ETV Bharat / state

ಪ್ರತ್ಯೇಕ ಕಾರ್ಯಪಡೆ ರಚಿಸಿ, ಈ ತಿಂಗಳೊಳಗೆ ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ಡೆಡ್​​​​ಲೈನ್: ಸಿಎಂ ಸಿದ್ದರಾಮಯ್ಯ - Bengaluru Roads

author img

By ETV Bharat Karnataka Team

Published : May 22, 2024, 6:59 PM IST

ರಸ್ತೆ ಗುಂಡಿ ನಿರ್ವಹಣೆಗೆ ಒಂದು ಖಾಯಂ ನಿರ್ವಹಣಾ ವ್ಯವಸ್ಥೆ ರೂಪಿಸಲು ಸೂಚಿಸಲಾಗಿದೆ. ವಿಶೇಷ ಸೆಲ್ ಮಾಡಲು ಬಿಬಿಎಂಪಿಗೆ, ಬಿಡಿಎಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.‌

Bengaluru Roads
ಸುದ್ದಿಗೋಷ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ (ETV Bharat)

ಬೆಂಗಳೂರು: ಬೆಂಗಳೂರಿನ‌ ರಸ್ತೆ ಗುಂಡಿ ಮುಚ್ಚಲು ಕಾರ್ಯಪಡೆ ರಚಿಸಲು ನಿರ್ಧರಿಸಲಾಗಿದ್ದು, ಈ ತಿಂಗಳೊಳಗೆ ಗುಂಡಿ ಮುಚ್ಚಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು ಸಿಟಿ ರೌಂಡ್ಸ್ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಅವರು, ಬೆಂಗಳೂರಿನ ವಾರ್ಡ್ ರಸ್ತೆಗಳಲ್ಲಿ 5,500 ಗುಂಡಿ ಬಿದ್ದಿದೆ. ಇದಲ್ಲದೇ ಆರ್ಟಿಲರಿ, ಸಬ್ ಆರ್ಟಿಲರಿ ರಸ್ತೆಗಳಲ್ಲಿ 557 ಗುಂಡಿ ಬಿದ್ದಿವೆ. 67 ಕಡೆ ರಸ್ತೆ ಕಿತ್ತು ಹೋಗಿವೆ. ಬಿಜೆಪಿ ಕಾಲದಿಂದಲೂ ಈ ಗುಂಡಿಗಳು ಇವೆ. ಗುಂಡಿ ಬಿದ್ದ ತಕ್ಷಣ ಮುಚ್ಚಿದರೆ ಈ ಸಮಸ್ಯೆ ಆಗುತ್ತಿರಲಿಲ್ಲ. ಈ ತಿಂಗಳ ಒಳಗೆ ರಸ್ತೆ ಗುಂಡಿ ಮುಚ್ಚಲು ಸೂಚಿಸಲಾಗಿದೆ. ಕಾರ್ಯಪಡೆ ರಚಿಸಿ ಕೂಡಲೇ ದುರಸ್ತಿ ಮಾಡಲು ನಿರ್ಧರಿಸಲಾಗಿದೆ.‌ ರಸ್ತೆ ಗುಂಡಿ ನಿರ್ವಹಣೆಗೆ ಒಂದು ಖಾಯಂ ನಿರ್ವಹಣಾ ವ್ಯವಸ್ಥೆ ರೂಪಿಸಲು ಸೂಚಿಸಲಾಗಿದೆ. ವಿಶೇಷ ಸೆಲ್ ಮಾಡಲು ಬಿಬಿಎಂಪಿಗೆ, ಬಿಡಿಎಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.‌

ರಾಜಕಾಲುವೆ ಹೂಳು ತೆಗೆಯಲು ಖಡಕ್ ಸೂಚನೆ: ಬೆಂಗಳೂರಲ್ಲಿ 860 ಕಿ.ಮೀ. ರಾಜಕಾಲುವೆ ಇದೆ. ಈ ಹಿಂದೆ ಸಿಎಂ ಆಗಿದ್ದಾಗ 491 ಕಿ.ಮೀ. ರಾಜಕಾಲುವೆ ತೆರವು ಮಾಡಿದ್ದೇನು. ಹಿಂದಿನ‌ ಬಿಜೆಪಿ ಸರ್ಕಾರ 195. ಕಿ.ಮೀ.‌ ತೆರವು ಮಾಡಲು ಕ್ರಮ ಕೈಗೊಂಡಿದ್ದರು. ಜನವರಿಯಲ್ಲಿ 2023 ಟೆಂಡರ್ ಕೊಟ್ಟು ವಿಳಂಬವಾಗಿ ಕೆಲಸ ಆರಂಭಿಸಿದ್ದರು. ಇದರಿಂದ ಸಮಸ್ಯೆ ಆಗಿದೆ. ಈ ಕಾಮಗಾರಿ ಪೂರ್ಣಗೊಳಿಸಲು 2023 - 25 ವರೆಗೆ ಕಾಲಾವಧಿ ನೀಡಲಾಗಿತ್ತು.‌ ಇದಕ್ಕಾಗಿ 1,800 ಕೋಟಿ ಇದಕ್ಕಾಗಿ ಖರ್ಚು ಮಾಡಲಾಗುತ್ತಿದೆ. ಇನ್ನು 174 ಕಿ.ಮೀ. ರಾಜಕಾಲುವೆ ಕಾಮಗಾರಿ ಬಾಕಿ ಉಳಿದಿವೆ. 2,000 ಕೋಟಿ ರೂ. ವಿಶ್ವ ಬ್ಯಾಂಕ್ ಆರ್ಥಿಕ ನೆರವಿನಿಂದ ಈ ಕಾಮಗಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

12.15 ಕಿ.ಮೀ ರಾಜಕಾಲುವೆ ಸಂಬಂಧಿಸಿದಂತೆ ಕೋರ್ಟ್​ನಲ್ಲಿ ಸ್ಟೇ ಇದೆ. 12 ಕೇಸ್ ಸಿವಿಲ್ ಕೋರ್ಟ್​ನಲ್ಲಿದೆ. ಅವುಗಳನ್ನು ತೆರವು ಮಾಡಲು ಸೂಚಿಸಲಾಗಿದೆ. ಅದಕ್ಕಾಗಿ ವಿಶೇಷ ವಕೀಲರನ್ನು ನೇಮಿಸಿ ಕೇಸ್ ಇತ್ಯರ್ಥಕ್ಕೆ ಸೂಚನೆ ನೀಡಲಾಗಿದೆ. ಯಾರೇ ಇರಲಿ, ರಾಜಕಾರಣಿಗಳಾಗಲಿ, ನಾಯಕರದ್ದಾಗಿರಲಿ ರಾಜಕಾಲುವೆ ಒತ್ತುವರಿ ಇದ್ದರೆ ತೆರವು ಮಾಡಲು ಬಿಬಿಎಂಪಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದರು.

ಪಾಲಿಕೆಯಲ್ಲಿ ಮಳೆ ಬಂದಾಗ ನೀರು ಬರದಂತೆ ಮಾಡಬೇಕು. ಆಗದಿದ್ದರೆ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಪಾಲಿಕೆ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿದೆ. ಬೆಂಗಳೂರಲ್ಲಿ 1 ಕೋಟಿಗೂ ಅಧಿಕ ಜನಸಂಖ್ಯೆ ಇದೆ. ಮುಂಚೆ 400 ಕೆರೆಗಳು ಇತ್ತು. ಅನೇಕ ಕೆರೆಗಳು ಒತ್ತುವರಿ ಮಾಡಲಾಗಿದೆ. ಹೂಳು ತುಂಬಿವೆ‌. ಹೂಳು ತೆಗೆದು, ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿದೆ ಎಂದು ಇದೇ ವೇಳೆ ತಿಳಿಸಿದರು.

ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಸೂಚನೆ: ಯಲಹಂಕದಲ್ಲಿ ಟಿಬಿ ಚಾನಲ್‌ನಲ್ಲಿ ಸಮಸ್ಯೆ ಆಗಿತ್ತು. 20 ಮನೆಗಳಿಗೆ ನೀರು ಹೋಗಿತ್ತು. ಡಿಸಿಎಂ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೆರೆಗೆ ನೀರು ಹೋಗಲು ಅರಣ್ಯ ಭೂಮಿ ಬೇಕು. ಅರಣ್ಯ ಇಲಾಖೆಯವರು ಅನುಮತಿ ನೀಡುತ್ತಿಲ್ಲ.‌ ಅರಣ್ಯ ಇಲಾಖೆಗೆ ಮಾತನಾಡಿ ಸಮಸ್ಯೆ ಬಗೆಹರಿಸಿದ್ದೇವೆ ಎಂದರು.

ಗಾಳಿ ಆಜನೇಯ ದೇವಸ್ಥಾನಕ್ಕೆ ತೆರಳಿ ವೀಕ್ಷಣೆ ಮಾಡಲಾಗಿದೆ. ಮಳೆ ಜಾಸ್ತಿ ಬಂದಾಗ ನೀರು ಹೋಗಲು ಎತ್ತರ ಸಾಲುವುದಿಲ್ಲ. ಹೂಳು ಕೂಡ ತುಂಬಿತ್ತು. ಪರ್ಯಾಯವಾಗಿ ಇನ್ನೊಂದು ಮೋರಿ ಮಾಡಲು ಸೂಚನೆ ನೀಡಲಾಗಿದೆ. ಅನೇಕ ಭಾಗಗಳಿಗೆ ಹೋಗಿದ್ದೇವೆ. ಕಾಮಗಾರಿ ನಿಧಾನ ಆಗಿದೆ. ಕಾಮಗಾರಿ ತ್ವರಿತ ಗತಿಯಲ್ಲಿ ಮಾಡಲು ಸೂಚನೆ ನೀಡಲಾಗಿದೆ.

ಎಲ್ಲಿ ಒಣ ಕೊಂಬೆ ಇದೆ. ಅದನ್ನು ಕತ್ತರಿಸಲು ಸೂಚಿಸಲಾಗಿದೆ. ಫುಟ್ ಪಾತ್​ನಲ್ಲಿ ಹಳ್ಳ ಬಿದ್ದಿರುವುದನ್ನು ಕೂಡಲೇ ಮುಚ್ಚಲು ನಿರ್ದೇಶನ ನೀಡಲಾಗಿದೆ. ರಾಜಕಾಲುವೆಗೆ ಕಸ ಹಾಕುವುದನ್ನು ತಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂಗಾರು ಮಳೆ ಆರಂಭದ ಮುಂಚೆನೇ ರಾಜಕಾಲುವೆಯ ಹೂಳು ತೆಗೆಯಲು ಬಿಬಿಎಂಪಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದರು.

ಈಜಿಪುರ ಮೇಲ್ಸೇತುವೆ ಕಾಮಗಾರಿ ಹಲವು ವರ್ಷದಿಂದ ನಿಂತು ಹೋಗಿತ್ತು. ಬೇರೆ ಗುತ್ತಿಗೆದಾರರಿಗೆ ಕಾಮಗಾರಿ ಕೊಟ್ಟಿದ್ದೆವು. ಅವನು ಶೇ5ರಷ್ಟು ಕೆಲಸ ಮಾಡಿದ್ದಾನೆ. ಕೂಡಲೇ ಕೆಲಸ ಮಾಡಬೇಕು. ಇಲ್ಲವಾದರೆ ಗುತ್ತಿಗೆದಾರನಿಗೆ ನೋಟೀಸ್ ನೀಡಿ ಬೇರೆ ಗುತ್ತಿಗೆದಾರನಿಗೆ ಕಾಮಗಾರಿ ನೀಡಲು ಸೂಚನೆ ನೀಡಿದ್ದೇವೆ ಎಂದರು.

ಇದನ್ನೂ ಓದಿ: ಅತ್ತ ಸಿಎಂ - ಡಿಸಿಎಂ ಸಿಟಿ ರೌಂಡ್ಸ್: ಇತ್ತ ಸಾರ್ವಜನಿಕರಿಗೆ ಟ್ರಾಫಿಕ್ ಜಾಮ್ ತಲೆ ಬಿಸಿ - TRAFFIC JAM IN BENGALURU

ETV Bharat Logo

Copyright © 2024 Ushodaya Enterprises Pvt. Ltd., All Rights Reserved.