ಮೊಬೈಲ್​ ಚಟದಿಂದ ಮಕ್ಕಳಲ್ಲಿ ಹೆಚ್ಚಿದ ಅಪಾಯ: ಅಧ್ಯಯನ

author img

By ETV Bharat Karnataka Team

Published : Feb 19, 2024, 10:38 AM IST

mobile addiction has caused physical mental and social harms

ಮೊಬೈಲ್​ ಫೋನ್​ಗಳು ಇತ್ತೀಚಿನ ಪೀಳಿಗಯೆ ಜನರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದನ್ನು ಮಕ್ಕಳ ಮೇಲೆ ಅಧ್ಯಯನ ನಡೆಸಿ ತಿಳಿದುಕೊಳ್ಳಲಾಗಿದೆ.

ನವದೆಹಲಿ: ಮೊಬೈಲ್​ ಎಂಬುದು ಇಂದು ನಮ್ಮ ಜೀವನದ ಪ್ರಮುಖ ಅಂಗವಾಗಿದೆ. ಇದರ ಪ್ರಾಮುಖ್ಯತೆ ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ಆದಾಗ್ಯೂ ಹೆಚ್ಚಿನ ಬಳಕೆಯಿಂದ ಅಪಾಯ ಇರುವುದನ್ನು ತಳ್ಳಿ ಹಾಕಲು ಸಾಧ್ಯವಾಗಲ್ಲ. ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳು ಇದರ ಚಟಕ್ಕೆ ಬಲಿಯಾಗುತ್ತಿದ್ದು, ಇದು ಅವರಲ್ಲಿ ಮಾನಸಿಕ ಮತ್ತು ಸಾಮಾಜಿಕ ಹಾನಿಗೆ ಕಾರಣವಾಗುತ್ತಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.

ಈ ಅಧ್ಯಯನವನ್ನು ಇಂಟರ್​ನ್ಯಾಷಲ್​ ಜರ್ನಲ್​ ಆಫ್​ ಹೆಲ್ತ್​ ಸೈನ್ಸ್​ ಅಂಡ್​ ರಿಸರ್ಚ್​ನಲ್ಲಿ ಪ್ರಕಟಿಸಲಾಗಿದೆ. ಈ ಅಧ್ಯಯನಕ್ಕಾಗಿ ದೆಹಲಿಯ 250 ಸರ್ಕಾರಿ ಮತ್ತು 250 ಖಾಸಗಿ ಶಾಲೆಯ ಹದಿಹರೆಯದವರನ್ನು ಬಳಸಿಕೊಳ್ಳಲಾಗಿದೆ.

ದೆಹಲಿಯ ಕಲಾವತಿ ಸರನ್ ಮಕ್ಕಳ ಆಸ್ಪತ್ರೆಯ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಮೊಬೈಲ್ ಫೋನ್ ಚಟಕ್ಕೆ ಸಂಬಂಧಿಸಿದಂತೆ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಹದಿಹರೆಯದವರಲ್ಲಿ ಅಪಾಯದ ವ್ಯತ್ಯಾಸ ಕಂಡು ಬಂದಿದೆ. ಬಾಲಕರು ಮತ್ತು ಬಾಲಕಿಯರ ನಡುವೆ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಆದರೆ, ಸರ್ಕಾರಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಹದಿಹರೆಯದವರಲ್ಲಿ ಮೊಬೈಲ್ ಫೋನ್ ಚಟದಲ್ಲಿ ಮಾನಸಿಕ ಅಪಾಯದ ವ್ಯತ್ಯಾಸ ಕಂಡು ಬಂದಿದೆ.

ಸುಲಭವಾಗಿ ಕಡಿಮೆ ದರದಲ್ಲಿ ಮೊಬೈಲ್​ ಫೋನ್​ಗಳು ಲಭ್ಯತೆಯು ಕೋವಿಡ್ ಸಾಂಕ್ರಾಮಿಕತೆ ಸಂದರ್ಭದಲ್ಲಿ ಹದಿಹರೆಯದವರು ಮತ್ತು ಮಕ್ಕಳಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಹೆಚ್ಚಿಸಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಬಹುತೇಕ ಮಕ್ಕಳು ಪರಸ್ಪರ ಮಾತನಾಡುವುದಿಲ್ಲ. ಇದು ಅವರಲ್ಲಿ ಸಾಮಾಜಿಕ ಸಂವಹನ ಕೊರತೆ ಮೂಡಿಸಿದೆ. ಈ ಅಂಶವೂ ಹೆಚ್ಚಿನದಾಗಿ ಖಾಸಗಿ ಶಾಲಾ ಮಕ್ಕಳಲ್ಲಿ ಕಂಡು ಬಂದಿದೆ. ಅವರಲ್ಲಿ ಹೆಚ್ಚಿನ ಆನ್​ಲೈನ್​ ಅಧ್ಯಯನ ಮತ್ತು ಜಾಗತಿಕ ಘಟನೆಗಳ ಪ್ರವೇಶಗಳು ಕಂಡು ಬಂದಿದೆ. ಅಷ್ಟೇ ಅಲ್ಲದೆ, ಹೆಚ್ಚಿನ ಮತ್ತು ದೀರ್ಘಕಾಲಿಕ ಮೊಬೈಲ್​ ಬಳಕೆ ಮಕ್ಕಳು ಮತ್ತು ವಯಸ್ಕರರಲ್ಲಿ ಕುತ್ತಿಗೆ ಮತ್ತು ಕಣ್ಣಿನ ಮೇಲೆ ಒತ್ತಡ ಹಾಕಿ ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ದೆಹಲಿಯ ಸಿಕೆ ಬಿರ್ಲಾ ಆಸ್ಪತ್ರೆಯ ಮಕ್ಕಳ ತಜ್ಞರಾದ ಡಾ ಪೂನಂ ಸಿದನ ತಿಳಿಸಿದ್ದಾರೆ.

ದೀರ್ಘಕಾಲದ ಮೊಬೈಲ್​ ಬಳಕೆ ಬೆನ್ನು ನೋವು, ನಿದ್ರೆಗೆ ತೊಡಕು, ಜಢ ಜೀವನಶೈಲಿಯಂತಹ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಸ್ಥೂಲಕಾಯತೆ, ಮಧುಮೇಹ ಮತ್ತು ರಕ್ತದೊತ್ತಡ ಮತ್ತು ಕ್ಯಾನ್ಸರ್​​ಗೆ ಕಾರಣವಾಗುತ್ತದೆ.

ಮಕ್ಕಳಲ್ಲಿ ಇದೇ ವೇಳೆ ಯುವವಯಸ್ಸಿನ ಪೀಳಿಗೆಯವರು ಸಾಮಾಜಿಕ ಸಂವಹನ ಮತ್ತು ಹೊರಾಂಗಣ ಚಟುವಟಿಕೆಗಳನ್ನು ಮರೆತು ಮನೋವೈಜ್ಞಾನಿಕ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಖಿನ್ನತೆ, ಆತಂಕ, ಕಡಿಮೆ ಆತ್ಮಸ್ಥೈರ್ಯ ಮತ್ತು ಸಾಮಾಜಿಕ ಪ್ರತ್ಯೇಕೀರಣವೂ ಮೊಬೈಲ್​ ಫೋನ್​​ ಚಟದೊಂದಿಗೆ ಸಂಬಂಧ ಹೊಂದಿದೆ.

ಮೊಬೈಲ್ ಫೋನ್‌ಗಳ ಅತಿಯಾದ ಬಳಕೆಯು ಅಧ್ಯಯನದ ಸಮಯ, ಏಕಾಗ್ರತೆ ಮತ್ತು ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ. ಇದು ಅವರ ಶೈಕ್ಷಣಿಕ ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅನೇಕ ಅಧ್ಯಯನಗಳು ಸಾಬೀತು ಮಾಡಿವೆ. ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಿನ ಸಮಯ ಕಳೆಯುವ ಹದಿಹರೆಯದವರು ಸೈಬರ್ - ಬೆದರಿಕೆ, ಆನ್‌ಲೈನ್ ಕಿರುಕುಳಕ್ಕೆ ಗುರಿಯಾಗಬಹುದು.

ಪೋಷಕರು ತಮ್ಮ ಮಕ್ಕಳ ಆನ್‌ಲೈನ್ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವ ಶಿಕ್ಷಣದ ಅಗತ್ಯವಿದೆ. ಅವರ ಜೊತೆಗೆ ಸಾಮಾಜಿಕ ಸಂವಹನ ನಿರ್ವಹಿಸಿ, ಹೇಗೆ ಸುರಕ್ಷಿತವಾಗಿ ತಂತ್ರಜ್ಞಾನ ಬಳಕೆ ಮಾಡಬೇಕು ಎಂಬುದನ್ನು ತಿಳಿಸಬೇಕಿದೆ ಎಂದು ಡಾ ಪೂನಂ ತಿಳಿಸಿದ್ದಾರೆ.

ಮಕ್ಕಳಿಗೆ ಈ ಕುರಿತು ಶಿಕ್ಷಣವನ್ನು ಕುರಿತು ತಿಳಿವಳಿಕೆ ಇಲ್ಲದಿರುವ ಕುಟುಂಬಕ್ಕೆ ಶಾಲೆಗಳು ಅತಿಯಾದ ಸ್ಕ್ರೀನ್​ ಟೈಂನ ಹಾನಿಕಾರಕ ಪರಿಣಾಮದಿಂದ ಹೇಗೆ ತಮ್ಮನ್ನು ತಾವು ರಕ್ಷಿಸಬೇಕು ಎಂಬುದನ್ನು ತಿಳಿಸಿ ಹೇಳುವ ಕೆಲಸವಾಗಬೇಕಿದೆ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಹದಿಹರೆಯದಲ್ಲಿ ಎದುರಾಗುವ ಬೆದರಿಕೆಗಳಿಂದ ಮಾನಸಿಕ ಸಮಸ್ಯೆಗಳು ಸೃಷ್ಟಿ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.