ಬೆಂಗಳೂರು: GRAM SURAKSHA YOJANA :ಸಾಮಾನ್ಯವಾಗಿ ಜನರು ಭವಿಷ್ಯದಲ್ಲಿ ಉತ್ತಮವಾಗಿ ಬದುಕಬೇಕು ಎಂದು ಕನಸು ಕಾಣುತ್ತಾರೆ. ಎಲ್ಲ ಯೋಚನೆ ಯೋಜನೆಯನ್ನು ಮಾಡಿರುತ್ತಾರೆ. ಆದರೆ ಕಾರ್ಯಾಚರಣೆಗೆ ಮಾತ್ರ ಇಳಿದಿರುವುದಿಲ್ಲ. ಇನ್ನು ಕೆಲವರು ನಿಯಮಿತ ಆದಾಯದೊಂದಿಗೆ ಕಡಿಮೆ ಅಪಾಯದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿರುತ್ತಾರೆ. ಇಂತಹವರಿಗಾಗಿಯೇ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದೆ. ಅಂಚೆ ಇಲಾಖೆ ಸಣ್ಣ ಉಳಿತಾಯಗಾರರಿಗಾಗಿ "ಗ್ರಾಮ ಸುರಕ್ಷಾ ಯೋಜನೆ" ಪರಿಚಯಿಸಿದೆ. ಇದರಲ್ಲಿ ನೀವು ನಿತ್ಯ ರೂ.50 ಹೂಡಿಕೆ ಮಾಡಿದರೆ ಮೆಚ್ಯೂರಿಟಿ ವೇಳೆಗೆ ಅದು 30 ಲಕ್ಷ ಬಂಡವಾಳವಾಗಿ ಬೆಳೆಯಬಹುದು. ಹಾಗಾದರೆ, ಈ ಯೋಜನೆಗೆ ಸೇರಲು ಯಾರು ಅರ್ಹರು? ಮೆಚುರಿಟಿ ಅವಧಿ ಏನು? ಸೇರುವುದು ಹೇಗೆ? ಈ ಬಗ್ಗೆ ಇಲ್ಲಿ ನಾವು ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ.
ಯೋಜನೆ ಆರಂಭಿಸಲು ಬೇಕಾಗೋ ಅರ್ಹತೆಗಳೇನು?: ಭಾರತೀಯ ಅಂಚೆ ಇಲಾಖೆ ನೀಡುವ ಗ್ರಾಮ ಸುರಕ್ಷಾ ಯೋಜನೆ ಉಳಿತಾಯ ಯೋಜನೆ ಮಾತ್ರವಲ್ಲದೇ ಆರೋಗ್ಯ ಮತ್ತು ಜೀವ ವಿಮಾ ಪಾಲಿಸಿಯಾಗಿದೆ. ದೇಶದ ಗ್ರಾಮೀಣ ಜನರಿಗಾಗಿ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆಗಳ ಕಾರ್ಯಕ್ರಮದ ಭಾಗವಾಗಿ 1995 ರಲ್ಲಿ ಅಂಚೆ ಇಲಾಖೆ ಇದನ್ನು ಪ್ರಾರಂಭಿಸಿದೆ. 19 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಗೆ ಪ್ರೀಮಿಯಂ ಪಾವತಿಸಲು ವಿವಿಧ ಆಯ್ಕೆಗಳಿವೆ. ಅದೇನೆಂದರೆ.. ನೀವು ಪ್ರೀಮಿಯಂ ಹಣವನ್ನು ಮಾಸಿಕ ಆಧಾರದ ಮೇಲೆ ಯಾವಾಗ ಬೇಕಾದರೂ ಪಾವತಿಸಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ, ಪ್ರತಿ 6 ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ. ಹೀಗೆ ಹಲವು ಆಯ್ಕೆಗಳನ್ನು ಆರಿಸಿಕೊಂಡು ಹಣ ಪಾವತಿಸಬಹುದು.
ನಿತ್ಯ ನೀವು 417 ಹೂಡಿಕೆಯೊಂದಿಗೆ ಹೂಡಿಕೆ ಆರಂಭಿಸಿ ಅಂತಿಮವಾಗಿ ಮೆಚ್ಯೂರಿಟಿ ವೇಳೆಗೆ ಕೋಟಿ ರೂಪಾಯಿಗಳ ಲಾಭವನ್ನು ಪಡೆದುಕೊಳ್ಳಬಹುದು.
ಪ್ರೀಮಿಯಂ ಪಾವತಿ ವಿಧಾನಗಳು ಇಂತಿವೆ: ಗ್ರಾಮ ಸುರಕ್ಷಾ ಯೋಜನೆಯ ಪಕ್ವಗೊಳ್ಳುವ ಅಂದರೆ, ಮೆಚ್ಯೂರಿಟಿ ಅವಧಿಯು 55 ವರ್ಷಗಳಾಗಿವೆ. 58 , 60 ವರ್ಷಗಳಿಗೂ ನೀವು ಅವಧಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ನಿಮ್ಮ ವಯಸ್ಸಿಗೆ ಅನುಗುಣವಾಗಿ ನೀವು ಪ್ರೀಮಿಯಂ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಉದಾಹರಣೆಗೆ, ಒಬ್ಬ ವ್ಯಕ್ತಿಯು 19 ನೇ ವಯಸ್ಸಿನಲ್ಲಿ 10 ಲಕ್ಷದ ಪ್ರೀಮಿಯಂ ಅನ್ನು ಆಯ್ಕೆ ಮಾಡಿದರೆ, ಅಂತಹವರು 55 ವರ್ಷವನ್ನು ತಲುಪುವವರೆಗೆ ತಿಂಗಳಿಗೆ 1,515 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಅಂದರೆ ದಿನಕ್ಕೆ 50 ರೂ. ಅದೇ.. ಅವರು 58 ವರ್ಷಗಳವರೆಗೆ ಹೂಡಿಕೆ ಮಾಡಲು ಬಯಸಿದರೆ, ತಿಂಗಳಿಗೆ ರೂ.1,463 ಪ್ರೀಮಿಯಂ ಪಾವತಿಸಬೇಕು. 60 ವರ್ಷಗಳವರೆಗಿನ ಪ್ರೀಮಿಯಂ ರೂ.1,411 ಪಾವತಿಸಬೇಕಾಗುತ್ತದೆ.
ಆದಾಯವು ಹೇಗೆ ವೃದ್ಧಿಸುತ್ತಾ ಹೋಗುತ್ತೆ? : ಈ ಯೋಜನೆಯಲ್ಲಿ ನೀವು ಎಷ್ಟು ವರ್ಷಗಳವರೆಗೆ ಹೂಡಿಕೆ ಮಾಡುತ್ತೀರಿ ಎಂಬುದರ ಆಧಾರದ ಮೇಲೆ ನೀವು ಪಡೆಯುವ ಆದಾಯ ನಿರ್ಧಾರವಾಗುತ್ತದೆ. ನೀವು 19 ರಿಂದ 55 ವರ್ಷದವರೆಗೆ ಯೋಜನೆಯಲ್ಲಿ ಹೂಡಿಕೆ ಮಾಡಿದರೆ, ಮೆಚ್ಯುರಿಟಿ ಅವಧಿಯಲ್ಲಿ ಒಟ್ಟಾರೆ 31.60 ಲಕ್ಷ ರೂಗಳ ಲಾಭವನ್ನು ಪಡೆಯುತ್ತೀರಿ.
ಅದೇ.. 19 ರಿಂದ 58 ವರ್ಷಗಳವರೆಗೆ ಹೂಡಿಕೆ ಮಾಡಿದರೆ 33.40 ಲಕ್ಷ ರೂಗಳು ಮತ್ತು 60 ವರ್ಷದವರೆಗಿನ ಹೂಡಿಕೆ ಆಯ್ಕೆ ಮಾಡಿಕೊಂಡರೆ ಅಂತಹವರು 34.60 ಲಕ್ಷಗಳನ್ನು ಪಡೆಯಲಿದ್ದಾರೆ.
80 ವರ್ಷಗಳು ಪೂರ್ಣಗೊಂಡ ನಂತರ ಈ ಮೆಚ್ಯೂರಿಟಿ ಮೊತ್ತ ನಿಮ್ಮ ಕೈ ಸೇರುತ್ತದೆ. ಪಾಲಿಸಿದಾರರು ಮಧ್ಯದಲ್ಲಿ ಮೃತಪಟ್ಟರೆ ಅಲ್ಲಿಯವರೆಗೆ ಪಾವತಿಸಿದ ಪ್ರೀಮಿಯಂನ ಆಧಾರದ ಮೇಲೆ ಅವರ ನಾಮಿನಿಗೆ ಒಟ್ಟಾರೆ ಮೊತ್ತವನ್ನ ಪಾವತಿಸಲಾಗುತ್ತದೆ. ಪಾಲಿಸಿದಾರರು ಮೂರು ವರ್ಷಗಳ ಪ್ರಾರಂಭದ ನಂತರ ಯೋಜನೆಯನ್ನು ಸ್ವಯಂಪ್ರೇರಣೆಯಿಂದ ನಿಲ್ಲಿಸಬಹುದು. ಈ ಯೋಜನೆಯಲ್ಲಿ ಬೋನಸ್ ಕೂಡ ಇದೆ. ಅದೇನೆಂದರೆ.. ನೀವು ಠೇವಣಿ ಇಡುವ ಪ್ರತಿ ಸಾವಿರ ರೂಪಾಯಿಗೆ ವರ್ಷಕ್ಕೆ 60ರೂ ಬೋನಸ್ ಸಿಗುತ್ತದೆ.
ಯೋಜನೆಗೆ ಸೇರುವುದು ಹೇಗೆ?: ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಮತ್ತು ಈ ಯೋಜನೆಯ ಬಗ್ಗೆ ವಿಚಾರಿಸಿ. ಅದರ ನಂತರ ಸಂಬಂಧಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಹಾಗೂ ತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಂಬಂಧಿತ ಅಂಚೆ ಸಿಬ್ಬಂದಿಗೆ ಸಲ್ಲಿಸಬೇಕಾಗುತ್ತದೆ.