ETV Bharat / state

ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ; ಆರೋಪಿ ವಿಶ್ವ- ರೈಲಿನಲ್ಲಿ ಚಾಕು ಇರಿತಕ್ಕೊಳಗಾಗಿದ್ದ ಮಹಿಳೆಯ ಮುಖಾಮುಖಿ ವಿಚಾರಣೆ - Anjali murder case

author img

By ETV Bharat Karnataka Team

Published : May 26, 2024, 5:49 PM IST

Updated : May 26, 2024, 9:46 PM IST

ಕಳೆದ ಐದು ದಿನಗಳಿಂದ ಅಂಜಲಿ ಹತ್ಯೆಗೈದ ಹಂತಕನ ತೀವ್ರ ವಿಚಾರಣೆ ನಡೆಸಿರುವ ಸಿಐಡಿ ಅಧಿಕಾರಿಗಳು, ದಾವಣಗೆರೆಯಲ್ಲಿ ಚಾಕು ಇರಿತಕ್ಕೊಳಗಾದ ಮಹಿಳೆ ಹಾಗೂ ಆರೋಪಿಯನ್ನು ಮುಖಾಮುಖಿ ವಿಚಾರಣೆ ನಡೆಸುವುದರೊಂದಿಗೆ ಮಾಹಿತಿ ಕಲೆ ಹಾಕಿದರು.

CID officials Interrogation
ಅಂಜಲಿ ಕೊಲೆ ಹಂತಕನಿಗೆ ಸಿಐಡಿ ಅಧಿಕಾರಿಗಳಿಂದ ವಿಚಾರಣೆ (ETV Bharat)

ಹುಬ್ಬಳ್ಳಿ: ಮೇ 15 ರಂದು ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಅಂಜಲಿ ನಿವಾಸಕ್ಕೆ ನುಗ್ಗಿ ಹತ್ಯೆ ಮಾಡಿದ್ದ ಗಿರೀಶನನ್ನು ನಗರದ ಪ್ರವಾಸಿ ಮಂದಿರಲ್ಲಿ ಇಡೀ‌ ದಿನ ಸಿಐಡಿ‌ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದರು.

ದಾವಣಗೆರೆ ಬಳಿ ರೈಲ್ವೆಯಲ್ಲಿ ಅಂಜಲಿ ಹಂತಕನಿಂದ ಚಾಕು ಇರಿತಕ್ಕೊಳ್ಳಗಾದ ಮಹಿಳೆ ಹಾಗೂ ಆರೋಪಿಯನ್ನು ಮುಖಾಮುಖಿ ವಿಚಾರಣೆ ಮಾಡುವುದರೊಂದಿಗೆ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದರು. ಚಾಕು ಇರಿತಕ್ಕೆ ಒಳಗಾದ ಲಕ್ಷ್ಮೀಯನ್ನು ಪ್ರವಾಸಿ ಮಂದಿರಕ್ಕೆ(ಐಬಿ) ಕರೆಸಿಕೊಂಡ ಸಿಐಡಿ ಅಧಿಕಾರಿಗಳು, ಹಂತಕನ ಮುಂದೆ ಘಟನೆ ಬಗ್ಗೆ ವಿವರಣೆ ಪಡೆದರು. ರೈಲಿನಲ್ಲಿ ಚಾಕುವಿನಿಂದ ದಾಳಿ ಮಾಡಿದ್ದ ಆರೋಪಿ ಇವನೇನಾ ಎಂದು ಕೇಳಿದಾಗ, ಅದಕ್ಕೆ ಹೌದು ಎಂದು ಮಹಿಳೆ ಉತ್ತರಿಸಿದರು.

ಸಿಐಡಿ ವಿಚಾರಣೆ ಬಳಿಕ ಲಕ್ಷ್ಮಿ ಅವರು ಮಾಧ್ಯಮಗಳಿಗೆ ಮಾಹಿತಿ‌ ನೀಡಿ, ನನ್ನ ಮಗನ ಹಾಸ್ಟೆಲ್ ಅಡ್ಮಿಶನ್​ಗೆ ತುಮಕೂರಿಗೆ ಹೋಗಿದ್ದೆವು. ವಾಪಸ್​​ ರೈಲಿನಲ್ಲಿ ಬರುವಾಗ ದಾವಣಗೆರೆ ಬಳಿ ಈತ ನನಗೆ ಚಾಕುವಿನಿಂದ ಇರಿದಿದ್ದ. ಇಂದು ನಮ್ಮನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ಈ ವೇಳೆ ಆರೋಪಿ ಮುಂದೆ ನಿಲ್ಲಿಸಿ ಕೆಲವು ಪ್ರಶ್ನೆ ಕೇಳಿದರು. ರೈಲಿನಲ್ಲಿ ಚಾಕುವಿನಿಂದ ಅಟ್ಯಾಕ್ ಮಾಡಿದ್ದ ಆರೋಪಿ ಇವನೇನಾ ಎಂದರು. ಅದಕ್ಕೆ ನಾನು ಹೌದು ಎಂದು ಹೇಳಿದೆ ಎಂದರು.

ತುಮಕೂರಿನಿಂದ ಮರಳುವ ಸಂದರ್ಭದಲ್ಲಿ ಆರೋಪಿಯು ನಾವಿರುವ ರೈಲಿನಲ್ಲಿದ್ದ. ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ, ವಾಶ್​ರೂಮ್​ಗೆ ತೆರಳಿದಾಗ ಫಾಲೋ ಮಾಡಿ ಬಂದಿದ್ದ. ನನ್ನನ್ನು ಯಾಕೆ ಫಾಲೋ ಮಾಡುತ್ತಿದ್ದಿಯಾ ಎಂದು ಪ್ರಶ್ನೆ ಮಾಡಿದೆ. ಈ ವೇಳೆ ತಕ್ಷಣ ಚಾಕು ತೆಗೆದು ಹೊಟ್ಟೆಗೆ ಹಾಕಲು ಯತ್ನಿಸಿದ. ಈ ವೇಳೆ ಅದು ತಪ್ಪಿ‌ ನನ್ನ ಕೈಗೆ ಬಿದ್ದಿತ್ತು. ಈತ ಒಂದು ಕೊಲೆ ಮಾಡಿ ಬಂದಿದ್ದಾನೆ ಅನ್ನುವುದು ನಮಗೆ ಗೊತ್ತೇ ಇರಲಿಲ್ಲ. ಅಂದು ಘಟನೆ ನಂತರ ಈತ ಕೊಲೆ ಮಾಡಿ ಬಂದಿದ್ದಾ ಅನ್ನುವುದು ಕೇಳಿ ಭಯವಾಗಿತ್ತು. ಇಂತಹವನಿಗೆ ತಕ್ಕ ಶಿಕ್ಷೆಯಾಗಬೇಕು. ಈತನಿಗೆ ಹೊರಗೆ ಬಾರದ ಹಾಗೇ ಸಿಐಡಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.

ಮೇ 15ರಂದು ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಅಂಜಲಿ ಅಂಬಿಗೇರ್ ನಿವಾಸಕ್ಕೆ ನುಗ್ಗಿದ್ದ ಗಿರೀಶ್ ಹತ್ಯೆ ಮಾಡಿ‌ ಪರಾರಿಯಾಗಿದ್ದ ಹಂತಕ ನಂತರ ರೈಲಿನ‌ ಮೂಲಕ ತಲೆಮರೆಸಿಕೊಳ್ಳಲು ಯತ್ನಿಸಿದ್ದನು. ಈ ವೇಳೆ ಗದಗ ಮೂಲದ ಮಹಿಳೆ ಲಕ್ಷ್ಮಿಗೆ ದಾವಣಗೆರೆ ಬಳಿ ರೈಲಿನಲ್ಲಿ ಚಾಕು ಇರಿದಿದ್ದ.

ಇದನ್ನೂಓದಿ:ನೇಹಾ, ಅಂಜಲಿ ಹತ್ಯೆ ಮಾದರಿಯಲ್ಲಿ ಯುವತಿಗೆ ಕೊಲೆ ಬೆದರಿಕೆ: ಬೆಳಗಾವಿಯಲ್ಲಿ ಪಾಗಲ್ ಪ್ರೇಮಿ ಅರೆಸ್ಟ್​ - MURDER THREAT TO YOUNG GIRL

Last Updated : May 26, 2024, 9:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.