ETV Bharat / bharat

ದುಷ್ಕರ್ಮಿಗಳಿಂದ ತಹಶೀಲ್ದಾರ್ ರಮಣಯ್ಯ ಬರ್ಬರ ಹತ್ಯೆ; ಕಾರಣ?

author img

By ETV Bharat Karnataka Team

Published : Feb 3, 2024, 2:25 PM IST

Updated : Feb 3, 2024, 2:38 PM IST

ವಿಶಾಖಪಟ್ಟಣಂ ಜಿಲ್ಲೆಯಲ್ಲಿ ತಹಶೀಲ್ದಾರ್ ಸಣಪಾಲ ರಮಣಯ್ಯ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅಪರಿಚಿತರು ಕಬ್ಬಿಣದ ರಾಡ್​ಗಳಿಂದ ರಮಣಯ್ಯನವರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Tehsildar brutally murdered  Tehsildar Sanapala Ramanaiah  Visakhapatnam  ತಹಶೀಲ್ದಾರ್ ಸಣಪಾಲ ರಮಣಯ್ಯ  ತಹಶೀಲ್ದಾರ್ ಬರ್ಬರ ಹತ್ಯೆ
ವಿಶಾಖಪಟ್ಟಣಂ: ದುಷ್ಕರ್ಮಿಗಳಿಂದ ತಹಶೀಲ್ದಾರ್ ರಾಮಣ್ಣಯ್ಯ ಬರ್ಬರ ಹತ್ಯೆ

ವಿಶಾಖಪಟ್ಟಣಂ (ಆಂಧ್ರ ಪ್ರದೇಶ): ವಿಶಾಖಪಟ್ಟಣಂನ ಚಿನಗಡಿಲಿ ಗ್ರಾಮಾಂತರ ತಹಶೀಲ್ದಾರ್ ರಮಣಯ್ಯ ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ರಮಣಯ್ಯ ವಾಸವಿದ್ದ ಕೊಮ್ಮಾಡಿಯ ಚರಣ್ ಕ್ಯಾಸಲ್ ಅಪಾರ್ಟ್‌ಮೆಂಟ್‌ನಲ್ಲಿ ಅವರನ್ನು ಹತ್ಯೆ ಮಾಡಲಾಗಿದೆ. ಅಪರಿಚಿತ ವ್ಯಕ್ತಿಗಳು ಕಬ್ಬಿಣದ ಸರಳುಗಳಿಂದ ರಮಣಯ್ಯ ಮೇಲೆ ಹಲ್ಲೆ ನಡೆಸಿದ್ದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ರಮಣಯ್ಯ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ನಾಲ್ವರು ದುಷ್ಕರ್ಮಿಗಳು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಶಾಖ ಸಿಪಿ ರವಿಶಂಕರ್ ಅಯ್ಯರ್ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ.

ಅಧಿಕಾರ ವಹಿಸಿಕೊಂಡಿದ್ದ ದಿನವೇ ರಮಣಯ್ಯ ಮೇಲೆ ಹಲ್ಲೆ: ವಿಜಯನಗರ ಜಿಲ್ಲೆಯ ಬೊಂಡಪಲ್ಲಿ ತಹಶೀಲ್ದಾರ್ ಆಗಿ ರಮಣಯ್ಯ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದರು. ಬೊಂಡಪಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯಕ್ಕೆ ಸೇರಿದ ದಿನವೇ ದಾಳಿ ನಡೆದಿತ್ತು. ವಿಶಾಖ ಗ್ರಾಮಾಂತರ ಚಿನಗಡಿಲಿ ತಹಶೀಲ್ದಾರ್​ ಆಗಿದ್ದ ಸಣಪಾಲ ರಮಣಯ್ಯ ಅವರನ್ನು ಚುನಾವಣೆ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿಜಯನಗರ ಜಿಲ್ಲೆಗೆ ವರ್ಗಾವಣೆ ಮಾಡಲಾಗಿತ್ತು. ಕೊಮ್ಮಾಡಿಯ ಅಪಾರ್ಟ್‌ಮೆಂಟ್‌ನ ಐದನೇ ಮಹಡಿಯಲ್ಲಿ ವಾಸವಿದ್ದ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡ ಬಳಿಕ ಮನೆಗೆ ಮರಳಿದ್ದರು.

ರಾತ್ರಿ 10 ಗಂಟೆಗೆ ದೂರವಾಣಿ ಕರೆ ಸ್ವೀಕರಿಸಿದ ಬಳಿಕ ಕೆಳಗಿಳಿದು ಅಪಾರ್ಟ್‌ಮೆಂಟ್‌ನ ಗೇಟ್‌ನಲ್ಲಿ ವ್ಯಕ್ತಿಯೊಬ್ಬರನ್ನು ಭೇಟಿಯಾಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಈ ವೇಳೆ, ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ತಹಶೀಲ್ದಾರ್ ಮೇಲೆ ದುಷ್ಕರ್ಮಿಗಳು ಕಬ್ಬಿಣದ ಸಲಾಕೆಯಿಂದ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿ ರಮಣಯ್ಯ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕಾವಲುಗಾರ ಜೋರಾಗಿ ಕೂಗುತ್ತಿದ್ದಂತೆ ದುಷ್ಕರ್ಮಿಗಳು ಅಲ್ಲಿಂದ ಓಡಿ ಹೋದ್ದಾರೆ. ಕೂಡಲೇ ಕಾವಲುಗಾರ ತಹಶೀಲ್ದಾರ್ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಹಶೀಲ್ದಾರ್ ಸಣಪಾಲ ರಾಮಣ್ಣಯ್ಯ ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ.

ನಾಲ್ವರು ಶಂಕಿತರ ಬಂಧನ: ತಹಶೀಲ್ದಾರ್ ರಮಣಯ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ತೀವ್ರಗೊಂಡಿದೆ. ನಾಲ್ವರು ಶಂಕಿತರನ್ನು ವಿಶಾಖಪಟ್ಟಣಂ ಪೊಲೀಸರು ಬಂಧಿಸಿದ್ದಾರೆ. ಶಂಕಿತ ಆರೋಪಿಗಳನ್ನು ಡಿಸಿಪಿ ಮಣಿಕಂಠ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳನ್ನು ಬಂಧಿಸಲು 12 ತಂಡಗಳನ್ನು ರಚಿಸಿರುವ ವಿಶಾಖ ಸಿಪಿ ರವಿಶಂಕರ್, ಸಿಸಿಟಿವಿ ಕ್ಯಾಮೆರಾಗಳ ಆಧಾರದ ಮೇಲೆ ತನಿಖೆ ಮುಂದುವರೆಸಿದ್ದಾರೆ. ದಾಳಿಯ ಹಿಂದಿನ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತಹಶೀಲ್ದಾರ್ ರಮಣಯ್ಯ ಅವರಿಗೆ ಬಂದಿರುವ ಕರೆಗಳು ಸೇರಿಂದ ಇತರ ಅಂಶಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ತಹಶೀಲ್ದಾರ್ ಹತ್ಯೆಯಿಂದ ಕಂದಾಯ ಇಲಾಖೆಯಲ್ಲಿ ಆತಂಕ ಮೂಡಿದೆ.

ಇದನ್ನೂ ಓದಿ: ಕಾಸ್ಮೆಟಿಕ್​ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಒಬ್ಬನ ಸಾವು, 29 ಮಂದಿ ರಕ್ಷಣೆ

Last Updated : Feb 3, 2024, 2:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.