ETV Bharat / sports

ಮತ್ತೆ ತಂಡಕ್ಕೆ ಮರಳಿದ ರವಿಚಂದ್ರನ್​ ಅಶ್ವಿನ್: 4ನೇ ದಿನದಾಟದಲ್ಲಿ ಮೈದಾನಕ್ಕಿಳಿಯಲಿರುವ ಸ್ಪಿನ್ನರ್

author img

By ETV Bharat Karnataka Team

Published : Feb 18, 2024, 12:15 PM IST

Updated : Feb 18, 2024, 1:15 PM IST

ಕುಟುಂಬದ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಮೂರನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಪಂದ್ಯ ತೊರೆದಿದ್ದ ಅಶ್ವಿನ್​ ಮತ್ತೆ ತಂಡಕ್ಕೆ ಮರಳಿದ್ದಾರೆ.

ರವಿಚಂದ್ರನ್​ ಅಶ್ವಿನ್
ರವಿಚಂದ್ರನ್​ ಅಶ್ವಿನ್

ರಾಜ್‌ಕೋಟ್: ಕುಟುಂಬದ ವೈದ್ಯಕೀಯ ಕಾರಣಕ್ಕೆ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಿಂದ ಅರ್ಧದಲ್ಲೇ ಹೊರಬಂದಿದ್ದ ಸ್ಪಿನ್ನರ್​ ರವಿಚಂದ್ರನ್​ ಅಶ್ವಿನ್​ ಮತ್ತೆ ತಂಡ ಸೇರಿಕೊಳ್ಳಲಿದ್ದಾರೆ. ಪಂದ್ಯದ 4ನೇ ದಿನದಾಟದ ಹೊತ್ತಿಗೆ ತಂಡದ ಪರವಾಗಿ ಆಡಲಿದ್ದಾರೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.

ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಕ್ರಿಕೆಟ್​​ ನಿಯಂತ್ರಣ ಮಂಡಳಿ (ಬಿಸಿಸಿಐ), ಟೆಸ್ಟ್​ನ 2ನೇ ದಿನದಾಟದ ವೇಳೆ ಕುಟುಂಬದ ತುರ್ತು ವೈದ್ಯಕೀಯ ಕಾರಣಕ್ಕೆ ಪಂದ್ಯವನ್ನು ಅರ್ಧದಲ್ಲೇ ಮೊಟಕುಗೊಳಿಸಿ ಚೆನ್ನೈಗೆ ತೆರಳಿದ್ದ ಅಶ್ವಿನ್​, ಪುನಃ ತಂಡ ಸೇರಲು ಸಜ್ಜಾಗಿದ್ದಾರೆ. ಅಲ್ಪ ಸಮಯದಲ್ಲೇ ಅವರು ಮತ್ತೆ ತಂಡ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಚಾರ. 4ನೇ ದಿನದಾಟದಲ್ಲಿ ಅಶ್ವಿನ್​ ತಂಡದ ಪರ ಆಡಲಿದ್ದಾರೆ ಎಂದು ತಿಳಿಸಿದೆ.

ಸವಾಲಿನ ಸಮಯದಲ್ಲಿ ತಂಡದ ಮ್ಯಾನೇಜ್​ಮೆಂಟ್​, ಮಾಧ್ಯಮಗಳು, ಅಭಿಮಾನಿಗಳು ಅಶ್ವಿನ್​ ಬೆಂಬಲಕ್ಕೆ ನಿಂತಿದ್ದಕ್ಕೆ ಧನ್ಯವಾದ ತಿಳಿಸಿದೆ. ಜೊತೆಗೆ ವೈಯಕ್ತಿಕ ಜೀವನವನ್ನೂ ಗೌರವಿಸಿ ಎಂದು ಕೋರಿದೆ.

ಪಂದ್ಯದ 2ನೇ ದಿನದಾಟದಲ್ಲಿ ಇಂಗ್ಲೆಂಡ್​ ಜಾಕ್​ ಕ್ರಾಲಿ ವಿಕೆಟ್ ಪಡೆದ ಬಳಿಕ ಅಶ್ವಿನ್ ಟೆಸ್ಟ್ ಕ್ರಿಕೆಟ್​ನಲ್ಲಿ 500 ವಿಕೆಟ್​ ಪಡೆದ ಭಾರತದ ಎರಡನೇ ಮತ್ತು ವಿಶ್ವದ 9 ನೇ ಬೌಲರ್​ ಎನಿಸಿಕೊಂಡರು. ಅತೀ ಕಡಿಮೆ ಪಂದ್ಯ ಮತ್ತು ಎಸೆತ​ಗಳಲ್ಲಿ ಇಷ್ಟು ವಿಕೆಟ್​ಗಳ ಶಿಖರವೇರಿದ ವಿಶ್ವದ ಎರಡನೇ ಬೌಲರ್​ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

ಆಸ್ಟ್ರೇಲಿಯಾದ ವೇಗಿ ಗ್ರೆನ್ ಮೆಕ್‌ಗ್ರಾತ್ ಟೆಸ್ಟ್​ ಕ್ರಿಕೆಟ್​ನಲ್ಲಿ 25,528 ಎಸೆತಗಳನ್ನು ಎಸೆದು 500 ವಿಕೆಟ್‌ಗಳನ್ನು ಪಡೆದು ಅಗ್ರ ಸ್ಥಾನದಲ್ಲಿದ್ದಾರೆ. ಈಗ ಆರ್.ಅಶ್ವಿನ್ 25,714 ಬಾಲ್​ಗಳಲ್ಲಿ 500 ವಿಕೆಟ್​ ಕಿತ್ತು ಅತೀ ಕಡಿಮೆ ಎಸೆತಗಳಲ್ಲಿ ಈ ಸಾಧನೆ ತೋರಿದ ಎರಡನೇ ಬೌಲರ್​ ಆಗಿ ಹೊರಹೊಮ್ಮಿದ್ದಾರೆ. ನಂತರದಲ್ಲಿ ಇಂಗ್ಲೆಂಡ್​ನ ಮಧ್ಯಮ ವೇಗಿಗಳಾದ ಜೇಮ್ಸ್ ಆ್ಯಂಡರ್ಸನ್ (28,150 ಎಸೆತ), ಸ್ಟುವರ್ಟ್ ಬ್ರಾಡ್ (28,430 ಎಸೆತ) ಹಾಗೂ ವೆಸ್ಟ್​ ಇಂಡೀಸ್​ನ ಕರ್ಟ್ನಿ ವಾಲ್ಶ್ (28,833 ಎಸೆತ) ಸ್ಥಾನ ಹೊಂದಿದ್ದಾರೆ.

ಅತೀ ಕಡಿಮೆ ಪಂದ್ಯಗಳಲ್ಲಿ 500 ವಿಕೆಟ್​ಗಳನ್ನು ಪಡೆದ ಜಗತ್ತಿನ ಬೌಲರ್​ಗಳಲ್ಲಿ ಅಶ್ವಿನ್ ಎರಡನೇ ಸ್ಥಾನ ಪಡೆದರು. ಶ್ರೀಲಂಕಾದ ಸ್ಪಿನ್​ ಮಾಂತ್ರಿಕ ಮುತ್ತಯ್ಯ ಮುರಳೀಧರನ್ 87 ಟೆಸ್ಟ್​ ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಅಗ್ರ ಸ್ಥಾನದಲ್ಲಿದ್ಧಾರೆ. ಅಶ್ವಿನ್ 98 ಪಂದ್ಯದಲ್ಲಿ ಈ ದಾಖಲೆ ಬರೆದಿದ್ದಾರೆ.

ಇದನ್ನೂ ಓದಿ: ಕಠಿಣ ಪರಿಶ್ರಮ, ಧೈರ್ಯ, ತಾಳ್ಮೆ - ಸರ್ಫರಾಜ್ ತಂದೆಗೆ ಥಾರ್ ಕಾರು ಗಿಫ್ಟ್: ಆನಂದ್ ಮಹೀಂದ್ರಾ ಘೋಷಣೆ

Last Updated : Feb 18, 2024, 1:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.