ETV Bharat / international

ಮಾಲ್ಡೀವ್ಸ್​ ಸಂಸತ್​ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ: ಅಧ್ಯಕ್ಷ ಮುಯಿಝುಗೆ ಅಗ್ನಿಪರೀಕ್ಷೆ - Maldives Elections

author img

By ETV Bharat Karnataka Team

Published : Apr 21, 2024, 7:04 PM IST

Polling for parliamentary polls underway in Maldives
Polling for parliamentary polls underway in Maldives

ಮಾಲ್ಡೀವ್ಸ್​ನ ಸಂಸತ್​ ಚುನಾವಣೆಗಾಗಿ ಮತದಾನ ನಡೆಯುತ್ತಿದ್ದು, ಫಲಿತಾಂಶಗಳು ಶೀಘ್ರವೇ ಪ್ರಕಟವಾಗುವ ನಿರೀಕ್ಷೆಯಿದೆ.

ಮಾಲೆ : ಮಾಲ್ಡೀವ್ಸ್​ನ ಸಂಸತ್​ ಚುನಾವಣೆಗಾಗಿ ಭಾನುವಾರ ಮತದಾನ ನಡೆಯುತ್ತಿದ್ದು, 368 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 2.8 ಲಕ್ಷಕ್ಕೂ ಹೆಚ್ಚು ಜನರು ಮತ ಚಲಾಯಿಸುವ ನಿರೀಕ್ಷೆಯಿದೆ. ಮಾಲ್ಡೀವ್ಸ್ ಚುನಾವಣಾ ಆಯೋಗದ ಪ್ರಕಾರ ಭಾನುವಾರ ಮಧ್ಯಾಹ್ನ 2 ಗಂಟೆಯವರೆಗೆ ಅಂದಾಜು 52 ಪ್ರತಿಶತದಷ್ಟು ಮತದಾನ ದಾಖಲಾಗಿದೆ ಎಂದು ಸನ್ ಆನ್ ಲೈನ್ ವರದಿ ಮಾಡಿದೆ.

ಮಜ್ಲಿಸ್ ಎಂದೂ ಕರೆಯಲ್ಪಡುವ ಮಾಲ್ಡೀವ್ಸ್ ಸಂಸತ್ತಿನ 93 ಸದಸ್ಯರನ್ನು ಆಯ್ಕೆ ಮಾಡಲು ಮತದಾನ ನಡೆಯುತ್ತಿದೆ. ಒಟ್ಟು 368 ಅಭ್ಯರ್ಥಿಗಳು ಕಣದಲ್ಲಿದ್ದು, ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ (ಪಿಎನ್ ಸಿ) ಮತ್ತು ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ನಡುವೆ ಪ್ರಮುಖ ಸ್ಪರ್ಧೆ ಇದೆ.

ಮತದಾನ ಕೊನೆಗೊಂಡ ನಂತರ ಭಾನುವಾರದ ಕೊನೆಯಲ್ಲಿ ಫಲಿತಾಂಶಗಳು ಪ್ರಕಟವಾಗುವ ನಿರೀಕ್ಷೆಯಿದೆ. ಈ ಚುನಾವಣಾ ಫಲಿತಾಂಶದಿಂದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಸ್ಥಾನದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ.

ಪ್ರಮುಖ ವಿರೋಧ ಪಕ್ಷ ಮತ್ತು ಭಾರತ ಪರ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಜಯ ಸಾಧಿಸಬಹುದು ಎಂದು ಭಾರತ ಸರ್ಕಾರ ಆಶಿಸುತ್ತಿದೆ.

ಮಾಲ್ಡೀವ್ಸ್​ನಲ್ಲಿ ಇಂದು ನಡೆಯುತ್ತಿರುವುದು ದೇಶದ 4 ನೇ ಬಹುಪಕ್ಷೀಯ ಸಂಸದೀಯ ಚುನಾವಣೆಯಾಗಿದೆ. ಇದು ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಭಾರತ ವಿರೋಧಿ ನೀತಿಯನ್ನು, ವಿಶೇಷವಾಗಿ ಹಿಂದೂ ಮಹಾಸಾಗರ ದ್ವೀಪಸಮೂಹದಿಂದ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹೊರಹಾಕುವ ನಿರ್ಧಾರವನ್ನು ಮೊದಲ ಬಾರಿಗೆ ಪರೀಕ್ಷೆಗೆ ಒಳಪಡಿಸಲಿದೆ.

ಮತದಾನಕ್ಕೆ ಮುಂಚಿತವಾಗಿ ಮಾತನಾಡಿದ ಎಂಡಿಪಿಯ ನಾಯಕ ಮತ್ತು ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್, ಕಳೆದ 5 ತಿಂಗಳಲ್ಲಿ ಮುಯಿಝು ಆಡಳಿತವು ದೇಶೀಯ ಮತ್ತು ವಿದೇಶಾಂಗ ನೀತಿಗಳಲ್ಲಿ ವಿಫಲವಾಗಿರುವುದರಿಂದ ಮತ್ತು ಮಾಲ್ಡೀವ್ಸ್ ಜನರು ತಮ್ಮ ಕಣ್ಣೆದುರೇ ಪ್ರಜಾಪ್ರಭುತ್ವ ಮೌಲ್ಯಗಳು ಹಾಳಾಗುತ್ತಿರುವುದನ್ನು ನೋಡುತ್ತಿರುವುದರಿಂದ ತಮ್ಮ ಪಕ್ಷವು ಗೆಲ್ಲುವ ಬಗ್ಗೆ ಆಶಾವಾದಿಯಾಗಿದೆ ಎಂದು ತಿಳಿಸಿದರು.

ಮಾಲ್ಡೀವ್ಸ್​ನಿಂದ ಭಾರತೀಯ ಸೇನಾಪಡೆಗಳನ್ನು ಹೊರಹಾಕುವ ವಿಷಯವನ್ನೇ ಮುಖ್ಯವಾಗಿಟ್ಟುಕೊಂಡು ಅಧಿಕಾರದ ಚುಕ್ಕಾಣಿ ಹಿಡಿದಿರುವ ಮುಯಿಝು ಅವರ ಅಧಿಕಾರಕ್ಕೆ ಈ ಚುನಾವಣೆ ಫಲಿತಾಂಶ ಯಾವುದೇ ಅಡ್ಡಿಯುಂಟು ಮಾಡದಿದ್ದರೂ, ಅವರ ಚೀನಾ ಪರವಾದ ಮತ್ತು ಭಾರತ ವಿರೋಧಿ ಧೋರಣೆಯ ಬಗ್ಗೆ ಜನರ ನಿಲುವು ಪರೋಕ್ಷವಾಗಿ ಬಹಿರಂಗವಾಗಲಿದೆ ಎಂದು ಹೇಳಲಾಗಿದೆ. ಹೀಗಾಗಿ ಭಾರತ ಮತ್ತು ಚೀನಾಗಳೆರಡೂ ಈ ಚುನಾವಣಾ ಫಲಿತಾಂಶವನ್ನು ನಿಕಟವಾಗಿ ಎದುರು ನೋಡುತ್ತಿವೆ.

ಇದನ್ನೂ ಓದಿ : ಒತ್ತೆಯಾಳುಗಳ ಬಿಡುಗಡೆ, ಹೊಸ ಚುನಾವಣೆಗೆ ಆಗ್ರಹಿಸಿ ಬೀದಿಗಿಳಿದ ಇಸ್ರೇಲಿಗರು - Israelis Protest

ETV Bharat Logo

Copyright © 2024 Ushodaya Enterprises Pvt. Ltd., All Rights Reserved.