ETV Bharat / state

ಲಾಲ್‌ಬಾಗ್​ನಲ್ಲಿ ಮಾವು-ಹಲಸು ಮೇಳಕ್ಕೆ ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್ - Mango and Jackfruit fair

author img

By ETV Bharat Karnataka Team

Published : May 26, 2024, 8:35 PM IST

ಬೆಂಗಳೂರು ನಗರದ ಲಾಲ್​ಬಾಗ್​ನಲ್ಲಿ ಮಾವು ಹಲಸು ಮೇಳಕ್ಕೆ ಸಾಕಷ್ಟು ಗ್ರಾಹಕರು ಬರುತ್ತಿದ್ದಾರೆ.

Mango Jackfruit Mela
ಮಾವು -ಹಲಸು ಮೇಳ (ETV Bharat)

ಲಾಲ್‌ಬಾಗ್​ನಲ್ಲಿನ ಮಾವು-ಹಲಸು ಮೇಳ (ETV Bharat)

ಬೆಂಗಳೂರು : ನಗರದ ಲಾಲ್‌ಬಾಗ್​ನಲ್ಲಿ 2024ನೇ ಸಾಲಿನ ಮಾವು-ಹಲಸು ಮೇಳಕ್ಕೆ ಶುಕ್ರವಾರ ಚಾಲನೆ ಸಿಕ್ಕಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿನ್ನೆ 4ನೆಯ ಶನಿವಾರ ಮತ್ತು ಇಂದು ಭಾನುವಾರ ರಜಾ ದಿನವಾಗಿರುವುದರಿಂದ ಬೆಂಗಳೂರಿನ ಮತ್ತು ಪರ ಊರಿನ ಗ್ರಾಹಕರು ಕಿಕ್ಕಿರಿದು ತುಂಬಿದ್ದರು. ಮಕ್ಕಳಿಗೆ ಬೇಸಿಗೆ ರಜೆ ಇರುವುದು ಕೂಡ ಮೇಳದ ವ್ಯಾಪಾರಕ್ಕೆ ಇನ್ನಷ್ಟು ಇಂಬು ನೀಡಿದೆ.

ಈಟಿವಿ ಭಾರತ ಮಾವು ಮೇಳದ ಗ್ರೌಂಡ್ ರಿಪೋರ್ಟ್ ವೇಳೆ ಮಾತನಾಡಿದ ಕೋಲಾರ್ ಮ್ಯಾಂಗೋಸ್​ನ ಮಾಲೀಕ ರಾಘವೇಂದ್ರ, ''ಸುಮಾರು 15 ವರ್ಷಗಳಿಂದ ಮಾವು ಮೇಳದಲ್ಲಿ ಭಾಗವಹಿಸುತ್ತಿದ್ದೇವೆ. ಬಹುತೇಕ ವಿಧದ ಮಾವಿನ ಹಣ್ಣುಗಳನ್ನು ನೈಸರ್ಗಿಕವಾಗಿ ನಮ್ಮ ತೋಟದಲ್ಲಿಯೇ ಬೆಳೆದು ಮಾರಾಟ ಮಾಡುತ್ತಿದ್ದೇವೆ. ಯಾವುದೇ ಕೃತಕ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ನೀಡಲಾಗುತ್ತಿಲ್ಲ'' ಎಂದು ಹೇಳಿದರು.

''ಏಪ್ರಿಲ್ 15 ರಿಂದ ಮಾವಿನ ಹಣ್ಣಿನ ಫಸಲು ಮಾರುಕಟ್ಟೆಗೆ ಬಂದಿವೆ. ಸದ್ಯಕ್ಕೆ 15 ವಿಧದ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೇವೆ. ಕಿಂಗ್ ಆಫ್ ಮ್ಯಾಂಗೋ ಆಪೋಸ್ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದೆ. ಇಮಾಮ್ ಪಸಂದ್ ಹಣ್ಣು ಕೂಡ ಅಷ್ಟೇ ರುಚಿಕರವಾಗಿದೆ. ಈ ಒಂದು ವಾರ ಒಳ್ಳೆಯ ವ್ಯಾಪಾರ ನಡೆಯುತ್ತದೆ. ಮುಂದಿನ ವಾರದಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಲಿವೆ. ಆಗ ಸ್ವಲ್ಪ ವ್ಯಾಪಾರ ಇಳಿಮುಖವಾಗುವ ಸಾಧ್ಯತೆ ಇದೆ'' ಎಂದು ಅಭಿಪ್ರಾಯಪಟ್ಟರು.

ಮುಖ್ಯವಾಗಿ ಆಪೋಸ್, ದಶೇರಿ, ಕೇಸರ್, ರತ್ನ, ರಸಪುರಿ, ಸಿಂಧೂರ, ಕಾಲಪಡಿ, ಬಾದಾಮಿ, ಮಲ್ಲಿಕಾ ಮುಂತಾದ ಹಣ್ಣುಗಳು ಗ್ರಾಹಕರಿಗೆ ಲಭ್ಯ ಇವೆ. ಸ್ವಲ್ಪ ರೇಟ್ ಹೆಚ್ಚು ಎಂದು ಅನ್ನಿಸಿದರೂ ಒಳ್ಳೆಯ ಹಣ್ಣನ್ನು ಗ್ರಾಹಕರಿಗೆ ನೀಡುವುದು ನಮ್ಮ ಗುರಿಯಾಗಿದೆ ಎಂದರು.

ಗ್ರಾಹಕರಾದ ಬಸವೇಶ್ವರ ನಗರದ ಶ್ರೀಕಾಂತ್ ಮಾತನಾಡಿ, ''ಮೊದಲ ಬಾರಿಗೆ ಮಾವು ಮತ್ತು ಹಲಸು ಮೇಳಕ್ಕೆ ಬಂದಿದ್ದೇನೆ. ಇಲ್ಲಿ ವಿವಿಧ ಉತ್ತಮ ಗುಣಮಟ್ಟದ ಮಾವಿನ ಮತ್ತು ಹಲಸಿನ ಹಣ್ಣುಗಳು ಒಳ್ಳೆಯ ಬೆಲೆಗೆ ದೊರೆಯುತ್ತಿದೆ. ಮಲ್ಲಿಕಾ, ಶುಗರ್ ಬೇಬಿ, ಆಪೋಸ್ ಹಣ್ಣನ್ನು ಖರೀದಿಸಿದ್ದೇವೆ. ಕುಟುಂಬದ ಸಮೇತ ರಜಾ ದಿನದಲ್ಲಿ ಈ ಮೇಳಕ್ಕೆ ಬಂದಿರುವುದು ಸಂತಸವನ್ನು ತಂದಿದೆ'' ಎಂದು ಹೇಳಿದರು.

''ಆಪೋಸ್ ಮತ್ತು ಚಂದ್ರಹಲಸನ್ನು ಕುಟುಂಬ ಸಮೇತರಾಗಿ ಬಂದು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದೇನೆ. ಇಲ್ಲಿ ಉತ್ತಮ ಗುಣಮಟ್ಟದ ತೋಟದಿಂದ ನೇರವಾಗಿ ತಂದು ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿರುವುದು ಸಂತಸದ ವಿಚಾರ'' ಎಂದು ಮತ್ತೊಬ್ಬ ಗ್ರಾಹಕರಾದ ಗುರುರಾಜ್ ಈಟಿವಿ ಭಾರತಕ್ಕೆ ತಿಳಿಸಿದರು.

ಇದನ್ನೂ ಓದಿ : ಮಾವು, ಹಲಸು ಮೇಳಕ್ಕೆ ಚಾಲನೆ: ಗ್ರಾಹಕರಿಗೆ ನೈಸರ್ಗಿಕ ಮಾಗಿದ ಹಣ್ಣು ಲಭ್ಯವಾಗುವಂತೆ ಮಾಡಲು ವ್ಯವಸ್ಥೆ - Mango Jackfruit Fair

ETV Bharat Logo

Copyright © 2024 Ushodaya Enterprises Pvt. Ltd., All Rights Reserved.