ETV Bharat / sports

ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯ; ಗೆಲುವಿನ ಆತ್ಮವಿಶ್ವಾಸದಲ್ಲಿ ಭಾರತ

author img

By ETV Bharat Karnataka Team

Published : Feb 1, 2024, 1:48 PM IST

IND vs ENG: India Gunning to Level Series While England Aiming to Make It 2-0
IND vs ENG: India Gunning to Level Series While England Aiming to Make It 2-0

IND vs ENG: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವ ಟೀಂ ಇಂಡಿಯಾ, ಶುಕ್ರವಾರದಿಂದ ವಿಶಾಖಪಟ್ಟಣದಲ್ಲಿ ನಡೆಯಲಿರುವ ಎರಡನೇ ಟೆಸ್ಟ್​ಗೆ ಅಣಿಯಾಗಿದೆ. ಗೆಲುವಿನ ಅಲೆಯಲ್ಲಿರುವ ಪ್ರವಾಸಿ ಇಂಗ್ಲೆಂಡ್ ತಂಡ ಮುನ್ನುಗ್ಗುವ ಪ್ರಯತ್ನದಲ್ಲಿದ್ದರೆ, ಆತಿಥೇಯ ಭಾರತ ಗೆದ್ದು 1-1 ಸಮಬಲ ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ನವದೆಹಲಿ/ವಿಶಾಖಪಟ್ಟಣ: ಭಾರತ ಮತ್ತು ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯ ನಾಳೆಯಿಂದ (ಫೆ. 2) ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಪಂದ್ಯಕ್ಕೂ ಮುನ್ನ ನೆಟ್ಸ್​​ನಲ್ಲಿ ಭರ್ಜರಿ ಅಭ್ಯಾಸ ನಡೆಸಿದೆ. ಯುವ ಆಟಗಾರ ರಜತ್ ಪಾಟಿದಾರ್ ಅಭ್ಯಾಸದಲ್ಲಿ ನಿರತರಾಗಿದ್ದ ವಿಡಿಯೋವನ್ನು ಬಿಸಿಸಿಐ ತನ್ನ ಎಕ್ಸ್​ (ಟ್ವಿಟ್ಟರ್​) ಖಾತೆಯಲ್ಲಿ ಹಂಚಿಕೊಂಡಿದೆ. ಇದು ಅಂತಾರಾಷ್ಟ್ರೀಯ ಟೆಸ್ಟ್​ಗೆ ಪದಾರ್ಪಣೆ ಮಾಡುವ ಮುನ್ಸೂಚನೆ ಎನ್ನಲಾಗಿದೆ.

ಹೈದರಾಬಾದ್‌ನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲಿನ ನಂತರ, ಟೀಂ ಇಂಡಿಯಾ ಗೆಲುವಿಗಾಗಿ ಹಾತೊರೆಯುತ್ತಿದೆ. ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ​ ಪ್ರವಾಸಿ ಇಂಗ್ಲೆಂಡ್ ತಂಡ 1-0 ಮುನ್ನಡೆ ಸಾಧಿಸಿದ್ದು, ನಾಳೆಯ ಟೆಸ್ಟ್​ ಅನ್ನು ಭಾರತ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದೆ. ಅದಕ್ಕಾಗಿ ಕೆಲವು ಬದಲಾವಣೆಯನ್ನು ಮಾಡಿಕೊಂಡಿದೆ. ಗಾಯಗೊಂಡಿರುವ ರವೀಂದ್ರ ಜಡೇಜಾ ಮತ್ತು ಕೆ ಎಲ್ ರಾಹುಲ್ ತಂಡದಿಂದ ಹೊರಗುಳಿದಿದ್ದು, ರಜತ್ ಪಾಟಿದಾರ್, ಸರ್ಫರಾಜ್ ಖಾನ್, ಸೌರಭ್ ಕುಮಾರ್ ಮತ್ತು ವಾಷಿಂಗ್ಟನ್ ಸುಂದರ್​​​ಗೆ ಸ್ಥಾನ ನೀಡಲಾಗಿದೆ. ಐದರಲ್ಲಿ ಒಂದಕ್ಕಿ ಮುಂದಿರುವ ಆಂಗ್ಲರನ್ನು ಸೋಲಿಸಿ ಭಾರತ 1-1 ಸಮಬಲ ಸಾಧಿಸುವ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ, ಉತ್ಸಾಹದಲ್ಲಿರುವ ಆಂಗ್ಲರ ತಂಡ ಇದಕ್ಕೆ ದಾರಿ ಮಾಡಿಕೊಡಬಲ್ಲದೇ ಅನ್ನೋದನ್ನು ಕಾದು ನೋಡಬೇಕಿದೆ.

ಆತ್ಮವಿಶ್ವಾಸದಲ್ಲಿ ಭಾರತ: ಶುಕ್ರವಾರ ನಡೆಯಬೇಕಿರುವ ವೈಎಸ್​​ ರಾಜಶೇಖರ ರೆಡ್ಡಿ ಕ್ರೀಡಾಂಗಣದ ಇತಿಹಾಸ ನೋಡಿದರೆ ಭಾರತಕ್ಕೆ ವರದಾನವೆಂದೇ ಹೇಳಲಾಗುತ್ತಿದೆ. ಕಾರಣ, ಈ ಮೈದಾನದಲ್ಲಿ ಟೀಂ ಇಂಡಿಯಾ ಆಡಿರುವ ಎರಡೂ ಟೆಸ್ಟ್​ಗಳನ್ನು ತನ್ನದಾಗಿಸಿಕೊಂಡಿದ್ದು ಇದಕ್ಕೆ ಉದಾಹರಣೆಯಾಗಿದೆ. 2016 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ, ಇದೇ ಆಂಗ್ಲರನ್ನು 246 ರನ್‌ಗಳಿಂದ ಸೋಲಿಸಿದ್ದನ್ನು ಈಗ ಸ್ಮರಿಸಿಕೊಳ್ಳಬಹುದು. ನವೆಂಬರ್ 17 ರಿಂದ 21ರ ವರೆಗೆ ಇದೇ ವೈಎಸ್​​ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ ಪೂಜಾರ (119) ಮತ್ತು ವಿರಾಟ್ ಕೊಹ್ಲಿ (167) ಅವರು ಭರ್ಜರಿ ಶತಕ ಸಿಡಿಸಿದ್ದರು.

2019 ರಲ್ಲಿ ಭಾರತ ತಂಡವು ಇದೇ ಮೈದಾನದಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯವಾಡಿತ್ತು. ಅಂದು ಸೌತ್ ಆಫ್ರಿಕಾ ತಂಡವನ್ನು ಎದುರಿಸಿದ್ದ ಭಾರತ 203 ರನ್​ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಅಂದು ಮೊದಲು ಬ್ಯಾಟ್ ಮಾಡಿದ್ದ ಭಾರತದ ಪರ ಮಯಾಂಕ್ ಅಗರ್ವಾಲ್ (215) ದ್ವಿಶತಕ ಬಾರಿಸಿದರೆ, ರೋಹಿತ್ ಶರ್ಮಾ (176) ಶತಕ ಸಿಡಿಸಿದ್ದರು. ಜೋಡಿಯಾಗಿ ಬರೋಬ್ಬರಿ 317 ರನ್​ ಕಲೆಹಾಕಿದ್ದರು. ಇದೀಗ 5 ವರ್ಷಗಳ ಬಳಿಕ ಇದೇ ಮೈದಾನದಲ್ಲಿ ಮತ್ತೊಮ್ಮೆ ಕಣಕ್ಕಿಳಿಯಲು ಟೀಂ ಇಂಡಿಯಾ ಸಜ್ಜಾಗಿದೆ. ಒಂದು ವೇಳೆ ಪ್ರವಾಸಿ ಇಂಗ್ಲೆಂಡ್ ತಂಡ ಗೆದ್ದರೆ ದಾಖಲೆಯನ್ನು ಕೂಡ ಬರೆದಂತಾಗುತ್ತದೆ. ಹಾಗಾಗಿ ನಾಳೆಯ ಟೆಸ್ಟ್​ ಪಂದ್ಯ ಕುತೂಹಲ ಮೂಡಿಸಿದೆ.

ರವೀಂದ್ರ ಜಡೇಜಾ, ಕೆ ಎಲ್ ರಾಹುಲ್ ಅಷ್ಟೇ ಅಲ್ಲದೇ ವಿರಾಟ್ ಕೊಹ್ಲಿ ಕೂಡ 2ನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ಇದ್ದು, ಯುವ ಆಟಗಾರರೊಂದಿಗೆ ಭಾರತ ತಂಡ ಮೈದಾನಕ್ಕೆ ಇಳಿಯಲಿದೆ. ಕೆಎಲ್ ರಾಹುಲ್ ಜಾಗಕ್ಕೆ ರಜತ್ ಪಾಟಿದಾರ್ ಪ್ರವೇಶಾತಿ ಖಚಿತ ಎಂದು ಹೇಳಲಾಗುತ್ತಿದೆ. ಗಾಯದ ನಂತರ ಪುನರಾಗಮನ ಮಾಡುತ್ತಿರುವ ರಜತ್​ಗೆ ಈ ಟೆಸ್ಟ್ ಮೊದಲ​ನೆಯದ್ದಾಗಿದೆ. ''ತಂಡಕ್ಕೆ ಭವಿಷ್ಯದಲ್ಲಿ ಯಾವತ್ತೂ ಮರಳಲು ಸಾಧ್ಯವಿಲ್ಲವೆಂದು ಭಾವಿಸಿದ್ದೆ. ಆದರೆ, ನಾನು ಕಂಡ ಕನಸು ನನಸಾಗುತ್ತಿದೆ. ದೇಶಕ್ಕಾಗಿ ಟೆಸ್ಟ್ ಆಡುತ್ತಿರುವುದು ತುಂಬಾ ಸಂತೋಷ ಅನ್ನಿಸುತ್ತಿದೆ'' ಎಂದು ರಜತ್ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಭಾರತದ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್/ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ರಜತ್ ಪಾಟಿದಾರ್, ಕೆಎಸ್ ಭರತ್, ಅಕ್ಷರ್ ಪಟೇಲ್, ಆರ್ ಅಶ್ವಿನ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.

ಇದನ್ನೂ ಓದಿ: ಮಯಾಂಕ್​ ಅಗರ್ವಾಲ್​ ಅಪಾಯದಿಂದ ಪಾರು, ಶೀಘ್ರವೇ ಬೆಂಗಳೂರಿಗೆ ರವಾನೆ: ಕೆಎಸ್​ಸಿಎ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.