ETV Bharat / bharat

ಇವರೇ ನಿಜವಾದ ಹೀರೋ; ಕಾಶ್ಮೀರದ ಖ್ಯಾತ ದಿವ್ಯಾಂಗ ಕ್ರಿಕೆಟ್ ಪಟು ಅಮೀರ್ ಭೇಟಿಯಾದ ಸಚಿನ್ ತೆಂಡೂಲ್ಕರ್

author img

By ANI

Published : Feb 24, 2024, 4:57 PM IST

ದಿವ್ಯಾಂಗ ಪಟು ಅಮೀರ್ ಹುಸೇನ್ ಲೋನ್ ಅವರನ್ನು ಕೊನೆಗೂ ಭೇಟಿಯಾಗಿರುವ ಸಚಿನ್ ತೆಂಡೂಲ್ಕರ್, ಇವರೇ ನಿಜವಾದ ಹೋರೋ ಎಂದಿದ್ದಾರೆ.

ದಿವ್ಯಾಂಗ ಪಟು ಅಮೀರ್ ಭೇಟಿಯಾದ ಸಚಿನ್ ತೆಂಡೂಲ್ಕರ್
ದಿವ್ಯಾಂಗ ಪಟು ಅಮೀರ್ ಭೇಟಿಯಾದ ಸಚಿನ್ ತೆಂಡೂಲ್ಕರ್

ನವದೆಹಲಿ: ಕಾಶ್ಮೀರದ ಖ್ಯಾತ ದಿವ್ಯಾಂಗ ಪಟು, ಕ್ರಿಕೆಟ್ ತಂಡದ ನಾಯಕ ಅಮೀರ್ ಹುಸೇನ್ ಲೋನ್ (Amir Hussain Lone) ಅವರನ್ನು ಭಾರತದ ಕ್ರಿಕೆಟ್​ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕೊನೆಗೂ ಭೇಟಿಯಾಗಿದ್ದಾರೆ. ಭೇಟಿಯ ಈ ಮಧುರ ಕ್ಷಣವನ್ನು ತಮ್ಮ ಎಕ್ಸ್​​ (ಟ್ವಿಟ್ಟರ್​) ನಲ್ಲಿ ವಿಡಿಯೋ ಮೂಲಕ ಸಚಿನ್ ತೆಂಡೂಲ್ಕರ್ ಹಂಚಿಕೊಂಡಿದ್ದಾರೆ. ''ಇವರೇ ನಿಜವಾದ ಹೀರೋ, ಇವರೇ ನಮ್ಮ ಸ್ಫೂರ್ತಿ'' ಎಂದು ಅಮೀರ್ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

ಇತ್ತೀಚೆಗೆ ಕುಟುಂಬದೊಂದಿಗೆ ದಕ್ಷಿಣ ಕಾಶ್ಮೀರಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಸಚಿನ್ ತೆಂಡೂಲ್ಕರ್, ಪಹಲ್ಗಾಮ್‌ಗೆ ತೆರಳಿದ್ದರು. ಈ ವೇಳೆ ಪಕ್ಕದಲ್ಲಿದ್ದ ಬ್ಯಾಟ್ ತಯಾರಿಕಾ ಕಾರ್ಖಾನೆಯಲ್ಲಿ ಸ್ವಲ್ಪ ಸಮಯ ಕಳೆದಿದ್ದರು. ಮಾಲೀಕರ ಮನೆಯಲ್ಲಿ ಚಹಾ ಸಹ ಸೇವಿಸಿದ್ದರು. ಬಳಿಕ ಶುಕ್ರವಾರ ಅಮೀರ್ ಅವರ ಮನೆಗೂ ಭೇಟಿ ನೀಡಿದ್ದರು. ಇದಕ್ಕೂ ಮುನ್ನ ಸಚಿನ್ ಅವರ ಕಾಶ್ಮೀರದ ಪ್ರವಾಸ ತಿಳಿದ ಅಮೀರ್, ಜಾಲತಾಣದಲ್ಲಿ ಅವರನ್ನು ಸ್ವಾಗತಿಸಿದ್ದರು. ಅಲ್ಲದೇ ಭೇಟಿ ಬಗ್ಗೆ ಬಯಕೆ ವ್ಯಕ್ತಪಡಿಸಿದ್ದರು. ಸಚಿನ್ ಕೂಡ ಭೇಟಿಯಾಗುವುದಾಗಿ ಹೇಳಿದ್ದರು. ಅದರಂತೆ ಇದೀಗ ಭೇಟಿ ನೀಡಿ ಅಮೀರ್ ಆಸೆಯನ್ನು ಈಡೇರಿಸಿದ್ದಾರೆ. ಅಲ್ಲದೇ ಭೇಟಿಯ ಈ ಕ್ಷಣವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಮೀರ್‌ಗೆ ತಮ್ಮ ಬಳಿ ಇದ್ದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿರುವ ಸಚಿನ್ ತೆಂಡೂಲ್ಕರ್, ''ಅಮೀರ್‌ ಈ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿ, ಅವರು ನಮ್ಮೆಲ್ಲರ ಹೀರೋ, ಅವರನ್ನು ಭೇಟಿಯಾಗಿದ್ದಕ್ಕೆ ತೃಪ್ತಿ ತರಿಸಿದೆ, ನಿಜವಾದ ನಾಯಕ ಅಮೀರ್‌ಗೆ ಸ್ಫೂರ್ತಿದಾಯಕವಾಗಿರಲಿ'' ಎಂದು ಶನಿವಾರ (ಫೆ.24) ಎಕ್ಸ್​ನಲ್ಲಿ ವಿಡಿಯೋ ಸಹಿತ ಪೋಸ್ಟ್ ಮಾಡಿದ್ದಾರೆ. ಕೆಲ ಸಮಯ ಸಚಿನ್ ತೆಂಡೂಲ್ಕರ್ ಜೊತೆ ಮತುಕಥೆ ಮತ್ತು ಸಂವಾದ ನಡೆಸಿರುವ 34 ವರ್ಷದ ಅಮೀರ್‌, ಭೇಟಿಯ ಕ್ಷಣಕ್ಕೆ ಭಾವುಕರಾಗಿದ್ದಾರೆ. ಸಾಧಕರಿಬ್ಬರ ಸಮಾಗಮಕ್ಕೆ ಹಲವು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

8ನೇ ವಯಸ್ಸಿನಲ್ಲಿ ಗರಗಸದ ಕಾರ್ಖಾನೆ ಅಪಘಾತದಲ್ಲಿ ಎರಡು ತೋಳುಗಳನ್ನು ಕಳೆದುಕೊಂಡಿರುವ ಅಮೀರ್, ವಿಶಿಷ್ಟ ಆಟದ ಶೈಲಿಯ ಮೂಲಕ ಪ್ರಸಿದ್ಧಿ ಪಡೆದವರು. ತನ್ನ ಪಾದಗಳನ್ನು ಬಳಸಿ ಬೌಲಿಂಗ್ ಮಾಡಿದರೆ, ಕುತ್ತಿಗೆಯಲ್ಲಿ ಬ್ಯಾಟ್ ಅ​ನ್ನು ಸಿಕ್ಕಿಸಿಕೊಂಡು ಉತ್ತಮವಾಗಿ ಬ್ಯಾಟಿಂಗ್ ಕೂಡ ಮಾಡುತ್ತಾರೆ. 2013ರಲ್ಲಿ ಶಿಕ್ಷಕರೊಬ್ಬರು ಅಮೀರ್‌ ಅವರ ಈ ವಿಶಿಷ್ಟ ಹಾಗೂ ಕ್ರಿಕೆಟ್ ಪ್ರತಿಭೆಯನ್ನು ಕಂಡು ಪ್ಯಾರಾ ಕ್ರಿಕೆಟ್‌ಗೆ ಪರಿಚಯಿಸಿದ್ದರು. 2013 ರಿಂದ ವೃತ್ತಿಪರವಾಗಿ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಅಮೀರ್‌, ಇದೀಗ ಅಂಗವಿಕಲ ಕ್ರಿಕೆಟ್ ತಂಡದ ನಾಯಕ ಕೂಡ ಹೌದು. ಜೊತೆಗೆ ತಮ್ಮ ವಿಶಿಷ್ಠ ಪ್ರತಿಭೆಯಿಂದ ಕ್ರಿಕೆಟ್​ ಪಟುಗಳಿಗೆ ತೀರಾ ಹತ್ತಿರ ಕೂಡ ಆದವರು.

''ಎರಡು ಕೈಗಳು ಇಲ್ಲದ ಅಮೀರ್, ಕ್ರಿಕೆಟ್​ ಆಡುವುದನ್ನು ಜಾಲತಾಣದಲ್ಲಿ ನೋಡಿದ್ದ ಸಚಿನ್ ತೆಂಡೂಲ್ಕರ್, ಅವರು ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಆಟದ ಬಗ್ಗೆ ಅವರು ಎಷ್ಟು ಪ್ರೀತಿ ಮತ್ತು ಸಮರ್ಪಣಾ ಮನೋಭಾವ ಹೊಂದಿದ್ದಾರೆಂದು ತೋರಿಸುತ್ತದೆ. ಭವಿಷ್ಯದಲ್ಲಿ ಅವರನ್ನು ಭೇಟಿ ಮಾಡುವೆ'' ಎಂದು ಹೇಳಿದ್ದರು. ಅದರಂತೆ ಇತ್ತೀಚೆಗೆ ಭೇಟಿಯಾಗಿದ್ದಾರೆ. ಸಚಿನ್ ಅಷ್ಟೇ ಅಲ್ಲದೇ ಎರಡೂ ಕೈಗಳು ಇಲ್ಲದಿದ್ದರೂ ನಿರಾಯಸವಾಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡುವ ಇವರ ವಿಶಿಷ್ಠ ಆಟಕ್ಕೆ ಮಾಜಿ ಪಟು ಆಶಿಶ್ ನೆಹ್ರಾ ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. ಶಾರ್ಜಾದಲ್ಲಿ ನಡೆದ ಯುನೈಟೆಡ್ ಅರಬ್ ಎಮಿರೇಟ್ಸ್ ದುಬೈ ಪ್ರೀಮಿಯರ್ ಲೀಗ್‌ನಲ್ಲಿ ಇಬ್ಬರು ಭೇಟಿ ಸಹ ಆಗಿದ್ದರು.

ಅಮೀರ್ ಅವರ ಅಸಾಧಾರಣ ಸಾಧನೆಯನ್ನು ತೆರೆ ಮೇಲೆ ತರಲು ಮುಂಬೈ ಮೂಲದ ಚಲನಚಿತ್ರ ನಿರ್ಮಾಣ ಸಂಸ್ಥೆ ಪಿಕಲ್ ಎಂಟರ್‌ಟೈನ್‌ಮೆಂಟ್ ಮುಂದೆ ಬಂದಿದೆ. ಅಮೀರ್ ಎಂಬ ಶೀರ್ಷಿಕೆಯ ಈ ಬಯೋಪಿಕ್​ಗೆ ಬಿಗ್ ಬ್ಯಾಟ್ ಫಿಲ್ಮ್ಸ್​ಗೆ ಬಂಡವಾಳ ಹೂಡುತ್ತಿದ್ದು, ಮಹೇಶ್ ವಿ ಭಟ್ ನಿರ್ದೇಶಿಸುತ್ತಿದ್ದಾರೆ. ಈ ಬಯೋಪಿಕ್​​ನಲ್ಲಿ ಅಮೀರ್ ಹುಸೇನ್ ಲೋನ್ (Amir Hussain Lone) ಪಾತ್ರದಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದು ಬಾಲಿವುಡ್ ನಟ ವಿಕ್ಕಿ ಕೌಶಲ್ ಹೇಳಿದ್ದರು.

ಇದನ್ನೂ ಓದಿ: ಅಂಡರ್‌ಡಾಗ್ಸ್ ಹಣೆಪಟ್ಟಿಯೊಂದಿಗೆ ಡಬ್ಲ್ಯುಪಿಎಲ್‌ ಪ್ರವೇಶಿಸಲು ಬೇಸರವಿಲ್ಲ: ಯುಪಿ ವಾರಿಯರ್ಸ್ ನಾಯಕಿ ಅಲೀಸಾ ಹೀಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.