ETV Bharat / state

ವಿಧಾನ ಪರಿಷತ್ ಕದನ: ಬಿಜೆಪಿ ಅಭ್ಯರ್ಥಿಗಳಾಗಿ ವೈ.ಎ ನಾರಾಯಣಸ್ವಾಮಿ, ಅ.ದೇವೇಗೌಡ ನಾಮಪತ್ರ ಸಲ್ಲಿಕೆ - bjp candidates file nomination

author img

By ETV Bharat Karnataka Team

Published : May 13, 2024, 4:18 PM IST

Updated : May 13, 2024, 10:43 PM IST

ವಿಧಾನ ಪರಿಷತ್ ಚುನಾವಣೆಗೆ ಇಬ್ಬರು ಬಿಜೆಪಿ ಅಭ್ಯರ್ಥಿಗಳು ಇಂದು ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ಬಿಜೆಪಿ ಅಭ್ಯರ್ಥಿಗಳಾಗಿ ವೈ.ಎ ನಾರಾಯಣಸ್ವಾಮಿ, ಅ.ದೇವೇಗೌಡ ನಾಮಪತ್ರ ಸಲ್ಲಿಕೆ
ಬಿಜೆಪಿ ಅಭ್ಯರ್ಥಿಗಳಾಗಿ ವೈ.ಎ ನಾರಾಯಣಸ್ವಾಮಿ, ಅ.ದೇವೇಗೌಡ ನಾಮಪತ್ರ ಸಲ್ಲಿಕೆ (ETV Bharat)

ಬಿಜೆಪಿ ಅಭ್ಯರ್ಥಿಗಳಾಗಿ ವೈ.ಎ ನಾರಾಯಣಸ್ವಾಮಿ, ಅ.ದೇವೇಗೌಡ ನಾಮಪತ್ರ ಸಲ್ಲಿಕೆ (ETV Bharat)

ಬೆಂಗಳೂರು: ಜೂನ್ 3 ರಂದು ನಡೆಯಲಿರುವ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳ ಚುನಾವಣಾ ಕಣ ರಂಗೇರಿದ್ದು, ಆಗ್ನೇಯ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವೈ. ಎ. ನಾರಾಯಣಸ್ವಾಮಿ ಮತ್ತು ಬೆಂಗಳೂರು ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಅ. ದೇವೇಗೌಡ ನಾಮಪತ್ರ ಸಲ್ಲಿಕೆ ಮಾಡಿದರು. ಲೋಕಸಭಾ ಚುನಾವಣೆಯಂತೆ ಪರಿಷತ್ ಕದನದಲ್ಲೂ ಮಿತ್ರಪಕ್ಷಗಳಾದ ಬಿಜೆಪಿ - ಜೆಡಿಎಸ್ ಮೈತ್ರಿ ಮುಂದುವರೆಸಿದ್ದು ಉಭಯ ಪಕ್ಷಗಳ ನಾಯಕರ ಸಮ್ಮುಖದಲ್ಲಿ ಬಿಜೆಪಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ಬಿಜೆಪಿ ಅಭ್ಯರ್ಥಿಗಳಾಗಿ ವೈ.ಎ ನಾರಾಯಣಸ್ವಾಮಿ, ಅ.ದೇವೇಗೌಡ ನಾಮಪತ್ರ ಸಲ್ಲಿಕೆ
ಬಿಜೆಪಿ ಅಭ್ಯರ್ಥಿಗಳಾಗಿ ವೈ.ಎ ನಾರಾಯಣಸ್ವಾಮಿ, ಅ.ದೇವೇಗೌಡ ನಾಮಪತ್ರ ಸಲ್ಲಿಕೆ (ETV Bharat)

ಶಾಂತಿನಗರದ ಟಿಟಿಎಂಸಿಯಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಗೆ ಅಪಾರ ಸಂಖ್ಯೆಯ ಬೆಂಬಲಿಗರೊಂದಿಗೆ ಬಿಜೆಪಿ ಅಭ್ಯರ್ಥಿಗಳಾದ ವೈ.ಎ ನಾರಾಯಣಸ್ವಾಮಿ ಹಾಗೂ ಅ. ದೇವೇಗೌಡ ಆಗಮಿಸಿದರು. ನಂತರ ಚುನಾವಣಾ ಆಯೋಗದ ನಿಯಮಾವಳಿಗಳಂತೆ ಅಭ್ಯರ್ಥಿ ಸೇರಿ ಐವರು ನಾಯಕರು ಪ್ರಾದೇಶಿಕ ಆಯುಕ್ತರ ಕಚೇರಿಗೆ ತೆರಳಿದರು. ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಉಪಸ್ಥಿತಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆ ಬಳಿಕ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ಸಿದ್ದರಾಮಯ್ಯ ಸೇರಿ ಯಾರೇ ಪ್ರಚಾರ ಮಾಡಿದರೂ ಕಾಂಗ್ರೆಸ್​​ಗೆ ಇಲ್ಲಿ ಉಳಿಗಾಲ ಇಲ್ಲ. ವೈ. ಎ. ನಾರಾಯಣಸ್ವಾಮಿ ಮತ್ತು ಅ. ದೇವೇಗೌಡರ ಗೆಲುವು ನಿಶ್ಚಿತ. ವೈ.ಎ. ನಾರಾಯಣಸ್ವಾಮಿ ಅವರು ಮಾಡಿರುವ ಕೆಲಸ, ಅವರ ಸಂಪರ್ಕ, ನಿರಂತರ ಸೇವೆ ಗಮನಿಸಿ ಅವರಿಗೆ ಶಿಕ್ಷಕರ ಆಶೀರ್ವಾದ ಖಚಿತ. ಬೆಂಗಳೂರಿನಲ್ಲಿ ಅ. ದೇವೇಗೌಡರ ಬಗ್ಗೆ ಮತದಾರರು ಉತ್ತಮ ಒಲವನ್ನು ಹೊಂದಿದ್ದಾರೆ. ಜೆಡಿಎಸ್- ಬಿಜೆಪಿ ಕಾಂಬಿನೇಷನ್ ನಿಂದಾಗಿ ಎರಡೂ ಕ್ಷೇತ್ರದಲ್ಲಿ ಹೆಚ್ಚಿನ ಮತದಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಈ ಬಾರಿ ನಮ್ಮ ಜೊತೆ ಜೆಡಿಎಸ್ ಹೊಂದಾಣಿಕೆ ಇದೆ. ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಒಟ್ಟಾಗಿ ಲೋಕಸಭಾ ಚುನಾವಣೆಯನ್ನು ಎದುರಿಸಿದ್ದೆವು. ಈ ಚುನಾವಣೆಯನ್ನೂ ಒಗ್ಗಟ್ಟಾಗಿ ಎದುರಿಸಿ ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸುವ ವಿಶ್ವಾಸವಿದೆ. ನಮ್ಮ ಪಕ್ಷದ ಎಲ್ಲ ಹಿರಿಯ ಮುಖಂಡರು, ಜೆಡಿಎಸ್ ಪಕ್ಷದ ಸಮ್ಮುಖದಲ್ಲಿ ನಮ್ಮ ಇಬ್ಬರು ಅಭ್ಯರ್ಥಿಗಳು ಶುಭಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಪರಿಷತ್‍ನಲ್ಲಿ ಅಪಾರ ಅನುಭವ ಇರುವ ನಮ್ಮ ಇಬ್ಬರು ಅಭ್ಯರ್ಥಿಗಳು ಮತ್ತೊಮ್ಮೆ ದೊಡ್ಡ ಅಂತರದಲ್ಲಿ ವಿಜಯಶಾಲಿಯಾಗಿ ಬರಲಿದ್ದಾರೆ ಎಂದು ಹೇಳಿದರು.

ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ ಮಾತನಾಡಿ, ಮೂರು ಬಾರಿ ಆಯ್ಕೆ ಆಗಿದ್ದ ವೈ. ಎ. ನಾರಾಯಣಸ್ವಾಮಿ ನಾಲ್ಕನೇ ಬಾರಿ ಆಯ್ಕೆಗೆ ಹಾಗೂ ಅ.ದೇವೇಗೌಡ ಎರಡನೇ ಬಾರಿ ಆಯ್ಕೆಯಾಗಲು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಜೂನ್ 3 ರ ಚುನಾವಣೆಯಲ್ಲಿ ದೊಡ್ಡ ಬಹುಮತದಿಂದ ಇವರಿಬ್ಬರೂ ಗೆಲ್ಲಲಿದ್ದಾರೆ. ಅವರು ಮಾಡಿದ ಒಳ್ಳೆಯ ಕೆಲಸಗಳು ಕೈಹಿಡಿಯಲಿವೆ, ಮಿತ್ರಪಕ್ಷಗಳು ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದ್ದೇವೆ, ದೊಡ್ಡ ಅಂತರದ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೈ.ಎ.ನಾರಾಯಣಸ್ವಾಮಿ ಮತ್ತು ಅ.ದೇವೇಗೌಡ ನಾಮಪತ್ರ ಸಲ್ಲಿಸುವ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಅಶ್ವತ್ಥನಾರಾಯಣ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಸಂಸದ ಪಿ.ಸಿ. ಮೋಹನ್, ಶಾಸಕ ಸುರೇಶ್ ಗೌಡ, ಮುಖಂಡ ಲಕ್ಷ್ಮೀ ನಾರಾಯಣ್, ಮಾಜಿ ಶಾಸಕ ಎಂ.ಕೃಷ್ಣರೆಡ್ಡಿ ಮತ್ತು ಜೆಡಿಎಸ್ ಮುಖಂಡರು ಹಾಜರಿದ್ದರು.

ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ರಾಮೋಜಿಗೌಡ, ಮಧ್ಯಾಹ್ನ 12.30 ಕ್ಕೆ ಬಿಜೆಪಿ ಅಭ್ಯರ್ಥಿ ವೈ.ಎ ನಾರಾಯಣಸ್ವಾಮಿ, 1.30 ಕ್ಕೆ ಬಿಜೆಪಿ ಅ.ದೇವೇಗೌಡ ನಾಮಪತ್ರ ಸಲ್ಲಿಕೆಗೆ ಸಮಯ ನೀಡಲಾಗಿತ್ತು. ಆದರೆ, ಕಾಂಗ್ರೆಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ ಕಾರ್ಯ 12.30 ರವರೆಗೂ ನಡೆಯಿತು. ಇದರಿಂದಾಗಿ ಸ್ಥಳದಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರ ಪ್ರದರ್ಶಿಸಿ ಜಯಕಾರ ಹಾಕುತ್ತಿದ್ದಾಗ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಬೆಂಬಲಿಗರು ಬಿಜೆಪಿ ಅಭ್ಯರ್ಥಿ ಭಾವಚಿತ್ರ ಹಿಡಿದು ಸ್ಥಳಕ್ಕಾಗಮಿಸಿದರು.

ಉಭಯ ಪಕ್ಷಗಳ ಕಾರ್ಯಕರ್ತರು ತಮ್ಮ ತಮ್ಮ ನಾಯಕನ ಪರ ಘೋಷಣೆ ಕೂಗಲಾರಂಭಿಸಿದ್ದರಿಂದ‌ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ಸೃಷ್ಟಿಯಾಯಿತು. ಪೊಲೀಸರು ಮಧ್ಯಪ್ರದೇಶ ಮಾಡಿ ಎರಡೂ ಪಕ್ಷದ ಕಾರ್ಯಕರ್ತರು ಒಟ್ಟಿಗೆ ಸೇರದಂತೆ ನೋಡಿಕೊಂಡು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸಫಲರಾದರು. ಆದರೂ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರಿದ್ದ ಕಡೆ ನುಸುಳಿ ಬಿಜೆಪಿ ಅಭ್ಯರ್ಥಿ ಭಾವಚಿತ್ರದ ನಡುವೆ ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರ ಪ್ರದರ್ಶನ ಮಾಡಿದರಾದರೂ ಕಾರ್ಯಕರ್ತರ ನಡುವೆ ಪೈಪೋಟಿ ಸೌಹಾರ್ದಯುತವಾಗಿದ್ದ ಕಾರಣ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ಕುಮಾರಸ್ವಾಮಿ ಗೈರು: ಇನ್ನು ಮಿತ್ರಪಕ್ಷದ ನಾಯಕನಾಗಿ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹಾಜರಾಗಬೇಕಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ತಾವು ಆಗಮಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾಹಿತಿಯನ್ನು ಬಿಜೆಪಿ ನಾಯಕರಿಗೆ ತಿಳಿಸಿ ತಮ್ಮ ಪರವಾಗಿ ಪಕ್ಷದ ಹಿರಿಯ ನಾಯಕರನ್ನು ಪ್ರತಿನಿಧಿಗಳನ್ನಾಗಿ ಕಳುಹಿಸಿದರು.

ಇದನ್ನೂ ಓದಿ: ಲೋಕಸಭೆ ಚುನಾವಣಾ ಫಲಿತಾಂಶದ ಪರಿಣಾಮದಿಂದಾಗುವ ವಿದ್ಯಮಾನಗಳಿಗೆ ನಾವು ಜವಾಬ್ದಾರಿ ಅಲ್ಲ: ವಿಜಯೇಂದ್ರ - B Y Vijayendra

Last Updated : May 13, 2024, 10:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.