ETV Bharat / state

ಪರಿಷತ್ ಉಪ ಸಮರ: ಬಿಜೆಪಿ ಬಂಡಾಯ ಅಭ್ಯರ್ಥಿ ಮನವೊಲಿಕೆ ಸಫಲ, ಮೈತ್ರಿ ಅಭ್ಯರ್ಥಿಗೆ ಬೆಂಬಲ

author img

By ETV Bharat Karnataka Team

Published : Feb 2, 2024, 9:30 PM IST

ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ನಾರಾಯಣಸ್ವಾಮಿ ಮನವೊಲಿಸುವಲ್ಲಿ ಬಿಜೆಪಿ ನಾಯಕರು ಯಶ ಕಂಡಿದ್ದಾರೆ.

bjp-succeeded-to-persuade-rebel-candidate-for-council-by-election
ಪರಿಷತ್ ಉಪ ಸಮರ: ಬಿಜೆಪಿ ಬಂಡಾಯ ಅಭ್ಯರ್ಥಿ ಮನವೊಲಿಕೆ ಸಫಲ, ಮೈತ್ರಿ ಅಭ್ಯರ್ಥಿಗೆ ಬೆಂಬಲ

ಬೆಂಗಳೂರು: ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನಾರಾಯಣಸ್ವಾಮಿ ಮನವೊಲಿಸುವಲ್ಲಿ ಬಿಜೆಪಿ ನಾಯಕರು ಸಫಲರಾಗಿದ್ದಾರೆ. ನಾರಾಯಣಸ್ವಾಮಿ ಪಕ್ಷೇತರ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆದು ಮೈತ್ರಿಕೂಟದ ಅಭ್ಯರ್ಥಿ ಎ.ಪಿ ರಂಗನಾಥ್ ಪರ ಕೆಲಸ ಮಾಡುವ ಘೋಷಣೆ ಮಾಡಿದ್ದಾರೆ.

ಪುಟ್ಟಣ್ಣ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ ಸಿದ್ಧತೆ ಕುರಿತು ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವ‌ನದಲ್ಲಿ ಬಿಜೆಪಿ ನಾಯಕರ ಸಭೆ ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಂಗಳೂರು ನಾಯಕರು ಭಾಗಿಯಾಗಿದ್ದರು.

ಈಗಾಗಲೇ ಕ್ಷೇತ್ರವನ್ನು ಮಿತ್ರಪಕ್ಷ ಜೆಡಿಎಸ್​​ಗೆ ಬಿಟ್ಟುಕೊಟ್ಟಿದ್ದು, ಮೈತ್ರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಪಿ ರಂಗನಾಥ್ ಗೆಲ್ಲಿಸುವ ಕುರಿತು ಮಾತುಕತೆ ನಡೆಸಲಾಯಿತು. ಜವಾಬ್ದಾರಿ ವಹಿಸಿಕೊಂಡು ಬಿಜೆಪಿ ಮತಗಳನ್ನು ಮೈತ್ರಿ ಅಭ್ಯರ್ಥಿಗೆ ಹಾಕಿಸುವ ಕುರಿತು ನಾಯಕರು ಭರವಸೆ ನೀಡಿದ್ದಾರೆ. ಈ ವೇಳೆ ಬಂಡಾಯವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ಬಿಜೆಪಿ ನಾಯಕ ನಾರಾಯಣಸ್ವಾಮಿ ನಾಮಪತ್ರ ಸಲ್ಲಿಸಿದ್ದ ಕುರಿತು ಮಾತುಕತೆ ನಡೆಸಿ ಮನವೊಲಿಕೆ ಮಾಡುವ ಕುರಿತು ಚರ್ಚಿಸಲಾಯಿತು. ಅದರಂತೆ ಬಂಡಾಯ ಅಭ್ಯರ್ಥಿ ಮನವೊಲಿಕೆ ಮಾಡುವಲ್ಲಿ ನಾಯಕರು ಸಫಲರಾದರು.

ಮನವೊಲಿಕೆ ಬಳಿಕ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಡಿಸಿಎಂ ಸಿ.ಎನ್ ಅಶ್ವತ್ಥ ನಾರಾಯಣ್, ಫೆಬ್ರವರಿ 16 ರಂದು ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಎಪಿ ರಂಗನಾಥ್ ಎನ್​ಡಿಎ ಅಭ್ಯರ್ಥಿ ಆಗಿದ್ದಾರೆ. ಬಿಜೆಪಿ- ಜೆಡಿಎಸ್ ಒಂದಾಗಿ ಹೇಗೆ ಚುನಾವಣೆ ಎದುರಿಸಬೇಕು ಎಂಬ ಬಗ್ಗೆ ಚರ್ಚೆ ಮಾಡಿದ್ದೇವೆ. ಎಲ್ಲರೂ ಕೂಡ ಚುನಾವಣೆಯಲ್ಲಿ ತೊಡಗಿಕೊಳ್ಳುವ ಬಗ್ಗೆ ನಿರ್ಣಯ ಮಾಡಿದ್ದೇವೆ. ನಾರಾಯಣಸ್ವಾಮಿಯವರು ಬಿಜೆಪಿಯಲ್ಲಿದ್ದರು, ಅವರು ಸ್ವತಂತ್ರವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈಗ ಅವರು ಕೂಡ ನಾಮಪತ್ರ ವಾಪಸ್​​ ತಗೊಂಡಿದ್ದಾರೆ. ಒಟ್ಟಾಗಿ ಎಪಿ ರಂಗನಾಥ್ ಗೆಲ್ಲಿಸುವ ಬಗ್ಗೆ ಸಿದ್ಧತೆ ನಡೆದಿದೆ ಎಂದರು.

ನಂತರ ಮಾತನಾಡಿದ ನಾರಾಯಣಸ್ವಾಮಿ, ಬಿಜೆಪಿಯಲ್ಲಿ ಮೂರು ದಶಕಗಳಿಂದ ಕೆಲಸ ಮಾಡಿದ್ದೇನೆ. ಈಗ ಪಕ್ಷದ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ನಾಮಪತ್ರ ವಾಪಸ್ ಪಡೆಯುತ್ತೇನೆ. ಮಹಿಳಾ ಮತದಾರರು ಹೆಚ್ಚಿದ್ದಾರೆ. ಯಾವುದೇ ಕಾರಣಕ್ಕೂ ಪುಟ್ಟಣ್ಣ ಅವರಿಗೆ ಕ್ಷೇತ್ರ ಬಿಟ್ಟುಕೊಡಲ್ಲ, ಪುಟ್ಟಣ್ಣ ಅವರ ಕುತಂತ್ರ ಎಲ್ಲ ಶಿಕ್ಷಕರಿಗೂ ಗೊತ್ತಿದೆ. ಸ್ವತಂತ್ರ ಅಭ್ಯರ್ಥಿಯಾಗಿ ನಾನು ನಾಮಪತ್ರ ಸಲ್ಲಿಸಿದ್ದೆ. ಈಗ ನಾಮಪತ್ರ ವಾಪಸ್ ಪಡೆದು ಮೈತ್ರಿ ಅಭ್ಯರ್ಥಿ ಎ.ಪಿ ರಂಗನಾಥ್ ಅವರಿಗೆ ಬೆಂಬಲ ನೀಡುತ್ತೇನೆ. ಅವರ ಪರ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: ಮಂಡ್ಯ ಬಂದ್, ಹೋರಾಟ ಯಾವ ಪುರುಷಾರ್ಥಕ್ಕೆ: ಜೆಡಿಎಸ್ ಬಿಜೆಪಿ ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.