ಬೆಂಗಳೂರಲ್ಲಿ ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪನೆ: ಸಚಿವ ಶಿವರಾಜ ತಂಗಡಗಿ

author img

By ETV Bharat Karnataka Team

Published : Jan 21, 2024, 6:05 PM IST

Etv Bharat

ಬೆಂಗಳೂರಲ್ಲಿ ಅಂಬಿಗರ ಚೌಡಯ್ಯ ಅವರ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಬೆಂಗಳೂರು: ಬೆಂಗಳೂರನಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ, ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬಿಗರ ಚೌಡಯ್ಯ ಅವರ ಪ್ರತಿಮೆಯ ಸ್ಥಾಪನೆಗೆ ಈಗಾಗಲೇ ಕೆಲವು ಸ್ಥಳಗಳ ಪರಿಶೀಲನೆ ನಡೆಸಲಾಗಿದೆ. ಸೂಕ್ತ ಸ್ಥಳ ಗುರುತಿಸಿದ ಕೂಡಲೇ ಅಂಬಿಗರ ಚೌಡಯ್ಯ ಅವರ ಪ್ರತಿಮೆಯ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಗಂಗಾಮತಸ್ಥ ಸಮಾಜಕ್ಕೆ ಒಂದು ಎಕರೆ ಜಾಗವನ್ನು ನೀಡಲಾಗಿದೆ. ಅದಕ್ಕೆ ಕೆಲವು ಕಾನೂನು ತೊಡಕುಗಳು ಎದುರಾಗಿರುವುದರಿಂದ ಈ ಸ್ಥಳ ಹಸ್ತಾಂತರವಾಗುವುದು ತಡವಾಗಿದೆ. ಸ್ಥಳದ ಬಗೆಗಿನ ವಿವಾದ ನ್ಯಾಯಾಲಯದಿಂದ ಬಗೆಹರಿದರೆ ಅಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ 5 ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಿಸಿದ್ದರು. ಈಗ ಗಂಗಾಮತಸ್ಥರು, ಕೋಲಿ ಜನಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಿಗಮ ಅನುಷ್ಠಾನಗೊಳಿಸುತ್ತಿದೆ. ಈ ಸಮಾಜದ ಪ್ರಮುಖ ಬೇಡಿಕೆಯಾದ ಗಂಗಾಮತಸ್ಥ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬುದಾಗಿದೆ. ಇದಕ್ಕೆ ಕೆಲವು ಕಾನೂನಾತ್ಮಕ ತೊಡಕುಗಳಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಒಮ್ಮೆ ಈ ಕಾನೂನು ತೊಡಕು ನಿವಾರಣೆಯಾದಲ್ಲಿ ಪರಿಶಿಷ್ಟ ಜಾತಿ ಪಂಗಡಕ್ಕೆ ಸೇರಿಸಬೇಕು ಎಂಬ ಈ ಸಮುದಾಯದ ಬೇಡಿಕೆಯನ್ನು ಸಹ ಈಡೇರಿಸಲು ಸರ್ಕಾರ ಪ್ರಯತ್ನ ಮಾಡುತ್ತದೆ ಎಂದು ಹೇಳಿದರು.

ಮಹನೀಯರ ಜಯಂತಿಗಳನ್ನು ಆಚರಿಸುವ ಉದ್ದೇಶ ಈಗಿನ ಯುವ ಪೀಳಿಗೆಗೆ ತಮ್ಮ ಸಮುದಾಯಗಳ ಹಿಂದೆ ಇರುವ ಚಾರಿತ್ರಿಕ ಮಹತ್ವ ತಿಳಿಸಬೇಕು ಎಂಬುದಾಗಿದೆ. ಆ ಮಹಾನ್ ವ್ಯಕ್ತಿಗಳ ಜೀವನ, ಆದರ್ಶಗಳು ಇಂದಿನ ಪೀಳಿಗೆಗೆ ಪರಿಚಯ ಆಗಬೇಕು, ಆ ಮೂಲಕ ಅವರು ಮೌಲಿಕವಾದ ಜೀವನವನ್ನು ನಡೆಸಲು ಪ್ರೇರಣೆ ನೀಡಬೇಕು ಎಂಬುದಾಗಿದೆ ಎಂದು ತಿಳಿಸಿದರು.

ಯಾವುದೇ ಸಮುದಾಯ ಅಭಿವೃದ್ಧಿ ಆಗಬೇಕಾದರೆ ಮೊದಲು ಆ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕು. ಅದರ ಜೊತೆ ಸಂಘಟನೆಗೂ ಪ್ರಯತ್ನ ಪಡಬೇಕು. ಅವುಗಳ ಮೂಲಕ ಮಾತ್ರ ಒಂದು ಸಮುದಾಯ ಒಳ್ಳೆಯ ರೀತಿಯಲ್ಲಿ ಬೆಳೆಯಲು ಸಾಧ್ಯ. ನಾನು ಇಂದು ಸಚಿವನಾಗಿ ಇಲ್ಲಿ ನಿಲ್ಲಲು ಗಂಗಾಮತಸ್ಥ ಸಮಾಜದವರ ಕೊಡುಗೆಯೂ ಇದೆ. ನನ್ನ ಕ್ಷೇತ್ರದಲ್ಲಿ ಅವರ ಜೊತೆ ಉತ್ತಮ ಒಡನಾಟವನ್ನು ಹೊಂದಿದ್ದೇನೆ ಎಂದರು.

ಇದನ್ನೂ ಓದಿ: ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.