ETV Bharat / state

ತಾವು ಕಲಿತ ಶಾಲೆಗೆ 10 ಲಕ್ಷ ರೂ ವೈಯಕ್ತಿಕ ದೇಣಿಗೆ ನೀಡಲು ಮುಂದಾದ ಸಿಎಂ ಸಿದ್ದರಾಮಯ್ಯ

author img

By ETV Bharat Karnataka Team

Published : Mar 2, 2024, 3:58 PM IST

Kuppegala Government Senior Primary School
ವರುಣಾ ಹೋಬಳಿ ಕುಪ್ಪೆಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ವರುಣಾ ಹೋಬಳಿ ಕುಪ್ಪೆಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿಗಾಗಿ 10 ಲಕ್ಷ ರೂಪಾಯಿ ವೈಯಕ್ತಿಕ ದೇಣಿಗೆ ನೀಡುವ ಮೂಲಕ ಮಾರ್ಚ್ 7 ರಂದು ’’ನನ್ನ ಶಾಲೆ ನನ್ನ ಜವಾಬ್ದಾರಿ’’ ಎಂಬ ನೂತನ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.

ಮೈಸೂರು: ತಾವು ಕಲಿತ ಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೈಯಕ್ತಿಕವಾಗಿ 10 ರೂ ಲಕ್ಷ ದೇಣಿಗೆ ನೀಡಲು ನಿರ್ಧರಿಸಿದ್ದು. ಈ ದೇಣಿಗೆಯನ್ನು ಮಾರ್ಚ್ 7 ರಂದು ನನ್ನ ಶಾಲೆ ನನ್ನ ಜವಾಬ್ದಾರಿ ಎಂಬ ಯೋಜನೆಯನ್ನು ಘೋಷಣೆ ಮಾಡುವ ದಿನವೇ ತಾವು ಕಲಿತ ಶಾಲೆಗೆ ದೇಣಿಗೆ ನೀಡುವ ಮೂಲಕ ಚಾಲನೆ ನೀಡಲಿದ್ದಾರೆ.

ಸರ್ಕಾರಿ ಶಾಲೆಗಳು ಇತ್ತೀಚಿನ ದಿನಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಸಮಸ್ಯೆ ಎದುರಿಸುತ್ತಿವೆ. ಆದ್ದರಿಂದ ಸಿಎಂ ಸಿದ್ದರಾಮಯ್ಯ ತಾವು ವ್ಯಾಸಂಗ ಮಾಡಿದ ವರುಣಾ ಹೋಬಳಿಯ ಕುಪ್ಪೆಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂಲ ಸೌಕರ್ಯ ಅಭಿವೃದ್ಧಿಗಾಗಿ 10 ಲಕ್ಷ ರೂಪಾಯಿ ವೈಯಕ್ತಿಕ ದೇಣಿಗೆ ನೀಡುವ ಮೂಲಕ ಮಾರ್ಚ್ 7 ರಂದು ನನ್ನ ಶಾಲೆ ನನ್ನ ಜವಾಬ್ದಾರಿ ಎಂಬ ನೂತನ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಮೂಲಕ ತಾವು ಓದಿದ ಸರ್ಕಾರಿ ಶಾಲೆಯ ಮೂಲ ಸೌಕರ್ಯ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಏನಿದು ಯೋಜನೆ?: ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಲಕ್ಷಾಂತರ ವಿದ್ಯಾರ್ಥಿಗಳು ಇಂದು ಉತ್ತಮ ಉದ್ಯೋಗದಲ್ಲಿ ಇದ್ದಾರೆ. ದೇಶ-ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರೆಲ್ಲರಿಗೂ ತಾವು ಓದಿದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಆಸೆ ಇರುತ್ತದೆ.

ಆದರೆ, ಯಾವ ರೀತಿ ಸಹಾಯ ಮಾಡಬೇಕು ಎಂದು ತಿಳಿದಿರುವುದಿಲ್ಲ. ಅಂತಹ ವಿದ್ಯಾರ್ಥಿಗಳು "ನನ್ನ ಶಾಲೆ ನನ್ನ ಜವಾಬ್ದಾರಿ" ಯೋಜನೆಯ ಮೂಲಕ ತಾವು ಓದಿದ ಶಾಲೆಗೆ ಕೊಡುಗೆ ನೀಡಬಹುದಾಗಿದೆ. ಇದರ ಜೊತೆಗೆ ಸರ್ಕಾರವೂ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಇದೀಗ ಹಳೆಯ ವಿದ್ಯಾರ್ಥಿಗಳ ಸಂಘವನ್ನು ಸಹ ರಚಿಸಲು ಈ ಮೂಲಕ ಮುಂದಾಗಿದೆ.

ಶಾಲೆ ಮೇಲೆ ಸಿಎಂಗೆ ಅಪಾರ ಪ್ರೀತಿ: ಸಿಎಂ ಸಿದ್ದರಾಮಯ್ಯ ಅವರಿಗೆ ತಾವು ಓದಿದ ಶಾಲೆಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. ಈ ಹಿಂದೆ ಕುಪ್ಪೆಗಾಲ ಶಾಲೆಗೆ 1 ಎಕರೆ ಜಾಗ ಕೊಡಿಸಿ ಅಲ್ಲಿ 8 ಶಾಲಾ ಕೊಠಡಿಗಳನ್ನು, 2 ಶೌಚಾಗೃಹ ಹಾಗೂ ಕಾಂಪೌಂಡ್ ಒಳಗೊಂಡಂತೆ ಹೊಸ ಕಟ್ಟಡವನ್ನು ಕಟ್ಟಿಸಿದ್ದರು. ಇದೀಗ ಆ ಶಾಲೆಗೆ 10 ಲಕ್ಷ ರೂಪಾಯಿ ದೇಣಿಗೆ ನೀಡುತ್ತಿದ್ದಾರೆ. ಇದರಿಂದ ಶಾಲೆಗೆ ಬೇಕಾದ ಕಂಪ್ಯೂಟರ್, ಸ್ಮಾರ್ಟ್ ಟಿವಿ, ಪ್ರೊಜೆಕ್ಟರ್, ಬ್ಯಾಂಡ್ ಸೆಟ್, ಮೇಜು, ಕುರ್ಚಿ, ಬೆಂಚು ಖರೀದಿ ಮಾಡಲು ನೆರವಾಗಲಿದೆ ಎನ್ನುತ್ತಾರೆ ಎಸ್​ಡಿ ಎಂಸಿ ಅಧ್ಯಕ್ಷ ಎಸ್.ರವಿ.

ಕುಪ್ಪೆಗಾಲ ಶಾಲೆಗೆ ಈ ಹಿಂದೆ ಜಾಗ ನೀಡಿ ಹೊಸ ಕಟ್ಟಡವನ್ನು ಸಿದ್ದರಾಮಯ್ಯ ನಿರ್ಮಿಸಿಕೊಟ್ಟಿದ್ದರು. ಅವರು ಇದೀಗ ನಮ್ಮ ಶಾಲೆಗೆ ದೇಣಿಗೆ ನೀಡುತ್ತಿರುವುದು ತುಂಬಾ ಖುಷಿಯ ವಿಚಾರ. ಈ ಹಣದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಪರಿಕರಗಳನ್ನು ಖರೀದಿಸಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಈ ಮೂಲಕ ಶ್ರಮಿಸಲಾಗುವುದು ಎಂದು ಶಾಲೆಯ ಮುಖ್ಯೋಪಾಧ್ಯಾಯ ಬಿ.ಭಾಗ್ಯ ಅವರು ತಿಳಿಸಿದರು.

ಡಿಡಿಪಿಐ ಪಾಂಡೆ ಹೇಳಿದ್ದೇನು?: ಮಾರ್ಚ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ನನ್ನ ಶಾಲೆ ನನ್ನ ಜವಾಬ್ದಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು‌. ಅದೇ ದಿನ ತಾನು ಪ್ರಾಥಮಿಕ ಶಿಕ್ಷಣ ಕಲಿತ ಕುಪ್ಪೆಗಾಲ ಸರ್ಕಾರಿ ಶಾಲೆಗೆ ವೈಯಕ್ತಿಕವಾಗಿ 10 ಲಕ್ಷ ರೂ ದೇಣಿಗೆ ನೀಡಿ, ಆ ಮೂಲಕ ಶಾಲೆಯ ಅಭಿವೃದ್ಧಿಗೆ ಆ ಹಣವನ್ನು ಬಳಸಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಣಿಗೆ ನೀಡುತ್ತಿದ್ದಾರೆ ಎಂದು ಡಿಡಿಪಿಐ ಎಚ್ ಕೆ.ಪಾಂಡು ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಇದನ್ನೂಓದಿ:ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 28 ದಿನದಲ್ಲಿ 1.82 ಕೋಟಿ ರೂ. ಸಂಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.