ETV Bharat / state

ಬೆಂಗಳೂರು ವಿವಿ ಕೇಂದ್ರ ಗ್ರಂಥಾಲಯದ ಸಮಯ ವಿಸ್ತರಣೆ: ವಿದ್ಯಾರ್ಥಿಗಳ ಬಹುದಿನದ ಬೇಡಿಕೆಗೆ ಸ್ಪಂದನೆ - Bengaluru University Library

author img

By ETV Bharat Karnataka Team

Published : Apr 11, 2024, 8:21 PM IST

Dr BR Ambedkar Library
ಬೆಂಗಳೂರು ವಿಶ್ವವಿದ್ಯಾಲಯ ಡಾ ಬಿ ಆರ್ ಅಂಬೇಡ್ಕರ್ ಗ್ರಂಥಾಲಯ

ಬೆಂಗಳೂರು ವಿಶ್ವವಿದ್ಯಾಲಯ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯದ ಸೇವಾ ಸಮಯವನ್ನು ಬೆಳಗ್ಗೆ 7.30ರಿಂದ ರಾತ್ರಿ 9.30ರವರೆಗೆ ವಿಸ್ತರಿಸಲಾಗಿದೆ.

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಹುಕಾಲದ ಬೇಡಿಕೆಗೆ ಕೊನೆಗೂ ಆಡಳಿತ ಮಂಡಳಿ ಸ್ಪಂದಿಸಿದೆ. ವಿಶ್ವವಿದ್ಯಾಲಯದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯದ ಸೇವಾ ಸಮಯವನ್ನು ವಿಸ್ತರಿಸಲಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಗ್ರಂಥಾಲಯದ ಪರಾಮರ್ಶನ ವಿಭಾಗ, ನಿಯತಕಾಲಿಕ ವಿಭಾಗ ಮತ್ತು ಗ್ಯಾಲರಿಯನ್ನು ಬೆಳಗ್ಗೆ 7.30ರಿಂದ ರಾತ್ರಿ 9.30ರವರೆಗೆ ತೆರೆಯಲಿದೆ.

ಈ ಮೊದಲು ಗ್ರಂಥಾಲಯದ ಸಮಯ ಬೆಳಗ್ಗೆ 10 ಗಂಟೆಯಿಂದ 5.30ರವರೆಗೆ ಮಾತ್ರ ತೆರೆಯಲಾಗುತ್ತಿತ್ತು. ವಿದ್ಯಾರ್ಥಿಗಳು ಗ್ರಂಥಾಲಯ ಮುಚ್ಚಿದ ಬಳಿಕ ಬೇರೆ ಸ್ಥಳಗಳಲ್ಲಿ ಕೂತು ಓದುತ್ತಿದ್ದರು. ಇದು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿತ್ತು. ಹಾಗಾಗಿ ಆಡಳಿತ ಮಂಡಳಿಗೆ ಗ್ರಂಥಾಲಯದ ಸಮಯವನ್ನು ವಿಸ್ತರಿಸುವಂತೆ ಬೇಡಿಕೆ ಇಡಲಾಗಿತ್ತು. ಈ ಬೇಡಿಕೆಗೆ ಕೊನೆಗೂ ಸ್ಪಂದಿಸಿರುವ ಆಡಳಿತ ಮಂಡಳಿ ಇದೀಗ ಸಮಯ ವಿಸ್ತರಣೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ.

ಹಸಿರು ಗ್ರಂಥಾಲಯ: ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಗ್ರಂಥಾಲಯ ಈಗಾಗಲೇ ಹಸಿರು ಗ್ರಂಥಾಲಯ ಎನ್ನಿಸಿಕೊಂಡಿದೆ. ಇಲ್ಲಿನ ಪರಿಸರಸ್ನೇಹಿ ವಾತಾವರಣದಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಡೆಸಬಹುದಾಗಿದೆ. ತೂಗು ಉಯ್ಯಾಲೆ (ಹ್ಯಾಂಗಿಂಗ್ ಲೈಬ್ರರಿ) ಮತ್ತು ಮರದ ನೆರಳಿನಲ್ಲಿ ವಿದ್ಯಾರ್ಥಿಗಳು ಅಧ್ಯಯನ ನಡೆಸಲು ವ್ಯವಸ್ಥೆ ಮಾಡಲಾಗಿದೆ.

ಗ್ರಂಥಾಲಯದಲ್ಲಿ ಉಚಿತ ಇಂಟರ್‌ನೆಟ್ ಸೌಲಭ್ಯವಿದೆ. ಜತೆಗೆ ಆನ್‌ಲೈನ್ ಪಬ್ಲಿಕ್ ಆಕ್ಸೆಸ್ ಕ್ಯಾಟಲಾಗ್ (ಒಪ್ಯಾಕ್) ಮೂಲಕ ವಿಶ್ವದ ಯಾವುದೇ ಸಂಶೋಧನಾ ವರದಿ, ಪ್ರಬಂಧ, ನಿಯತಕಾಲಿಕೆಗಳನ್ನು ವಿದ್ಯಾರ್ಥಿಗಳು ಅಧ್ಯಯನ ನಡೆಸಬಹುದಾಗಿದೆ. ಇ-ಪಾಠಶಾಲಾ ಅಡಿಯಲ್ಲಿ ಧ್ವನಿ, ದೃಶ್ಯ, ಅಕ್ಷರ ರೂಪದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ದೊರೆಯಲಿದೆ. ಎಂ ಲೈಬ್ರರಿ ಮೊಬೈಲ್ ಆ್ಯಪ್ ಮೂಲಕ ಕೂಡ ವಿದ್ಯಾರ್ಥಿಗಳು ಪುಸ್ತಕಗಳನ್ನು ಅಧ್ಯಯನ ಮಾಡಬಹುದಾದ ವ್ಯವಸ್ಥೆ ನಿರ್ಮಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಕಾಲೇಜಿನ ಐಡಿ ಕಾರ್ಡ್ ಕೊಟ್ಟು ಗ್ರಂಥಾಲಯದ ಪಾಸನ್ನು ಪಡೆಯಬಹುದಾಗಿದೆ. ಬಳಿಕ ಗ್ರಂಥಾಲಯವು ನೀಡಿರುವ ಪಾಸ್ ತೋರಿಸಿ ಗ್ರಂಥಾಲಯದ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬಹುದಾಗಿದೆ.

4 ಲಕ್ಷಕ್ಕೂ ಅಧಿಕ ಪುಸ್ತಕ:ವಿದ್ಯಾರ್ಥಿಗಳ ಅಧ್ಯನಕ್ಕೆ ಅನುಕೂಲವಾಗುವಂತೆ ಬೆಂಗಳೂರು ವಿಶ್ವವಿದ್ಯಾಲಯ ಗ್ರಂಥಾಲಯದ ಸಮಯವನ್ನು ವಿಸ್ತರಿಸಲಾಗಿದೆ. ಗ್ರಂಥಾಲಯದಲ್ಲಿ 65 ಸಾವಿರ ಇ- ಬುಕ್ಸ್ , 4 ಲಕ್ಷಕ್ಕೂ ಅಧಿಕ ಪುಸ್ತಕ, ಸಂಶೋಧನಾ ವರದಿ, ಪ್ರಬಂಧಗಳು ಲಭ್ಯವಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳು ಮತ್ತು ಹಿಂದಿನ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಸಂಗ್ರಹವಾದ ಪ್ರಶ್ನಾಂತರಂಗ ಕೂಡ ಲಭ್ಯವಿದೆ. ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು, ವಿದ್ಯಾರ್ಥಿಗಳಿಗೆ ಅವಶ್ಯಕವಾದ ಎಲ್ಲಾ ವ್ಯವಸ್ಥೆಯನ್ನು ಬೆಂಗಳೂರು ವಿಶ್ವವಿದ್ಯಾಲಯ ಒದಗಿಸಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಎಂ.ಜಯಕರ ಸ್ಪಷ್ಟಪಡಿಸಿದ್ದಾರೆ.

ಕಾಲೇಜು ಮುಗಿದ ನಂತರ ವಿದ್ಯಾರ್ಥಿಗಳು ಅಧ್ಯಯನಕ್ಕೆ ಖಾಸಗಿ ಕೇಂದ್ರಗಳ ಮೇಲೆ ಅವಲಂಬನೆ ಆಗಬೇಕಿತ್ತು. ಇದು ಬಡ ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆಯಾಗಿತ್ತು. ಈ ಹಿನ್ನೆಲೆ ಬೆಂಗಳೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದೇವು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿ ಗ್ರಂಥಾಲಯದ ಸಮಯ ವಿಸ್ತರಿಸಿದೆ. ಇದರಿಂದ ಸಂಶೋಧನಾ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಲೋಕೇಶ್ ರಾಮ್ ತಿಳಿಸಿದ್ದಾರೆ.

ಇದನ್ನೂಓದಿ: ಇಸ್ರೋ ಅಧ್ಯಕ್ಷ ಸೋಮನಾಥ್, ಮಾಜಿ ಪಿಎಂ ದೇವೇಗೌಡರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.