ETV Bharat / state

ಮದುವೆ ಸಮಾರಂಭದಲ್ಲಿ ಅರಿಶಿನ ಆಟ: ಬಾವಿಗೆ ಜಾರಿ ಬಿದ್ದು ಯುವಕನ ಸಾವು

author img

By ETV Bharat Karnataka Team

Published : Feb 2, 2024, 9:39 PM IST

Updated : Feb 2, 2024, 10:27 PM IST

ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ಮದುವೆ ಸಮಾರಂಭದಲ್ಲಿ ಸ್ನೇಹಿತರು ಸೇರಿ ಅರಿಶಿನ ಆಟ ಆಡುತ್ತಿದ್ದ ವೇಳೆ ಯುವಕನೊಬ್ಬ ಆಕಸ್ಮಿಕವಾಗಿ ಬಾವಿಗೆ ಜಾರಿ ಬಿದ್ದು ಮೃತಪಟ್ಟಿದ್ದಾನೆ. ಚಿಕ್ಕೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Malappa Badada
ಮಾಳಪ್ಪ ಬಾಡದ ಯುವಕ

ಚಿಕ್ಕೋಡಿ: ಮದುವೆ ಸಮಾರಂಭದಲ್ಲಿ ಸ್ನೇಹಿತರು ಸೇರಿ ಅರಿಶಿನ ಆಟ ಆಡುತ್ತಿದ್ದ ವೇಳೆ ಯುವಕನೊಬ್ಬನು ಆಕಸ್ಮಿಕವಾಗಿ ಬಾವಿಗೆ ಜಾರಿ ಬಿದ್ದು ನೀರಿನಲ್ಲಿ ಮುಳಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದಲ್ಲಿ ನಡೆದಿದೆ. ಮಾಳಪ್ಪ ಮಾರುತಿ ಬಾಡದ (18) ಎಂಬ ಯುವಕನು ಮೃತ ದುರ್ದೈವಿ.

ಕಬ್ಬೂರು ಗ್ರಾಮದ ಹೊರವಲಯದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಗುರುವಾರ ತಡರಾತ್ರಿ ಈ ದುರ್ಘಟನೆ ಸಂಭವಿಸಿದೆ. ಎರಡು ದಿನ ಮದುವೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು, ಮದುವೆ ಕಾರ್ಯಕ್ರಮದ ಮೊದಲ ದಿನದಂದು ಅರಿಶಿನ ಆಟ ಆಡುವಾಗ ಈ ಅವಘಡ ನಡೆದಿದೆ.

ಮದುವೆ ಸಮಾರಂಭದಲ್ಲಿ ಸ್ನೇಹಿತರು ಪರಸ್ಪರ ಅರಿಶಿನ ಆಟ ಆಡುತ್ತಿದ್ದ ವೇಳೆ ಪಕ್ಕದಲ್ಲಿ ಇದ್ದ ಬಾವಿಗೆ ಯುವಕ ಮಾಳಪ್ಪ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾರೆ. ತಡರಾತ್ರಿ ಎಷ್ಟೇ ಹುಡುಕಿದರೂ ಯುವಕ ಪತ್ತೆಯಾಗಲಿಲ್ಲ, ಬೆಳಗ್ಗೆ ಸ್ಥಳೀಯರು ಹಾಗೂ ಪೊಲೀಸರು ಬಾವಿಯಲ್ಲಿ ಹುಡುಕಾಟ ನಡೆಸಿದ ವೇಳೆ ಮೃತದೇಹ ಪತ್ತೆಯಾಗಿದೆ. ಹಗ್ಗದ ಸಹಾಯದಿಂದ ಮಾಳಪ್ಪನ ಮೃತದೇಹವನ್ನು ಹೊರಗೆ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಚಿಕ್ಕೋಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಸ್ಕೂಟರ್​- ಬಿಎಂಟಿಸಿ ಬಸ್​ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿನಿ ಸಾವು: ವಿಡಿಯೋದೊಂದಿಗೆ BMTC ಸ್ಪಷ್ಟನೆ

ಪತ್ನಿಗೆ ಕಿರುಕುಳ ನೀಡಿದ್ದ ಸ್ನೇಹಿತನ ಹತ್ಯೆ: ಆರೋಪಿ ಬಂಧನ ( ಹುಬ್ಬಳ್ಳಿ)- ಯುವಕನ ಬರ್ಬರ ಹತ್ಯೆ ಮಾಡಿ, ಸುಟ್ಟು ತಪ್ಪಿಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹಳೇ ಹುಬ್ಬಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೃತನ ಆಪ್ತ ಸ್ನೇಹಿತ ಮಂಟೂರ ರಸ್ತೆಯ ಮಿಲ್ಲತ್ ನಗರದ ನಿವಾಸಿ ಸೈಯದ್ ಅಜರ್ (25) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ ಎಂದು ಹುಬ್ಬಳ್ಳಿ - ಧಾರವಾಡ ಪೊಲೀಸ್ ‌ಕಮೀಷ‌ನರ್ ರೇಣುಕಾ ಸುಕುಮಾರ್ ಅವರು ಮಾಹಿತಿ ನೀಡಿದ್ದರು.

ಅಜರ್ ಮತ್ತು ಮೃತ ವಿಜಯ ಬಸವ ಆಪ್ತ ಗೆಳೆಯರಾಗಿದ್ದರು. ಆದರೆ, ಮೃತ ವಿಜಯ ಬಸವ, ಅಜರ್​ ಹೆಂಡತಿಗೆ ಕಿರಿಕಿರಿ ಮಾಡುತ್ತಿದ್ದ. ದೂರವಾಣಿ ಕರೆ ಮಾಡಿ ಬೇರೆ ಬೇರೆ ಸಂದರ್ಭದಲ್ಲಿ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಗೆಳೆಯನಿಗೆ ಅಜರ್ ಬುದ್ಧಿವಾದ ಕೂಡಾ ಹೇಳಿದ್ದ. ಆದರೂ ಆತನ ಮಾತು‌ ಕೇಳದಿದ್ದಾಗ ಕೊಲೆಗೆ ಸಂಚು ರೂಪಿಸಿದ್ದನು.‌ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಇದನ್ನ ಇಲ್ಲಿಗೆ ಬಿಟ್ಟುಬಿಡು ಎಂದು ಕೇಳಿಕೊಂಡಿದ್ದ.

ಗೆಳೆಯನ ಸಲಹೆಯನ್ನು ವಿಜಯ ಬಸವ ಒಪ್ಪಲಿಲ್ಲ. ಇದರಿಂದ ಕುಪಿತಗೊಂಡು ಕಲ್ಲು ಎತ್ತಿ ಹಾಕಿ ನಂತರ ಪೆಟ್ರೋಲ್ ತಂದು ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದನು. ಇದೀಗ ಆರೋಪಿಯನ್ನು ಬಂಧಿಸಿದ್ದೇವೆ. ಈ‌ ಸಂಬಂಧ ತನಿಖೆ ಮುಂದುವರಿಸಲಾಗಿದೆ. ಅಜರ್ ಒಬ್ಬನೇ ಕೊಲೆ ಮಾಡಿರೋದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸ್ಕೂಟರ್​- ಬಿಎಂಟಿಸಿ ಬಸ್​ ಡಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿನಿ ಸಾವು: ವಿಡಿಯೋದೊಂದಿಗೆ BMTC ಸ್ಪಷ್ಟನೆ

Last Updated : Feb 2, 2024, 10:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.