ETV Bharat / state

ಗೋಕರ್ಣ ದೇವಾಲಯ ಮೇಲ್ವಿಚಾರಣಾ ಸಮಿತಿಗೆ ನಾಮ ನಿರ್ದೇಶನ: ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್

author img

By ETV Bharat Karnataka Team

Published : Jan 24, 2024, 5:24 PM IST

ಗೋಕರ್ಣ ದೇವಾಲಯ ಮೇಲ್ವಿಚಾರಣಾ ಸಮಿತಿಗೆ ನಾಮ ನಿರ್ದೇಶನ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್​ ರದ್ದು ಮಾಡಿದೆ.

ಸರ್ಕಾರ ಆದೇಶ ರದ್ದುಪಡಿಸಿದ ಹೈಕೋರ್ಟ್
ಸರ್ಕಾರ ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಸುಪ್ರೀಂಕೋರ್ಟ್ ನಿರ್ದೇಶನದ ಹೊರತಾಗಿಯೂ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನದ ಆಡಳಿತ ನಿರ್ವಹಣೆಗೆ ರಚಿಸಿದ್ದ ಮೇಲ್ವಿಚಾರಣಾ ಸಮಿತಿಗೆ ನಾಮ ನಿರ್ದೇಶನ ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಅಲ್ಲದೆ, ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿ ಆದೇಶವನ್ನು ಪಡೆದು ಮೇಲ್ವಿಚಾರಣಾ ಸಮಿತಿಯ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಸರ್ಕಾರಕ್ಕೆ ಸಂಪೂರ್ಣ ಅಧಿಕಾರವಿರಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಮಹಾಬಲೇಶ್ವರ ದೇವಾಲಯದ ಮೇಲ್ವಿಚಾರಣಾ ಸಮಿತಿಯ ಉಪಾಧಿವಂತರು ಹಾಗೂ ಪರಿಣಿತರನ್ನು ಬದಲಾವಣೆ ಮಾಡಿದ್ದ ಸರ್ಕಾರದ ಕ್ರಮ ಪ್ರಶ್ನಿಸಿ ರಾಮಚಂದ್ರಾಪುರ ಮಠ ಮತ್ತು ಮಠದ ಪೀಠಾಧಿಪತಿಗಳಾದ ರಾಘವೇಶ್ವರ ಭಾರತೀ ಸ್ವಾಮಿಗಳು ಹಾಗೂ ನಾಮ ನಿರ್ದೇಶನದಿಂದ ವಜಾಗೊಂಡಿದ್ದ ಸದಸ್ಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ದೇವಾಲಯ ಸಮಿತಿಗೆ ನಾಮ ನಿರ್ದೇಶನ ಮಾಡುವುದಕ್ಕೆ ಸರ್ಕಾರಕ್ಕೆ ಅಧಿಕಾರವಿದ್ದರೂ, ಮೇಲ್ವಿಚಾರಣಾ ಸಮಿತಿ ರಚನೆ ಮಾಡುವ ಸಂಬಂಧ ಸುಪ್ರೀಂಕೋರ್ಟ್ ಮುಂದಿನ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ. ಆದ್ದರಿಂದ ಈ ಹಿಂದೆ ಇದ್ದ ಸಮಿತಿಯ ಸದಸ್ಯರ ಬದಲಾವಣೆ ಮಾಡಬೇಕಾದರೆ ಅದಕ್ಕೂ ಮುನ್ನ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿ ಹೊಸ ಸದಸ್ಯರ ನೇಮಕಕ್ಕೆ ಅನುಮತಿ ಪಡೆಯಬೇಕಾಗಿತ್ತು.

ಆದರೆ, ರಾಜ್ಯ ಸರ್ಕಾರ ಈ ಕಾರ್ಯ ಮಾಡದೆ ಇತರೆ ಸದಸ್ಯರನ್ನು ನಾಮ ನಿರ್ದೇಶನ ಮಾಡಿದೆ. ಹೀಗೆ ಮಾಡುವುದಕ್ಕೆ ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ. ಅರ್ಜಿದಾರರೇ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಬಹುದಿತ್ತು ಎಂಬ ರಾಜ್ಯ ಸರ್ಕಾರದ ವಾದ ತಳ್ಳಿಹಾಕಿದ ನ್ಯಾಯಪೀಠ, ದೋಷಪೂರಿತ ಆದೇಶವನ್ನು ಅರ್ಜಿದಾರರು ಜಾರಿ ಮಾಡಿಲ್ಲ. ಇದು ಸರ್ಕಾರದಿಂದ ಆಗಿರುವುದಾಗಿದ್ದು, ಸರ್ಕಾರವೇ ಸುಪ್ರೀಂಕೋರ್ಟ್‌ನ ಅನುಮತಿ ಪಡೆಯಬೇಕಾಗಿತ್ತು. ಆದರೆ, ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶವನ್ನು ಮೀರಲು ಪ್ರಯತ್ನ ಮಾಡಿದೆ ಎಂದು ನ್ಯಾಯಪೀಠ ತಿಳಿಸಿದೆ.

ಜತೆಗೆ ಸರ್ಕಾರಗಳು ಬರಬಹುದು, ಹೋಗಬಹುದು ಸಾಂವಿಧಾನಿಕ ನ್ಯಾಯಾಲಯಗಳು ಎಲ್ಲ ಸಮುಯದಲ್ಲಿಯೂ ಕಾರ್ಯನಿರ್ವಹಿಸುತ್ತವೆ. ಸರ್ಕಾರ ಬದಲಾವಣೆಯಾಗಿದೆ ಎಂಬ ಕಾರಣದಿಂದ ಸುಪ್ರೀಂಕೋರ್ಟ್‌ನ ಆದೇಶ ಉಲ್ಲಂಘಿಸುವ ಪ್ರಯತ್ನ ಮಾಡಲಾಗಿದೆ. ಅಲ್ಲದೆ, ಹಿಂದಿನ ಸರ್ಕಾರ ಮಾಡಿದ ನಾಮ ನಿರ್ದೇಶನವನ್ನು ಒಂದು ಆದೇಶದ ಮೂಲಕ ಸಂಪೂರ್ಣವಾಗಿ ರದ್ದುಪಡಿಸುವ ಅಧಿಕಾರ ಹೊಸ ಸರ್ಕಾರಕ್ಕೆ ಇರುವುದಿಲ್ಲ. ಆದರೆ, ಹಿಂದಿನ ಸರ್ಕಾರ ಮಾಡಿರುವ ನಿರ್ಧಾರಗಳು ಕಾನೂನಿಗೆ ವಿರುದ್ಧವಾಗಿವೆ ಎಂಬುದು ಗೊತ್ತಾದಲ್ಲಿ ಮಾತ್ರ ಬದಲಾವಣೆ ಮಾಡಬಹುದು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ ಏನು?: ರಾಮಚಂದ್ರಪುರದ ಮಠದ ಅಧೀನದಲ್ಲಿದ್ದ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ರಾಜ್ಯ ಮುಜರಾಯಿ ಇಲಾಖೆಯಯ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯಿ ದತ್ತಿ ಕಾಯಿದೆಯ ಅಡಿಯ ವ್ಯಾಪ್ತಿಗೆ ತರುವ ಸಂಬಂಧ ರಾಜ್ಯ ಸರ್ಕಾರ 2003ರ ಏಪ್ರಿಲ್ 30ರಂದು ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿದಾರರು ಗೋಕರ್ಣ ಮಹಾಬಲೇಶ್ವರ ದೇವಾಲಯವನ್ನು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡುವಂತೆ ಅರ್ಜಿಯಲ್ಲಿ ಕೋರಿದ್ದರು.

ಅಲ್ಲದೆ, ಸರ್ಕಾರದ ಕ್ರಮ ಪ್ರಶ್ನಿಸಿರುವ ಕ್ರಮ ಸಂಬಂಧ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್​ನಲ್ಲಿ ವಿಚಾರಣಾ ಹಂತದಲ್ಲಿದ್ದು, ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ತಿಳಿಸಿದೆ. ಅದರಂತೆ ರಾಜ್ಯ ಸರ್ಕಾರ 2021ರ ಮೇ 4ರಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಕೃಷ್ಣ ಅಧ್ಯಕ್ಷತೆಯಲ್ಲಿ 8 ಮಂದಿಯ ಮೇಲ್ವಿಚಾರಣಾ ಸಮಿತಿ ರಚನೆ ಮಾಡಲಾಗಿತ್ತು.

ಈ ನಡುವೆ 2023ರ ರಾಜ್ಯ ವಿಧಾನಸಭೆ ಚುನಾವಣೆ ನಂತರ ಸರ್ಕಾರ ಎಲ್ಲ ನಾಮ ನಿರ್ದೇಶನಗಳನ್ನು 2023ರ ಮೇ 22ರಂದು ರದ್ದುಪಡಿಸಿ ಸರ್ಕಾರ ಆದೇಶಿಸಿತ್ತು. ಈ ಆದೇಶದನ್ವಯ ಗೋಕರ್ಣ ದೇವಾಲಯದ ಕೆಲ ಹೊಸ ಸದಸ್ಯರೊಂದಿಗೆ ಸಮಿತಿಯನ್ನು ಪುನಃ ರಚನೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಮಠ ಹೈಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಪಿ.ಎನ್ ಮನಮೋಹನ್, ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಂತೆ ಅರ್ಜಿದಾರರನ್ನೊಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರ ಸದಸ್ಯರನ್ನು ಬದಲಾವಣೆ ಮಾಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಮುಂದೆ ಹೋಗದೆ ನೇರವಾಗಿ ಬದಲಾವಣೆ ಮಾಡಿದ್ದು, ಸರ್ಕಾರದ ಆದೇಶವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಸರ್ಕಾರದ ಪರ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿ, ಸುಪ್ರೀಂಕೋರ್ಟ್‌ನ ಆದೇಶವು ರಾಜ್ಯ ಸರ್ಕಾರದ ಅಧಿಕಾರ ಕಸಿದುಕೊಂಡಂತಾಗುವುದಿಲ್ಲ. ಸರ್ಕಾರ ತನ್ನ ಅಧಿಕಾರ ಚಲಾಯಿಸಿ ಸದಸ್ಯರನ್ನು ಬದಲಾವಣೆ ಮಾಡಿದ್ದು, ಇತರೆ ಅರ್ಜಿದಾರರನ್ನು ಸಮಿತಿಯಿಂದ ಹೊರಗಿಡಲಾಗಿದ್ದು, ಹೊಸ ಸದಸ್ಯರ ನೇಮಕ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಈ ಬೆಳವಣಿಗೆಯಿಂದ ಅರ್ಜಿದಾರರಿಗೆ ಅಸಮಾಧಾನವಾಗಿದ್ದಲ್ಲಿ ಸುಪ್ರೀಂಕೋರ್ಟ್​ಗೆ ಪ್ರಶ್ನಿಸಬಹುದಾಗಿತ್ತು. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಇದನ್ನೂ ಓದಿ: ರಾಮನಗರ ಕೆಂಕೇರಮ್ಮ ಕೆರೆಯಲ್ಲಿ ಸಮುದಾಯ ಭವನ, ಸರ್ಕಾರಿ ಶಾಲೆ: ಹೈಕೋರ್ಟ್​ಗೆ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.