ETV Bharat / sports

ಫ್ರಾನ್ಸ್​ನ ಮಾರ್ಸೆಲ್ಲೆ ತಲುಪಿದ ಪ್ಯಾರಿಸ್​ ಒಲಿಂಪಿಕ್ಸ್​ ಜ್ಯೋತಿ: ಲಕ್ಷಾಂತರ ಜನರ ಸಂಭ್ರಮ - Olympic Torch

author img

By ETV Bharat Karnataka Team

Published : May 9, 2024, 11:44 AM IST

ಒಲಿಂಪಿಕ್ ಜ್ಯೋತಿ ಬುಧವಾರ ಫ್ರಾನ್ಸ್​ ತಲುಪಿದ್ದು ಲಕ್ಷಾಂತರ ಜನರು ಜ್ಯೋತಿಯನ್ನು ಸ್ವಾಗತಿಸಿದರು.

ಒಲಿಂಪಿಕ್ಸ್​ ಜ್ಯೋತಿ
ಒಲಿಂಪಿಕ್ಸ್​ ಜ್ಯೋತಿ (IANS)

ಮಾರ್ಸೆಲ್ಲೆ(ಫ್ರಾನ್ಸ್​): ಪ್ರತಿಷ್ಠಿತ ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್ 2024 ಜುಲೈ 26ರಿಂದ ಆರಂಭವಾಗಲಿದೆ. ಕೂಟದ ಆತಿಥ್ಯ ವಹಿಸಿರುವ ಪ್ಯಾರಿಸ್​ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದರ ಭಾಗವಾಗಿ ಬುಧವಾರ ಪ್ರಾನ್ಸ್​ನ ಬಂದರು ನಗರಿ ಮಾರ್ಸಿಲ್ಲೆಗೆ ಒಲಿಂಪಿಕ್ ಜ್ಯೋತಿ ಆಗಮಿಸಿತು. ಫ್ರೆಂಚ್ ಒಲಿಂಪಿಕ್ ಈಜುಗಾರ ಫ್ಲೋರೆಂಟ್ ಮನೌಡೌ ಅವರು ಜ್ಯೋತಿಯನ್ನು ಬರಮಾಡಿಕೊಂಡರು. ಈ ವೇಳೆ ರಾಷ್ಟ್ರಗೀತೆ, ಏರ್​ಶೋ, ಪರೇಡ್​ಗಳು ನಡೆದವು.

ಈ ಕಾರ್ಯಕ್ರಮ ವೀಕ್ಷಿಸಲು ಲಕ್ಷಾಂತರ ಜನರು ಆಗಮಿಸಿದ್ದರು. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಸರ್ಕಾರ ಬಿಗಿ ಭದ್ರತೆಯೊಂದಿಗೆ ಒಲಿಂಪಿಕ್ ಜ್ಯೋತಿಗೆ ಸ್ವಾಗತ ನೀಡಿತು. ಫ್ಯಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ಸಾವಿರಾರು ಕ್ರೀಡಾಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.

ಈ ಕುರಿತು ಮಾರ್ಸಿಲ್ಲೆ ಮೇಯರ್ ಬೆನೋಟ್ ಪಯಾನ್ ಪ್ರತಿಕ್ರಿಯಿಸಿ, "ಬುಧವಾರ ನಡೆದ ಸಮಾರಂಭದಲ್ಲಿ 2,30,000ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು" ಎಂದು ತಿಳಿಸಿದರು.

ಗ್ರೀಸ್​ನಿಂದ ರ್ಯಾಲಿ: ಒಲಿಂಪಿಕ್ಸ್​ ಜ್ಯೋತಿಯನ್ನು ಅಧಿಕೃತವಾಗಿ ಫ್ರಾನ್ಸ್‌ಗೆ ಹಸ್ತಾಂತರಿಸುವ ಮೊದಲು ಕಳೆದ ತಿಂಗಳು ಗ್ರೀಸ್‌ನಲ್ಲಿ ಬೆಳಗಿಸಲಾಗಿತ್ತು. ಏ.16ರಂದು ಗ್ರೀಸ್‌ನ ಪ್ರಸಿದ್ಧ ಒಲಂಪಿಯಾದಿಂದ ಒಲಿಂಪಿಕ್ ಜ್ಯೋತಿ ರ್ಯಾಲಿ ಆರಂಭವಾಗಿ ಅಥೆನ್ಸ್‌ ತಲುಪಿತ್ತು. ನಂತರ ಅಲ್ಲಿಂದ ನೇರವಾಗಿ ಇದೀಗ ಫ್ರಾನ್ಸ್‌ನ ದಕ್ಷಿಣದಲ್ಲಿರುವ ಮಾರ್ಸೆಲ್ಲೆ ನಗರ ತಲುಪಿದೆ.

ಪುರಾತನ ವಾಣಿಜ್ಯ ಹಡಗು ಮೂಲಕ ಸಾಗಣೆ: 1896ರಲ್ಲಿ ಮೊದಲ ಬಾರಿಗೆ ಬಳಸಲ್ಪಟ್ಟ ಬೆಲೆಮ್ ಎಂಬ ಹಡಗಿನ ಮೂಲಕ ಒಲಿಂಪಿಕ್ಸ್​ ಜ್ಯೋತಿಯನ್ನು ಫ್ರಾನ್ಸ್​ಗೆ ತರಲಾಗಿದೆ. ಇದು ಪುರಾತನ ಕಾಲದ ವಾಣಿಜ್ಯ ಹಡಗು ಎಂಬುದು ವಿಶೇಷ.

ಶತಮಾನಗಳ ಬಳಿಕ ಒಲಿಂಪಿಕ್ಸ್‌ಗೆ ಫ್ರಾನ್ಸ್‌ಗೆ ಆತಿಥ್ಯ: ಶತಮಾನಗಳ ಬಳಿಕ ಒಲಿಂಪಿಕ್ಸ್​ಗೆ ಫ್ರಾನ್ಸ್​ ಆತಿಥ್ಯ ವಹಿಸಿದೆ. 1924ರಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ ಆತಿಥ್ಯ ವಹಿಸಿತ್ತು. ಮೊದಲ ಬಾರಿಗೆ ಒಲಿಂಪಿಕ್ಸ್​ ಆಯೋಜಿಸಿದ್ದ ಮೊದಲ ದೇಶ ಎಂಬ ಹೆಗ್ಗಳಿಕೆಯೂ ಫ್ರಾನ್ಸ್ ದೇಶದ್ದಾಗಿದೆ.

ಒಲಿಂಪಿಕ್ಸ್​ ಉದ್ಘಾಟನಾ ಸಮಾರಂಭ: ಜು.26ರಂದು ಒಲಿಂಪಿಕ್ಸ್​ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಂದು ಸಂಜೆ ಸೀನ್​ ನದಿಯಲ್ಲಿ ವೈಭವದ ಸಮಾರಂಭ ಆಯೋಜನೆಯಾಗಿದೆ. ಇದಕ್ಕಾಗಿ ಈಗಾಗಲೇ ನದಿ ಸ್ವಚ್ಛತಾ ಕಾರ್ಯಕ್ರಮ ಸೇರಿದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: 3 ವರ್ಷಗಳ ಬಳಿಕ ಸ್ವದೇಶದಲ್ಲಿ ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಕಣಕ್ಕೆ - Neeraj Chopra

ETV Bharat Logo

Copyright © 2024 Ushodaya Enterprises Pvt. Ltd., All Rights Reserved.