ETV Bharat / state

ಕಲ್ಯಾಣ ಕರ್ನಾಟಕ ಸ್ಥಳೀಯ ಆಡಳಿತ ಬಲವರ್ಧನೆಗೆ "ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್" ಘೋಷಣೆ

author img

By ETV Bharat Karnataka Team

Published : Jan 27, 2024, 5:38 PM IST

ರಾಜ್ಯ ಕಾಂಗ್ರೆಸ್​​ ಸರ್ಕಾರ ಕಲ್ಯಾಣ ಕರ್ನಾಟಕ ಸ್ಥಳೀಯ ಆಡಳಿತ ಬಲವರ್ಧನೆಗೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಘೋಷಣೆ ಮಾಡಿದೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ ಸ್ಥಳೀಯ ಆಡಳಿತವನ್ನು ಬಲಪಡಿಸುವ ಸಲುವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ʼರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ʼ ಸ್ಥಾಪಿಸಿದ್ದು, ರಾಜ್ಯದ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳ 51 ತಾಲೂಕುಗಳಲ್ಲಿ ಪ್ರತಿ ತಾಲೂಕಿಗೆ ಒಬ್ಬರಂತೆ ‘ಫೆಲೋಗಳನ್ನು ಎರಡು ವರ್ಷಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲು ಮಂಜೂರಾತಿ ನೀಡಲಾಗಿದೆ.

ಸ್ಥಳೀಯ ಆಡಳಿತ ಹಾಗೂ ವಿಕೇಂದ್ರೀಕರಣ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಈ ಫೆಲೋಶಿಪ್ ಸ್ಥಾಪಿಸಲಾಗಿದ್ದು, ಪಂಚಾಯತ್ ರಾಜ್ ಕ್ಷೇತ್ರದಲ್ಲಿ ನಿರಂತರ ಸಾಮಾಜಿಕ ಆರ್ಥಿಕ ಸಮಸ್ಯೆಗಳನ್ನು ನಿಭಾಯಿಸಲು ಸ್ಥಳೀಯ ಆಡಳಿತಕ್ಕೆ ಇವರು ನೆರವಾಗಲಿದ್ದಾರೆ. ಹೊಸ ದೃಷ್ಟಿಕೋನಗಳು, ಆಲೋಚನೆಗಳು ಮತ್ತು ಚಿಂತನೆಗಳ ಮೂಲಕ ಸ್ಥಳೀಯ ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆ ಹೆಚ್ಚಿಸಲು ವಿದ್ಯಾವಂತ, ತರಬೇತಿ ಪಡೆದ ಮತ್ತು ಪ್ರೇರಿತ ಯುವ ವೃತ್ತಿಪರರ ಕೌಶಲ್ಯತೆಯನ್ನು ಬಳಸಿಕೊಳ್ಳುವುದು ಫೆಲೋಶಿಪ್‌ ಆರಂಭಿಸಿರುವ ಪ್ರಮುಖ ಕಾರಣವಾಗಿದೆ.

ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅಭಿವೃದ್ಧಿ ಚಟುವಟಿಕೆಗಳ ಅನುಷ್ಠಾನದಲ್ಲಿ ತೊಡಗಿಕೊಂಡು, ಸ್ಥಳೀಯ ಆಡಳಿತ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಕ್ಷೇತ್ರಮಟ್ಟದ ಸ್ಥಿತಿ - ಗತಿ ಮತ್ತು ಕಲಿಕೆಗಳ ಅಧ್ಯಯನ ಮಾಡುವುದನ್ನು ಪ್ರಮುಖ ಹೊಣೆಯಾಗಿ ಈ ಯುವ ಸಮೂಹ ಹೊರಲಿದೆ. ಕಾರ್ಯಕ್ರಮದ ಅವಧಿ ಎರಡು ವರ್ಷಗಳಾಗಿದ್ದು, ಆಯ್ಕೆಯದ ಫೆಲೋಗಳಿಗೆ ಮಾಸಿಕ 60,000 ರೂ. ಶಿಷ್ಯವೇತನ ನೀಡಲಾಗುವುದು.

ಫೆಲೋಗಳು ತಮ್ಮ ಚಟುವಟಿಕೆಗಳನ್ನು ಕೈಗೊಳ್ಳಲು ಗ್ರಾಮ ಪಂಚಾಯಿತಿ ಕಾರ್ಯನಿರ್ವಹಣೆ ಶ್ರೇಣೀಕರಣದಲ್ಲಿ ಕೊನೆಯಲ್ಲಿರುವ 10 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ತಮ್ಮ ಚಟುವಟಿಕೆಗಳನ್ನು ಕೇಂದ್ರೀಕರಿಸಲಿದ್ದಾರೆ. ಅವಧಿ ಮುಗಿಯುವವರೆಗೆ ನಿಯುಕ್ತಿಗೊಳಿಸಲಾದ ತಾಲೂಕಿನಲ್ಲಿಯೇ ವಾಸ್ತವ್ಯ ಹೂಡಬೇಕಲ್ಲದೇ, ಗ್ರಾಮ ಪಂಚಾಯಿತಿಗಳಿಗೆ ನಿರಂತರವಾಗಿ ಪ್ರವಾಸ ಕೈಗೊಂಡು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿರುತ್ತದೆ ಎಂಬ ನಿಯಮವನ್ನು ಹಾಕಲಾಗಿದೆ.

ಇದನ್ನೂ ಓದಿ: ಪಕ್ಷದ ತತ್ವ, ಸಿದ್ಧಾಂತ, ಗ್ಯಾರಂಟಿ ಯೋಜನೆಗಳ ಬಗ್ಗೆ ಗೌರವ ಇರುವವರು ಇರುತ್ತಾರೆ: ಸಚಿವ ಹೆಚ್.​ಕೆ.ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.