ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರಾಕುಲ್ ​ -ಜಾಕಿ: ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಸಲ್ಲಿಕೆ

author img

By ETV Bharat Karnataka Team

Published : Feb 22, 2024, 6:44 AM IST

Rakul Preet Singh-Jackky Bhagnani

ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು​​ ನಟ -ನಿರ್ಮಾಪಕ ಜಾಕಿ ಭಗ್ನಾನಿ ಸಪ್ತಪದಿ ತುಳಿದಿದ್ದಾರೆ.

ಪ್ರೇಮ ಪಕ್ಷಿಗಳಾಗಿ ಗುರುತಿಸಿಕೊಂಡಿದ್ದ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಮತ್ತು ಬಾಲಿವುಡ್​​ ನಟ - ನಿರ್ಮಾಪಕ ಜಾಕಿ ಭಗ್ನಾನಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಫೆಬ್ರವರಿ 21, ಬುಧವಾರದಂದು ಗೋವಾದಲ್ಲಿ ಅದ್ಧೂರಿ ಮದುವೆ ನಡೆಯಿತು. ರಮಣೀಯ ಹಿನ್ನೆಲೆಯಲ್ಲಿ, ಈ ಪ್ರೇಮಪಕ್ಷಿಗಳು ಸಪ್ತಪದಿ ತುಳಿದಿದ್ದಾರೆ.

ಕೆಲ ಕಾಲದಿಂದ ರಿಲೇಶನ್​ಶಿಪ್​ನಲ್ಲಿರುವ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಈಗಾಗಲೇ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು. ಈವೆಂಟ್​ಗಳಲ್ಲಿ ಲವ್​​ಬರ್ಡ್ಸ್​ನಂತೆ ಗಮನ ಸೆಳೆಯುತ್ತಿದ್ದರು. ಸೋಷಿಯಲ್​ ಮೀಡಿಯಾ ಪೋಸ್ಟ್​​ಗಳ ಮೂಲಕವೂ ಅಭಿಮಾನಿಗಳ ಪ್ರೀತಿ ಸ್ವೀಕರಿಸುತ್ತಿದ್ದರು. ಅಂತಿಮವಾಗಿ ಕುಟುಂಬಸ್ಥರು, ಆತ್ಮೀಯರು, ಸ್ನೇಹಿತರ ಎದುರು ತಮ್ಮ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ಅಲ್ಲದೇ, ನಿನ್ನೆಯೇ ನವಜೋಡಿ ತಮ್ಮ ಮದುವೆ ಸಮಾರಂಭದ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಬುಧವಾರ ಸಂಜೆ ಜಾಕಿ ಭಗ್ನಾನಿ ಮತ್ತು ರಾಕುಲ್ ಪ್ರೀತ್ ಸಿಂಗ್​ ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ವಿವಾಹ ಮಹೋತ್ಸವದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಧು ರಾಕುಲ್ ಹರಳುಗಳಿಂದ ಅಲಂಕರಿಸಲ್ಪಟ್ಟ ಪೀಚ್ ಕಲರ್​ ಲೆಹೆಂಗಾವನ್ನು ಧರಿಸಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರ. ಮತ್ತೊಂದೆಡೆ ವರ ಜಾಕಿ ತಿಳಿ ಗೋಲ್ಡನ್ ಶೆರ್ವಾನಿಯಲ್ಲಿ ಮಿಂಚಿದ್ದಾರೆ.

ತಮ್ಮ ಪೋಸ್ಟ್‌ಗೆ ''ನನ್ನದು, ಈಗ - ಎಂದೆಂದಿಗೂ'' (ಕೆಂಪು ಹೃದಯದ ಎಮೋಜಿಗಳೊಂದಿಗೆ) ಎಂದು ಕ್ಯಾಪ್ಷನ್​ ಕೊಟ್ಟಿದ್ದಾರೆ. ಪೋಸ್ಟ್‌ನ ಕಾಮೆಂಟ್ ವಿಭಾಗದಲ್ಲಿ ಕಲಾವಿದರಾದ ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಸಮಂತಾ ರುತ್ ಪ್ರಭು ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ. ಪಾಪರಾಜಿಗಳು ಸಹ ಕೆಲ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. ಮದುವೆ ಬಳಿಕ ಹೊರಬಂದು, ಪಾಪರಾಜಿಗಳ ಕ್ಯಾಮರಾಗಳಿಗೆ ವಧು-ವರ ಪೋಸ್​ ಕೊಟ್ಟಿದ್ದು, ಫೋಟೋ-ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ಇದನ್ನೂ ಓದಿ: ರಾಕುಲ್ - ಜಾಕಿ ಮದುವೆ: ವಧು - ವರರ ಕೌಟುಂಬಿಕ ಸಂಪ್ರದಾಯಗಳಂತೆ ನಡೆಯುತ್ತಿವೆ ಎರಡು ಸಮಾರಂಭ

ಐಟಿಸಿ ಗ್ರ್ಯಾಂಡ್ ಸೌತ್ ಗೋವಾ ಹೋಟೆಲ್‌ನಲ್ಲಿ ಎರಡು ಪ್ರತ್ಯೇಕ ಸಮಾರಂಭಗಳಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಫೆಬ್ರವರಿ 19ರಂದು ವಿವಾಹ ಕಾರ್ಯಕ್ರಮಗಳು ಪ್ರಾರಂಭವಾದವು. ಫೆಬ್ರವರಿ 21 ರಂದು ಅಂದರೆ ನಿನ್ನೆ 'ಆನಂದ್ ಕರಾಜ್' ಮತ್ತು 'ಸಿಂಧಿ' ಶೈಲಿಯಲ್ಲಿ ಎರಡು ವಿವಾಹ ಸಮಾರಂಭಗಳು ನಡೆದವು. ವಿವಾಹ ಮಹೋತ್ಸವದಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾ, ಅರ್ಜುನ್ ಕಪೂರ್ ಮತ್ತು ಆಯುಷ್ಮಾನ್ ಖುರಾನಾ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಮತ್ತು ಆಪ್ತ ಸ್ನೇಹಿತರು ಭಾಗವಹಿಸಿದ್ದರು.

ಇದನ್ನೂ ಓದಿ: 'ಬಿಗ್ ಬಾಸ್ ಒಟಿಟಿ' ವಿಜೇತೆ ದಿವ್ಯಾ ಅಗರ್ವಾಲ್ ಜೊತೆಗೆ ಅಪೂರ್ವ ಪಡ್ಗಾಂವ್ಕರ್ ಸರಳ ವಿವಾಹ

ಭೂಮಿ ಪಡ್ನೇಕರ್​​, ಶಾಹಿದ್​ ಕಪೂರ್​​, ಮೀರಾ ರಜ್​ಪೂತ್​, ದಿಯಾ ಮಿರ್ಜಾ, ಮಲೈಕಾ ಅರೋರಾ, ಕೃತಿ ಖರಬಂದಾ, ರಾಮ್​ ಚರಣ್​ ಪತ್ನಿ ಉಪಾಸನಾ ಮಾಮಿನೇನಿ ಕೊನಿಡೇಲಾ, ಅನನ್ಯಾ ಪಾಂಡೆ ಸೇರಿದಂತೆ ಹಲವರು ಸೋಷಿಯಲ್​ ಮೀಡಿಯಾಗಳಲ್ಲಿ ಪೋಸ್ಟ್ ಶೇರ್ ಮಾಡಿ ನವ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.