ETV Bharat / international

ಉಕ್ರೇನ್ ರಾಜಧಾನಿ ಕೀವ್​ ಮೇಲೆ ರಷ್ಯಾ ಕ್ಷಿಪಣಿ ದಾಳಿ: 10 ಜನರಿಗೆ ಗಾಯ - Russia Ukraine War

author img

By ETV Bharat Karnataka Team

Published : Mar 21, 2024, 3:02 PM IST

Eight injured as Russia's missiles hit Kiev
Eight injured as Russia's missiles hit Kiev

ಉಕ್ರೇನ್ ರಾಜಧಾನಿ ಕೀವ್ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ 10 ಜನ ಗಾಯಗೊಂಡಿದ್ದಾರೆ.

ಕೀವ್ : ಉಕ್ರೇನ್ ರಾಜಧಾನಿ ಕೀವ್ ಮೇಲೆ ಗುರುವಾರ ಮುಂಜಾನೆ ರಷ್ಯಾದ ಕ್ಷಿಪಣಿಗಳು ಅಪ್ಪಳಿಸಿದ ಪರಿಣಾಮ ಕನಿಷ್ಠ ಹತ್ತು ಮಂದಿ ಗಾಯಗೊಂಡಿದ್ದಾರೆ. "ದಾಳಿಯಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ. ವೈದ್ಯರು ಸ್ಥಳದಲ್ಲೇ ಅವರಿಗೆ ಚಿಕಿತ್ಸೆ ನೀಡಿದರು" ಎಂದು ಕೀವ್ ಮೇಯರ್ ವಿಟಾಲಿ ಕ್ಲಿಟ್ಶ್ಕೊ ಟೆಲಿಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ಉಕ್ರಿನ್ ಫಾರ್ಮ್ ಮಾಧ್ಯಮ ವರದಿ ಮಾಡಿದೆ.

ಇದು ಇತ್ತೀಚಿನ ವಾರಗಳಲ್ಲಿ ನಡೆದ ಮೊದಲ ದೊಡ್ಡ ದಾಳಿಯಾಗಿದ್ದು, ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳನ್ನು ನಗರದ ಮೇಲೆ ಹಾರಿಸಿದೆ ಎಂದು ಅದರ ಮಿಲಿಟರಿ ಆಡಳಿತದ ಮುಖ್ಯಸ್ಥ ಸೆರ್ಹಿ ಪೊಪ್ಕೊ ಹೇಳಿದ್ದಾರೆ. "44 ದಿನಗಳ ವಿರಾಮದ ನಂತರ ಶತ್ರು ಪಡೆಗಳು ಕೈವ್ ಮೇಲೆ ಮತ್ತೊಂದು ಕ್ಷಿಪಣಿ ದಾಳಿ ಪ್ರಾರಂಭಿಸಿದ್ದಾರೆ. ಎಲ್ಲಾ ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಿವೆ. ಕ್ಷಿಪಣಿ ದಾಳಿಯ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ." ಎಂದು ಅವರು ತಿಳಿಸಿದರು.

ನಗರದಾದ್ಯಂತ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ ಎಂದು ಮೇಯರ್ ವಿಟಾಲಿ ಕ್ಲಿಟ್ಶ್ಕೊ ಹೇಳಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯಲಾದ ಇಬ್ಬರಲ್ಲಿ 11 ವರ್ಷದ ಬಾಲಕಿಯೂ ಸೇರಿದ್ದಾಳೆ ಎಂದು ನಗರದ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಯ ನಂತರ ಕೀವ್ ನಗರದಲ್ಲಿ ಮೂರು ಗಂಟೆಗಳ ಕಾಲ ಏರ್ ಅಲರ್ಟ್​ ಘೋಷಿಸಲಾಗಿತ್ತು. ನಗರದಾದ್ಯಂತ ಹಲವಾರು ವಸತಿ ಕಟ್ಟಡಗಳು, ಕೈಗಾರಿಕಾ ತಾಣಗಳು ಮತ್ತು ಶಾಲೆಗಳಿಗೆ ಕ್ಷಿಪಣಿ ಅವಶೇಷಗಳು ಅಪ್ಪಳಿಸಿವೆ ಎಂದು ಕ್ಲಿಟ್ಶ್ಕೊ ಹೇಳಿದರು.

ರಷ್ಯಾ ಉಡಾಯಿಸಿದ ಎಲ್ಲ ಕ್ಷಿಪಣಿ ಹೊಡೆದುರುಳಿಸಿದ ಉಕ್ರೇನ್​: ರಾಜಧಾನಿಯ ಕಡೆಗೆ ರಷ್ಯಾ ಹಾರಿಸಿದ ಎಲ್ಲಾ 31 ಕ್ಷಿಪಣಿಗಳನ್ನು ಉಕ್ರೇನ್​ನ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ ಎಂದು ವಾಯುಪಡೆಯ ಕಮಾಂಡರ್ ತಿಳಿಸಿದ್ದಾರೆ. ರಷ್ಯಾದ ಮಿಲಿಟರಿ ಕಾರ್ಯತಂತ್ರದ ಬಾಂಬರ್​ಗಳನ್ನು ಬಳಸಿದೆ ಮತ್ತು ತನ್ನ ಭೂಪ್ರದೇಶದಿಂದ ಕೆಲವು ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಪೊಪ್ಕೊ ಹೇಳಿದರು.

ಶೆವ್ಚೆಂಕಿವ್​​ಸ್ಕಿಯ ಕೇಂದ್ರ ಜಿಲ್ಲೆಯ ಬಹುಮಹಡಿ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ. ಈ ಪ್ರದೇಶದ ಮೇಲೆ ನಡೆದ ಕ್ಷಿಪಣಿ ದಾಳಿಯಿಂದ ಹಲವಾರು ಮನೆಗಳಿಗೆ ಹಾನಿಯಾಗಿದ್ದು, ಅನೇಕ ಕಾರುಗಳು ಹೊತ್ತಿ ಉರಿದಿವೆ. 2022 ರ ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ್ದು, ಅದು ಈಗಲೂ ಮುಂದುವರೆದಿದೆ. ಯುದ್ಧದಿಂದ ಎರಡೂ ಕಡೆಗಳಲ್ಲಿ ಸಾವಿರಾರು ಜನ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ : 3ನೇ ಮಹಾಯುದ್ಧಕ್ಕೆ ಒಂದೇ ಹೆಜ್ಜೆ ದೂರ: ನ್ಯಾಟೋಗೆ ಪುಟಿನ್​ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.