ETV Bharat / state

ಈಶ್ವರಪ್ಪ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್ ತಡೆ; ಆಕ್ಷೇಪಾರ್ಹ ಹೇಳಿಕೆ ನೀಡುವ ರಾಜಕಾರಣಿಗಳಿಗೆ ತರಾಟೆ

author img

By ETV Bharat Karnataka Team

Published : Feb 16, 2024, 7:54 PM IST

ಆಕ್ಷೇಪಾರ್ಹ ಹೇಳಿಕೆ ವಿಚಾರವಾಗಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಾಗಿತ್ತು.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ದೇಶ ವಿಭಜಿಸುವಂಥ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿ ಮಾಡಬೇಕೆಂದು ಹೇಳಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ಗೆ ಹೈಕೋರ್ಟ್ ತಡೆ ನೀಡಿದೆ.

ತಮ್ಮ ವಿರುದ್ಧ ದಾಖಲಾಗಿದ್ದ ಎಫ್​ಐಆರ್​ ರದ್ದು ಮಾಡುವಂತೆ ಕೋರಿ ಈಶ್ವರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್​.ದೀಕ್ಷಿತ್​ ಅವರಿದ್ದ ನ್ಯಾಯಪೀಠ ಎಫ್​ಐಆರ್​ಗೆ ತಡೆ ನೀಡಿ ವಿಚಾರಣೆ ಮುಂದೂಡಿತು. ಇದೇ ವೇಳೆ ನ್ಯಾಯಮೂರ್ತಿಗಳು, ಆಕ್ಷೇಪಾರ್ಹ ಹೇಳಿಕೆ ನೀಡುವ ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ನಮ್ಮ ಧುರೀಣರಿಗೆ ಏಕೆ ಒಳ್ಳೆಯ ಭಾಷೆ ಬಳಸಲು ಬರುತ್ತಿಲ್ಲ. ಅವರು ಮಾತನಾಡುವಾಗ ಉತ್ತಮ ಸಂಸ್ಕೃತಿಯನ್ನೇಕೆ‌ ಪ್ರತಿಬಿಂಬಿಸುತ್ತಿಲ್ಲ?. ಹೀಗೆ ಮಾತನಾಡಿ ಭಾಷೆಯ ಮೇಲೆ ಏಕೆ ದೌರ್ಜನ್ಯ ಮಾಡುತ್ತಿದ್ದಾರೆ. ಕರ್ನಾಟಕ ವಿವಿಧ ಸಿದ್ಧಾಂತದ ಜನರನ್ನು ಹೊಂದಿರುವ ರಾಜ್ಯ. ಭಾಷೆಯ ಬಳಕೆಯ ಬಗ್ಗೆ ರಾಜಕಾರಣಿಗಳು ಎಚ್ಚರದಿಂದಿರಬೇಕು. ಶಾಲಾ ಮಕ್ಕಳು ನಮ್ಮನ್ನು ನೋಡುತ್ತಿರುತ್ತಾರೆ ಎಂಬ ಅರಿವಿರಬೇಕು ಎಂದು ಚಾಟಿ ಬೀಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರವಾಗಿ ಹಾಜರಿದ್ದ ಹಿರಿಯ ವಕೀಲ ಅರುಣ್​ ಶ್ಯಾಮ್​, ಅರ್ಜಿದಾರರಾಗಿರುವ ಈಶ್ವರಪ್ಪನವರು ದೇಶ ವಿಭಜನೆ ಮಾಡುವಂತೆ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವಂತಹ ಕಾನೂನು ಜಾರಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ, ಯಾವುದೇ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ಕೊಲ್ಲಿ ಎಂಬುದಾಗಿ ಎಲ್ಲಿಯೂ ಹೇಳಿಕೆ ನೀಡಿಲ್ಲ. ಅಂತಹ ಉದ್ದೇಶವೂ ಅವರಿಗಿರಲಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: 2024ರ ಫೆಬ್ರುವರಿ 24ರಂದು ದಾವಣಗೆರೆಯಲ್ಲಿ ನಡೆದ ಬಿಜೆಪಿ ಪಕ್ಷದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಂದರ್ಭದಲ್ಲಿ ಅರ್ಜಿದಾರ ಈಶ್ವರಪ್ಪ ಸೇರಿದಂತೆ ಬಿಜೆಪಿಯ ಹಲವು ಮಂದಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಭಾಷಣ ಮಾಡಿದ್ದ ಈಶ್ವರಪ್ಪ, ಡಿ.ಕೆ.ಸುರೇಶ್​ ಮತ್ತು ವಿನಯ್​ ಕುಲಕರ್ಣಿ ಅವರು ದಕ್ಷಿಣ ಭಾರತವನ್ನು ಪ್ರತ್ಯೇಕ ರಾಷ್ಟ್ರವನ್ನಾಗಿ ಕೇಳುತ್ತೇವೆ ಎಂದು ಹೇಳಿದ್ದಾರೆ. ಈ ರೀತಿಯಲ್ಲಿ ದೇಶವನ್ನು ಛಿದ್ರ ಮಾಡುವ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವಂತಹ ಕಾನೂನು ಜಾರಿ ಮಾಡಬೇಕು ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆ, ಇತರೆ ಸಮುದಾಯಗಳು ಮತ್ತು ಗುಂಪುಗಳ ನಡುವೆ ದ್ವೇಷ ಅಥವಾ ವೈಮನಸ್ಸು ಮೂಡಿಸುವ ಹಾಗು ಅಪಾಯದ ಭೀತಿಯನ್ನು ಉಂಟು ಮಾಡುತ್ತದೆ. ಜತೆಗೆ, ಇದು ಪ್ರಾಣ ಬೆದರಿಕೆ ಹಾಕಿದಂತಿದೆ ಎಂದು ಉದ್ಯಮಿಯಾಗಿರುವ ಹನುಮಂತ ಎಂಬವರು ದೂರು ದಾಖಲಿಸಿದ್ದರು. ದೂರಿನ ಅನ್ವಯ ಎಫ್​ಐಆರ್​ ದಾಖಲಿಸಿಕೊಂಡಿದ್ದ ದಾವಣಗೆರೆ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಎಫ್​ಐಆರ್​ ರದ್ದು ಕೋರಿ ಈಶ್ವರಪ್ಪ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಕೇರಳ ಸಿಎಂ ಮಗಳು ನಿರ್ದೇಶಕಿಯಾಗಿರುವ ಕಂಪೆನಿ ವಿರುದ್ಧ ತನಿಖೆ: ಕೇಂದ್ರದ ಕ್ರಮ ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.