ETV Bharat / entertainment

ಹಳ್ಳಿಕಾರ್ ಒಡೆಯನ ಭರ್ಜರಿ ಬಿಗ್​​ ಬಾಸ್​​ ಜರ್ನಿ; ವರ್ತೂರ್​ ಸಂತೋಷ್​​​ ನಿಮ್ಮ ಮೆಚ್ಚಿನ ಸ್ಪರ್ಧಿಯೇ?

author img

By ETV Bharat Karnataka Team

Published : Jan 31, 2024, 4:43 PM IST

ಹಳ್ಳಿಕಾರ್ ಒಡೆಯ ಖ್ಯಾತಿಯ ವರ್ತೂರ್​ ಸಂತೋಷ್ ಬಿಗ್​​ ಬಾಸ್​​ ಪಯಣ ಹೀಗಿದೆ..

varthur santhosh
ಬಿಗ್​​​ ಬಾಸ್​ ವರ್ತೂರ್​ ಸಂತೋಷ್​​​

ಬಿಗ್​ ಬಾಸ್​​ ಫಿನಾಲೆಯಂದು ಐದು ಸ್ಪರ್ಧಿಗಳಲ್ಲಿ ಮೊದಲಿಗರಾಗಿ ಮನೆಯಿಂದ ಹೊರಗೆ ಬಂದ ವರ್ತೂರ್​ ಸಂತೋಷ್​​ ಮೊಗದಲ್ಲಿನ ಮುಗ್ಧತೆ ಕಿಂಚಿತ್ತೂ ಮಾಸಿರಲಿಲ್ಲ. ಆದರೆ, ಕತ್ತಿನಲ್ಲಿದ್ದ ಹುಲಿಯುಗುರು ಪೆಂಡೆಂಟ್​ ಮಾಯವಾಗಿತ್ತು!. ಕಳೆದುಕೊಂಡಿದ್ದು ಒಂದು ಹುಲಿಯುಗುರು ಶೈಲಿಯ ಪೆಂಡೆಂಟ್, ಆದರೆ ಈ ಮನೆಯಲ್ಲಿ ವರ್ತೂರ್ ಗಳಿಸಿಕೊಂಡಿದ್ದಕ್ಕೆ ಲೆಕ್ಕವಿಲ್ಲ. ಹಳ್ಳಿಕಾರ್ ಒಡೆಯ ಎಂಬ ಬಿರುದನ್ನು ಗಳಿಸಿಕೊಂಡಿದ್ದ, ಹಳ್ಳಿಕಾರ್ ತಳಿಯ ಹೈನುಗಳನ್ನು ಸಲುಹುತ್ತಿದ್ದ ವರ್ತೂರ್​​ ಸಂತೋಷ್​​ ಬಿಗ್‌ ಬಾಸ್‌ ರೇಸ್‌ಗೆ ಬಂದಿದ್ದು ಹಲವರ ಖುಷಿಗೆ ಕಾರಣವಾಗಿತ್ತು. ಆದರೆ ಈ ಮನೆಯೊಳಗೆ ಹಲವು ಏರಿಳಿತಗಳನ್ನು ಅವರು ಕಂಡಿದ್ದಾರೆ.

ಅಸಮರ್ಥರಾಗಿ ಒಳಹೊಕ್ಕು.. ವರ್ತೂರ್​ ಸಂತೋಷ್ ಬಿಗ್‌ ಬಾಸ್ ಮನೆಯೊಳಗೆ ಅಸಮರ್ಥರಾಗಿ ಒಳಗೆ ಹೋದವರು. ಅಸಮರ್ಥರ ಗುಂಪಿನಿಂದ ಸಮರ್ಥರ ಗುಂಪಿಗೆ ಜಿಗಿದರೂ ಮನೆಯೊಳಗೆ ಅತ್ಯಂತ ಕ್ರಿಯಾತ್ಮಕವಾಗಿಯೇನೂ ವರ್ತೂರ್ ಪಾಲ್ಗೊಳ್ಳುತ್ತಿರಲಿಲ್ಲ. ಹಾಗಾಗಿಯೇ ಪ್ರತೀ ವಾರ ನಾಮಿನೇಷನ್‌ ಆಗುವಾಗಲೂ ಈ ಒಂದು ಕಾರಣ ಎಲ್ಲರ ಬಾಯಲ್ಲಿ ಬರುತ್ತಿತ್ತು. ಆದರೆ ಕ್ರಮೇಣ ಮನೆಯ ಸದಸ್ಯರ ಜೊತೆ ಬೆರೆಯುತ್ತಾ, ಆಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ, ಗಲಾಟೆ, ಜಗಳದಿಂದ ಮಾರು ದೂರವೇ ಉಳಿದುಕೊಳ್ಳುತ್ತ ವರ್ತೂರ್​ ರೇಸ್‌ನ ಕಣದೊಳಗೆ ಎಂಟ್ರಿ ಕೊಡತೊಡಗಿದರು.

varthur santhosh
ಸಹ ಸ್ಪರ್ಧಿಗಳ ಜೊತೆ ವರ್ತೂರ್​ ಸಂತೋಷ್​​​

ಹುಲಿಯುಗುರಿನ ಸಹವಾಸ!: ಕೆಲ ವಾರಗಳು ಕಳೆಯುತ್ತಿದ್ದ ಹಾಗೆಯೇ ವರ್ತೂರ್​ ಸಂತೋಷ್ ಇದ್ದಕ್ಕಿದ್ದಂತೆಯೇ ಮನೆಯಿಂದ ಮಾಯವಾದರು. ಆಗ ಮನೆಯವರೆಲ್ಲ ಅಚ್ಚರಿಪಟ್ಟರು. ಯಾಕೆ ಹೋಗಿರಬಹುದು? ಎಲ್ಲಿ ಹೋಗಿರಬಹುದು? ಎಂದು ಊಹಿಸತೊಡಗಿದ್ದರು. ಮನೆಯಲ್ಲಿ ಯಾರಿಗೋ ಅನಾರೋಗ್ಯ ಉಂಟಾದ ಕಾರಣಕ್ಕೆ ಹೋಗಿದ್ದಾರೆ ಎಂದು ಬಿಗ್​ ಬಾಸ್​ ಸ್ಪರ್ಧಿಗಳು ತಿಳಿದುಕೊಂಡಿದ್ದರು. ಆದರೆ ಪರಿಸ್ಥಿತಿ ಬೇರೆಯದ್ದೇ ಇತ್ತು.

ವರ್ತೂರ್ ಸಂತೋಷ್ ಹುಲಿಯುಗುರು ಪೆಂಡೆಂಟ್​ ಧರಿಸಿರುವುದು ವನ್ಯಜೀವಿ ರಕ್ಷಣಾ ಕಾನೂನಿನ ಪ್ರಕಾರ ಕಾನೂನುಬಾಹಿರ ಎಂಬ ಕಾರಣ ನೀಡಿ ಅವರನ್ನು ಬಂಧಿಸಲಾಗಿತ್ತು. ಈ ಸಂಗತಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಮತ್ತೆ ವರ್ತೂರ್ ಮನೆಯೊಳಗೆ ಹೋಗುವುದು ಸಾಧ್ಯವೇ ಇಲ್ಲ ಎಂದು ಎಲ್ಲರೂ ನಿರ್ಧರಿಸಿಬಿಟ್ಟಿದ್ದರು. ಆದರೆ ಆ ಎಲ್ಲಾ ನಿರೀಕ್ಷೆಗಳನ್ನು ಹುಸಿಗೊಳಿಸಿ ವರ್ತೂರ್ ಸಂತೋಷ್ ನಗುನಗುತ್ತಾ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಆದರೆ ಮೊದಲಿನ ಉತ್ಸಾಹವಾಗಲಿ, ನೆಮ್ಮದಿಯಾಗಲಿ ಅವರಿಗೆ ಇರಲಿಲ್ಲ.

ಉಳಿಯಲಾರೆ ಮನೆಯೊಳಗೆ..! ಮನೆಯಿಂದ ಹೊರಗೆ ಹೋಗಿ ರೀ ಎಂಟ್ರಿ ಕೊಟ್ಟಾಗಿನಿಂದಲೂ ವರ್ತೂರ್ ಸಂತೋಷ್​​ ನೆಮ್ಮದಿಯಿಂದ ಇರಲಿಲ್ಲ. ನನಗೆ ಇಲ್ಲಿ ಇರಲಾಗುತ್ತಿಲ್ಲ. ದಯವಿಟ್ಟು ಹೊರಗೆ ಬಿಟ್ಟುಬಿಡಿ ಎಂದು ಪದೇ ಪದೆ ಕೇಳಿಕೊಳ್ಳಲು ಶುರುಮಾಡಿದರು. ಮನೆಯ ಸದಸ್ಯರೆಲ್ಲರೂ ಕೇಳಿದರೂ ಅವರು ಜಗ್ಗಲಿಲ್ಲ. ಮನೆಯಿಂದ ಹೊರಗೆ ಕಳುಹಿಸದಿದ್ದರೆ ನಾನು ಯಾವ ಗೇಮ್ ಕೂಡ ಆಡುವುದಿಲ್ಲ ಎಂದು ಹಠ ಹಿಡಿದು ಕುಳಿತರು. ಭಾಗ್ಯಲಕ್ಷ್ಮಿ ಧಾರಾವಾಹಿಯ ನಟಿ ಸುಷ್ಮಾ ಬಂದಾಗಲೂ ವರ್ತೂರ್ ಅವರ ಮನವೊಲಿಸಲು ಯತ್ನಿಸಿದ್ದರು. ಆದರೆ ಸಂತೋಷ್​ ಕರಗಲಿಲ್ಲ. ಕೊನೆಗೆ ವರ್ತೂರ್ ಅವರ ಅಮ್ಮನೇ ಮನೆಯೊಳಗೆ ಬಂದು, ಅವರಿಗೆ ಊಟ ಮಾಡಿಸಿ ಬುದ್ಧಿವಾದ ಹೇಳಿದಾಗ ಉಳಿದುಕೊಳ್ಳುವ ಮನಸ್ಸು ಮಾಡಿದರು. ಈಗಿನಿಂದ ಆಟ ಶುರು ಎಂದು ಹೇಳಿ, ಕಣ್ಣೀರು ಒರೆಸಿಕೊಂಡು ನಕ್ಕರು. ಆ ವಾರಾಂತ್ಯದ ಎಪಿಸೋಡ್‌ನಲ್ಲಿ ಸುದೀಪ್‌ ಕೂಡ ವರ್ತೂರ್ ಅವರಿಗೆ ಪ್ರೋತ್ಸಾಹದ ಮಾತು ಹೇಳಿದರು. ಅಲ್ಲದೇ ಅಂದು ಕರ್ನಾಟಕದ ಜನರು ನೀಡಿರುವ ಮತಗಳನ್ನೂ ಕಿಚ್ಚ ಸುದೀಪ್​​ ಬಹಿರಂಗಪಡಿಸಿದ್ದರು. ಈ ಎಲ್ಲವೂ ವರ್ತೂರ್ ಅವರಲ್ಲಿ ಹೊಸ ಉತ್ಸಾಹ ತುಂಬಿತ್ತು.

ತುಕಾಲಿ ಜೊತೆಗಿನ ಸ್ನೇಹ: ತುಕಾಲಿ ಸಂತೋಷ್ ಮತ್ತು ವರ್ತೂರ್ ಸಂತೋಷ್ ಇಬ್ಬರ ಜೋಡಿ ಸಂತು-ಪಂತು ಜೋಡಿ ಎಂದೇ ಜನಪ್ರಿಯವಾಗಿದೆ. ಅವರಿಬ್ಬರೂ ಬೀನ್‌ ಬ್ಯಾಗ್‌ನಲ್ಲಿ ಕೂತು ಆಡಿದ ಮಾತುಗಳಿಗೆ ಲೆಕ್ಕವಿಲ್ಲ. ಮಾಡಿದ ತಂತ್ರಗಳಿಗೆ ಮೇರೆಯೇ ಇಲ್ಲ. ಬರೀ ತಂತ್ರಗಾರಿಕೆ, ಉಳಿದವರ ಬಗ್ಗೆ ಮಾತನಾಡಿದ್ದಷ್ಟೇ ಅಲ್ಲ, ತಮ್ಮ ಕಷ್ಟಸುಖಗಳನ್ನೂ ಹಂಚಿಕೊಂಡಿದ್ದಾರೆ. ಸಂತೈಸಿಕೊಂಡಿದ್ದಾರೆ. ಅವರಿಬ್ಬರ ಸ್ನೇಹಬಂಧನ ಗಟ್ಟಿಗೊಂಡಿದ್ದೇ ಬಾಲ್ಕನಿ ಮೇಲಿನ ಬೀನ್‌ಬ್ಯಾಗ್‌ನಲ್ಲಿ. ಯಾವ ಸಂದರ್ಭದಲ್ಲಿಯೂ ಒಬ್ಬರಿಗೊಬ್ಬರು ಬಿಟ್ಟುಕೊಡದ ಅವರ ಸ್ನೇಹದ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರೇ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ಅಪರೂಪದ ನಿಷ್ಕಳಂಕ ಸ್ನೇಹವಿದು' ಎಂದು ಹೇಳಿದ್ದಿದೆ. ಈ ಸ್ನೇಹಸಂಬಂಧ ವರ್ತೂರ್ ಜರ್ನಿಯ ಬಹುಮುಖ್ಯ ಅಧ್ಯಾಯವೂ ಹೌದು.

varthur santhosh
ತುಕಾಲಿ ಸಂತೋಷ್​ ಜೊತೆ ವರ್ತೂರ್​ ಸಂತೋಷ್​​​

ಮತ್ತೊಮ್ಮೆ ಅಮ್ಮನ ಭೇಟಿ: ಕುಟುಂಬದ ಸದಸ್ಯರೆಲ್ಲರೂ ಮನೆಗೆ ಭೇಟಿ ನೀಡಿದ್ದ ಸಂದರ್ಭ, ವರ್ತೂರ್ ಸಂತೋಷ್ ಅಮ್ಮ ಬುತ್ತಿ ಜೊತೆ ಬಂದು ಎಲ್ಲರಿಗೂ ಊಟ ಬಡಿಸಿದ್ದರು. ಸಂತೋಷ್ ಅವರಿಗೆ ಎಣ್ಣೆಹಾಕಿ ತಲೆಗೆ ಮಸಾಜ್ ಮಾಡಿದ್ದರು. ಇದು ಅವರಲ್ಲಿ ಹೊಸ ಉತ್ಸಾಹವನ್ನು ತುಂಬಿತ್ತು. ಅಮ್ಮ ಮನೆಗೆ ಬಂದು ಹೋದ ಮೇಲೆ ವರ್ತೂರ್ ಅವರ ಆಟವೇ ಬದಲಾಗಿತ್ತು.

ಜೈಲಿನಿಂದ ಹೊರಗೆ ಬಂದ ಚರಿತ್ರೆ: ತುಕಾಲಿ ಸಂತೋಷ್ ಮತ್ತು ವರ್ತೂರ್ ಸಂತೋಷ್ ಸೇರಿಕೊಂಡು ಮಾಡಿದ ತರಲೆಗಳಿಗೆ ಲೆಕ್ಕವಿಲ್ಲ. ವರ್ತೂರ್ ಸಂತೋಷ್ ಕಳಪೆ ಪಟ್ಟ ಗಳಿಸಿಕೊಂಡು ಜೈಲು ಪಾಲಾಗಿದ್ದರು. ಎಲ್ಲರೂ ಮಲಗಿದ್ದರೂ ತುಕಾಲಿ ಸಂತೋಷ್ ಜೈಲಿನ ಪಕ್ಕದಲ್ಲೇ ಕೂತು ಮಾತನಾಡುತ್ತಿದ್ದರು. ನಡುರಾತ್ರಿ 'ಅಣ್ಣಾ ಜೈಲಿಂದ ಹೊರಗೆ ಬಂದುಬಿಡು' ಎಂದು ವರ್ತೂರ್ ಅವರಿಗೆ ತುಕಾಲಿ ಆಹ್ವಾನ ನೀಡಿದ್ದರು. ಅದಕ್ಕೆ ವರ್ತೂರ್ ಹಿಂಜರಿದಾಗ, 'ಜೈಲಿಂದ ಹೊರಗೆ ಬಂದ್ರೆ ಚರಿತ್ರೆನೇ ಸೃಷ್ಟಿಯಾಗುತ್ತೆ. ಏನಾಗಲ್ಲ ಬಾ' ಎಂದು ಪ್ರೋತ್ಸಾಹಿಸಿದರು. ಅವರ ಮಾತು ಕೇಳಿಕೊಂಡು ಬಿಗ್‌ ಬಾಸ್ ಮನೆಯ ನಿಯಮ ಉಲ್ಲಂಘಿಸಿ ವರ್ತೂರ್​ ಸಂತೋಷ್​​ ಜೈಲಿಂದ ಹೊರಗೆ ಬಂದಿದ್ದರು. ಆದರೆ ಹೊರಗೆ ಬಂದ ತಕ್ಷಣ, ಬಿಗ್‌ ಬಾಸ್ ನಂಗೂ ಶಿಕ್ಷೆ ಕೊಟ್ರೆ ಏನ್ಮಾಡೋದು ಅಣ್ಣಾ, ಒಳಗೆ ಹೋಗ್ಬಿಡು ಎಂದು ತುಕಾಲಿ ಅವರು ವರ್ತೂರ್ ಅವರನ್ನು ಮತ್ತೆ ಮನೆಯೊಳಗೆ ಕಳಿಸಿಬಿಟ್ಟಿದ್ದರು. ಇದಕ್ಕಾಗಿ ಶಿಕ್ಷೆ ಅನುಭವಿಸಿದ್ದು ಬೇರೆ ಮಾತು.

ಬೆಂಕಿ ಜೊತೆ ಒಡನಾಟ: ಬಿಗ್‌ ಬಾಸ್ ಮನೆಯ ಬೆಂಕಿ ಎಂದೇ ಖ್ಯಾತರಾಗಿದ್ದ ತನಿಷಾ ಜೊತೆಗಿನ ವರ್ತೂರ್ ಒಡನಾಟ ಸಖತ್ ಸದ್ದು ಮಾಡಿತ್ತು. ತನಿಷಾ, ವರ್ತೂರ್ ಅವರ ಕಾಲಿಗೆ ಮಸಾಜ್ ಮಾಡುವುದು, ವರ್ತೂರ್, ತನಿಷಾ ಅವರ ಮಡಿಲಲ್ಲಿ ಮಲಗುವುದು, ಪರಸ್ಪರ ಮಾತುಗಳನ್ನು ಹಂಚಿಕೊಳ್ಳುವುದು ಎಲ್ಲವೂ ತಮಾಷೆಯ ಟ್ರ್ಯಾಕ್ ಆಗಿ ಸಖತ್ ಹಿಟ್ ಆಗಿತ್ತು.

ಟಾಸ್ಕ್‌ನಲ್ಲಿ ವರ್ತೂರ್​ ಅವರಿಂದಲೇ ತನಿಷಾ ಗಾಯಗೊಂಡು ಹೊರಗೆ ಹೋಗುವಂತಾಗಿದ್ದು, ಅವರಿಗೆ ಪಶ್ಚಾತ್ತಾಪ ಕಾಡಿತ್ತು. ಹಾಗಾಗಿಯೇ ತನಿಷಾ ವಾಪಸ್ ಮನೆಗೆ ಬಂದಾಗ ವರ್ತೂರ್ ತುಸು ಹೆಚ್ಚೇ ಕಾಳಜಿ ತೋರಿಸಿದ್ದರು. ಶಾಲಾ ಟಾಸ್ಕ್‌ನಲ್ಲಿ ವರ್ತೂರ್ 'ಪಟಾಕಿ ಯಾರದ್ದಾದ್ರೂ ಆಗಿರ್ಲಿ, ಹಚ್ಚೋರು ನಾವಾಗಿರ್ಬೇಕು' ಎಂಬ ಡೈಲಾಗ್‌ ಹೊಡೆದಿದ್ದು ಕೂಡ ಸಖತ್ ವೈರಲ್ ಆಗಿತ್ತು. ವಾರಾಂತ್ಯದಲ್ಲಿ ಕಿಚ್ಚ ಕೂಡ ಅದನ್ನು ವರ್ತೂರ್ ಮತ್ತು ತನಿಷಾ ಜೊತೆ ಮಾಡಿಸಿ ನೋಡಿದ್ದರು.

ಕ್ಯಾಪ್ಟನ್ ಕನಸು: ಕ್ಯಾಪ್ಟನ್ ಆಗಬೇಕು ಎಂದು ಜಿದ್ದಿಗೆ ಬಿದ್ದವರೇನಲ್ಲ ವರ್ತೂರ್. ಆದರೆ ಅವರಿಗೂ ಕ್ಯಾಪ್ಟನ್ ಆಗುವ ಅವಕಾಶ ಬಂದಿತ್ತು. ತಿರುಗುವ ಚಕ್ರದಲ್ಲಿ ಕೂತು ನಿಗದಿತ ಸಮಯವನ್ನು ಊಹಿಸುವ ಟಾಸ್ಕ್‌ನಲ್ಲಿ ಗೆದ್ದು ವರ್ತೂರ್ ಕ್ಯಾಪ್ಟನ್‌ ರೂಮ್​​ ಪ್ರವೇಶಿಸಿದ್ದರು. ಆದರೆ ಅವರು ಗೆದ್ದಿದ್ದು ವಿನಯ್ ಅವರ ಸಹಾಯದೊಂದಿಗೆ ಎಂಬುದು ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಜಾಹೀರು ಮಾಡಿದ್ದರು. ಅಷ್ಟೇ ಅಲ್ಲ, ಕ್ಯಾಪ್ಟನ್‌ಗೆ ಗೌರವ ಕೊಡುವ ಅಭ್ಯಾಸ ಇಲ್ಲದ ಈ ಮನೆಗೆ ಕ್ಯಾಪ್ಟನ್ ಅಗತ್ಯ ಇಲ್ಲ ಎಂದು ಬಿಗ್‌ ಬಾಸ್ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕ್ಯಾಪ್ಟನ್ ರೂಮ್ ಲಾಕ್ ಮಾಡಿಸಿಬಿಟ್ಟಿದ್ದರು. ಹಾಗಾಗಿ ಕ್ಯಾಪ್ಟನ್ ರೂಮಿಗೆ ಕೀಲಿ ಹಾಕಿಸಿದ ದಾಖಲೆಯೂ ವರ್ತೂರ್ ಅವರ ಹೆಸರಿನಲ್ಲಿಯೇ ಇದೆ.

ಟಿಕೆಟ್ ಟು ಫಿನಾಲೆ: 'ಟಿಕೆಟ್ ಟು ಫಿನಾಲೆ'ಯಲ್ಲಿ ವರ್ತೂರ್ ಸಂತೋಷ್ ತೋರಿದ ಪರ್ಫಾರ್ಮೆನ್ಸ್ ನೋಡಿ ಮನೆಯವರೆಲ್ಲ ಬೆರಗಾಗಿದ್ದರು. ಹಲವು ಆಟಗಳಲ್ಲಿ ಭಾಗವಹಿಸಿ ಕೆಲವನ್ನು ಗೆದ್ದು ಎಲ್ಲರಿಗಿಂತ ಮೊದಲು 200 ಪಾಯಿಂಟ್ಸ್ ಪಡೆದುಕೊಂಡಿದ್ದರು. ಇದರಿಂದಾಗಿ ಒಂದು ಹಂತಕ್ಕೆ ವರ್ತೂರ್ ಅವರೇ ಎಲ್ಲರಿಗಿಂತ ಮೊದಲು ಫಿನಾಲೆ ಪ್ರವೇಶಿಸುತ್ತಾರೇನೋ ಎಂಬ ಊಹೆಯೂ ಇತ್ತು. ಆದರೆ ನಂತರ ಪ್ರತಾಪ್, ಸಂಗೀತಾ ಮತ್ತು ನಮ್ರತಾ ವರ್ತೂರ್ ಅವರನ್ನು ಹಿಂದಿಕ್ಕಿದರು. ಆದರೆ ಈ ಒಂದು ವಾರದಲ್ಲಿ ತುಕಾಲಿ ಸಂತೋಷ್ ಜೊತೆಗೂಡಿ ವರ್ತೂರ್ ಸಂತೋಷ್ ಮಾಡಿದ ತಂತ್ರಗಾರಿಕೆಯೂ ಅವರ ವ್ಯಕ್ತಿತ್ವದ ಮತ್ತೊಂದು ಆಯಾಮವನ್ನು ತೆರೆದಿಟ್ಟಿತ್ತು.

ಎಲಿಮಿನೇಷನ್‌ ಬೆಂಕಿ: ಸಂಕ್ರಾಂತಿ ಹಬ್ಬದ ಸಂದರ್ಭ, ವಾರಾಂತ್ಯದ ಎಲಿಮಿನೇಷನ್‌ನಲ್ಲಿ ಕೊನೆಯದಾಗಿ ವರ್ತೂರ್ ಸಂತೋಷ್ ಮತ್ತು ತುಕಾಲಿ ಸಂತೋಷ್ ಇಬ್ಬರೂ ಕುಳಿತಿದ್ದರು. ಆ ಸಮಯದಲ್ಲಿ ಸುದೀಪ್, ಇವರಿಬ್ಬರ ಸ್ನೇಹದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು. ಪರಸ್ಪರ ಇಬ್ಬರೂ ಶುಭ ಹಾರೈಸಿಕೊಂಡಿದ್ದು, ಮನಕರಗಿಸುವಂತಿತ್ತು. ಆದರೆ ಆ ವಾರ ಎಲಿಮಿನೇಷನ್‌ ಅನ್ನು ಹೋಲ್ಡ್‌ನಲ್ಲಿ ಇಟ್ಟು ಇಬ್ಬರನ್ನೂ ಉಳಿಸಿದ್ದರು. ಮುಂದಿನ ವಾರದ ಮಿಡ್‌ವೀಕ್‌ ಎಲಿಮಿನೇಷನ್‌ನಲ್ಲಿ ತನಿಷಾ ಕುಪ್ಪಂಡ ಹೊರಗೆ ಹೋಗಿದ್ದರು.

ಇದನ್ನೂ ಓದಿ: ಬಿಗ್‌ ಬಾಸ್‌ ವಿಜೇತ ಕಾರ್ತಿಕ್ ಮಹೇಶ್‌ ಪಯಣ.. ನೀವೇನಂತೀರಾ?

'ಜಗಳವಾಡುವುದಕ್ಕಾಗಿ ಇಲ್ಲಿಗೆ ಬಂದಿಲ್ಲ' ಎಂದು ಪದೇ ಪದೇ ಹೇಳುತ್ತಿದ್ದ ವರ್ತೂರ್ ಸಂತೋಷ್​​ ಹಲವು ಬಾರಿ ತಾಳ್ಮೆ ಕಳೆದುಕೊಂಡು ಮಾತಾಡಿದ್ದಿದೆ. ಆದರೆ ಯಾರ ವಿರುದ್ಧವೂ ಹದತಪ್ಪಿ ಮಾತನಾಡಿಲ್ಲ. ಅವಹೇಳನ ಮಾಡಿಲ್ಲ. ತಮ್ಮ ಮುಗ್ಧತೆಯಿಂದಲೇ ಮನೆಯ ಸದಸ್ಯರ ಮೆಚ್ಚುಗೆಯನ್ನು ಪಡೆದುಕೊಂಡಿರುವ ಅವರು ಮನೆಯ ಹೊರಗೂ ಇದೇ ಕಾರಣಕ್ಕೆ ಜನರಿಂದ ಪ್ರೀತಿಯನ್ನು ಗಳಿಸಿದ್ದರು.

ಇದನ್ನೂ ಓದಿ: ''ಕಾರ್ತಿಕ್​​-ಸಂಗೀತಾ ನಟ ನಟಿ, ವಿನಯ್ ವಿಲನ್, ವರ್ತೂರ್​ ನ್ಯಾಯ ಕೊಡಿಸುವವ'': ತುಕಾಲಿ ಸಂತೋಷ್​​

ಮುಗ್ಧತೆ, ಬದ್ಧತೆ ಎರಡನ್ನೂ ಸೇರಿಸಿ ಎರಕ ಹೊಯ್ದಂತಿರುವ ವರ್ತೂರ್ ಸಂತೋಷ್ ಅವರು ನಾಲ್ಕನೇ ರನ್ನರ್ ಅಪ್ ಆಗಿ ಬಿಗ್‌ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಸಾಕಷ್ಟು ನೆನಪುಗಳನ್ನು ಬಿಗ್‌ ಬಾಸ್ ಮನೆಯೊಳಗಿಂದ ಹೊತ್ತು ತಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.