ETV Bharat / bharat

ಇಲ್ಲಿ ಶಾಲಾ ಸಮಯ ಬದಲು: ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಪಾಠ

author img

By ETV Bharat Karnataka Team

Published : Feb 21, 2024, 10:57 AM IST

ಬಿಹಾರದಲ್ಲಿ ಶಾಲಾ ಸಮಯ ಬದಲು ಮಾಡಿ ಶಿಕ್ಷಣ ಇಲಾಖೆ ಆದೇಶಿಸಿದೆ. ಹಿಂದಿನ ಮೈತ್ರಿ ಸರ್ಕಾರದಲ್ಲಿ ಆರ್​ಜೆಡಿಯ ಶಿಕ್ಷಣ ಸಚಿವರು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಶಾಲಾ ಸಮಯವನ್ನು ಹೆಚ್ಚಿಸಿದ್ದರು.

ಬಿಹಾರದಲ್ಲಿ ಶಾಲಾ ಸಮಯ ಬದಲು
ಬಿಹಾರದಲ್ಲಿ ಶಾಲಾ ಸಮಯ ಬದಲು

ಪಾಟ್ನಾ (ಬಿಹಾರ) : ಸಿಎಂ ನಿತೀಶ್​ಕುಮಾರ್​ ಅವರ ಭರವಸೆಯಂತೆ ಬಿಹಾರದಲ್ಲಿ ಶಾಲೆಯ ಸಮಯವನ್ನು ಕಡಿತ ಮಾಡಲಾಗಿದೆ. ಈಗಿರುವ 8 ಗಂಟೆ ಶಾಲಾ ಅವಧಿಯನ್ನು 6 ಗಂಟೆಗೆ ಇಳಿಸಲಾಗಿದೆ. ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ಶಾಲೆಗಳಲ್ಲಿ ಪಾಠ ಪ್ರವಚನ ನಡೆಯಲಿವೆ.

ಮಕ್ಕಳಿಗೆ ಹೊರೆಯಾಗಿದ್ದ 8 ಗಂಟೆಗಳ ಶಾಲಾ ಅವಧಿಯನ್ನು ಕಡಿಮೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಧಾನಸಭೆಯಲ್ಲಿ ಹೇಳಿದ ನಂತರ, ಶಿಕ್ಷಣ ಇಲಾಖೆ ಮಂಗಳವಾರ ಹೊಸ ಶಾಲಾ ಸಮಯವನ್ನು ಪ್ರಕಟಿಸಿದೆ.

ಪ್ರೌಢ ಶಿಕ್ಷಣ ನಿರ್ದೇಶಕ ಕನ್ಹಯ್ಯಾ ಪ್ರಸಾದ್ ಶ್ರೀವಾಸ್ತವ ಅವರು ಮಂಗಳವಾರ ತಡರಾತ್ರಿ ಹೊರಡಿಸಿದ ಸುತ್ತೋಲೆಯಲ್ಲಿ ಶಾಲಾ ಅವಧಿಯ ಹೊಸ ಸಮಯವು ತಕ್ಷಣದಿಂದ ಜಾರಿಗೆ ಬರಲಿವೆ ಎಂದು ತಿಳಿಸಿದೆ.

ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಮಾತನಾಡಿದ್ದ ಸಿಎಂ ನಿತೀಶ್​ಕುಮಾರ್​, ಶಾಲೆಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಅಂದರೆ ಒಟ್ಟು 8 ಗಂಟೆಗಳ ಕಾಲದ ಅವಧಿಯನ್ನು 2 ಗಂಟೆಗಳಷ್ಟು ಕಡಿಮೆ ಮಾಡಲಾಗುವುದು. ಹೊಸ ಸಮಯವು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಇರುತ್ತದೆ. ಇದು ಮಕ್ಕಳಿಗೂ ಅನುಕೂಲವಾಗಲಿದೆ ಎಂದು ಹೇಳಿದ್ದರು.

ಬೇಡಿಕೆ ಇಟ್ಟಿದ್ದ ಪ್ರತಿಪಕ್ಷಗಳು: ಇದಕ್ಕೂ ಮೊದಲು ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟಿಸಿ, ಶಾಲಾ ಅವಧಿಯನ್ನು ಕಡಿತ ಮಾಡಬೇಕು. 8 ಗಂಟೆಗಳ ಅವಧಿ ಮಕ್ಕಳ ಓದಿನ ಮೇಲೆ ಪರಿಣಾಮ ಬೀರುತ್ತದೆ. ಪಠ್ಯೇತರ ಚಟುವಟಿಕೆಗಳಿಗೆ ಸಮಯ ಹೊಂದಿಸಲು ಸಾಧ್ಯವಾಗುವುದಿಲ್ಲ ಎಂದು ಆಗ್ರಹಿಸಿದ್ದರು.

ಶೈಕ್ಷಣಿಕ ಚಟುವಟಿಕೆಗಳಿಗೆ ಶಾಲೆಗಳ ಸಮಯವು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಮಾತ್ರ ಇರಬೇಕು. ಅದ ಬದಲಿಗೆ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಈಗ ಶಾಲೆಗಳು ನಡೆಯುತ್ತಿವೆ. ಈ ಸಮಯವು ಅಪ್ರಸ್ತುತವಾಗಿದೆ ಎಂದು ಟೀಕಿಸಿದ್ದರು.

ಇದಕ್ಕೆ ಉತ್ತರಿಸಿದ ಸಿಎಂ ನಿತೀಶ್​, ಶಾಲಾ ಸಮಯದ ಬಗ್ಗೆ ಆಕ್ಷೇಪಗಳಿದ್ದರೆ ಮೊದಲೇ ಸರ್ಕಾರದ ಗಮನಕ್ಕೆ ತರಬೇಕಿತ್ತು. ತಕ್ಷಣವೇ ಇಲಾಖೆಯ ಅಧಿಕಾರಿಗೆ ಸಮಯ ಬದಲಾಯಿಸುವಂತೆ ಸೂಚಿಸುತ್ತೇನೆ. ನೀವು (ವಿರೋಧ ಸದಸ್ಯರು) ಮೊದಲೇ ಯಾಕೆ ವಿಷಯದ ಗಮನ ಸೆಳೆಯಲಿಲ್ಲ. ಈಗ ಹೊಸ ಸಮಯವು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಇರಲಿದೆ ಎಂದು ಘೋಷಿಸಿದ್ದರು.

ಸಮಯ ಬದಲಿಸಿದ್ದ ಆರ್​ಜೆಡಿ: ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಆರ್‌ಜೆಡಿಯ ಮಾಜಿ ಶಿಕ್ಷಣ ಸಚಿವ ಚಂದ್ರಶೇಖರ್ ಅವರು ಶಾಲಾ ಸಮಯವನ್ನು ಬದಲಿಸಿದ್ದರು. ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಶಾಲೆಯ ಅವಧಿಯನ್ನು ಹೆಚ್ಚಿಸಲು ಶಿಕ್ಷಣ ಇಲಾಖೆಗೆ ಶಿಫಾರಸು ಮಾಡಿದ್ದರು. ಕಳೆದ ವರ್ಷ ನವೆಂಬರ್‌ನಲ್ಲಿ ಶಾಲೆಗಳಿಗೆ ಹೊಸ ಸಮಯವನ್ನು ನಿಗದಿಪಡಿಸಿ, ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ಆದೇಶಿಸಲಾಗಿತ್ತು.

ಇದನ್ನೂ ಓದಿ: ವಿಶ್ವಾಸಮತ ಗೆದ್ದ ನಿತೀಶ್​ ಕುಮಾರ್‌ಗೆ ಬಿ'ಹಾರ'​: ವಿಪಕ್ಷಗಳಿಂದ ಸದನ ಬಹಿಷ್ಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.