ETV Bharat / sports

ಸೀನ್​ ನದಿ ಬದಲಿಗೆ ಸ್ಟೇಡಿಯಂನಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ ಉದ್ಘಾಟನಾ ಕಾರ್ಯಕ್ರಮ? - paris olympics 2024

author img

By ETV Bharat Karnataka Team

Published : Apr 16, 2024, 9:38 AM IST

ಸೀನ್​ ನದಿಯ ಮೇಲೆ ಪ್ಯಾರಿಸ್​ ಒಲಿಂಪಿಕ್ಸ್​ ಉದ್ಘಾಟನಾ ಕಾರ್ಯಕ್ರಮ ನಡೆಸುವ ಸಾಧ್ಯತೆ ಕ್ಷೀಣಿಸಿದೆ. ಭದ್ರತಾ ಸಮಸ್ಯೆಗಳಿಂದಾಗಿ ಸ್ಟೇಡಿಯಂಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ.

ಪ್ಯಾರಿಸ್​ ಒಲಿಂಪಿಕ್ಸ್​ ಉದ್ಘಾಟನಾ ಕಾರ್ಯಕ್ರಮ
ಪ್ಯಾರಿಸ್​ ಒಲಿಂಪಿಕ್ಸ್​ ಉದ್ಘಾಟನಾ ಕಾರ್ಯಕ್ರಮ

ಪ್ಯಾರಿಸ್​: ಕ್ರೀಡೆಗಳ ಮಹಾಸಂಗಮವಾದ ಒಲಿಂಪಿಕ್ಸ್​ ಈ ಬಾರಿ ಫ್ರಾನ್ಸ್​ನಲ್ಲಿ ನಡೆಯಲಿದೆ. ಪ್ಯಾರಿಸ್​ ಒಲಿಂಪಿಕ್ಸ್​ಗೆ 100 ದಿನಗಳು ಮಾತ್ರ ಬಾಕಿ ಇದ್ದು, ಅದ್ಧೂರಿ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿವೆ. ಸೀನ್​ ನದಿ ಮೇಲೆ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಲು ಯೋಜಿಸಲಾಗಿತ್ತು. ಆದರೆ, ಭದ್ರತೆ ಮತ್ತು ಸುರಕ್ಷತೆ ಕಾರಣಗಳಿಗಾಗಿ ಕ್ರೀಡಾಂಗಣದಲ್ಲಿ ನಡೆಸುವ ಸಾಧ್ಯತೆ ಇದೆ.

ಇಲ್ಲಿ ಹರಿಯುತ್ತಿರುವ ಸೀನ್​ ನದಿಯು ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನೆಗೆ ವೇದಿಕೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಭದ್ರತೆ ಮತ್ತು ಸುರಕ್ಷತಾ ಅಡ್ಡಿಗಳು ಇರುವ ಕಾರಣ ಇನ್ನೂ ಯಾವುದು ನಿಕ್ಕಿಯಾಗಿಲ್ಲ. ಸೀನ್​ ನದಿಯ ಮೇಲೆ ಒಲಿಂಪಿಕ್ಸ್​ ಕೂಟವನ್ನು ಅದ್ಧೂರಿಯಾಗಿ ಆರಂಭಿಸುವ ಇರಾದೆ ಇದೆ. ಸುರಕ್ಷತಾ ನಿಯಮಗಳ ಅನುಸಾರ ಆಯೋಜನೆ ಮಾಡಲಾಗುವುದು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.

ಅಗತ್ಯಬಿದ್ದರೆ ಸ್ಥಳ ಬದಲು: ಸೀನ್​ ನದಿಯ ಮೇಲೆ ಉದ್ಘಾಟನಾ ಕಾರ್ಯಕ್ರಮ ನಡೆದಲ್ಲಿ ಒಲಿಂಪಿಕ್ಸ್​ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ನಡೆದ ಕಾರ್ಯಕ್ರಮ ಇದಾಗಲಿದೆ. ಸುರಕ್ಷತಾ ಕ್ರಮಗಳು ಸಾಕಾಗದಿದ್ದಲ್ಲಿ ಸಮಾರಂಭವನ್ನು ಸ್ಟೇಡ್ ಡಿ ಫ್ರಾನ್ಸ್ ರಾಷ್ಟ್ರ್ರೀಯ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ತಿಳಿಸಿದ್ದಾರೆ. ಆದರೂ ನಾವು ಈ ಕಾರ್ಯಕ್ರಮವನ್ನು ನದಿಯಲ್ಲಿ ಆಯೋಜಿಸಲು ಬದ್ಧರಾಗಿದ್ದೇವೆ ಎಂದಿದ್ದಾರೆ.

ನದಿಯಲ್ಲಿ ಸುಮಾರು 6 ಕಿಲೋಮೀಟರ್ ದೂರದವರೆಗೆ 10,500 ಕ್ರೀಡಾಪಟುಗಳನ್ನು ದೋಣಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ಉದ್ಘಾಟನಾ ದಿನವಾದ ಜುಲೈ 26 ರಂದು ನದಿಯ ಎರಡೂ ಬದಿಗಳಲ್ಲಿ 6 ಲಕ್ಷ ಜನರಿಗೆ ಕಾರ್ಯಕ್ರಮ ವೀಕ್ಷಿಸಲು ಅವಕಾಶ ನೀಡುವ ಬಗ್ಗೆ ಯೋಜಿಸಲಾಗಿತ್ತು. ಆದರೆ, ಸುರಕ್ಷತಾ ಕ್ರಮಗಳ ಕಾರಣ ಈ ಸಂಖ್ಯೆಯನ್ನು 3 ಲಕ್ಷಕ್ಕೆ ಇಳಿಸಲಾಗಿದೆ.

ಟ್ರ್ಯಾಕ್ ಬಣ್ಣ ಬದಲು: ಇನ್ನೊಂದೆಡೆ, ಒಲಿಂಪಿಕ್ಸ್ ಟ್ರ್ಯಾಕ್​ನ ಬಣ್ಣವನ್ನು ಬದಲಿಸಲು ಸಿದ್ಧತೆ ನಡೆದಿದೆ. ಸಾಮಾನ್ಯವಾಗಿ ಓಟದ ಸ್ಪರ್ಧೆಗಳಿಗೆ ಬಳಸುವ ಟ್ರ್ಯಾಕ್ ಇಟ್ಟಿಗೆ ಕೆಂಪು ಬಣ್ಣದಿಂದ ಕೂಡಿರುತ್ತದೆ. ಆದರೆ, ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ಅನ್ನು ನೇರಳೆ ಬಣ್ಣದಲ್ಲಿ ತಯಾರಿಸಲಾಗುತ್ತಿದೆ. ರಾಷ್ಟ್ರೀಯ ಕ್ರೀಡಾಂಗಣವಾದ ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಇದನ್ನು ಇಟಲಿಯ ಸಂಸ್ಥೆಯು ನಿರ್ಮಿಸುತ್ತಿದೆ. ಇಟಲಿಯಲ್ಲಿ ತಯಾರಾಗಿರುವ ಈ ಟ್ರ್ಯಾಕ್​ ಅಳವಡಿಕೆಗೆ 1 ತಿಂಗಳು ಸಮಯ ಬೇಕಿದೆ.

ಇಂದು ಒಲಿಂಪಿಕ್ಸ್​ ಜ್ಯೋತಿ: ಏಪ್ರಿಲ್ 16 ರಂದು (ಮಂಗಳವಾರ) ಗ್ರೀಸ್‌ನ ಒಲಿಂಪಿಯಾದಲ್ಲಿ ಒಲಿಂಪಿಕ್ಸ್​ ಜ್ಯೋತಿ ಬೆಳಗಿಸುವ ಸಮಾರಂಭ ನಡೆಯಲಿದೆ. ಇದು ವಿಶ್ವದ ಹಲವು ದೇಶಗಳನ್ನು ಸುತ್ತಿ ಫ್ರಾನ್ಸ್​ಗೆ ಬರಲಿದೆ.

ಇದನ್ನೂ ಓದಿ: ಟಿ20 ಇತಿಹಾಸದಲ್ಲಿ ದಾಖಲೆ ರನ್​ ಚಚ್ಚಿದ ಹೈದರಾಬಾದ್: ಆರ್​ಸಿಬಿಗೆ 6ನೇ ಸೋಲು, ಫ್ಲೇ ಆಫ್​ ಕನಸು ಭಗ್ನ? - RCB vs SH result

ETV Bharat Logo

Copyright © 2024 Ushodaya Enterprises Pvt. Ltd., All Rights Reserved.