ETV Bharat / state

ನ್ಯಾಯಾಲಯ ಆದೇಶ ಪಾಲಿಸದ ಸರ್ಕಾರದ ಪ್ರಾಧಿಕಾರಗಳು: ಹೈಕೋರ್ಟ್​ನಲ್ಲಿ​ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ದಾಖಲು - High Court

author img

By ETV Bharat Karnataka Team

Published : Apr 9, 2024, 10:30 AM IST

ನ್ಯಾಯಾಲಯ ನೀಡುವ ಆದೇಶವನ್ನು ಪಾಲಿಸುವಲ್ಲಿ ಸರ್ಕಾರ ಮತ್ತದರ ಪ್ರಾಧಿಕಾರಗಳ ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಕುರಿತಂತೆ ಹೈಕೋರ್ಟ್​ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿಯನ್ನು ದಾಖಲಿಸಿಕೊಂಡಿದೆ.

ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ನ್ಯಾಯಾಲಯಗಳ ಆದೇಶವನ್ನು ಪಾಲಿಸಲು ಸರ್ಕಾರ ಮತ್ತದರ ಪ್ರಾಧಿಕಾರಗಳು ನಿರ್ಲಕ್ಷ್ಯ ಹಾಗೂ ವಿಳಂಬ ಧೋರಣೆ ಅನುಸರಿಸುತ್ತಿರುವ ಕುರಿತು ಹೈಕೋರ್ಟ್​ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿಯನ್ನು ದಾಖಲಿಸಿಕೊಂಡಿದೆ.

ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್​​ ಅವರಿದ್ದ ನ್ಯಾಯಪೀಠ, ಕಲಾಪದ ವೇಳೆ ವಿಷಯ ಪ್ರಸ್ಥಾಪಿಸಿತು. ಅಲ್ಲದೇ, ನ್ಯಾಯಾಲಯಗಳ ಮೊರೆ ಹೋಗುವುದು ಸಾರ್ವಜನಿಕರ ಮೂಲಭೂತ ಹಕ್ಕಾಗಿದ್ದು, ಆದೇಶ ಪಾಲಿಸದಿರುವುದು ಜನರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ನ್ಯಾಯಾಲಯಗಳ ಆದೇಶ ಪಾಲಿಸಲು ಅಧಿಕಾರಿಗಳು ತೋರುತ್ತಿರುವ ನಿರ್ಲಕ್ಷವನ್ನು ಸಹಿಸಲಾಗದು. ಕೋರ್ಟ್‌ ಆದೇಶ ಜಾರಿಯ ವಿಳಂಬದಿಂದ ನ್ಯಾಯ ವಂಚಿಸಿದಂತಾಗಲಿದೆ ಎಂದು ಕಟುವಾಗಿ ಅಭಿಪ್ರಾಯಪಟ್ಟಿತು. ಇದೇ ವೇಳೆ, ಅರ್ಜಿ ಸಂಬಂಧ ಬಿಬಿಎಂಪಿ, ಬಿಡಿಎ ಹಾಗೂ ಕೆಐಎಡಿಬಿ ಸೇರಿದಂತೆ ಇನ್ನಿತರ ಸರ್ಕಾರಿ ಇಲಾಖೆಗಳು/ಪ್ರಾಧಿಕಾರಗಳಿಗೆ ನೋಟಿಸ್ ಜಾರಿಗೊಳಿಸಿ ಆದೇಶಿಸಿತು.

ಕಳೆದ ಎರಡು ವಾರ ಹಾಗೂ ಅದಕ್ಕಿಂತ ಹೆಚ್ಚು ಸಮಯದಲ್ಲಿ ನ್ಯಾಯಾಂಗ ನಿಂದನೆ ಕಾಯ್ದೆಯಡಿ ದಾಖಲಾಗಿದ್ದ ಹಲವು ಪ್ರಕರಣಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ. ಈ ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯಗಳ ಆದೇಶ ಹಾಗೂ ನಿರ್ದೇಶನಗಳನ್ನು ಪ್ರಾಧಿಕಾರ/ಅಧಿಕಾರಿಗಳು ಗಮನಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಇದು ನೋವಿನ ಸಂಗತಿಯಾಗಿದೆ ಎಂದು ತಿಳಿಸಿರುವ ಹೈಕೋರ್ಟ್‌, ನ್ಯಾಯಾಂಗ ನಿಂದನೆ ಕಾಯ್ದೆಯಡಿ ದಾಖಲಾಗಿರುವ ಹಲವು ಪ್ರಕರಣಗಳನ್ನು ಆದೇಶದಲ್ಲಿ ಉದಾಹರಿಸಿದೆ.

ಅಲ್ಲದೆ, ನ್ಯಾಯಾಂಗ ನಿಂದನೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲದೇ ಉಳಿದ ಅನೇಕ ಪ್ರಕರಣಗಳಲ್ಲಿ ನ್ಯಾಯಾಲಯ ನೀಡಿರುವ ಆದೇಶ/ನಿರ್ದೇಶನಗಳು ದೀರ್ಘಾವಧಿಯಿಂದ ಸಕಾರಣಗಳಿಲ್ಲದೆ ಪಾಲನೆಯಾಗದೆ ಉಳಿದಿವೆ. ಗೊತ್ತಿದ್ದು-ಗೊತ್ತಿಲ್ಲದೇ, ಕ್ಷಮೆ ನೀಡಿದ ಹಾಗೂ ಇತರೆ ನೆಪಗಳಿಂದ ನ್ಯಾಯಾಲಯಗಳ ಆದೇಶಗಳನ್ನು ಅಧಿಕಾರಿಗಳು ಕಡೆಗಣಿಸಿದ್ದಾರೆ. ನ್ಯಾಯಾಲಯಗಳ ಆದೇಶಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ವ್ಯವಸ್ಥೆ ವಿಫಲವಾಗಿದೆ. ನ್ಯಾಯಾಲಯಗಳು ತನ್ನ ಅಧಿಕಾರವನ್ನು ಕಳೆದುಕೊಳ್ಳುತ್ತಿವೆ. ಅವುಗಳ ಆದೇಶಗಳು ಸರ್ಕಾರದ ಅಧಿಕಾರಿಗಳ ಮೇಲೆ ಯಾವುದೇ ಪರಿಣಾಮ ಬೀರುತ್ತಿಲ್ಲ ಎಂಬುದಾಗಿ ಸಾರ್ವಜನಿಕರು ನಿರ್ಧರಿಸುವ ಪರಿಸ್ಥಿತಿಯನ್ನು ಸೃಷ್ಟಿ ಮಾಡಿದೆ ಎಂದು ಆದೇಶದಲ್ಲಿ ನ್ಯಾಯಪೀಠ ತಿಳಿಸಿದೆ.

ಕೋರ್ಟ್‌ ಆದೇಶಗಳ ಜಾರಿಯಾಗಬೇಕಿರುವ ಕಾರಣ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ವಿಚಾರಣೆ ಕೆಗೆತ್ತಿಕೊಳ್ಳಬೇಕಿದೆ ಎಂದು ತಿಳಿಸಿರುವ ನ್ಯಾಯಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ, ಕೃಷಿ, ಹಿಂದುಳಿದ ವರ್ಗಗಳು, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗಳು ನೋಟಿಸ್‌ ನೀಡಿದೆ. ನ್ಯಾಯಾಲಯಗಳ ಆದೇಶಗಳನ್ನು ಪಾಲಿಸದೇ ಇರುವುದರಲ್ಲಿ ಸರ್ಕಾರದ ಜೊತೆಗೆ ಸ್ಟ್ರಾರ್​​​​ ಜನರಲ್​ ಅವರು ಸರ್ಕಾರದ ಎಲ್ಲ ಇಲಾಖೆಗಳನ್ನು ಪ್ರತಿವಾದಿಗಳಾಗಿ ಮಾಡಬೇಕು ಸೂಚಿಸಿದೆ.

ಮತ್ತೊಂದೆಡೆ, ಅರೆ-ಸರ್ಕಾರಿ ಪ್ರಾಧಿಕಾರಿಗಳು, ಶಾಸನಾತ್ಮಕ ಸಂಸ್ಥೆಗಳ ಅಥವಾ ನಗರ ಪಾಲಿಕೆಗಳು ಸಹ ನ್ಯಾಯಾಲಯಗಳ ಆದೇಶಗಳ ಪಾಲನೆಯಾಗದೇ ಇರುವುದಕ್ಕೆ ಸರ್ಕಾರದ ಜೊತೆಗೆ ಸಮಾನ ಜವಾಬ್ದಾರಿ ಹೊಂದಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠ, ಬಿಬಿಎಂಪಿ, ಬಿಡಿಎ ಹಾಗೂ ಕೆಐಎಡಿಬಿಗೆ ನೋಟಿಸ್‌ ಜಾರಿ ಮಾಡಿದೆ. ಇತರೆ ಸರ್ಕಾರಿ ಸಂಸ್ಥೆಗಳನ್ನು ಪ್ರತಿವಾದಿ ಮಾಡಲು ಸೂಚಿಸಿದೆ.

ಕೋರ್ಟ್ ಆದೇಶಗಳನ್ನು ಪಾಲಿಸಲು ಸರ್ಕಾರ, ಪ್ರಾಧಿಕಾರಗಳ ಯಾವ ಕಾರ್ಯವಿಧಾನ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು?, ಆದೇಶ ಪಾಲನೆ ವಿಚಾರಗಳನ್ನು ನಿರ್ವಹಿಸಲು ವಿಶೇಷ ಶಾಖೆ?, ಸಕ್ಷಮ ಅಧಿಕಾರಿಗಳನ್ನು ನೇಮಿಸಲಾಗಿದೆಯೇ?, ಯಾವುದಾದರೂ ವ್ಯವಸ್ಥೆ ರೂಪಿಸಲಾಗಿದೆಯೇ?, ಕೋರ್ಟ್‌ ಆದೇಶಗಳನ್ನು ಜಾರಿಗೊಳಿಸಲು, ಅದನ್ನು ಮೇಲ್ವಿಚಾರಣೆ ನಡೆಸಲು ಯಾವ್ಯಾವ ಕ್ರಮ ಕೈಗೊಳ್ಳಲಾಗಿದೆ?, ಕೋರ್ಟ್‌ ಆದೇಶಗಳ ಬಗ್ಗೆ ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ವ್ಯವಸ್ಥೆ ರೂಪಿಸಲಾಗಿದೆ?, ಅಧಿಕಾರಿಗಳ ವಿರುದ್ಧ ಕೈಗೊಂಡ ಕ್ರಮಗಳೇನು?, ಎಂಬುದರ ಬಗ್ಗೆ ಸರ್ಕಾರ ಮತ್ತು ಅರೆ-ಸರ್ಕಾರಿ ಸಂಸ್ಥೆಗಳು ಉತ್ತರ ನೀಡಬೇಕು ಎಂದು ಹೈಕೋರ್ಟ್​ ಸೂಚಿಸಿದೆ. ಜೂ.5ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.

ಇದನ್ನೂ ಓದಿ: ಎಂ.ಪಿ. ದಾರಕೇಶ್ವರಯ್ಯ ಬೇಡ ಜಂಗಮ ಜಾತಿ ಪ್ರಮಾಣಪತ್ರಕ್ಕೆ ಹೈಕೋರ್ಟ್ ತಡೆ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.