ETV Bharat / sports

3ನೇ ಟೆಸ್ಟ್​: ಯಶಸ್ವಿ ಜೈಸ್ವಾಲ್​ 'ಡಬಲ್​' ಸೆಂಚುರಿ, ಇಂಗ್ಲೆಂಡ್​ಗೆ 557 ರನ್​ಗಳ ಬೃಹತ್​ ಗುರಿ

author img

By ETV Bharat Karnataka Team

Published : Feb 18, 2024, 1:14 PM IST

Updated : Feb 18, 2024, 3:16 PM IST

ಇಂಗ್ಲೆಂಡ್​ ವಿರುದ್ಧ ಅದ್ಭುತ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿರುವ ಯಶಸ್ವಿ ಜೈಸ್ವಾಲ್​ ಸರಣಿಯಲ್ಲಿ 2ನೇ ದ್ವಿಶತಕ ಬಾರಿಸಿದರು. ಇಂಗ್ಲೆಂಡ್​ಗೆ 557 ರನ್​ಗಳ ಕಠಿಣ ಗುರಿ ನೀಡಲಾಗಿದೆ.

ಯಶಸ್ವಿ ಜೈಸ್ವಾಲ್
ಯಶಸ್ವಿ ಜೈಸ್ವಾಲ್

ರಾಜ್​ಕೋಟ್​: ಟೆಸ್ಟ್​ ಕ್ರಿಕೆಟ್​ನಲ್ಲಿ ಬಾಜ್​ಬಾಲ್​ ಪರಿಚಯಿಸಿರುವ ಇಂಗ್ಲೆಂಡ್​ಗೆ ಭಾರತದ ಯುವ ಬ್ಯಾಟರ್​ ಯಶಸ್ವಿ ಜೈಸ್ವಾಲ್ ಕಂಟಕವಾದರು. ನಡೆಯುತ್ತಿರುವ ಮೂರನೇ ಟೆಸ್ಟ್​ನಲ್ಲಿ ದ್ವಿಶತ ಬಾರಿಸುವ ಮೂಲಕ ಸರಣಿಯಲ್ಲಿ 2ನೇ ಡಬಲ್​ ಸೆಂಚುರಿ ದಾಖಲಿಸಿದರು. ಇನ್ನೊಂದೆಡೆ, ಸರ್ಫರಾಜ್​ ಖಾನ್​ ಪಾದಾರ್ಪಣೆ ಮೊದಲ ಟೆಸ್ಟ್​ ಪಂದ್ಯದ ಎರಡನೇ ಇನಿಂಗ್ಸ್​ನಲ್ಲೂ ಅರ್ಧಶತಕ ಬಾರಿಸಿ ಗಮನ ಸೆಳೆದರು. ಇದರಿಂದ ಭಾರತ 557 ರನ್​ಗಳ ಬೃಹತ್​ ಗುರಿಯನ್ನು ಇಂಗ್ಲೆಂಡ್​ಗೆ ನೀಡಿತು.

ಬೆನ್ನು ನೋವಿನ ಕಾರಣ 3ನೇ ದಿನದಾಟದಲ್ಲಿ ಶತಕದ ಬಳಿಕ ವಿಶ್ರಾಂತಿ ಪಡೆದಿದ್ದ ಜೈಸ್ವಾಲ್​, 4ನೇ ದಿನದಾಟದಲ್ಲಿ ತಮ್ಮ ಲಯವನ್ನು ಮುಂದುವರಿಸಿದರು. ಇಂಗ್ಲೆಂಡ್​ನ ಪ್ರತಿ ಬೌಲರ್​ಗಳನ್ನು ಬೆಂಡೆತ್ತಿದ ಯುವ ಬ್ಯಾಟರ್​ ಎರಡನೇ ಶತಕವನ್ನು 103 ಎಸೆತಗಳಲ್ಲಿ ಪೂರೈಸಿದರು. 236 ಎಸೆತಗಳಲ್ಲಿ ಔಟಾಗದೇ 214 ರನ್​ ಗಳಿಸಿದ ಜೈಸ್ವಾಲ್​ ಇನಿಂಗ್ಸ್​ನಲ್ಲಿ 14 ಬೌಂಡರಿ, 12 ಸಿಕ್ಸರ್​ಗಳು ಸಿಡಿದವು.

ಸರ್ಫರಾಜ್​ ಖಾನ್​ ಫಿಫ್ಟಿ: ವರ್ಷಗಳ ಕಾಯುವಿಕೆ ಬಳಿಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಸರ್ಫರಾಜ್​ ಖಾನ್​ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಜೈಸ್ವಾಲ್​ ಜೊತೆಗೂಡಿ ಟೆಸ್ಟ್​ ಪಂದ್ಯವಾಗಿದ್ದರೂ ಹೊಡಿಬಡಿ ಆಟವಾಡಿ ಎರಡನೇ ಅರ್ಧಶತಕ ಬಾರಿಸಿದರು. ಖಾನ್​ 72 ಎಸೆತಗಳಲ್ಲಿ 68 ರನ್​ ಸಿಡಿಸಿದರು. ಇದರಲ್ಲಿ 3 ಸಿಕ್ಸರ್​, 6 ಬೌಂಡರಿ ದಾಟಿದ್ದವು. ಮೊದಲ ಇನಿಂಗ್ಸ್​ನಲ್ಲಿ ಖಾನ್​ ಅಚಾನಕ್ ರನೌಟ್​ಗೆ ಬಲಿಯಾಗಿದ್ದರೂ, 62 ರನ್​ ಬಾರಿಸಿದ್ದರು.

ಶತಕ ತಪ್ಪಿಸಿಕೊಂಡ ಗಿಲ್​: ಇದಕ್ಕೂ ಮೊದಲು 65 ರನ್​ಗಳಿಂದ ಬ್ಯಾಟಿಂಗ್​ ಉಳಿಸಿಕೊಂಡಿದ್ದ ಶುಭ್​ಮನ್​ ಗಿಲ್​ 4ನೇ ದಿನದಾಟವನ್ನು ಭರ್ಜರಿಯಾಗಿ ಆರಂಭಿಸಿದರು. 91 ರನ್​ ಗಳಿಸಿದ್ದಾಗ ರನ್​ ಕದಿಯಲು ಹೋಗಿ ರನೌಟ್​ ಆದರು. ಇದರಿಂದ ಸರಣಿಯಲ್ಲಿ 2ನೇ ಶತಕದಿಂದ ವಂಚಿತರಾದರು. ನೈಟ್​ವಾಚ್​ಮನ್​ ಆಗಿ ಬಂದಿದ್ದ ಕುಲದೀಪ್​ ಯಾದವ್​ 27 ರನ್​ ಪೇರಿಸಿದರು.

ಡಿಕ್ಲೇರ್​ ಗೊಂದಲ: ಯಶಸ್ವಿ ಜೈಸ್ವಾಲ್​ ದ್ವಿಶತಕ ಗಳಿಸಿದ ಬಳಿಕ ನಾಯಕ ರೋಹಿತ್ ಶರ್ಮಾ ಎದ್ದು ನಿಂತು ಫೀಲ್ಡಿಂಗ್​ಗೆ ಬರುವಂತೆ ಕಂಡುಬಂದರು. ಇದರಿಂದ ಇನಿಂಗ್ಸ್​ ಡಿಕ್ಲೇರ್ ಮಾಡಿಕೊಳ್ಳಲಾಯಿತು ಎಂದು ಇಂಗ್ಲೆಂಡ್​ ಆಟಗಾರರು ಪೆವಿಲಿಯನ್​ನತ್ತ ತೆರಳಿದರು. ಜೈಸ್ವಾಲ್​, ಸರ್ಫರಾಜ್​ ಮೈದಾನ ತೊರೆಯುತ್ತಿದ್ದರು. ಆದರೆ, ಶರ್ಮಾ ಇನಿಂಗ್ಸ್​ ಮುಂದುವರಿಸುವಂತೆ ಸೂಚಿಸಿದರು. ಇದರಿಂದ ಗೊಂದಲ ಉಂಟಾಯಿತು.

ಭಾರತದ ಬೃಹತ್ ಗುರಿ ಬೆನ್ನತ್ತಲು ಎರಡನೇ ಇನಿಂಗ್ಸ್​ ಆರಂಭಿಸಿರುವ ಇಂಗ್ಲೆಂಡ್ 17 ಓವರ್​ಗಳಲ್ಲಿ 41 ರನ್​ಗೆ 4 ವಿಕೆಟ್​ ಕಳೆದುಕೊಂಡಿದೆ.

ಇದನ್ನೂ ಓದಿ: ಮತ್ತೆ ತಂಡಕ್ಕೆ ಮರಳಿದ ರವಿಚಂದ್ರನ್​ ಅಶ್ವಿನ್: 4ನೇ ದಿನದಾಟದಲ್ಲಿ ಮೈದಾನಕ್ಕಿಳಿಯಲಿರುವ ಸ್ಪಿನ್ನರ್

Last Updated : Feb 18, 2024, 3:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.