ETV Bharat / bharat

ಜ್ಞಾನವಾಪಿ ಮಸೀದಿ ಆವರಣದಲ್ಲಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಹಿಂದೂಗಳಿಗೆ ಕೋರ್ಟ್​ ಅವಕಾಶ

author img

By ETV Bharat Karnataka Team

Published : Jan 31, 2024, 4:22 PM IST

Updated : Jan 31, 2024, 4:57 PM IST

ಜ್ಞಾನವಾಪಿ ಮಸೀದಿಯಲ್ಲಿನ ಶಿವಲಿಂಗಕ್ಕೆ ಪೂಜೆ ಮಾಡಲು ಹಿಂದೂಗಳಿಗೆ ಅವಕಾಶ ನೀಡಲಾಗಿದೆ. 7 ದಿನಗಳಲ್ಲಿ ಪೂಜೆ ಜರುಗುವಂತೆ ನೋಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.

ಶಿವಲಿಂಗಕ್ಕೆ ಪೂಜೆ
ಶಿವಲಿಂಗಕ್ಕೆ ಪೂಜೆ

ವಾರಾಣಸಿ (ಉತ್ತರ ಪ್ರದೇಶ): ವಿವಾದಿತ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ಮೊದಲ ದೊಡ್ಡ ಜಯ ಸಿಕ್ಕಿದೆ. ಜ್ಞಾನವಾಪಿ ಪ್ರದೇಶದಲ್ಲಿ ಪತ್ತೆಯಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಾರಾಣಸಿ ಜಿಲ್ಲಾ ಕೋರ್ಟ್​ ಬುಧವಾರ ಅಂಗೀಕರಿಸಿದೆ. ಶಿವಲಿಂಗಕ್ಕೆ ಪೂಜೆ ಸಲ್ಲಿಸಲೂ ಅವಕಾಶ ನೀಡಿದೆ.

ಮೂಲ ಕಾಶಿ ವಿಶ್ವನಾಥ ಎಂದು ಹೇಳಲಾಗುವ ಶಿವಲಿಂಗಕ್ಕೆ ಹಿಂದೂಗಳು ಪೂಜೆ ಸಲ್ಲಿಸಬಹುದಾಗಿದೆ. ಇದಕ್ಕಾಗಿ ಮುಂದಿನ 7 ದಿನಗಳಲ್ಲಿ ಅಗತ್ಯ ಕ್ರಮಕೈಗೊಳ್ಳಿ ಎಂದು ಕೋರ್ಟ್​ ತಿಳಿಸಿದ್ದಾಗಿ ಹಿಂದು ಪರ ವಕೀಲ ವಿಷ್ಣು ಶಂಕರ್ ಜೈನ್ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮಸೀದಿ ಆವರಣದಲ್ಲಿ ವಾಜುಖಾನಾ ಪ್ರದೇಶದಲ್ಲಿ ಭಾರತೀಯ ಪುರಾತತ್ವ ಇಲಾಖೆ (ಎಎಸ್​ಐ) ಸರ್ವೇ ನಡೆಸುತ್ತಿರುವ ವೇಳೆ ಶಿವಲಿಂಗ ಪತ್ತೆಯಾಗಿತ್ತು. ಇದು ಕಾಶಿಯ ಮೂಲ ವಿಶ್ವನಾಥ ಎಂದು ಹೇಳಲಾಗಿದೆ. ಹಿಂದೂಗಳ ಆರಾಧ್ಯದೈವವಾದ ಶಿವನು ಹಾಳು ಪ್ರದೇಶದಲ್ಲಿ ಬಿದ್ದಿದ್ದು, ಅದನ್ನು ಶುಚಿ ಮಾಡಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹಿಂದುಗಳು ಅರ್ಜಿ ಸಲ್ಲಿಸಿದ್ದರು.

ಏಳು ದಿನಗಳಲ್ಲಿ ಪೂಜೆ: ಹಿಂದು ಪರ ವಕೀಲ ವಿಷ್ಣು ಜೈನ್ ಮಾತನಾಡಿ, ಜ್ಞಾನವಾಪಿ ಮಸೀದಿ ಸಂಕೀರ್ಣದೊಳಗಿನ ಶಿವಲಿಂಗಕ್ಕೆ ಪೂಜೆ ಮಾಡಲು ವಾರಾಣಸಿ ಜಿಲ್ಲಾ ನ್ಯಾಯಾಲಯ ಬುಧವಾರ ಅವಕಾಶ ನೀಡಿದೆ. ನಿರ್ಬಂಧಿಸಲಾಗಿರುವ ಪ್ರದೇಶದಲ್ಲಿ ಇರುವ ಶಿವನಿಗೆ ಮುಂದಿನ 7 ದಿನಗಳಲ್ಲಿ ಪೂಜೆ ನಡೆಯಲಿದೆ. ಇದಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಕೋರ್ಟ್​ ಸೂಚನೆ ನೀಡಿದೆ ಎಂದರು. ಶಿವಲಿಂಗಕ್ಕೆ ಎಲ್ಲರೂ ಪೂಜೆ ಮಾಡುವ ಹಕ್ಕಿದೆ. ಇದನ್ನು ಕೋರ್ಟ್​ ಕೂಡ ಅಂಗೀಕರಿಸಿದೆ. ಪ್ರಕರಣದಲ್ಲಿ ಹಿಂದೂಗಳ ಪಾಲಿಗೆ ಸಿಕ್ಕ ಮೊದಲ ಜಯ ಇದಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿ ನಾಲ್ಕು ಕೊಠಡಿಗಳು ಇವೆ. ಅವುಗಳಲ್ಲಿ ಒಂದು ಇಲ್ಲಿ ವಾಸಿಸುತ್ತಿರುವ ವ್ಯಾಸ ಕುಟುಂಬದ ವಶದಲ್ಲಿದೆ. ವಂಶಪಾರಂಪರ್ಯವಾಗಿ ಪೂಜಾರಿಯಾಗಿರುವ ತಮಗೆ ಕೊಠಡಿ ಪ್ರವೇಶಿಸಿ ಪೂಜೆ ಪುನರಾರಂಭಿಸಲು ಅವಕಾಶ ನೀಡಬೇಕು ಎಂದು ವ್ಯಾಸರು ಕೋರ್ಟ್​ಗೆ ಮನವಿ ಮಾಡಿದ್ದರು.

ಶಿವಲಿಂಗ ಸರ್ವೇಗೆ ಮನವಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಪತ್ತೆಯಾಗಿರುವ ಶಿವಲಿಂಗದ ಸ್ವರೂಪ ಹಾಗೂ ಲಕ್ಷಣಗಳನ್ನು ನಿರ್ಧರಿಸಲು ಸಮೀಕ್ಷೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ(ಎಎಸ್‌ಐ) ನಿರ್ದೇಶನ ನೀಡುವಂತೆ ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್​ಗೆ ಮಂಗಳವಾರ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದಾರೆ.

ಇದರಲ್ಲಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯನ್ನು ರದ್ದುಗೊಳಿಸಿ 2023ರ ಮೇ 13 ರಂದು ನೀಡಿದ್ದ ಆದೇಶ ಹಾಗೂ ಶಿವಲಿಂಗದ ಕಾಲಮಾನವನ್ನು ಪತ್ತೆ ಹಚ್ಚಲು ಕಾರ್ಬನ್​ ಡೇಟಿಂಗ್​ ನಡೆಸುವಂತೆ 2023ರ ಮೇ 12ರಂದು ಅಲಹಬಾದ್​ ಹೈಕೋರ್ಟ್​ ನೀಡಿದ್ದ ನಿರ್ದೇಶನವನ್ನು ಮುಂದೂಡಿರುವ ತನ್ನ ಆದೇಶವನ್ನು ರದ್ದುಗೊಳಿಸುವಂತೆ ಕೋರಲಾಗಿದೆ.

ಇದನ್ನೂ ಓದಿ; ಜ್ಞಾನವಾಪಿ ಮಸೀದಿ: ಶಿವಲಿಂಗದ ASI ಸಮೀಕ್ಷೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

Last Updated : Jan 31, 2024, 4:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.