ETV Bharat / state

ಶಕ್ತಿ ಯೋಜನೆಯಡಿ ಸಂಚರಿಸಿದ ಮಹಿಳಾ ಪ್ರಯಾಣಿಕರೆಷ್ಟು? ಸರ್ಕಾರದಿಂದ ಬಿಡುಗಡೆಯಾದ ಹಣವೆಷ್ಟು?

author img

By ETV Bharat Karnataka Team

Published : Mar 19, 2024, 7:17 AM IST

ರಾಜ್ಯ ಸರ್ಕಾರ ಶಕ್ತಿ ಯೋಜನೆಯಡಿ 4 ಸಾರಿಗೆ ನಿಗಮಗಳಿಗೆ ನೀಡಬೇಕಾದ 1,217 ಕೋಟಿ ರೂ. ಪಾವತಿ ಬಾಕಿ ಉಳಿಸಿಕೊಂಡಿದೆ. ಉಳಿದಂತೆ, ಯೋಜನೆಯಡಿ ಸಂಚರಿಸಿದ ಮಹಿಳಾ ಪ್ರಯಾಣಿಕರು ಹಾಗು ಸರ್ಕಾರದಿಂದ ಈವರೆಗೆ ಬಿಡುಗಡೆಯಾದ ಹಣದ ವರದಿ ಇಲ್ಲಿದೆ.

ಶಕ್ತಿ ಯೋಜನೆ: ಬಸ್​ನಲ್ಲಿ ಸಂಚರಿಸಿದ ಮಹಿಳಾ ಪ್ರಯಾಣಿಕರು, ಸರ್ಕಾರದಿಂದ ಬಿಡುಗಡೆಯಾದ ಮೊತ್ತ ಎಷ್ಟು ಗೊತ್ತಾ?
ಶಕ್ತಿ ಯೋಜನೆ: ಬಸ್​ನಲ್ಲಿ ಸಂಚರಿಸಿದ ಮಹಿಳಾ ಪ್ರಯಾಣಿಕರು, ಸರ್ಕಾರದಿಂದ ಬಿಡುಗಡೆಯಾದ ಮೊತ್ತ ಎಷ್ಟು ಗೊತ್ತಾ?

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳ ಪೈಕಿ ಒಂದಾದ 'ಶಕ್ತಿ' ಯೋಜನೆ ಜಾರಿಯಾದ ನಂತರ ಸಾರಿಗೆ ಸಂಸ್ಥೆಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಪ್ರತೀ ದಿನ ಪ್ರಯಾಣಿಸುವವರ ಸಂಖ್ಯೆ ಕೋಟಿ ದಾಟಿದೆ. ಅಂದಾಜು ಪ್ರತೀ ದಿನ 20 ಲಕ್ಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಯೋಜನೆಯಡಿ ಸರ್ಕಾರ ಸಾರಿಗೆ ನಿಗಮಗಳಿಗೆ ಹಣ ಪಾವತಿ ಮಾಡುತ್ತಿದ್ದರೂ ಇನ್ನೂ 1,217 ಕೋಟಿ ರೂ. ಪಾವತಿ ಬಾಕಿ ಇದೆ.

ಕೆಎಸ್ಆರ್​ಟಿಸಿಯಲ್ಲಿ ಶಕ್ತಿ ಯೋಜನೆಗೂ ಮೊದಲು ಪ್ರತೀ ದಿನ 29.72 ಲಕ್ಷ ಪ್ರಯಾಣಿಸುತ್ತಿದ್ದರೆ ಯೋಜನೆ ಜಾರಿಯಾದ ನಂತರ ಈ ಪ್ರಮಾಣ 33.60 ಲಕ್ಷಕ್ಕೆ ಹೆಚ್ಚಾಗಿದೆ. ಅದೇ ರೀತಿ ಬಿಎಂಟಿಸಿಯಲ್ಲಿ ಶಕ್ತಿ ಯೋಜನೆಗೂ ಮೊದಲು ಪ್ರತೀ ದಿನ 33.67 ಲಕ್ಷ ಪ್ರಯಾಣಿಸುತ್ತಿದ್ದರೆ, ಶಕ್ತಿಯ ನಂತರ ಈ ಪ್ರಮಾಣ 39.76 ಲಕ್ಷಕ್ಕೆ ಹೆಚ್ಚಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಮೊದಲು ಪ್ರತೀ ದಿನ 16.49 ಲಕ್ಷ ಪ್ರಯಾಣಿಸುತ್ತಿದ್ದರೆ ನಂತರ ಈ ಪ್ರಮಾಣ 24.18 ಲಕ್ಷಕ್ಕೆ ಹೆಚ್ಚಾಗಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಯೋಜನೆಗೂ ಮೊದಲು ಪ್ರತೀ ದಿನ 13.58 ಲಕ್ಷ ಪ್ರಯಾಣಿಸುತ್ತಿದ್ದರೆ ನಂತರ ಈ ಪ್ರಮಾಣ 17.23 ಲಕ್ಷಕ್ಕೇರಿದೆ.

ಒಟ್ಟಿನಲ್ಲಿ ಪ್ರತಿ ದಿನ ನಾಲ್ಕು ನಿಗಮಗಳಿಂದಲೂ ಸೇರಿ ಶಕ್ತಿ ಯೋಜನೆಗೂ ಮೊದಲು 93.46 ಲಕ್ಷ ಜನ ಪ್ರಯಾಣ ಮಾಡುತ್ತಿದ್ದರೆ, ಯೋಜನೆ ಜಾರಿಯಾದ ಬಳಿಕ ಅದು ಕೋಟಿ ಪ್ರಯಾಣಿಕರ ಗಡಿ ದಾಟಿದೆ. ಹೀಗಾಗಿ, ದಿನವೊಂದಕ್ಕೆ ಸರಾಸರಿ 1.14 ಕೋಟಿ ಪ್ರಯಾಣಿಕರು ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ಕಾರದಿಂದ 1,217 ಕೋಟಿ ರೂ ಬಾಕಿ: ಶಕ್ತಿ ಯೋಜನೆ ಜಾರಿಯಾದ ದಿನದಿಂದ ಜನವರಿ ಅಂತ್ಯದವರೆಗೆ 171.92 ಕೋಟಿ ಮಹಿಳಾ ಪ್ರಯಾಣಿಕರು ನಾಲ್ಕು ಸಾರಿಗೆ ನಿಗಮಗಳಲ್ಲಿ ಪ್ರಯಾಣ ಮಾಡಿದ್ದು, ಉಚಿತ ಪ್ರಯಾಣದ ಮೊತ್ತವನ್ನು ಹಂತ ಹಂತವಾಗಿ ಸರ್ಕಾರ ಸಾರಿಗೆ ನಿಮಗಳಿಗೆ ಪಾವತಿಸುತ್ತಿದೆ. ಈವರೆಗೆ 2553.67 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಕೆಎಸ್ಆರ್‌ಟಿಸಿಯಲ್ಲಿ ಮಹಿಳಾ ಪ್ರಯಾಣಿಕರ ಉಚಿತ ಟಿಕೆಟ್ ಮೌಲ್ಯ 1317 ಕೋಟಿ ಆಗಿದ್ದು, ಸರ್ಕಾರದಿಂದ 968 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಬಾಕಿ 460 ಕೋಟಿ ಬಿಡುಗಡೆಯಾಗಬೇಕಿದೆ. ಬಿಎಂಟಿಸಿಯಲ್ಲಿ ಮಹಿಳೆಯರ ಉಚಿತ ಪ್ರಯಾಣದ ಮೊತ್ತ 649 ಕೋಟಿ ಆಗಿದ್ದು ಇದರಲ್ಲಿ ಸರ್ಕಾರದಿಂದ 437 ಕೋಟಿ ಬಿಡುಗಡೆಯಾಗಿದ್ದು ಇನ್ನೂ 212 ಕೋಟಿ ಬಾಕಿ ಇದೆ. ಅದರಂತೆ ವಾಯುವ್ಯ ಸಾರಿಗೆಯಲ್ಲಿ ಮಹಿಳೆಯರ ಉಚಿತ ಟಿಕೆಟ್ ಮೊತ್ತ 862 ಕೋಟಿ ಆಗಿದ್ದು ಇದರಲ್ಲಿ 634 ಕೋಟಿ ಬಿಡುಗಡೆಯಾಗಿದ್ದು, 300 ಕೋಟಿ ಬಾಕಿ ಇದೆ.

ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ ಮಹಿಳೆಯರ ಉಚಿತ ಟಿಕೆಟ್ ಮೊತ್ತ 698 ಕೋಟಿ ಆಗಿದ್ದು, ಅದರಲ್ಲಿ ಸರ್ಕಾರ 513 ಕೋಟಿ ಬಿಡುಗಡೆ ಮಾಡಿದ್ದು ಇನ್ನೂ 245 ಕೋಟಿ ಬಿಡುಗಡೆಯಾಗಬೇಕಿದೆ. ಒಟ್ಟು ನಾಲ್ಕು ನಿಗಮಗಳಿಂದ ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್ ಮೊತ್ತ 3526 ಕೋಟಿ ಆಗಿದ್ದು, 2553 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. 1,217 ಕೋಟಿ ರೂ.ಗಳನ್ನು ಸರ್ಕಾರ ಶಕ್ತಿ ಯೋಜನೆಯಡಿ ನಿಗಮಗಳಿಗೆ ಬಾಕಿ ಉಳಿಸಿಕೊಂಡಿದೆ.

ನಿರ್ವಾಹಕರ ವಿರುದ್ಧ ಪ್ರಕರಣಗಳು: ಶಕ್ತಿ ಯೋಜನೆಯಡಿ ಮಹಿಳಾ ಪ್ರಯಾಣಿಕರಿಗೆ ನೀಡುವ ಶೂನ್ಯ ದರ ಅಥವಾ ಉಚಿತ ಟಿಕೆಟ್ ಅನ್ನು ಬಸ್​ ನಿರ್ವಾಹಕರೇ ದುರುಪಯೋಗಪಡಿಸಿಕೊಳ್ಳುತ್ತಿರುವ ಆರೋಪ ಕೇಳಿಬಂದಿದ್ದು, ಇದನ್ನು ನಿಗಮಗಳು ಗಂಭೀರವಾಗಿ ಪರಿಗಣಿಸಿವೆ. ಬಸ್​ಗಳ ತಪಾಸಣೆ ನಡೆಸಿ ಟಿಕೆಟ್ ಪರಿಶೀಲನೆ ನಡೆಸಲಾಗುತ್ತದೆ. ಈ ರೀತಿ ಮಹಿಳೆಯರ ಉಚಿತ ಟಿಕೆಟ್ ದುರುಪಯೋಗ ಆರೋಪದಡಿ ಕೆಎಸ್ಆರ್​ಟಿಸಿಯಲ್ಲಿ 53 ನಿರ್ವಾಹಕರು, ಬಿಎಂಟಿಸಿಯಲ್ಲಿ 12 ನಿರ್ವಾಹಕರು, ವಾಯುವ್ಯ ಕರ್ನಾಟಕ ಸಾರಿಗೆಯಲ್ಲಿ 7 ನಿರ್ವಾಹಕರು ಮತ್ತು ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 36 ನಿರ್ವಾಹಕರು ಸಿಕ್ಕಿಬಿದ್ದಿದ್ದು ನಾಲ್ಕು ನಿಗಮಗಳಿಂದ ಒಟ್ಟು 108 ಪ್ರಕರಣಗಳಲ್ಲಿ ನಿರ್ವಾಹಕರ ವಿರುದ್ಧ ನಿಗಮದ ನಿಯಮಾವಳಿಗಳ ಪ್ರಕಾರ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಮನಗರದಿಂದ ಬೆಂಗಳೂರಿಗೆ ಕೆಎಸ್​ಆರ್​ಟಿಸಿ ಬಸ್​ ಕೊರತೆ: ಪ್ರಯಾಣಿಕರ ಆಕ್ರೋಶ-ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.