2019ರ ಲೋಕಸಭಾ ಚುನಾವಣೆಗೆ ಅತಿ ಹೆಚ್ಚು, ಅತಿ ಕಡಿಮೆ ಖರ್ಚು ಮಾಡಿದ ರಾಜ್ಯದ ಸಂಸದರಿವರು - Election Expenditure

author img

By ETV Bharat Karnataka Team

Published : Apr 15, 2024, 6:04 PM IST

Updated : Apr 15, 2024, 8:14 PM IST

details-about-election-expenditure-by-bjp-and-congress-in-2019-lok-sabha-election

ಕಳೆದ ಲೋಕಸಭೆ ಚುನಾವಣೆಗೆ ರಾಜ್ಯ ಬಿಜೆಪಿ, ಕಾಂಗ್ರೆಸ್​ ಪಕ್ಷಗಳು ಹಾಗೂ ಅಭ್ಯರ್ಥಿಗಳು ಮಾಡಿದ್ದ ಚುನಾವಣಾ ವೆಚ್ಚದ ಕುರಿತಾದ ಮಾಹಿತಿ ಇಲ್ಲಿದೆ.

ಬೆಂಗಳೂರು: ಲೋಕ ಸಮರಕ್ಕೆ ಬಿರುಸಿನ ಪ್ರಚಾರ ನಡೆಯುತ್ತಿದೆ. ಅಭ್ಯರ್ಥಿಗಳು ಬಿರು ಬಿಸಿಲಿನಲ್ಲೂ ಭರ್ಜರಿ ಮತಬೇಟೆಯಲ್ಲಿ ತೊಡಗಿದ್ದಾರೆ. ಚುನಾವಣೆ ಎಂದರೆ ಅಭ್ಯರ್ಥಿ ಹಾಗೂ ಪಕ್ಷಗಳಿಗೆ ಅತಿ ದುಬಾರಿಯ ವಿಚಾರ. ಕಳೆದ ಸಲ ಬಿಜೆಪಿ ಹಾಗೂ ಕಾಂಗ್ರೆಸ್​​​ಗೆ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಎಷ್ಟು ದುಬಾರಿಯಾಗಿತ್ತು ಎಂಬುದರ ಕುತೂಹಲಕಾರಿ ವರದಿ ಇಲ್ಲಿದೆ.

ರಾಜ್ಯದಲ್ಲಿ 28 ಲೋಕಸಭೆ ಕ್ಷೇತ್ರಗಳಿಗೆ ಈ ಬಾರಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಏ.26ಕ್ಕೆ ಮೊದಲ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನವಾಗಲಿದೆ. ಈಗಾಗಲೇ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಜತೆಗೆ ಜೆಡಿಎಸ್​ ಕೂಡ ಗೆಲುವಿಗೆ ನಾನಾ ಕಸರತ್ತು ನಡೆಸುತ್ತಿದೆ.

ಒಬ್ಬ ಅಭ್ಯರ್ಥಿ ಎಷ್ಟು ಖರ್ಚು ಮಾಡಬಹುದು?: ಇತ್ತ ಚುನಾವಣಾ ಆಯೋಗ ಪಕ್ಷಗಳ ಚುನಾವಣಾ ವೆಚ್ಚದ ಮೇಲೂ ಹದ್ದಿನ‌ ಕಣ್ಣಿಟ್ಟಿದೆ. ಈ ಬಾರಿಯ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗರಿಷ್ಠ 95 ಲಕ್ಷ ರೂ. ವೆಚ್ಚ ಮಾಡಬಹುದು. ನಾಮಪತ್ರ ಸಲ್ಲಿಸಿದಾಗಿನಿಂದ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಚುನಾವಣಾ ವೆಚ್ಚ ಲೆಕ್ಕ ಹಾಕಲಾಗುತ್ತದೆ.

ಚುನಾವಣಾ ವೆಚ್ಚ ಎಂದರೇನು?: ಚುನಾವಣಾ ವೆಚ್ಚದಲ್ಲಿ ಸರ್ವಾಜನಿಕ ಚುನಾವಣಾ ರ‍್ಯಾಲಿ, ಸಭೆ, ಜಾಹೀರಾತು, ಹೋರ್ಡಿಂಗ್ಸ್, ಕರಪತ್ರ, ಫ್ಲೆಕ್ಸ್, ಪ್ರಚಾರ ವಸ್ತುಗಳು, ಸ್ಟಾರ್ ಪ್ರಚಾರಕರ ವೆಚ್ಚ ಹಾಗೂ ಇತರ ಚುನಾವಣಾ ಸಂಬಂಧಿತ ಕೆಲಸಗಳು ಇದರಲ್ಲಿ ಸೇರಿರುತ್ತದೆ.

ಲೋಕಸಭೆ ಚುನಾವಣೆ ಮುಗಿದ 90 ದಿನಗಳ ಒಳಗಾಗಿ ಪಕ್ಷಗಳ ಚುನಾವಣಾ ವೆಚ್ಚದ ಮಾಹಿತಿಯನ್ನು ಕಡ್ಡಾಯವಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಬಳಿಕ ಪಕ್ಷಗಳು ನೀಡಿದ ಚುನಾವಣಾ ವೆಚ್ಚದ ಮಾಹಿತಿ ಮತ್ತು ಚುನಾವಣಾ ವೀಕ್ಷಕರು ನೀಡುವ ವೆಚ್ಚದ ಮಾಹಿತಿಯನ್ನು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ನಂತರ ಒಪ್ಪಿಗೆಯಾದರೆ ಮಾತ್ರ ಲೆಕ್ಕಪತ್ರವನ್ನು ಒಪ್ಪಿಕೊಳ್ಳಲಾಗುವುದು.

2019ರ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಗರಿಷ್ಠ 70 ಲಕ್ಷ ರೂ. ವೆಚ್ಚ ಮಾಡುವ ಮಿತಿ ನಿಗದಿಯಾಗಿತ್ತು. ಈ ಹಿಂದಿನ ಲೋಕಸಮರದ ವೇಳೆ ರಾಜ್ಯದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಮಾಡಿದ ಚುನಾವಣಾ ವೆಚ್ಚದ ವಿವರ ಈ ಕೆಳಗಿನಂತಿದೆ.

2019ರ ಲೋಕಸಭಾ ಚುನಾವಣೆ
2019ರ ಲೋಕಸಭಾ ಚುನಾವಣೆ

ಬಿಜೆಪಿ ಚುನಾವಣಾ ವೆಚ್ಚ: 2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ತನ್ನ ಅಭ್ಯರ್ಥಿಗಳಿಗೆ ನೀಡಿದ ಹಣ ಸೇರಿದಂತೆ ಚುನಾವಣಾ ವೆಚ್ಚವಾಗಿ ಒಟ್ಟು 18.44 ಕೋಟಿ ರೂ. ಖರ್ಚು ಮಾಡಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಮಾಹಿತಿಯಂತೆ ಬಿಜೆಪಿ ಕರ್ನಾಟಕದಲ್ಲಿ 2019ರ ಚುನಾವಣೆಗಾಗಿ ಪ್ರಚಾರ, ರ‍್ಯಾಲಿ, ಸಾರ್ವಜನಿಕ ಸಭೆ, ರೋಡ್ ಶೋ, ಮಾಧ್ಯಮ ಜಾಹೀರಾತು, ಹೋರ್ಡಿಂಗ್ಸ್, ಫ್ಲೆಕ್ಸ್, ಕರಪತ್ರ ಹಾಗೂ ತನ್ನ 27 ಅಭ್ಯರ್ಥಿಗಳಿಗೆ ನೀಡಿದ ಚುನಾವಣಾ ವೆಚ್ಚವಾಗಿ ಒಟ್ಟು 18,44,72,327 ಕೋಟಿ ರೂ. ವೆಚ್ಚ ಮಾಡಲಾಗಿದೆ. ಬಿಜೆಪಿಯು ತಲಾ 40 ಲಕ್ಷ ರೂ.ಗಳಂತೆ 27 ಅಭ್ಯರ್ಥಿಗಳಿಗೆ ಒಟ್ಟು 10.80 ಕೋಟಿ ರೂ. ಹಣ ಪಾವತಿ ಮಾಡಿತ್ತು.

ಸ್ಟಾರ್‌ ಪ್ರಚಾರಕರ ಪ್ರಯಾಣದ ವೆಚ್ಚವಾಗಿ ರಾಜ್ಯ ಬಿಜೆಪಿಯು 2.46 ಲಕ್ಷ ರೂ. ಹಾಗೂ ಇತರ ಬಿಜೆಪಿ ನಾಯಕರ ಪ್ರಯಾಣದ ವೆಚ್ಚವಾಗಿ 35.24 ಲಕ್ಷ ರೂ. ಖರ್ಚು ಮಾಡಿದೆ. ಮಾಧ್ಯಮಗಳಲ್ಲಿನ ಪ್ರಚಾರ ಜಾಹೀರಾತಿಗಾಗಿ 5.03 ಕೋಟಿ ರೂ., ಸಾರ್ವಜನಿಕ ಪ್ರಚಾರ ಸಾಮಗ್ರಿಗಳಾದ ಹೋರ್ಡಿಂಗ್ಸ್, ಪ್ಲೆಕ್ಸ್, ಧ್ವಜ, ಕರಪತ್ರಗಳಿಗೆ 39.39 ಲಕ್ಷ ರೂ., ಸಾರ್ವಜನಿಕ ಪ್ರಚಾರ ಸಭೆ, ರ‍್ಯಾಲಿ, ಮೆರವಣಿಗೆಗಳಿಗೆ 1.55 ಕೋಟಿ ರೂ. ಹಾಗೂ ಇತರ ವೆಚ್ಚವಾಗಿ 27.74 ಲಕ್ಷ ರೂ. ಖರ್ಚು ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ಬಿಜೆಪಿ ಮಾಹಿತಿ ನೀಡಿದೆ.

ಕಾಂಗ್ರೆಸ್ ಚುನಾವಣಾ ವೆಚ್ಚ: ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಕಾಂಗ್ರೆಸ್ ಒಟ್ಟು 25.04 ಕೋಟಿ ರೂ. ವೆಚ್ಚ ಮಾಡಿದೆ. ಚುನಾವಣಾ ಆಯೋಗಕ್ಕೆ ನೀಡಿದ ಮಾಹಿತಿಯಂತೆ ಸ್ಟಾರ್ ಪ್ರಚಾರಕರ ಪ್ರಯಾಣದ ವೆಚ್ಚವಾಗಿ 5.54 ಕೋಟಿ ರೂ., ಇತರ ಕಾಂಗ್ರೆಸ್ ನಾಯಕರ ಪ್ರಯಾಣ ವೆಚ್ಚವಾಗಿ 6.36 ಲಕ್ಷ ರೂ., ಚುನಾವಣಾ ಪ್ರಚಾರದ ಮಾಧ್ಯಮ ಜಾಹೀರಾತುಗಳಿಗಾಗಿ 17.32 ಕೋಟಿ ರೂ. ಖರ್ಚು ಮಾಡಲಾಗಿದೆ. ಇತ್ತ ಸಾರ್ವಜನಿಕ ಪ್ರಚಾರ ಸಾಮಗ್ರಿಗಳಾದ ಹೋರ್ಡಿಂಗ್ಸ್, ಧ್ವಜ, ಬಂಟ್ಟಿಗ್ಸ್, ಪ್ಲೆಕ್ಸ್, ಕರಪತ್ರಗಳಿಗೆ ಕಾಂಗ್ರೆಸ್​​ 2.10 ಕೋಟಿ ರೂ‌. ಖರ್ಚು ಮಾಡಿತ್ತು.

ರಾಜ್ಯ ಬಿಜೆಪಿ-ಕಾಂಗ್ರೆಸ್ ಫಂಡ್ ಸಂಗ್ರಹ ಎಷ್ಟಿತ್ತು?: 2019ರಲ್ಲಿ ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದ ಚುನಾವಣೆ ಪ್ರಕ್ರಿಯೆ ಮುಕ್ತಾಯದವರೆಗೆ ರಾಜ್ಯ ಕಾಂಗ್ರೆಸ್ ನಗದು ರೂಪದಲ್ಲಿ 3.78 ಕೋಟಿ ರೂ. ಹಣವನ್ನು ವಿವಿಧ ಮೂಲಗಳಿಂದ ಚುನಾವಣಾ ನಿಧಿಯಾಗಿ ಸಂಗ್ರಹಿಸಿತ್ತು. ಚೆಕ್, ಡಿಡಿ ಮೂಲಕ ರಾಜ್ಯ ಕಾಂಗ್ರೆಸ್ 18.80 ಕೋಟಿ ರೂ. ಸೇರಿ ಒಟ್ಟು 22.58 ಕೋಟಿ ರೂ. ಫಂಡ್ ಸಂಗ್ರಹ ಮಾಡಿರುವುದಾಗಿ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್​​​ ಮಾಹಿತಿ ನೀಡಿದೆ.

ಅದೇ ರಾಜ್ಯ ಬಿಜೆಪಿ ಚುನಾವಣಾ ಅವಧಿಯಲ್ಲಿ ನಗದು ರೂಪದಲ್ಲಿ 1 ಕೋಟಿ ರೂ. ಹಣ ಸಂಗ್ರಹಿಸಿದ್ದರೆ, ಚೆಕ್, ಡಿಡಿ ಮೂಲಕ 42.93 ಕೋಟಿ ರೂ. ಚುನಾವಣಾ ನಿಧಿ ಹಣ ಸಂಗ್ರಹ ಮಾಡಿರುವುದಾಗಿ ಆಯೋಗಕ್ಕೆ ಮಾಹಿತಿ ಸಲ್ಲಿಸಿದೆ. ಆ ಮೂಲಕ ಒಟ್ಟು 42.94 ಕೋಟಿ ರೂ. ಎಲೆಕ್ಷನ್ ಫಂಡ್ ಸಂಗ್ರಹ ಮಾಡಿತ್ತು.

ರಾಜ್ಯ ಎಂಪಿಗಳ ಚುನಾವಣಾ ವೆಚ್ಚ 13.74 ಕೋಟಿ: 2019ರ ಲೋಕಸಮರದಲ್ಲಿ ಆಯ್ಕೆಯಾದ ರಾಜ್ಯದ 28 ಸಂಸದರು ಚುನಾವಣೆಯಲ್ಲಿ ಸರಾಸರಿ 49.08 ಲಕ್ಷ ರೂ. ವೆಚ್ಚ ಮಾಡಿದ್ದಾರೆ. ಬಿಜೆಪಿಯ 25 ಸಂಸದರು ಒಟ್ಟು 12.23 ಕೋಟಿ ರೂ. ಚುನಾವಣಾ ವೆಚ್ಚವಾಗಿ ಖರ್ಚು ಮಾಡಿದ್ದಾರೆ. ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ 38.38 ಲಕ್ಷ ರೂ. ಹಾಗೂ ಜೆಡಿಎಸ್ ಸಂಸದ ಪ್ರಜ್ವಲ್ 63.14 ಲಕ್ಷ ರೂ. ಬಳಸಿದ್ದಾರೆ. ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ 49.70 ಲಕ್ಷ ರೂ. ಖರ್ಚು ಮಾಡಿದ್ದರು.

ಅತಿ ಹೆಚ್ಚು, ಅತಿ ಕಡಿಮೆ ಖರ್ಚು ಮಾಡಿದವರು ಯಾರು?: ರಾಜ್ಯದಲ್ಲಿ ಬಿಜೆಪಿಯ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅತಿ ಹೆಚ್ಚು ಚುನಾವಣಾ ವೆಚ್ಚ ಮಾಡಿದ ಅಭ್ಯರ್ಥಿಯಾಗಿದ್ದರು. ಇವರು 2019ರ ಲೋಕಸಮರದಲ್ಲಿ ಒಟ್ಟು 66.46 ಲಕ್ಷ ರೂ. ಹಣ ಖರ್ಚು ಮಾಡಿದ್ದರು. ನಂತರದ ಸ್ಥಾನದಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಮೂರನೇಯದಾಗಿ ಪ್ರತಾಪ್ ಸಿಂಹ (60.95 ಲಕ್ಷ ರೂ.) ಹೆಚ್ಚು ಖರ್ಚು ಮಾಡಿದವರು.

ನಂತರದ ಅತಿ ಹೆಚ್ಚು ಚುನಾವಣಾ ವೆಚ್ಚ ಮಾಡಿದ ಸಂಸದರಲ್ಲಿ ನಳಿನ್ ಕುಮಾರ್ ಕಟೀಲ್ (60.73 ಲಕ್ಷ ರೂ.) ಇದ್ದಾರೆ. ಅತಿ ಕಡಿಮೆ ಖರ್ಚು ಮಾಡಿದ ಸಂಸದರೆಂದರೆ ಭಗವಂತ್ ಖೂಬಾ. ಇವರು 25.15 ಲಕ್ಷ ರೂ. ಖರ್ಚು ಮಾಡಿದ್ದರು. ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ (33.43 ಲಕ್ಷ ರೂ.) ಅತಿ ಕಡಿಮೆ ವೆಚ್ಚ ಮಾಡಿದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಡಿ.ಕೆ.ಸುರೇಶ್ ಮೂರನೇ ಅತಿ ಕಡಿಮೆ ಚುನಾವಣಾ ವೆಚ್ಚ ಮಾಡಿದ ಸಂಸದರಾಗಿದ್ದರು.

ಇದನ್ನೂ ಓದಿ: ಬಾಗಲಕೋಟೆ: 5ನೇ ಗೆಲುವಿನ ಉತ್ಸಾಹದಲ್ಲಿ ಬಿಜೆಪಿ, ಕಮಲ ಕೋಟೆ ಭೇದಿಸುವ ತವಕದಲ್ಲಿ ಕಾಂಗ್ರೆಸ್‌

Last Updated :Apr 15, 2024, 8:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.