ETV Bharat / business

Explained: ಮುಂದಿನ ವರ್ಷ ದೇಶದ ಜಿಡಿಪಿ ಶೇ 6.5ಕ್ಕೆ ಕುಸಿಯುವ ನಿರೀಕ್ಷೆ: ಏತಕ್ಕಾಗಿ ಈ ಅಂದಾಜು?

author img

By ETV Bharat Karnataka Team

Published : Feb 24, 2024, 2:08 PM IST

ಪ್ರಸಕ್ತ ಹಣಕಾಸು ವರ್ಷದ ಕೊನೆಯಲ್ಲಿ ದೇಶದ ಜಿಡಿಪಿ ಬೆಳವಣಿಗೆ 7.3ರಷ್ಟಿದೆ ಎಂದು ಅಂದಾಜಿಸಲಾಗಿದೆ. ಆದರೆ ಇದು ಮುಂದಿನ ಹಣಕಾಸು ವರ್ಷದಲ್ಲಿ ಅಂದರೆ ಮಾರ್ಚ್​ 2025ರಲ್ಲಿ ಕೊನೆಗೊಳ್ಳುವ ವೇಳೆಗೆ ಶೇ 6.5ಕ್ಕೆ ಕುಸಿಯುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಈ ಬಗ್ಗೆ ಕೃಷ್ಣಾನಂದ ಅವರ ಬರಹ ಇಲ್ಲಿದೆ.

Why India’s GDP growth rate is set to decline to 6.5 percent next year
Explained: ಮುಂದಿನ ವರ್ಷ ದೇಶದ ಜಿಡಿಪಿ ಶೇ 6.5ಕ್ಕೆ ಕುಸಿಯುವುದೇ?: ಏತಕ್ಕಾಗಿ ಈ ಅಂದಾಜು?

ಹೈದರಾಬಾದ್: ಭಾರತದ ಒಟ್ಟು ದೇಶೀಯ ಉತ್ಪಾದನೆ -ಜಿಡಿಪಿ ಬೆಳವಣಿಗೆ ದರವು ಮುಂದಿನ ಹಣಕಾಸು ವರ್ಷದಲ್ಲಿ 6.5 ಪ್ರತಿಶತಕ್ಕೆ ಕುಸಿಯುವ ನಿರೀಕ್ಷೆಯಿದೆ. ಈ ವರ್ಷದ ಮಾರ್ಚ್‌ನಲ್ಲಿ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಗರಿಷ್ಠ ಶೇ 7.3ರಷ್ಟು ಇರಲಿದೆ ಎಂದು ಈಗಾಗಲೇ ಅಂದಾಜಿಸಲಾಗಿದೆ.

ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂಬ ಹೆಗ್ಗಳಿಕೆ​ ಭಾರತಕ್ಕಿದೆ. ಈ ಟ್ಯಾಗ್​ಲೈನ್​ ಉಳಿಸಿಕೊಳ್ಳಲು ದೇಶಕ್ಕೆ ಸಾಕಷ್ಟು ಅವಕಾಶಗಳು ಇದ್ದಾಗ್ಯೂ ಈ ವರ್ಷ ದಾಖಲಾದ ತ್ವರಿತ ಬೆಳವಣಿಗೆ ನಿಧಾನಗೊಳಿಸುವ ಹಲವಾರು ಅಂಶಗಳು ನಮ್ಮ ಮುಂದಿವೆ. ಸರ್ಕಾರದ ನಿರಂತರ ಬಂಡವಾಳ ವೆಚ್ಚ, ಆರೋಗ್ಯಕರ ಕಾರ್ಪೊರೇಟ್ ಕಾರ್ಯಕ್ಷಮತೆ, ಖಾಸಗಿ ಬಂಡವಾಳ ವೆಚ್ಚದಲ್ಲಿ ಆಗುವ ಹೆಚ್ಚಳದ ನಿರೀಕ್ಷೆಗಳು ಮತ್ತು ಮೃದುವಾದ ಜಾಗತಿಕ ಸರಕು ಬೆಲೆಗಳು ಭಾರತದ ಆರ್ಥಿಕತೆ ವೇಗವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತಿವೆ. ದುರ್ಬಲ ರಫ್ತು ಮತ್ತು ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಹೆಚ್ಚಳದಂತಹ ಇತರ ಅಂಶಗಳು ಭಾರತ ಜಿಡಿಪಿ ಬೆಳವಣಿಗೆ ದರವನ್ನು ಮಿತಗೊಳಿಸುವ ಸಾಧ್ಯತೆಗಳೂ ಇವೆ.

ಫಿಚ್ ಗ್ರೂಪ್ ರೇಟಿಂಗ್ ಏಜೆನ್ಸಿಯಾದ ಇಂಡಿಯಾ ರೇಟಿಂಗ್ಸ್ ಮತ್ತು ರಿಸರ್ಚ್ ಮಾಡಿರುವ ಲೆಕ್ಕಾಚಾರದ ಪ್ರಕಾರ, ಈ ವರ್ಷದ ಏಪ್ರಿಲ್ 1 ರಿಂದ ಪ್ರಾರಂಭವಾಗುವ ಮತ್ತು ಮಾರ್ಚ್ 31, 2025 ರಂದು ಕೊನೆಗೊಳ್ಳುವ ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ 6.5 ಪ್ರತಿಶತದಷ್ಟಿರುವ ನಿರೀಕ್ಷೆಯಿದೆ ಎಂದು ಅಂದಾಜಿಸಿದೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ಪ್ರಾರಂಭವಾಗಿ ಈ ವರ್ಷದ ಮಾರ್ಚ್‌ನಲ್ಲಿ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೆಳವಣಿಗೆಯ ದರವು ಶೇಕಡಾ 7.3 ಎಂದು ಅಂದಾಜಿಸಲಾಗಿರುವುದರಿಂದ ಭಾರತದ ಜಿಡಿಪಿ ಸ್ವಲ್ಪ ಉತ್ತಮ ಪ್ರದರ್ಶನ ನೀಡುವ ಸಾಧ್ಯತೆಗಳೂ ಇವೆ. "ಮೂಲ ಪರಿಣಾಮದ ಹೊರತಾಗಿಯೂ, ಅನುಕ್ರಮ ಜಿಡಿಪಿ ಬೆಳವಣಿಗೆ ನಿರಂತರವಾಗಿರುತ್ತದೆ. ಸರ್ಕಾರಿ ಕ್ಯಾಪೆಕ್ಸ್, ಆರೋಗ್ಯಕರ ಕಾರ್ಪೊರೇಟ್ ಕಾರ್ಯಕ್ಷಮತೆ, ನಿಯೋಜಿತ ಕಾರ್ಪೊರೇಟ್ ಮತ್ತು ಬ್ಯಾಂಕಿಂಗ್ ವಲಯದ ಬ್ಯಾಲೆನ್ಸ್ ಶೀಟ್‌ಗಳು, ಜಾಗತಿಕ ಸರಕುಗಳ ಬೆಲೆಗಳಲ್ಲಿ ಕಂಡು ಬರುತ್ತಿರವ ಕುಸಿತದಿಂದಾಗಿ ದೇಶದ ಆರ್ಥಿಕ ಚೇತರಿಕೆ ಹಾದಿಯಲ್ಲಿದೆ ಎಂಬುದನ್ನು ಸೂಚಿಸುತ್ತಿದೆ ಎಂದು ಇಂಡಿಯಾ ರೇಟಿಂಗ್ಸ್ ಈಟಿವಿ ಭಾರತ್‌ಗೆ ಕಳುಹಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ಆದಾಗ್ಯೂ, ರೇಟಿಂಗ್ ಏಜೆನ್ಸಿಯು ಆರ್ಥಿಕತೆಗೆ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದೆ. ಏಕೆಂದರೆ ಒಟ್ಟಾರೆ ಬೇಡಿಕೆಯು ಹೆಚ್ಚಾಗಿ ಸರ್ಕಾರದ ಬಂಡವಾಳ ವೆಚ್ಚದಿಂದಲೇ ನಡೆಸಲ್ಪಡುತ್ತದೆ ಎಂಬುದನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇದು ಜಿಡಿಪಿ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಪ್ರಚಲಿತ ಬಳಕೆಯ ಬೇಡಿಕೆಯು ಪ್ರತಿಶತ 50ರಷ್ಟಕ್ಕೆ ಸೇರಿದ ಕುಟುಂಬಗಳು ಸೇವಿಸುವ ಸರಕು ಮತ್ತು ಸೇವೆಗಳ ಪರವಾಗಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇದರಿಂದಾಗಿಯೇ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ (ಡಿಸೆಂಬರ್ 2023) ಕೈಗಾರಿಕಾ ಉತ್ಪಾದನೆಯ ಸೂಚ್ಯಂಕದ (ಐಐಪಿ) ಗ್ರಾಹಕ ಬಾಳಿಕೆ ಬರುವ ವಸ್ತುಗಳ ವಿಭಾಗದಲ್ಲಿ ಕೇವಲ 1 ಪ್ರತಿಶತದಷ್ಟು ಬೆಳವಣಿಗೆ ಕಂಡಿದೆ. ಭಾರತದ ಹೆಚ್ಚಿನ ಆರ್ಥಿಕ ಬೆಳವಣಿಗೆಯು ಸರ್ಕಾರದ ಬಂಡವಾಳ ವೆಚ್ಚದ ಹೆಚ್ಚಳ ಹಾಗೂ ಸ್ಪಿಲ್-ಓವರ್ ಪರಿಣಾಮದಿಂದಾಗಿ ಉತ್ತಮ ಬೆಳವಣಿಗೆ ಕಾಣುತ್ತಿದೆ. ಕೈಗಾರಿಕಾ ವಿಭಾಗಗಳಲ್ಲಿ ಬಂಡವಾಳ ಹೂಡಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಹಾಗೂ ನಿರ್ಮಾಣ ಸರಕುಗಳಲ್ಲಿನ ಚೇತರಿಕೆಯಿಂದಾಗಿ ಈ ಬೆಳವಣಿಗೆ ಗೋಚರಿಸುತ್ತಿದೆ. ಪ್ರಸಕ್ತ ಹಣಕಾಸು ವರ್ಷದ 9ನೇ ತಿಂಗಳಲ್ಲಿ ಬೆಳವಣಿಗೆ ದರ ಕ್ರಮವಾಗಿ 7 ಮತ್ತು 10.4 ರಷ್ಟಾಗಿದೆ.

ದುರ್ಬಲ ರಫ್ತಿನಿಂದಾಗಿ ಜಿಡಿಪಿ ಮೇಲೆ ಪರಿಣಾಮ: ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಗೆ ಒಂದು ಪ್ರಮುಖ ಅಪಾಯವೆಂದರೆ ಅದು ರಪ್ತು ಪ್ರಮಾಣದಲ್ಲಿನ ಇಳಿಕೆ. ದುರ್ಬಲಗೊಳ್ಳುತ್ತಿರುವ ರಫ್ತು ಸದೃಢ ಆರ್ಥಿಕ ಬೆಳವಣಿಗೆಗೆ ಹೊಡೆತ ನೀಡಲಿದೆ. ಹೆಚ್ಚುತ್ತಿರುವ ವ್ಯಾಪಾರ ಕೊರತೆ ಮತ್ತು ಭೌಗೋಳಿಕ ರಾಜಕೀಯ ವಿಘಟನೆಯಿಂದ ಜಿಡಿಪಿಗೆ ತುಸು ಹೊಡೆತ ನೀಡುವ ಸಾಧ್ಯತೆಗಳಿವೆ.

FY 2024-25ನೇ ಆರ್ಥಿಕ ವರ್ಷದಲ್ಲಿ ರಫ್ತುಗಳು ಸಹ ಜಾಗತಿಕ ಹೆಡ್‌ವಿಂಡ್‌ಗಳನ್ನು ಎದುರಿಸುವ ಸಾಧ್ಯತೆಯಿದೆ. ಭಾರತದ ಸರಕು ಮತ್ತು ಸೇವೆಗಳ ರಫ್ತುಗಳು ಈಗಾಗಲೇ ಜನವರಿಯಲ್ಲಿ ಶೇಕಡಾ 0.14 ರಷ್ಟು ಋಣಾತ್ಮಕ ಬೆಳವಣಿಗೆ ದರವನ್ನು ದಾಖಲಿಸಿವೆ. ಇದು ಜಿಡಿಪಿ ಬೆಳವಣಿಗೆ ಮೇಲೆ ತುಸು ಹೊಡೆತ ನೀಡುವ ಸಾಧ್ಯತೆ ಇದೆ.

ರೇಟಿಂಗ್​​ ಏಜೆನ್ಸಿಯ ಅರ್ಥಶಾಸ್ತ್ರಜ್ಞರ ಪ್ರಕಾರ, ಮುಂದಿನ ಹಣಕಾಸು ವರ್ಷದಲ್ಲಿ ಒಟ್ಟು ಮೌಲ್ಯವರ್ಧನೆ (GVA) ಮತ್ತು ಕಾರ್ಪೊರೇಟ್ ಲಾಭದಾಯಕತೆಯ ಮೇಲೆ ಪರಿಣಾಮ ಬೀರುವ ಮತ್ತೊಂದು ಕಾರಣ ಎಂದರೆ ಅದು ಸಗಟು ಬೆಲೆ ಸೂಚ್ಯಂಕ (WPI). ಭಾರತದಲ್ಲಿ, ನಾಮಮಾತ್ರದ GDP ಬೆಳವಣಿಗೆ ದರದಿಂದ ಸಗಟು ಬೆಲೆ ಸೂಚ್ಯಂಕವನ್ನು (WPI) ಸರಿಹೊಂದಿಸುವ ಮೂಲಕ ನೈಜ GDP ಬೆಳವಣಿಗೆ ದರವನ್ನು ಲೆಕ್ಕಹಾಕಲಾಗುತ್ತದೆ. ಇದರರ್ಥ, ಡಬ್ಲ್ಯುಪಿಐ ಹೆಚ್ಚಳವು, ಹೊಂದಾಣಿಕೆಯಿಂದಾಗಿ ನೈಜ ಜಿಡಿಪಿ ಬೆಳವಣಿಗೆ ದರವನ್ನು ಕಡಿಮೆ ಮಾಡುತ್ತದೆ.

ಇದನ್ನು ಓದಿ: ಐಎಂಇಇಸಿ ಕಾರಿಡಾರ್: ಭೌಗೋಳಿಕ, ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.