ETV Bharat / state

ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ: ಬಿಜೆಪಿ, ಜೆಡಿಎಸ್ ವಿರುದ್ಧ ಚು.ಆಯೋಗಕ್ಕೆ ಕೆಪಿಸಿಸಿ ದೂರು - Congress complaint against BJP JDS

author img

By ETV Bharat Karnataka Team

Published : Apr 26, 2024, 7:17 AM IST

CONGRESS COMPLAINT AGAINST BJP JDS
CONGRESS COMPLAINT AGAINST BJP JDS

ಗ್ಯಾರಂಟಿ ಯೋಜನೆಗಳನ್ನು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.

ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳು ಹಾಗೂ ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಕಾಂಗ್ರೆಸ್‌ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ತಡೆಯುವುದಾಗಿ ಅಪಪ್ರಚಾರ ನಡೆಸುತ್ತಿರುವ ಬಿಜೆಪಿ - ಜೆಡಿಎಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗ ದೂರು ಸಲ್ಲಿಸಿದೆ.

ಬಿಜೆಪಿ, ಜೆಡಿಎಸ್ ವಿರುದ್ಧ ಚು.ಆಯೋಗಕ್ಕೆ ಕೆಪಿಸಿಸಿ ದೂರು
ಬಿಜೆಪಿ, ಜೆಡಿಎಸ್ ವಿರುದ್ಧ ಚು.ಆಯೋಗಕ್ಕೆ ಕೆಪಿಸಿಸಿ ದೂರು

ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು ಇಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು ಐದು ಕೋಟಿ ಜನರು ಸರ್ಕಾರದ ಐದು ಗ್ಯಾರಂಟಿಗಳ ಫಲಾನುಭವಿಗಳಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳ ಕಾರ್ಯಕರ್ತರನ್ನೂ ಒಳಗೊಂಡ ಫಲಾನುಭವಿಗಳು ಇದ್ದಾರೆ. ಬಡವರ್ಗದ ಜನರ ಬದುಕು ಹಸನಾಗಿದೆ. 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಮಹಾಲಕ್ಷ್ಮಿ ಯೋಜನೆ ಜಾರಿಗೊಳಿಸುವ ಭರವಸೆ ನೀಡಿದೆ. ಯೋಜನೆ ಜಾರಿಯಾದರೆ ಮಹಿಳೆಯರ ಖಾತೆಗೆ ವರ್ಷಕ್ಕೆ 1 ಲಕ್ಷ ಪಾವತಿಯಾಗಲಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚುನಾವಣಾ ಆಯೋಗ ಹಾಗೂ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ನಿಯಮಗಳಿಗೆ ಒಳಪಟ್ಟು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯ ಮೂಲಕ ಇಂತಹ ಭರವಸೆ ನೀಡಿದೆ. ಆದರೆ, ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್ .ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಜೆಡಿಎಸ್‌-ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಅವಕಾಶ, ಅಧಿಕಾರ ಸಿಕ್ಕರೆ ಯೋಜನೆ ಸ್ಥಗಿತಗೊಳಿಸುವುದಾಗಿ ಹೇಳುತ್ತಿದ್ದಾರೆ. ಇಂತಹ ಹೇಳಿಕೆಗಳು ವಾಸ್ತವ ಮರೆಮಾಚುವ ಹಾಗೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಅವಮಾನ ಮಾಡುವ ಪ್ರಯತ್ನದ ಭಾಗವಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮತಗಳು ಚಲಾವಣೆಯಾಗದಂತೆ ತಡೆಯುವ ಉದ್ದೇಶವಿದೆ. ಇದು ಚುನಾವಣಾ ನಿಯಮಗಳ ಉಲ್ಲಂಘನೆ ಎಂದು ರಮೇಶ್ ಬಾಬು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಘಟಾನುಘಟಿಗಳ ಮೊಮ್ಮಕ್ಕಳ ನಡುವೆ ಜಿದ್ದಾಜಿದ್ದಿ: ಕುತೂಹಲ ಕೆರಳಿಸಿದ ಹಾಸನ ಲೋಕಸಭಾ ಕ್ಷೇತ್ರ - HASSAN LOK SABHA PROFILE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.