ಖಿನ್ನತೆಗೆ ವ್ಯಾಯಾಮವೇ ಪರಿಣಾಮಕಾರಿ ಚಿಕಿತ್ಸೆ; ಅಧ್ಯಯನ

author img

By ETV Bharat Karnataka Team

Published : Feb 20, 2024, 3:47 PM IST

exercise-is-effective-therapy-for-depression

ಖಿನ್ನತೆಯಿಂದ ಬಳಲುವವರ ಚಿಕಿತ್ಸೆಯಲ್ಲಿ ವ್ಯಾಯಾಮ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ ಎಂದು ಅಧ್ಯಯನ ತಿಳಿಸಿದೆ.

ಹೈದರಾಬಾದ್​: ಅನೇಕ ಬಾರಿ ನಾವು ವ್ಯಾಯಾಮವನ್ನು ದೈಹಿಕ ಚಟುವಟಿಕೆ ಎಂದು ಭಾವಿಸುತ್ತೇವೆ. ಆದರೆ, ಈ ವ್ಯಾಯಾಮವು ಖಿನ್ನತೆಯಿಂದ ಬಳಲುತ್ತಿರುವರಿಗೆ ಪರಿಣಾಮಕಾರಿ ಚಿಕಿತ್ಸೆಯ ರೀತಿ ಕಾರ್ಯ ನಿರ್ವಹಿಸುತ್ತದೆ ಎಂದು ಇತ್ತೀಚಿಗೆ ನಡೆಸಿದ ಅಧ್ಯಯನವೊಂದು ತಿಳಿಸಿದೆ. ಈ ವ್ಯಾಯಾಮದ ಚಟುವಟಿಕೆಯಲ್ಲಿ ನಡೆಯುವುದು, ಯೋಗ, ಓಡುವುದು ಮತ್ತು ಭಾರ ಎತ್ತುವಂತಹ ಚಟುವಟಿಕೆಯನ್ನು ಹೊಂದಿದ್ದು, ಇವು ಆರೋಗ್ಯ ನಿರ್ವಹಣೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿವೆ.

ಖಿನ್ನತೆ ಎಂಬುದು ಹಲವು ವಿಧದಲ್ಲಿ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದು ಅನೇಕ ವಿಷಯದ ಕುರಿತು ನಮ್ಮಲ್ಲಿ ಇರುವ ಆಸಕ್ತಿಯನ್ನು ಕೊಲ್ಲುವುದರ ಜೊತೆಗೆ ಏಕಾಂಗಿಯಾಗಿರಬೇಕು ಎಂಬ ಭಾವನೆ ಮೂಡಿಸುತ್ತದೆ. ಅಷ್ಟೇ ಅಲ್ಲದೇ, ಹೃದ್ರೋಗ, ಆತಂಕ ಮತ್ತು ಕ್ಯಾನ್ಸರ್​ನಂತಹ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತದೆ. ಇದಕ್ಕಾಗಿ ಅನೇಕ ಮಂದಿ ಔಷಧಿ ಮತ್ತು ಸೈಕೋಥೆರಪಿ ಚಿಕಿತ್ಸೆ ಮೊರೆ ಹೋಗುತ್ತಾರೆ. ಆದರೆ ಕೆಲವರಿಗೆ ಇದು ಉತ್ತಮವಾಗಿ ಕಾರ್ಯ ನಿರ್ವಹಿಸುವುದಿಲ್ಲ. ಸಂಶೋಧಕರು ಹೇಳುವಂತೆ ಔಷಧ ಮತ್ತು ಸೈಕೋಥೆರಪಿಯ ಚಿಕಿತ್ಸೆ ಜೊತೆಗೆ ವ್ಯಾಯಾಮವೂ ಪರಿಣಾಮಕಾರಿಯಾಗಿದ್ದು, ಉತ್ತಮ ಫಲಿತಾಂಶ ನೀಡುತ್ತದೆ. ಅಲ್ಲದೇ, ವಾಕಿಂಗ್​ ಹೊರತಾದ ಹೆಚ್ಚು ಹೆಚ್ಚು ತೀವ್ರತರ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳುವುದು ಕೂಡ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಅದ್ಭುತ ಫಲಿತಾಂಶವನ್ನು ಹೊಂದಿದೆ.

ವ್ಯಾಯಾಮ ಎಷ್ಟು ಪ್ರಯೋಜನಕಾರಿ? ವ್ಯಾಯಾಮವು ದೇಹವನ್ನು ಬಲಯುತಗೊಳಿಸುವ ಜೊತೆಗೆ ಮನಸನ್ನು ಕೂಡ ಸಬಲ ಮಾಡುತ್ತದೆ. ವ್ಯಾಯಾಮದ ವೇಳೆ ಮೆದುಳಿನಿಂದ ಎಂಡೊರ್ಫಿನ್​ ಬಿಡುಗಡೆಯಾಗುತ್ತದೆ. ಇದು ನೈಸರ್ಗಿಕವಾಗಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿ, ಆರಾಮದಾಯಕವಾಗಿರುವಂತೆ ಮಾಡುತ್ತದೆ.

ಖಿನ್ನತೆಯಲ್ಲಿದ್ದಾಗ ನಕಾರಾತ್ಮಕ ಭಾವನೆಗಳು ಬೆಂಬಿಡದೇ ಕಾಡುತ್ತವೆ. ಇದು ಮತ್ತಷ್ಟು ಕೆಟ್ಟದಾಗಿ ಬಳಲುವಂತೆ ಮಾಡುತ್ತದೆ. ಇಂತಹ ಚಿಂತನೆಯಲ್ಲಿ ಮುಳುಗುವುದಕ್ಕಿಂತ ಮನಸ್ಸನ್ನು ಬೇರೆ ಕಡೆ ತಿರುಗಿಸಿ ನಕಾರಾತ್ಮಕ ಚಿಂತನೆಯನ್ನು ಕಡಿಮೆ ಮಾಡಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ವ್ಯಾಯಾಮವು ಪ್ರಯೋಜನಕಾರಿಯಾಗಿದೆ.

ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಭಾವನಾತ್ಮಕವಾಗಿ ನಿಯಂತ್ರಣ ಸಾಧಿಸಬಹುದು. ಇದರ ಜೊತೆಗೆ ಆತ್ಮಸ್ಥೈರ್ಯ ಕೂಡ ವೃದ್ಧಿಸುತ್ತದೆ.

ಹೊರಾಂಗಿಣ ವ್ಯಾಯಾಮ ಚಟುವಟಿಕೆಯಲ್ಲಿ ತೊಡಗುವುದರಿಂದ ಸಾಮಾಜಿಕ ಬಂಧ ಕೂಡ ಸೃಷ್ಟಿಯಾಗುತ್ತದೆ. ನಿಮ್ಮ ಸುತ್ತಲಿನ ಜನರು ನಗುತ್ತಾ ಮಾತನಾಡಿಸುವುದರಿಂದ ಕೂಡ ಮನಸ್ಥಿತಿ ಬದಲಾಗುತ್ತದೆ.

ತೀವ್ರತರದ ವ್ಯಾಯಾಮದ ಹೊರತಾಗಿ ವಾಕಿಂಗ್​ ಮತ್ತು ಯೋಗದಂತಹ ಹಗುರ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಕೂಡ ಖಿನ್ನತೆಯಿಂದ ಬಳಲುವವರಿಗೆ ಪ್ರಯೋಗಿಕವಾಗಿ ಪರಿಣಾಮಕಾರಿ ಚಿಕಿತ್ಸೆಯಾಗಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಡಯಟ್​ನಲ್ಲಿ ಅತಿ ಹೆಚ್ಚು ಪ್ರೋಟೀನ್​ ಸೇವಿಸುವುದು ಕೂಡ ಅಪಾಯ: ಅಧ್ಯಯನದಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.