವು. ಅಂದಹಾಗೆ, ಇದು ಇಂಡಿಯನ್ ಕೋಸ್ಟ್‌ಗಾರ್ಡ್ಸ್ ವತಿಯಿಂದ ನಡೆದ ಅಣಕು ಕಾರ್ಯಾಚರಣೆ.

ಇಂಡಿಯನ್ ಕೋಸ್ಟ್ ಗಾರ್ಡ್ ಡೇ ಆಚರಣೆಯ ಹಿನ್ನೆಲೆಯಲ್ಲಿ ಈ ಅಣಕು ಕಾರ್ಯಾಚರಣೆ ಆಯೋಜಿಸಲಾಗಿತ್ತು. ಕೋಸ್ಟ್ ಗಾರ್ಡ್ಸ್ ಯಾವ ರೀತಿಯಲ್ಲಿ ಭಾರತದ ಸಮುದ್ರ ಭಾಗದ ಸರಹದ್ದಿನಲ್ಲಿ ಭದ್ರತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೆ?, ಸಮುದ್ರದಲ್ಲಿ ಮೀನುಗಾರರು ಅಪಾಯದಲ್ಲಿದ್ದಾಗ ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯುತ್ತದೆ?, ಸಮುದ್ರ ಭಾಗದಲ್ಲಿ ಯಾವುದಾದರೂ ಹಡಗು/ಬೋಟ್‌ಗಳಲ್ಲಿ ಅಗ್ನಿ ಅವಘಡ ನಡೆದರೆ, ಲೂಟಿಕೋರರು ದಾಳಿ ನಡೆಸಿದರೆ ಹೇಗೆ ಎದುರಿಸಲಾಗುತ್ತದೆ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಅಣುಕು ಕಾರ್ಯಾಚರಣೆ ನಡೆಯಿತು.

ಸುಮಾರು ನಾಲ್ಕು ಗಸ್ತು ಹಡಗುಗಳಲ್ಲಿ ಸುಮಾರು 12 ಕಿ.ಮೀ ದೂರದವರೆಗೆ ತೆರಳಿದ ನೂರಾರು ಜನರು, ಕೋಸ್ಟ್ ಗಾರ್ಡ್ಸ್‌ ಕಾರ್ಯವೈಖರಿಗೆ ಬೆರಗಾದರು. ಕ್ಷಣಕ್ಷಣಕ್ಕೂ ವಿವಿಧೆಡೆ ನಡೆಯುವ ಕಾರ್ಯಾಚರಣೆಯ ಮಾಹಿತಿಯನ್ನು ಸಿಬ್ಬಂದಿ ಮೂಲಕ ಜನರು ಪಡೆದುಕೊಂಡರು.

ಸಾಕಷ್ಟು ಬಾರಿ ಸಮುದ್ರದಾಳದಲ್ಲಿ ಸಿಲುಕಿದ್ದ ಮೀನುಗಾರರನ್ನು ರಕ್ಷಣೆ ಮಾಡಿದ್ದಲ್ಲದೇ, ವಿದೇಶಗಳಿಂದ ಬರುವ ಸರಕು ಹಡಗುಗಳ ಮೇಲೆ ಲೂಟಿಕೋರರು ದಾಳಿ ನಡೆಸಿದಾಗಲೂ ಇಂಡಿಯನ್ ಕೋಸ್ಟ್‌ಗಾರ್ಡ್ಸ್ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಸಾಕಷ್ಟು ಉದಾಹರಣೆಗಳಿವೆ.

ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಸಿಜೆ ಆಗಿ ಪಿ.ಎಸ್.ದಿನೇಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ

Last Updated :Feb 4, 2024, 2:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.