ETV Bharat / state

ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆ - Dheeraj Prasad Joins Congress

author img

By ETV Bharat Karnataka Team

Published : Mar 31, 2024, 7:24 AM IST

Updated : Mar 31, 2024, 12:41 PM IST

ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಳಿಯ ಧೀರಜ್ ಪ್ರಸಾದ್ ಕಾಂಗ್ರೆಸ್‌ ಸೇರಿದ್ದಾರೆ.

ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆ
ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅಳಿಯ ಧೀರಜ್ ಪ್ರಸಾದ್ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಆಪರೇಷನ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅಳಿಯ ಧೀರಜ್ ಪ್ರಸಾದ್ ಕಾಂಗ್ರೆಸ್‌ ಸೇರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ, ಡಿಕೆಶಿ ಮತ್ತು ಚಾಮರಾಜನಗರ ಅಭ್ಯರ್ಥಿ ಸುನೀಲ್ ಬೋಸ್ ಸಮ್ಮುಖದಲ್ಲಿ ಧೀರಜ್ ಪ್ರಸಾದ್ ಕೈ ಪಕ್ಷ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದ ಧೀರಜ್ ಪ್ರಸಾದ್ ಅವರು ಶ್ರೀನಿವಾಸ್ ಪ್ರಸಾದ್ ಅವರ ಸಹೋದರಿಯ ಮಗ. ಇತ್ತೀಚಿಗೆ ಸಚಿವ‌ ಮಹದೇವಪ್ರಸಾದ್ ಹಾಗೂ ಚಾಮರಾಜನಗರ ಅಭ್ಯರ್ಥಿ ಸುನಿಲ್ ಬೋಸ್ ಅವರು ಶ್ರೀನಿವಾಸ್ ಪ್ರಸಾದ್ ಮನೆಗೆ ತೆರಳಿ ಚರ್ಚೆ ನಡೆಸಿದ್ದರು. ಇತ್ತ ಸಿಎಂ ಸಿದ್ದರಾಮಯ್ಯ ಕೂಡ ಶ್ರೀನಿವಾಸ್ ಪ್ರಸಾದ್​​ಗೆ ಕರೆ ಮಾಡಿ ಮಾತನಾಡಿದ್ದರು. ಇದೀಗ ಅವರ ಅಳಿಯ ಕಾಂಗ್ರೆಸ್ ಸೇರಿರುವುದು ಬಿಜೆಪಿಗೆ ಹಿನ್ನಡೆಯಾಗಿದೆ. ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಸೇರಿ ಮೂವರು ನಾಯಕರು ಮೊನ್ನೆಯಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದರು.

ಚಾಮರಾಜನಗರದಿಂದ ಮಾಜಿ ಶಾಸಕ ಬಾಲರಾಜ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಬಿಜೆಪಿಯಿಂದ ತನ್ನ ಪುತ್ರ ಅಥವಾ ಅಳಿಯನಿಗೆ ಟಿಕೆಟ್ ನೀಡುವಂತೆ ಶ್ರೀನಿವಾಸ ಪ್ರಸಾದ್ ಒತ್ತಾಯಿಸಿದ್ದರು. ಆದರೆ ಅಂತಿಮವಾಗಿ ಬಿಜೆಪಿ ಹೈಕಮಾಂಡ್ ಮಾಜಿ ಶಾಸಕ ಬಾಲರಾಜ್​ಗೆ ಮಣೆ ಹಾಕಿತ್ತು.

ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿರುವ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರೀಗ ಯಾರನ್ನು ಬೆಂಬಲಿಸುತ್ತಾರೆ? ಎನ್ನುವ ಕುತೂಹಲ ಮೂಡಿದೆ.

ಇದನ್ನೂ ಓದಿ: ಶ್ರೀನಿವಾಸ್ ಪ್ರಸಾದ್​ ಬೆಂಬಲ ಪಡೆಯಲು ಕೈ, ಕಮಲ ನಾಯಕರ ಕಸರತ್ತು: ಯಾರಿಗೆ ಸಿಗಲಿದೆ ಅವರ ಬೆಂಬಲ? - Srinivas Prasad

ಕಳೆದ 50 ವರ್ಷಗಳಿಂದ ಮೈಸೂರು - ಚಾಮರಾಜನಗರ ರಾಜಕಾರಣದಲ್ಲಿ ಸಕ್ರಿಯರಾಗಿದ್ದ ಚಾಮರಾಜನಗರ ಕ್ಷೇತ್ರ ಸಂಸದ ಶ್ರೀನಿವಾಸ್ ಪ್ರಸಾದ್ ಅವರು ಮಾರ್ಚ್ 17 ರಂದು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಇವರ ಅಳಿಯಂದಿರಾದ ಮಾಜಿ ಶಾಸಕ ಬಿ ಹರ್ಷವರ್ಧನ್ ಹಾಗೂ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದ ಮತ್ತೊಬ್ಬ ಅಳಿಯ ಡಾ.ಮೋಹನ್ ಅವರು ಚಾಮರಾಜನಗರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಬಿಜೆಪಿ ಪಕ್ಷ ಮಾಜಿ ಶಾಸಕ ಬಾಲರಾಜ್​ಗೆ ಅವಕಾಶ ನೀಡಿದೆ. ಇನ್ನೊಂದೆಡೆ ಶ್ರೀನಿವಾಸ್ ಪ್ರಸಾದ್ ಮತ್ತೊಬ್ಬ ಅಳಿಯ ಧೀರಜ್ ಪ್ರಸಾದ್ ಬಿಜೆಪಿ ತೊರೆದು ಇದೀಗ ಕಾಂಗ್ರೆಸ್​ಗೆ ಸೇರ್ಪಡೆ ಆಗಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅವರ ಮೂವರು ಅಳಿಯಂದಿರು ಈಗ ರಾಜಕೀಯ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಭೇಟಿ ಮಾಡಿದ ಕಾಂಗ್ರೆಸ್ ನಾಯಕರು - MP Srinivas Prasad

Last Updated : Mar 31, 2024, 12:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.