ETV Bharat / state

ಕೋರ್ಟ್ ಕಲಾಪ ಬಹಿಷ್ಕರಿಸುವ ವಕೀಲರ ಅಮಾನತು: ಕಾನೂನು ತಿದ್ದುಪಡಿಗೆ ಹೈಕೋರ್ಟ್ ಪ್ರಸ್ತಾವ - High court

author img

By ETV Bharat Karnataka Team

Published : Apr 13, 2024, 8:54 PM IST

ಕೋರ್ಟ್ ಕಲಾಪ ಬಹಿಷ್ಕರಿಸುವ ವಕೀಲರನ್ನು ಅಮಾನತುಗೊಳಿಸುವ ಕಾನೂನು ತಿದ್ದುಪಡಿ ಕುರಿತು ಹೈಕೋರ್ಟ್ ಪ್ರಸ್ತಾಪಿಸಿದೆ.

Etv Bharat
Etv Bharat

ಬೆಂಗಳೂರು: ವಿವಿಧ ಕಾರಣಗಳಿಂದ ರಾಜ್ಯದ ಯಾವುದೇ ನ್ಯಾಯಾಲಯಗಳಲ್ಲಿ ನಿರ್ದಿಷ್ಟ ಅವಧಿಗೆ ಕೋರ್ಟ್ ಕಲಾಪ ಬಹಿಷ್ಕರಿಸುವ/ಮುಷ್ಕರ ನಡೆಸುವ ವಕೀಲರ ನಡೆಯನ್ನು ನ್ಯಾಯದಾನ ಆಡಳಿತದಲ್ಲಿ ಹಸ್ತಕ್ಷೇಪವೆಂದು ಪರಿಗಣಿಸಿ ಅಂತಹ ವಕೀಲರನ್ನು ಅಮಾನತುಗೊಳಿಸಲು ಕಾನೂನು ತಿದ್ದುಪಡಿಗೆ ಹೈಕೋರ್ಟ್ ಪ್ರಸ್ತಾಪಿಸಿದೆ. ಅದಕ್ಕಾಗಿ ಹೈಕೋರ್ಟ್ ಮತ್ತು ಅಧೀನ ನ್ಯಾಯಾಲಯಗಳ ತಿದ್ದುಪಡಿ ನಿಯಮ 2024 ಅನ್ನು ಹೈಕೋರ್ಟ್ ಬಿಡುಗಡೆ ಮಾಡಿದೆ. ಅದರಂತೆ ಹೈಕೋರ್ಟ್ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸುವವರು ಈ ಷರತ್ತಿಗೆ ಒಳಪಟ್ಟು ಅಲ್ಲಿ ವಕೀಲ ವೃತ್ತಿಯನ್ನು ನಡೆಸಬೇಕಾಗುತ್ತದೆ.

ಕರಡು ನಿಯಮಗಳ ಪ್ರಕಾರ ಯಾವುದೇ ವಕೀಲರು ಅವರ ಯಾವುದೇ ಸಮಸ್ಯೆ ಅಥವಾ ದೂರುಗಳಿದ್ದರೆ ವಕೀಲರ ಸಂಘಗಳ ಮೂಲಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ದೂರು ಇತ್ಯರ್ಥ ಸಮಿತಿ(ಜಿಆರ್‌ಸಿ)ಗೆ ಸಲ್ಲಿಸಬೇಕು. ಈ ಜಿಆರ್​​ಸಿಯು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಅಡ್ವೋಕೇಟ್‌ ಜನರಲ್, ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷರು, ಹೈಕೋರ್ಟ್ ಆಡಳಿತ ನಿರ್ವಹಣೆ ಹೊಣೆ ಹೊತ್ತ ನ್ಯಾಯಮೂರ್ತಿ ಮತ್ತು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.

ವಕೀಲರ ಸಮಸ್ಯೆ ಅಥವಾ ದೂರುಗಳ ಬಗ್ಗೆ ಅಥವಾ ಮುಷ್ಕರ ಅಥವಾ ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಸಂಘದ ಪ್ರತಿನಿಧಿಗಳ ಜೊತೆ ಜಿಆರ್​ಸಿ ಸಮಾಲೋಚನೆ ನಡೆಸುತ್ತದೆ. ಈ ರೀತಿ ಮುಷ್ಕರ ಅಥವಾ ಪ್ರತಿಭಟನೆ, ಬಹಿಷ್ಕಾರ ಹಾಕುವುದು ನ್ಯಾಯದಾನದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂಬುದರ ಕುರಿತು ಮನವರಿಕೆ ಮಾಡಿಕೊಡುತ್ತದೆ. ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ.

ಇದನ್ನೂ ಓದಿ: ನ್ಯಾಯಾಲಯ ಆದೇಶ ಪಾಲಿಸದ ಸರ್ಕಾರದ ಪ್ರಾಧಿಕಾರಗಳು: ಹೈಕೋರ್ಟ್​ನಲ್ಲಿ​ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ದಾಖಲು - High Court

ಒಂದು ವೇಳೆ ಜಿಆರ್​​ಸಿ ಸಲಹೆಯನ್ನು ವಕೀಲರ ಸಂಘಗಳು ಧಿಕ್ಕರಿಸಿದರೆ ಆ ವೇಳೆ ಜಿಆರ್​​ಸಿ ಅಂತಹ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಸೇರಿದಂತೆ ಇನ್ನಿತರ ಕ್ರಮಗಳನ್ನು ಜರುಗಿಸುವ ಕುರಿತು ಮುಖ್ಯ ನ್ಯಾಯಮೂರ್ತಿಗಳಿಗೆ ವರದಿಯನ್ನು ಸಲ್ಲಿಸುತ್ತದೆ. ಒಮ್ಮೆ ನ್ಯಾಯಾಂಗ ನಿಂದನೆ ಕ್ರಮಗಳನ್ನು ಆರಂಭಿಸಿದರೆ ಆಗ ಸಿಜೆ ಅಂತಹ ವಕೀಲರನ್ನು ನಿರ್ದಿಷ್ಟ ಅವಧಿಗೆ ಅಮಾನತುಗೊಳಿಸಲು ಆದೇಶ ನೀಡಬಹುದು. ಅದೇ ರೀತಿ ನಿಯಮಗಳಲ್ಲಿ, ಮುಖ್ಯ ನ್ಯಾಯಮೂರ್ತಿಗಳಿಗೆ ವಕೀಲರ ಅಮಾನತು ವಾಪಸ್‌ ಪಡೆಯುವ ಅಧಿಕಾರವನ್ನೂ ಸಹ ನೀಡಲಾಗಿದೆ.

ಇದನ್ನೂ ಓದಿ: ಅಂಗವೈಕಲ್ಯವಿರುವ ಪತಿ ತನ್ನ ಪತ್ನಿಗೆ ಜೀವನಾಂಶ ಕೊಡಬೇಕಿಲ್ಲ: ಹೈಕೋರ್ಟ್ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.