ETV Bharat / state

ಜೆಡಿಎಸ್​ಗೆ ಎಷ್ಟು ಸ್ಥಾನ, ಯಾವ ಕ್ಷೇತ್ರ ಎನ್ನುವುದು ಇಂದು ನಿರ್ಧಾರವಾಗುತ್ತೆ: ಆರ್​ ಅಶೋಕ್

author img

By ETV Bharat Karnataka Team

Published : Mar 11, 2024, 2:55 PM IST

''ಎನ್​ಡಿಎ ಸೇರಿರುವ ಮಿತ್ರಪಕ್ಷ ಜೆಡಿಎಸ್​ಗೆ ರಾಜ್ಯದಲ್ಲಿ ಎಷ್ಟು ಸ್ಥಾನ ಬಿಟ್ಟುಕೊಡಬೇಕು ಮತ್ತು ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎನ್ನುವ ಕುರಿತು ಇಂದು ದೆಹಲಿಯಲ್ಲಿ ನಡೆಯಲಿರುವ ವರಿಷ್ಠರ ಸಭೆಯಲ್ಲಿ ಅಂತಿಮಗೊಳ್ಳಲಿದೆ'' ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದರು.

Etv Bharat
Etv Bharat

ಬೆಂಗಳೂರು: ''ಲೋಕಸಭಾ ಚುನಾವಣೆಗೆ ಎನ್​ಡಿಎ ಸೇರಿರುವ ಮಿತ್ರಪಕ್ಷ ಜೆಡಿಎಸ್​ಗೆ ರಾಜ್ಯದಲ್ಲಿ ಎಷ್ಟು ಸ್ಥಾನ ಬಿಟ್ಟುಕೊಡಬೇಕು. ಮತ್ತು ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎನ್ನುವ ಕುರಿತು ಇಂದು ದೆಹಲಿಯಲ್ಲಿ ನಡೆಯಲಿರುವ ವರಿಷ್ಠರ ಸಭೆಯಲ್ಲಿ ಅಂತಿಮಗೊಳ್ಳಲಿದೆ'' ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.

ದೆಹಲಿಗೆ ಹೋಗುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಮೊನ್ನೆ ದೆಹಲಿಗೆ ಹೋಗಿದ್ದಾಗ ಶೇ 80ರಷ್ಟು ಕ್ಷೇತ್ರಗಳಿಗೆ ಚರ್ಚೆ ಆಯಿತು. ಇವತ್ತು ಉಳಿದ ಶೇ 20ರಷ್ಟು ಕ್ಷೇತ್ರಗಳ ಚರ್ಚೆ ನಡೆಯಲಿದೆ. ಪ್ರತಿಯೊಂದು ಕ್ಷೇತ್ರಗಳ‌ ಬಗ್ಗೆಯೂ ಕೂಲಂಕಷ ಚರ್ಚೆ ನಡೆಯಲಿದೆ. ಜೆಡಿಎಸ್ ಜೊತೆ ಹೊಂದಾಣಿಕೆ ಆಗಿರೋ ಹಿನ್ನೆಲೆಯಲ್ಲಿ ಎಲ್ಲ 28 ಕ್ಷೇತ್ರ ಗೆಲ್ಲುವ ಬಗ್ಗೆ ಚರ್ಚೆ ಮಾಡುತ್ತೇವೆ. ಜೆಡಿಎಸ್​ಗೆ ಎಷ್ಟು ಸೀಟು ಕೊಡಬೇಕು ಅನ್ನುವುದರ ಬಗ್ಗೆಯೂ ಇವತ್ತೇ ಚರ್ಚೆ ಆಗಲಿದೆ. ನಮ್ಮ ಅಭಿಪ್ರಾಯಗಳನ್ನು ಕೊಡುತ್ತೇವೆ'' ಎಂದರು.

ಸರ್ವೆ ವರದಿ ಆಧರಿಸಿಯೇ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಆಯ್ಕೆ: ''ಸರ್ವೆ ವರದಿ ಆಧರಿಸಿಯೇ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿ ಆಯ್ಕೆ ಮಾಡಲಾಗುತ್ತದೆ. ಏಳೆಂಟು ಕ್ಷೇತ್ರಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡಲು ಕರೆದಿದ್ದಾರೆ ಅನ್ನೋದು ನನ್ನ ಭಾವನೆ. ಪ್ರತಿಯೊಂದು ಕ್ಷೇತ್ರಕ್ಕೂ ಗೆಲ್ಲುವ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚೆ ನಡೆಯಲಿದೆ ನಾನು ಬೊಮ್ಮಾಯಿ ಒಂದೇ ಫ್ಲೈಟ್​ನಲ್ಲಿ ಹೋಗುತ್ತಿದ್ದೇವೆ'' ಎಂದು ತಿಳಿಸಿದರು.

''ಮೈಸೂರು, ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಕಗ್ಗಂಟು ಇದೆ. ಎಲ್ಲ ಕ್ಷೇತ್ರಗಳ ಬಗ್ಗೆ ಎರಡೆರಡು ಬಾರಿ ವರಿಷ್ಠರು ಚರ್ಚೆ ಮಾಡಿದ್ದಾರೆ. ಅಂತಿಮವಾಗಿ ಎಲ್ಲವನ್ನೂ ಹೈಕಮಾಂಡ್ ನಿರ್ಧಾರಕ್ಕೇ ಬಿಟ್ಟಿದ್ದೇವೆ. ಕೇಂದ್ರ ನಾಯಕರು ಯಾರನ್ನೇ ಅಭ್ಯರ್ಥಿ ಮಾಡಿದರೂ ನಾವು ಕೆಲಸ ಮಾಡುತ್ತೇವೆ, ಗೆಲ್ಲಿಸುತ್ತೇವೆ. ಟಿಕೆಟ್ ಯಾರಿಗೇ ಕೊಟ್ಟರೂ ಕಾರ್ಯಕರ್ತರಿಗೆ ಸಮಸ್ಯೆ ಇಲ್ಲ. ಆದರೆ, ಕೆಲವು ನಾಯಕರ ಸಮಸ್ಯೆ ಇದೆ. ಅದನ್ನು ಸ್ಥಳೀಯವಾಗಿ ನಾವು ಕೂತು ಚರ್ಚೆ ಮಾಡಿ ಸರಿ ಮಾಡುತ್ತೇವೆ'' ಎಂದರು.

ಗೋಬ್ಯಾಕ್ ಶೋಭಾ ಅಭಿಯಾನ ವಿಚಾರ: ಗೋಬ್ಯಾಕ್ ಶೋಭಾ ಅಭಿಯಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ''ಇದೆಲ್ಲ ಚುನಾವಣೆ ಮೇಲೆ ಪ್ರಭಾವ ಬೀರಲ್ಲ. ರಾಷ್ಟ್ರೀಯ ನಾಯಕರು ಯಾವ ಮಾನದಂಡಗಳ ಮೇಲೆ ಅಭ್ಯರ್ಥಿ ಆಯ್ಕೆ ಮಾಡ್ತಾರೆ ಅಂತ ನೋಡಬೇಕು. ಸರ್ವೆಗಳಲ್ಲಿ ಬಂದಿರುವ ಪ್ಲಸ್, ಮೈನಸ್ ಆಧರಿಸಿ ಟಿಕೆಟ್ ಕೊಡುತ್ತಾರೆ. ಇದರ ಜೊತೆಗೆ ನಮ್ಮ ಅಭಿಪ್ರಾಯಗಳನ್ನು ಕೇಳಿದ್ದಾರೆ ಎಲ್ಲವನ್ನು ಅವಲೋಕಿಸಿಯೇ ಅಭ್ಯರ್ಥಿ ಹೆಸರು ಅಂತಿಮಗೊಳ್ಳಲಿದೆ'' ಎಂದರು.

ಕೆಲವು ಕ್ಷೇತ್ರಗಳಿಗೆ ನಿರ್ದಿಷ್ಟ ಅಭ್ಯರ್ಥಿ ಹಾಕಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ''ಆ ರೀತಿಯದ್ದೇನೂ ನನ್ನ ಗಮನಕ್ಕೆ ಬಂದಿಲ್ಲ. ಎಲ್ಲರೂ ಸರ್ವಸಮ್ಮತವಾಗಿ ಚರ್ಚೆ ಮಾಡುತ್ತೇವೆ'' ಎಂದರು.

ಇದನ್ನೂ ಓದಿ: ಇಂದು ಬಿಜೆಪಿ ಅಭ್ಯರ್ಥಿಗಳ ಹೆಸರು ಫೈನಲ್, ಇಂದೇ ರಾಜ್ಯದ ಮೊದಲ ಪಟ್ಟಿ ಬಿಡುಗಡೆ: ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.