ETV Bharat / state

ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

author img

By ETV Bharat Karnataka Team

Published : Jan 21, 2024, 3:50 PM IST

ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ ಎಂದು ಡಿಸಿಎಂ ಹೇಳಿದ್ದಾರೆ.

ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ
ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ

ಬೆಂಗಳೂರು: ನಾವು ಪೂಜೆ, ಪುನಸ್ಕಾರ ಮಾಡಿಕೊಂಡು ನಮ್ಮ ಸಂಸ್ಕೃತಿ ಪಾಲನೆ ಮಾಡಿಕೊಂಡು ಬಂದಿದ್ದೇವೆ. ಧರ್ಮ, ಭಕ್ತಿ ಬಗ್ಗೆ ಬೇರೆಯವರಿಂದ ಕಲಿಯುವ ಅಗತ್ಯ ನಮಗಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸೋಮವಾರ ಸರ್ಕಾರಿ ರಜೆ ಘೋಷಣೆ ಮಾಡಬೇಕು ಎಂಬ ಬಿಜೆಪಿ ನಾಯಕರ ಒತ್ತಾಯದ ಬಗ್ಗೆ ಪ್ರತಿಕ್ರಿಯಿಸಿದರು. ಭಕ್ತಿ, ಧರ್ಮ, ಗೌರವವನ್ನು ನಾವು ಪ್ರಚಾರಕ್ಕೆ ಬಳಸುವುದಿಲ್ಲ. ಪ್ರಾರ್ಥನೆಯಿಂದ ಫಲ ಸಿಗುತ್ತದೆ ಎಂಬುದು ನಮ್ಮ ನಂಬಿಕೆ ಎಂದರು.

ಹೀಗಾಗಿ ಪ್ರಾರ್ಥನೆ ಮಾಡಿಕೊಳ್ಳಲು ಹೇಳಿದ್ದೇವೆ. ಬೇರೆಯವರು ಹೇಳುವ ಮುನ್ನವೇ ನಮ್ಮ ಸರ್ಕಾರ ಮುಜರಾಯಿ ಇಲಾಖೆ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಸೂಚನೆ ನೀಡಿದೆ. ದೇವಾಲಯಗಳಲ್ಲಿ ಯಾವ ಪೂಜೆ, ಪುನಸ್ಕಾರ ಮಾಡಬೇಕೋ ಅದನ್ನು ಮಾಡಲಾಗುವುದು. ಬೇರೆಯವರಿಂದ ನಾವು ಹೇಳಿಸಿಕೊಳ್ಳುವ ಪ್ರಮೇಯವೇ ಇಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ಹೆಸರಲ್ಲಿ ರಾಮ ಇದ್ದಾನೆ, ನನ್ನ ಹೆಸರಿನಲ್ಲಿ ಶಿವ ಇದ್ದಾನೆ. ಧರ್ಮ, ಸಂಸ್ಕೃತಿ ಪಾಲನೆ ವಿಚಾರವಾಗಿ ನಮಗೆ ಯಾರೂ ಹೇಳಿಕೊಡುವುದೂ ಬೇಡ, ಒತ್ತಡ ಹಾಕುವುದೂ ಬೇಡ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ. ರಾಜಕೀಯದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಮಾಡಬಾರದು ಎಂದು ತಿಳಿಸಿದರು.

ಸೋಮವಾರ ಸರ್ಕಾರಿ ರಜೆ ಘೋಷಿಸುವಂತೆ ಆರ್ ​ಅಶೋಕ್​ ಪತ್ರ: 500 ವರ್ಷಗಳ ಹೋರಾಟ, ತ್ಯಾಗದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದ್ದು, ಸೋಮವಾರ ಬಾಲ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ದಿನದಂದು ಪ್ರತಿ ಮನೆಗಳಲ್ಲಿ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ದೀಪ ಬೆಳಗುವುದು, ಭಜನೆ, ಶ್ರೀರಾಮನ ಆರಾಧನೆ ನಡೆಯುತ್ತಿದೆ. ಇಡೀ ರಾಜ್ಯದಲ್ಲಿ ಸಂಭ್ರಮ, ಸಡಗರದ ಆಚರಣೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರದ ಕಚೇರಿಗಳಿಗೆ ಅರ್ಧ ದಿನದ ರಜೆ ಘೋಷಿಸಿದ್ದಾರೆ. ರಾಜ್ಯದಲ್ಲೂ ದೊಡ್ಡ ಮಟ್ಟದ ಆಚರಣೆ ನಡೆಯುತ್ತಿದ್ದು, ಆ ದಿನ ಕೆಲಸ ಮಾಡುವುದರಿಂದ ಆಚರಣೆಗೆ ತೊಡಕು ಉಂಟಾಗಬಹುದು. ಆದ್ದರಿಂದ ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳು, ಸಾರ್ವಜನಿಕ ಉದ್ದಿಮೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಅನುಕೂಲವಾಗುವಂತೆ ಜನವರಿ 22 ರಂದು ಒಂದು ದಿನದ ಮಟ್ಟಿಗೆ ಸರ್ಕಾರಿ ರಜೆ ಘೋಷಿಸಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ'' ಎಂದು ಆರ್ ಅಶೋಕ್ ಸಿಎಂಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯಲ್ಲಿ 6ನೇ ದಿನದ ಧಾರ್ಮಿಕ ಆಚರಣೆ: ಇಂದಿನ ಕಾರ್ಯಕ್ರಮಗಳ ವಿವರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.