ETV Bharat / state

ಲೋಕಸಭೆ ಚುನಾವಣೆಯಲ್ಲಿ ಒಂದೇ ಹೆಸರಿನ ರಾಜಕೀಯ ಚದುರಂಗದಾಟ: ಏನಿದು ತಂತ್ರ? - Lok Sabha Election

author img

By ETV Bharat Karnataka Team

Published : Apr 8, 2024, 3:49 PM IST

Updated : Apr 8, 2024, 5:22 PM IST

ಲೋಕಸಭಾ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇದ್ದರೂ ಕೆಲವು ಕ್ಷೇತ್ರಗಳಲ್ಲಿ ಒಂದೇ ಹೆಸರಿನ ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಬಿಜೆಪಿ ಹಾಗು ಕಾಂಗ್ರೆಸ್​ ಅಭ್ಯರ್ಥಿಗಳಿಗೆ ತಲೆನೋವಾಗಿ ಪರಿಣಮಿಸಿದ್ದಾರೆ.

Lok Sabha Election 2024
ಲೋಕಸಭಾ ಚುನಾವಣೆ 2024

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಗೆಲ್ಲಲು ಜಿದ್ದಾಜಿದ್ದಿ ನಡೆಯುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವ ಕಾರಣ, ಹೇಗಾದರೂ ಮಾಡಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕೆಂದು ಪಕ್ಷ ಹಠಕ್ಕೆ ಬಿದ್ದಿದೆ. ಬಿಜೆಪಿ ಕೂಡ ಎಲ್ಲ 28 ಕ್ಷೇತ್ರಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳಲೇಬೇಕೆಂದು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ರಣತಂತ್ರ ಹೆಣೆಯುತ್ತಿದೆ.

ಒಂದೇ ಹೆಸರಿನ ಐವರು ಅಭ್ಯರ್ಥಿಗಳು ಕಣಕ್ಕೆ: ಎರಡು ಪಕ್ಷಗಳು ಚುನಾವಣಾ ತಂತ್ರಗಾರಿಕೆಗೆ ಮುಂದಾಗಿದ್ದು, ಕೆಲವು ಕ್ಷೇತ್ರಗಳಲ್ಲಿ ಒಂದೇ ಹೆಸರಿನ ಹಲವು ಮಂದಿ ಕಣಕ್ಕಿಳಿದಿದ್ದಾರೆ. ಇದು ಮತಗಳನ್ನು ಒಡೆಯುವ ತಂತ್ರಗಾರಿಕೆ ಎಂದು ವಿಶ್ಲೇಷಿಸಲಾಗುತ್ತಿದೆ. ರಾಷ್ಟ್ರಮಟ್ಟದಲ್ಲೂ ಸದ್ದು ಮಾಡುತ್ತಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಂದೇ ಹೆಸರಿನ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಐವರು ಮಂಜುನಾಥ್ ಹಾಗೂ ಮೂವರು ಸುರೇಶ್ ಹೆಸರಿನವರ ನಡುವೆ ಪೈಪೋಟಿ ನಡೆಯುತ್ತಿದೆ.

ಕಾಂಗ್ರೆಸ್‍ ಅಭ್ಯರ್ಥಿ ಡಿ.ಕೆ.ಸುರೇಶ್ ಮತ್ತು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್ ನಡುವಿನ ಪ್ರತಿಷ್ಠೆಯ ಕದನದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಇದರ ಜತೆಗೆ ಸಿ.ಮಂಜುನಾಥ್, ಎನ್.ಮಂಜುನಾಥ್, ಮಂಜುನಾಥ್.ಕೆ ಮತ್ತು ಸಿ.ಎನ್.ಮಂಜುನಾಥ್, ಎಸ್.ಸುರೇಶ್ ಮತ್ತು ಎಂ.ಎನ್.ಸುರೇಶ್ ಕಣಕ್ಕಿಳಿದು ಕ್ಷೇತ್ರದ ಮತದಾರರ ಗಮನ ಸೆಳೆಯಲು ಪೈಪೋಟಿ ನಡೆಸುತ್ತಿದ್ದಾರೆ.

ಆದರೆ ಇದು ಕೇವಲ ಒಂದು ಕ್ಷೇತ್ರದ ಕಥೆಯಲ್ಲ ಮತ್ತು ಇದೇ ಮೊದಲ ಬಾರಿಗೂ ನಡೆಯುತ್ತಿಲ್ಲ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‍ನ ರಕ್ಷಾ ರಾಮಯ್ಯ ವಿರುದ್ಧ ಮಾಜಿ ಸಚಿವ ಡಾ.ಕೆ.ಸುಧಾಕರ್ ಸ್ಪರ್ಧಿಸಿದ್ದು, ಇನ್ನಿಬ್ಬರು ಸುಧಾಕರ್ ಕಣಕ್ಕಿಳಿದಿದ್ದಾರೆ. ಡಿ.ಸುಧಾಕರ್ ಮತ್ತು ಕೆ.ಸುಧಾಕರ್ ಎಂಬ ಇಬ್ಬರು ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಕೋಟಾ ಶ್ರೀನಿವಾಸ್ ಪೂಜಾರಿ ವಿರುದ್ಧ ಸುರೇಶ್ ಪೂಜಾರಿ ಮತ್ತು ಸುಪ್ರೀತ್ ಪೂಜಾರಿ ಇದ್ದಾರೆ. ಅದೇ ರೀತಿ ಕಾಂಗ್ರೆಸ್ ಮುದ್ದಹನುಮೇಗೌಡ ವಿರುದ್ಧ ಹನುಮಯ್ಯ ಎಂಬವರು ಕಣಕ್ಕಿಳಿದಿದ್ದಾರೆ.

ಬೆಂಗಳೂರು ಉತ್ತರದಲ್ಲಿ ಬಿಜೆಪಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಣಕ್ಕಿಳಿದಿದ್ದು, ಶೋಭಾ ಎಂಬ ಸ್ವತಂತ್ರ ಅಭ್ಯರ್ಥಿ ಹಾಗೂ ಶೋಭನ್ ಬಾಬು ವಿ. ಪುರುಷ ಅಭ್ಯರ್ಥಿ ನಾಮಪತ್ರ ಸಲ್ಲಿಸಿದ್ದಾರೆ. ಬೆಂಗಳೂರು ಕೇಂದ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಅವರು ಸ್ಪರ್ಧಿಸಿದ್ದು, ಈ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಮುಕ್ತಾರ್ ಅಲಿ ಖಾನ್ ಅವರೊಂದಿಗೆ ಹಣಾಹಣಿ ನಡೆಸಲಿದ್ದಾರೆ.

ಇನ್ನೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ, ಅವರ ವಿರುದ್ಧ ಯಡೂರಪ್ಪ ಎಂಬ ಸ್ವತಂತ್ರ ಅಭ್ಯರ್ಥಿ ಕಣಕ್ಕೆ ಇಳಿದಿದ್ದಾರೆ. ಅದೇ ರೀತಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಿರುವ ಮಂಡ್ಯ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ಸ್ಪರ್ಧಿಸಿರುವ ಹಾಸನ ಲೋಕಸಭಾ ಕ್ಷೇತ್ರದಿಂದ ಎಚ್.ಡಿ.ರೇವಣ್ಣ ಎಂಬ ವ್ಯಕ್ತಿ ಸ್ಪರ್ಧಿಸುತ್ತಿದ್ದಾರೆ. ಅವರಲ್ಲಿ ಹಲವರು ಹಣ ನೀಡಿದಾಗ ಕಣದಿಂದ ಹಿಂದೆ ಸರಿಯುತ್ತಾರೆ ಎಂದು ರಾಜಕಾರಣಿಯೊಬ್ಬರು ಹೇಳಿದ್ದಾರೆ. ಅವರಿಂದ ಗೆಲ್ಲುವ ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆಯಿಲ್ಲ, ಆದರೆ ಅವರು ಗೊಂದಲ ಸೃಷ್ಟಿಸುತ್ತಾರೆ ಎಂದಿದ್ದಾರೆ.

ಇದು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಅನುಕೂಲವಾಗುವುದೇ? ಅಥವಾ ಅನಾನುಕೂಲವಾಗುವುದೇ? ಎಂಬುದು ಚುನಾವಣಾ ಫಲಿತಾಂಶದ ವೇಳೆ ಗೊತ್ತಾಗಲಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಿರಿಯ ನಟಿ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಈ ವೇಳೆ ಎದುರಾಳಿಯಾಗಿ ಜೆಡಿಎಸ್​ನಿಂದ ನಿಖಿಲ್​ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಇವರಿಬ್ಬರ ಪ್ರತಿಸ್ಪರ್ಧಿಯಾಗಿ ಸುಮಲತಾ ಎಂಬ ಹೆಸರಿನ ಮತ್ತಿಬ್ಬರು ಸ್ಪರ್ಧೆ ಮಾಡಿದ್ದರು ಎಂಬುದನ್ನು ಸ್ಮರಿಸಬಹುದು.

ಇದನ್ನೂ ಓದಿ: ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ; ದಿಂಗಾಲೇಶ್ವರ ಸ್ವಾಮೀಜಿ ಘೋಷಣೆ - Fakir Dingaleshwara Swamiji

Last Updated : Apr 8, 2024, 5:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.