ETV Bharat / state

ಬೆಳಗಾವಿಯಲ್ಲಿ ಬಾಣಂತಿ, ಮಗು ಸಾವು: ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ

author img

By ETV Bharat Karnataka Team

Published : Mar 18, 2024, 3:57 PM IST

Updated : Mar 19, 2024, 7:50 AM IST

Parents are expressing their grief
ಮಹಿಳೆ ಮಗು ಸಾವು, ಮುಗಿಲು ಮುಟ್ಟಿದ ಪೋಷಕರ ಅಕ್ರಂದನ

ವೈದ್ಯರ ನಿರ್ಲಕ್ಷ್ಯದಿಂದಾಗಿ ಬಾಣಂತಿ, ಮಗು ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಕಿಣಯೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ದೂರು ದಾಖಲಾಗಿದೆ.

ಲಗಮಪ್ಪ ಹಳ್ಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದ ರಕ್ತ ಸ್ರಾವವಾಗಿ ಬಾಣಂತಿ, ಉಸಿರಾಟ ಸಮಸ್ಯೆಯಿಂದ ಮಗು ಸಾವನ್ನಪ್ಪಿದೆ ಎಂಬ ಸಂಬಂಧಿಕರ ಆರೋಪ ಬೆಳಗಾವಿ ತಾಲೂಕಿನ ಕಿಣಯೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೇಳಿ ಬಂದಿದೆ.

ಸಂತಿಬಸ್ತವಾಡ ಗ್ರಾಮದ ಲಕ್ಷ್ಮೀ ಲಗಮಪ್ಪ ಹಳ್ಳಿ(28) ಮೃತ ದುರ್ದೈವಿ ಮಹಿಳೆ. ಇಂದು ಬೆಳಗಿನ ಜಾವ ಕಿಣಯೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಣಂತಿ ಕೊನೆಯುಸಿರೆಳೆದಿದ್ದಾರೆ. ಇನ್ನು ಮಗು ಕೂಡ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದೆ. ಆ ನವಜಾತ ಶಿಶು ಉಸಿರಾಟ ಸಮಸ್ಯೆಯಿಂದ ಬಳಲುತ್ತಿತ್ತು. ಹಾಗಾಗಿ ಮಗುವನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದ ಪರಿಣಾಮ ಮಗು ಕೂಡ ಸಾವನ್ನಪ್ಪಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ಮೃತ ಮಹಿಳೆಯ ಪತಿ ಲಗಮಪ್ಪ ಹಳ್ಳಿ ದೂರು ದಾಖಲಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪತಿ ಲಗಮಪ್ಪ, 'ಕಿಣಯೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಬೇಜವಾಬ್ದಾರಿಯಿಂದ ನನ್ನ ಪತ್ನಿ ಮೃತಪಟ್ಟಿದ್ದಾರೆ. ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಜೀವ ಉಳಿತಿತ್ತು. ಅಲ್ಲದೇ ರಾತ್ರಿ ವೈದ್ಯರು ಕೂಡ ಇರಲಿಲ್ಲ. ನರ್ಸ್ ಹೆರಿಗೆ ಮಾಡಿಸಿಕೊಂಡಿದ್ದರು. ನಿರ್ಲಕ್ಷ್ಯ ವಹಿಸಿದವರಿಗೆ ಶಿಕ್ಷೆ ಆಗಲೇಬೇಕು' ಎಂದು ಆಗ್ರಹಿಸಿದರು.

ಸಂಬಂಧಿಕ ನಿಂಗಪ್ಪ ಅರಕೇರಿ ಮಾತನಾಡಿ, 'ಡಿಲೇವರಿ ನಾರ್ಮಲ್ ಆಗಿ, ಆರಾಮಾಗಿಯೂ ಇದ್ದರು. ಮಗು ಅಳಲಿಲ್ಲವೆಂದು ಆಕೆಯ ಪತಿ ಮಗುವನ್ನು ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಬಂದಿದ್ದರು. ಇನ್ನು ಬಾಣಂತಿ ಮಹಿಳೆ ಮೇಲೆ ನಿಗಾ ಇಡಬೇಕಾಗಿತ್ತು. ಆದರೆ ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರಿಂದ ಸಾವಾಗಿದೆ. ನಸುಕಿನಜಾವ ಮೂರು ಗಂಟೆ ಸುಮಾರಿಗೆ ಆಸ್ಪತ್ರೆಯವರು ನಿದ್ದೆಗೆ ಜಾರಿದ್ದಾರೆ. ಆಗ ತೀವ್ರ ರಕ್ರಸ್ರಾವವಾಗಿ ಬಾಣಂತಿ ಸಾವನ್ನಪ್ಪಿದ್ದಾರೆ. ಅಲ್ಲದೇ ಉಸಿರಾಟ ಸಮಸ್ಯೆಯಿಂದ ಮಗು ಕೂಡ ಮೃತಪಟ್ಟಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು' ಎಂದು ಒತ್ತಾಯಿಸಿದರು.

ಇದನ್ನೂಓದಿ:ದಾವಣಗೆರೆ: ಪಾನಿಪೂರಿ ಸೇವಿಸಿ ಅಸ್ವಸ್ಥ; ಚಿಕಿತ್ಸೆ ಫಲಿಸದೇ 6 ವರ್ಷದ ಬಾಲಕ ಸಾವು

ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ಅವರನ್ನು ಈಟಿವಿ ಭಾರತ ಸಂಪರ್ಕಿಸಿದಾಗ, ಘಟನೆಯ ಕುರಿತು ವಿವರವಾದ ಮಾಹಿತಿ ಪಡೆದುಕೊಂಡು, ವರದಿಯನ್ನು ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ತಾಯಿ ಮತ್ತು ಮಕ್ಕಳ ಆರೋಗ್ಯಾಧಿಕಾರಿಗಳಿಗೆ ಸಲ್ಲಿಸುತ್ತೇವೆ ಎಂದು ತಿಳಿಸಿದರು.

Last Updated :Mar 19, 2024, 7:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.