ETV Bharat / state

ಹಾವೇರಿ: ಕುಡಿದ ಮತ್ತಿನಲ್ಲಿ ತಮ್ಮನ ಎದೆಗೆ ಇರಿದು ಕೊಂದ ಅಣ್ಣ

author img

By ETV Bharat Karnataka Team

Published : Feb 17, 2024, 10:56 AM IST

Updated : Feb 17, 2024, 1:48 PM IST

ಕುಡಿದ ಮತ್ತಿನಲ್ಲಿ ಅಣ್ಣನೇ ತಮ್ಮನ ಕೊಲೆ ಮಾಡಿರುವ ಘಟನೆ ನೆಲೋಗಲ್ ಗ್ರಾಮದಲ್ಲಿ ನಡೆದಿದೆ.

ಅಣ್ಣನಿಂದ ತಮ್ಮನ ಕೊಲೆ
ಅಣ್ಣನಿಂದ ತಮ್ಮನ ಕೊಲೆ

ಹಾವೇರಿ: ಕುಡಿದ ನಶೆಯಲ್ಲಿ ಅಣ್ಣನೇ ತಮ್ಮನನ್ನು ಕೊಲೆ ಮಾಡಿದ ಘಟನೆ ಹಾವೇರಿ ತಾಲೂಕಿನ ನೆಲೋಗಲ್ ಗ್ರಾಮದ ತಾಂಡಾದಲ್ಲಿ ನಡೆದಿದೆ. ಹನುಮಂತಪ್ಪ (42) ಕೊಲೆಯಾದವರು. ಶಂಕ್ರಪ್ಪ (55) ಕೊಲೆ ಮಾಡಿದ ಆರೋಪಿ.

ಶಂಕ್ರಪ್ಪ ಮದ್ಯ ಕುಡಿದು ಬಂದು ಸಹೋದರ ಹನುಮಂತಪ್ಪನ ಜೊತೆ ಜಗಳ ತೆಗೆದಿದ್ದ. ಈ ವೇಳೆ, ಇಬ್ಬರ ಮಧ್ಯದ ಜಗಳ ವಿಕೋಪಕ್ಕೆ ಹೋಗಿದೆ. ನಶೆಯಲ್ಲಿದ್ದ ಶಂಕ್ರಪ್ಪ ಕೋಪದಿಂದ ತಮ್ಮನ ಎದೆಗೆ ಚೂರಿ ಹಾಕಿದ್ದಾನೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಹನುಮಂತಪ್ಪ ಆಸ್ವಸ್ಥಗೊಂಡಿದ್ದ. ತಕ್ಷಣವೇ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ. ಆಸ್ಪತ್ರೆಯಲ್ಲಿ ಹನುಮಂತಪ್ಪ ಸಾವನ್ನಪ್ಪಿದ್ದಾನೆ. ಪ್ರಕರಣದ ಬಳಿಕ ಶಂಕ್ರಪ್ಪನನ್ನು ಹಾವೇರಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅನೈತಿಕ ಸಂಬಂಧದ ಶಂಕೆಯೇ ಘಟನೆಗೆ ಕಾರಣ ಎನ್ನಲಾಗಿದೆ.

ಇದನ್ನೂ ಓದಿ: ಪತ್ನಿ ಕೊಲೆಗೈದು, ಧರ್ಮ ಬದಲಿಸಿಕೊಂಡ ಆರೋಪಿ 31 ವರ್ಷಗಳ ಬಳಿಕ ಸೆರೆ

ಈ ಕುರಿತಂತೆ ಮಾತನಾಡಿದ ಹಾವೇರಿ ಎಸ್ಪಿ ಅಂಶುಕುಮಾರ್, ನೆಲೋಗಲ್ ಗ್ರಾಮದಲ್ಲಿ ಕಳೆದ ರಾತ್ರಿ ಕೊಲೆಯಾಗಿದೆ. ಅಣ್ಣನೇ ತಮ್ಮನ ಕೊಲೆ ಮಾಡಿದ್ದಾನೆ. ಈ ಕುರಿತಂತೆ ಹನುಮಂತಪ್ಪನ ಮಗನ ಕಡೆಯಿಂದ 302 ಕಲಂ ಅನ್ವಯ ಪ್ರಕರಣ ಎಫ್​ಐಆರ್ ದಾಖಲಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಕೊಲೆಗೆ ಅನೈತಿಕ ಸಂಬಂಧವೇ ಕಾರಣ. ಶಂಕ್ರಪ್ಪ ರಾತ್ರಿ ಪತ್ನಿ ಜೊತೆ ಜಗಳ ಮಾಡಿಕೊಂಡಿದ್ದಾನೆ . ನಂತರ ಮನೆಯ ಹೊರಗೆ ಮಲಗಿದ್ದ ತಮ್ಮನ ಜೊತೆಯೂ ಜಗಳ ತೆಗೆದಿದ್ದಾನೆ. ಇದೇ ಕೋಪದಲ್ಲಿ ಚಾಕು ಹಾಕಿ ಕೊಲೆ ಮಾಡಿದ್ದಾನೆ. ಇನ್ನು ಕೊಲೆ ಆರೋಪಿ ಶಂಕ್ರಪ್ಪ ಮದ್ಯವ್ಯಸನಿಯಾಗಿದ್ದ. ಘಟನೆ ನಡೆದಿರುವ ಬಗ್ಗೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಪೋನ್ ಮಾಡಿ ಮಾಹಿತಿ ನೀಡಿದ್ದರು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ತಮ್ಮನ ಕೊಲೆ ಮಾಡಿ ಮನೆಯಲ್ಲೇ ಇದ್ದ ಆರೋಪಿಯನ್ನ ಬಂಧಿಸಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವುದಾಗಿ ಹಾವೇರಿ ಎಸ್ಪಿ ಅಂಶುಕುಮಾರ್ ಮಾಧ್ಯಮಗಳಿಗೆ ಘಟನೆಯ ವಿವರಗಳನ್ನು ಒದಗಿಸಿದರು.

Last Updated : Feb 17, 2024, 1:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.