ನೀವೇನಾದರೂ ಫೇರ್​ನೆಸ್​​ ಕ್ರೀಂಗಳ ಬಳಕೆ ಮಾಡ್ತಿದ್ದೀರಾ?: ದೇಶದಲ್ಲಿ ಹೆಚ್ಚುತ್ತಿದೆಯಂತೆ ಕಿಡ್ನಿ ಸಮಸ್ಯೆ, ಬಳಕೆ ಮಾಡೋ ಮುನ್ನ ಯೋಚಿಸಿ - use of skin fairness creams

author img

By IANS

Published : Apr 15, 2024, 1:15 PM IST

use-of-skin-fairness-creams-is-driving-a-surge-in-kidney-problems-in-india

ಮುಖದ ಅಂದ ಹೆಚ್ಚಿಸುವ ಫೇರ್​ನೆಸ್​ ಕ್ರೀಂಗಳು ಆರೋಗ್ಯಕ್ಕೆ ಸದ್ದಿಲ್ಲದೇ ಕುತ್ತು ತರುತ್ತಿವೆಯಂತೆ ಹೀಗಂತಾ ಅಧ್ಯಯನವೊಂದರಲ್ಲಿ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಬೇಕಿದೆ.

ನವದೆಹಲಿ: ಫೇರ್​​ನೆಸ್​ ಕ್ರೀಂಗಳ ಬಳಕೆಯು ಭಾರತದಲ್ಲಿ ಮೂತ್ರಪಿಂಡದ ಸಮಸ್ಯೆಗಳ ಏರಿಕೆಗಗೆ ಕಾರಣವಾಗುತ್ತಿದೆ ಎಂಬ ಆತಂಕಕಾರಿ ವಿಷಯವೊಂದು ಹೊಸ ಅಧ್ಯಯನದಲ್ಲಿ ಬಯಲಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಫೇರ್​ನೆಸ್​ ಕ್ರೀಂಗಳ ಹಾವಳಿ ಹೆಚ್ಚಿದ್ದು, ಸಮಾಜವೂ ಕೂಡ ಇಂತಹ ಫೇರ್​ನೆಸ್​ ಕ್ರೀಂಗಳ ವ್ಯಾಮೋಹಕ್ಕೆ ಹೆಚ್ಚು ಒಳಗಾಗಿದೆ. ಆದರೆ, ಈ ಫೇರ್​ನೆಸ್​​ ಕ್ರೀಂಗಳಲ್ಲಿ ಹೆಚ್ಚಿನ ಪ್ರಮಾಣದ ಪಾದರಸ ಇರುವುದರಿಂದ ಇವು ಕಿಡ್ನಿ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಈ ಅಧ್ಯಯನವನ್ನು ಕಿಡ್ನಿ ಇಂಟರ್ನ್ಯಾಷನಲ್​ ಎಂಬ ವೈದ್ಯಕೀಯ ಜರ್ನಲ್​​ನಲ್ಲಿ ಪ್ರಕಟಿಸಲಾಗಿದೆ. ಅಧಿಕ ಪಾದರಸ ಅಂಶ ಹೊಂದಿರುವ ಫೇರ್​​ನೆಸ್​ ಕ್ರೀಮ್​ಗಳ ಬಳಕೆಯು ಮೆಂಬರೇನಸ್ ನೆಫ್ರೋಪತಿ (ಎಂಎನ್​) ಪ್ರಕರಣಗಳಿಗೆ ಕಾರಣವಾಗುತ್ತದೆ. ಇದು ಕಿಡ್ನಿಯ ಫಿಲ್ಟರ್​ ಅನ್ನು ಹಾನಿ ಮಾಡಿ, ಪ್ರೊಟೀನ್​ ಸೋರಿಕೆಗೆ ಕಾರಣವಾಗುತ್ತದೆ. ಎಂಎನ್​ ಎಂಬುದು ಸ್ವಯಂ ನಿರೋಧಕ ರೋಗವಾಗಿದ್ದು, ಇದು ನೆಪ್ರೊಟಿಕ್​ ಸಿಂಡ್ರೋಮ್​​ ಅಂದರೆ ದೇಹದಲ್ಲಿ ಹೆಚ್ಚಿನ ಪ್ರೋಟಿನ್​ ಅನ್ನು ಮೂತ್ರದ ಮೂಲಕ ಹೊರ ಹಾಕುವ ಕಿಡ್ನಿ ಸಮಸ್ಯೆ ಆಗಿದೆ.

ದೇಹಕ್ಕೆ ಸೇರುತ್ತಿದೆ ಪಾದರಸ: ಪಾದರಸವೂ ತ್ವಚೆಯಲ್ಲಿ ಸುಲಭವಾಗಿ ಸೇರುತ್ತದೆ. ಇದು ಮೂತ್ರಪಿಂಡದ ಫಿಲ್ಟರ್​​ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನೆಪ್ರೊಟಿಕ್​ ಸಿಂಡ್ರೋಮ್​ ಪ್ರಕರಣಗಳು ಏರಿಕೆ ಕಾರಣವಾಗುತ್ತಿದೆ ಎಂದು ಈ ಅಧ್ಯಯನದ ಸಂಶೋಧಕರಲ್ಲಿ ಒಬ್ಬರಾದ ಕೇರಳದ ಕೊಟ್ಟಕಲ್​ನ ಅಸ್ಟರ್​ ಮಿಮ್ಸ್​ ಆಸ್ಪತ್ರೆಯ ನೆಪ್ರೋಲಾಜಿ ವಿಭಾಗದ ಡಾ ಸಜೀಶ್​ ಸಿವದಾಸ್​ ತಿಳಿಸಿದ್ದಾರೆ.

ಇಂತಹ ಕ್ರೀಮ್​ಗಳು ಭಾರತದಲ್ಲಿ ಅನಿಯಂತ್ರಿತ ಮಾರುಕಟ್ಟೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ಉತ್ತಮ ಫಲಿತಾಂಶ ಪಡೆಯಬಹುದು ಎಂಬ ಭರವಸೆಯನ್ನು ಕೂಡ ನೀಡುತ್ತವೆ. ಆದರೆ ಇವುಗಳು ನಮ್ಮ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿ ಬೆಲೆ ತೆರುವಂತೆ ಮಾಡುತ್ತವೆ. ಅಂದ ಹಾಗೆ ಅಧ್ಯಯನ 2021ರ ಜುಲೈ ಮತ್ತು ಸೆಪ್ಟೆಂಬರ್​ 2023ರ ನಡುವೆ ನಡೆಲಾಯಿತು. ಈ ಸಂಶೋಧನೆ ವೇಳೆ 22 ಎಂಎನ್​ ಪ್ರಕರಣಗಳನ್ನು ಪರೀಕ್ಷಿಸಲಾಗಿದೆ.

ಅಸ್ಟರ್​​ ಮಿಮ್ಸ್​ ಆಸ್ಪತ್ರೆಯಲ್ಲಿ ಆಯಾಸ, ಸೌಮ್ಯ ಲಕ್ಷಣದ ಎಡಿಮಾ ಮತ್ತು ಮೂತ್ರದಲ್ಲಿನ ನೊರೆಯಂತಹ ಲಕ್ಷಣಗಳನ್ನು ಹೊಂದಿರುವ ರೋಗಿಗಳನ್ನು ಪರೀಕ್ಷೆ ನಡೆಸಲಾಯಿತು. ಇದರಲ್ಲಿ ಮೂವರು ರೋಗಿಗಳು ಎಡಿಮಾ ಹೊಂದಿರುವುದು ಪತ್ತೆಯಾಗಿತ್ತು. ಮತ್ತೊಂದು ಗಮನಿಸಬೇಕಾದ ಅಂಶ ಎಂದರೆ, ಎಲ್ಲ ರೋಗಿಗಳಲ್ಲಿ ಮೂತ್ರದಲ್ಲಿ ಪ್ರೋಟಿನ್​ ಮಟ್ಟ ಹೆಚ್ಚಿರುವುದು ಕಂಡು ಬಂದಿತ್ತು. ರೋಗಿಗಳಲ್ಲಿ ಒಬ್ಬರು ಮಿದುಳಿನಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯಾದ ಸೆರೆಬ್ರಲ್​ ವೇನ್​ ತ್ರೊಂಬೊಸಿಸ್​​ ನಿಂದ ಬಳಲುವಂತಾಗಿತ್ತು.

ಅಧ್ಯಯನದ ಫಲಿತಾಂಶದಲ್ಲಿ ಶೇ 68ರಷ್ಟು ಮಂದಿ ಅಂದರೆ 22ರಲ್ಲಿ 18 ಮಂದಿ 1 ಪ್ರೊಟೀನ್​ನಂತಹ ನ್ಯೂರಲ್​ ಎಪಿಡರ್ಮಲ್​ ಬೆಳವಣಿಗೆ ಹೊಂದಿರುವುದು ಕಂಡಿದೆ. ಇದು ಕೂಡ ಎಂಎನ್​ನೊಂದಿಗೆ ಸಂಬಂಧ ಹೊಂದಿದೆ. ಇನ್ನು 15 ರೋಗಿಗಳು ಈ ಲಕ್ಷಣಗಳನ್ನು ಹೊಂದುವ ಮೊದಲು ಫೇರ್​ನೆಸ್​ ಕ್ರೀಂ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಉಳಿದ ಮಂದಿ ಸಾಂಪ್ರದಾಯಿಕ ದೇಶಿಯ ಔಷಧಗಳನ್ನು ಬಳಕೆ ಮಾಡಿರುವ ಇತಿಹಾಸ ಹೊಂದಿದ್ದಾರೆ.

ಸಾರ್ವಜನಿಕ ಆರೋಗ್ಯ ಬಿಕ್ಕಟ್ಟು: ಇದು ಕೇವಲ ಸ್ಕೀನ್​ಕೇರ್ ಅಥವಾ ಕಿಡ್ನಿ ಆರೋಗ್ಯದ ವಿಷಯವಲ್ಲ. ಇದು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಬಿಕ್ಕಟ್ಟಾಗಿದೆ. ತ್ವಚೆ ಮೇಲೆ ಪಾದರಸ ಹಚ್ಚಿದರೆ ಅದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಿ ಹಾನಿ ಮಾಡುತ್ತದೆ. ಅದನ್ನೇ ನಾವು ಸೇವಿಸುವುದನ್ನು ಕಲ್ಪಿಸಿಕೊಳ್ಳಿ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಅಲ್ಲದೇ, ಸಾರ್ವಜನಿಕರಿಗೆ ಆರೋಗ್ಯ ರಕ್ಷಣೆ ನೀಡುವ ನಿಟ್ಟಿನಲ್ಲಿ ಇಂತಹ ಹಾನಿಕಾರಕ ಉತ್ಪನ್ನಗಳ ಕುರಿತು ತಕ್ಷಣಕ್ಕೆ ಕ್ರಮಕ್ಕೆ ಮುಂದಾಬೇಕು. ಈ ಸಂಬಂಧ ಜಾಗೃತಿ ಮೂಡಿಸಬೇಕು ಎಂದು ಸಂಶೋಧಕರು ಅಧ್ಯಯನದಲ್ಲಿ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ದೇಶದ ಮೇಲೆ ಹೆಚ್ಚುತ್ತಿದೆ ಎನ್​ಸಿಡಿ ರೋಗಗಳ ಹೊರೆ; ಕಾರಣ ಇದು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.