ETV Bharat / international

ಅಲ್ ಶಿಫಾ ಆಸ್ಪತ್ರೆ ಮೇಲೆ ಮುಂದುವರಿದ ಇಸ್ರೇಲ್ ದಾಳಿ: 140 ಪ್ಯಾಲೆಸ್ಟೈನಿಯರ ಸಾವು - Gaza

author img

By ETV Bharat Karnataka Team

Published : Mar 22, 2024, 5:26 PM IST

ಇಸ್ರೇಲ್ ಸೇನೆಯು ಅಲ್ ಶಿಫಾ ಆಸ್ಪತ್ರೆಯ ಮೇಲಿನ ದಾಳಿಯನ್ನು ಮುಂದುವರಿಸಿದೆ.

140 Palestinians killed in Israel's raid on Gaza's Shifa hospital
140 Palestinians killed in Israel's raid on Gaza's Shifa hospital

ಜೆರುಸಲೇಂ : ಉತ್ತರ ಗಾಜಾದ ಶಿಫಾ ಆಸ್ಪತ್ರೆಯ ಮೇಲೆ ಇಸ್ರೇಲ್ ಸೇನೆಯ ದಾಳಿ ಮುಂದುವರಿದಿದ್ದು, ತನ್ನ ಪಡೆಗಳು 140ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿವೆ ಮತ್ತು ಹಲವಾರು ಹಮಾಸ್ ಹಿರಿಯ ಅಧಿಕಾರಿಗಳನ್ನು ಬಂಧಿಸಿವೆ ಎಂದು ಇಸ್ರೇಲ್ ಮಿಲಿಟರಿ ಹೇಳಿಕೊಂಡಿದೆ. ಕಾರ್ಯಾಚರಣೆಯಲ್ಲಿ ಸುಮಾರು 600 ಪ್ಯಾಲೆಸ್ಟೈನಿಯರನ್ನು ಬಂಧಿಸಲಾಗಿದ್ದು, 140 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ ಎಂದು ಸೇನೆ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ಆಸ್ಪತ್ರೆಯಲ್ಲಿ ಹಲವಾರು ಶಸ್ತ್ರಾಸ್ತ್ರಗಳು ಮತ್ತು ಗುಪ್ತಚರ ದಾಖಲೆಗಳು ಪತ್ತೆಯಾಗಿವೆ ಹಾಗೂ ಆಸ್ಪತ್ರೆ ಸಂಕೀರ್ಣದಲ್ಲಿದ್ದ ಇಸ್ಲಾಮಿಕ್ ಜಿಹಾದ್ ಕಾರ್ಯಕರ್ತರು ಶರಣಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಗಾಜಾದಲ್ಲಿ ಆಡಳಿತ ನಡೆಸುತ್ತಿರುವ ಸಶಸ್ತ್ರ ಗುಂಪು ಹಮಾಸ್ ಮತ್ತು ಸಣ್ಣ ಪ್ಯಾಲೆಸ್ಟೈನ್ ಉಗ್ರಗಾಮಿ ಗುಂಪು ಇಸ್ಲಾಮಿಕ್ ಜಿಹಾದ್​ನ ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಸೇನೆ ತಿಳಿಸಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಾವಿನ ಸಂಖ್ಯೆ 32 ಸಾವಿರದ ಹತ್ತಿರದಲ್ಲಿ: ಗಾಜಾ ಪಟ್ಟಿಯ ಮೇಲೆ ನಡೆಯುತ್ತಿರುವ ಇಸ್ರೇಲಿ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 31,988 ಕ್ಕೆ ಏರಿದೆ ಎಂದು ಗಾಜಾದಲ್ಲಿ ಹಮಾಸ್ ನಡೆಸುತ್ತಿರುವ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ಸೇನೆಯು 65 ಪ್ಯಾಲೆಸ್ಟೈನಿಯರನ್ನು ಕೊಂದಿದೆ ಮತ್ತು 92 ಜನರನ್ನು ಗಾಯಗೊಳಿಸಿದೆ ಎಂದು ಸಚಿವಾಲಯ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ. 2023 ರ ಅಕ್ಟೋಬರ್ 7 ರಂದು ಇಸ್ರೇಲ್ - ಹಮಾಸ್ ಸಂಘರ್ಷ ಪ್ರಾರಂಭವಾದಾಗಿನಿಂದ ಒಟ್ಟು ಸಾವಿನ ಸಂಖ್ಯೆ 31,988 ಕ್ಕೆ ಮತ್ತು ಗಾಯಗೊಂಡವರ ಸಂಖ್ಯೆ 74,188 ಕ್ಕೆ ತಲುಪಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕದನ ವಿರಾಮ ಮಾತುಕತೆ: ಗಾಜಾ ಕದನ ವಿರಾಮ ಒಪ್ಪಂದದ ಕುರಿತು ಮಾತುಕತೆ ನಡೆಸಲು ಇಸ್ರೇಲ್ ತನ್ನ ನಿಯೋಗವನ್ನು ಕತಾರ್ ಗೆ ಕಳುಹಿಸಲು ಸಜ್ಜಾಗಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಇಸ್ರೇಲಿ ಮೊಸ್ಸಾದ್ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಡೇವಿಡ್ ಬಾರ್ನಿಯಾ ನೇತೃತ್ವದ ನಿಯೋಗ ಶುಕ್ರವಾರ ಕತಾರ್​ಗೆ ತೆರಳಲಿದೆ ಎಂದು ಅವರ ಕಚೇರಿ ಗುರುವಾರ ತಿಳಿಸಿದೆ.

ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ವಿಲಿಯಂ ಬರ್ನ್ಸ್, ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರಹ್ಮಾನ್ ಅಲ್ ಥಾನಿ ಮತ್ತು ಈಜಿಪ್ಟ್ ಗುಪ್ತಚರ ಸಚಿವ ಅಬ್ಬಾಸ್ ಕಾಮೆಲ್ ಮಾತುಕತೆಗಳ ನೇತೃತ್ವ ವಹಿಸಲಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. (IANS)

ಇದನ್ನೂ ಓದಿ : ಉಕ್ರೇನ್ ರಾಜಧಾನಿ ಕೀವ್​ ಮೇಲೆ ರಷ್ಯಾ ಕ್ಷಿಪಣಿ ದಾಳಿ: 10 ಜನರಿಗೆ ಗಾಯ - Russia Ukraine War

ETV Bharat Logo

Copyright © 2024 Ushodaya Enterprises Pvt. Ltd., All Rights Reserved.