ETV Bharat / bharat

ವಿಶ್ವಾಸಮತ ಗೆದ್ದ ನಿತೀಶ್​ ಕುಮಾರ್‌ಗೆ ಬಿ'ಹಾರ'​: ವಿಪಕ್ಷಗಳಿಂದ ಸದನ ಬಹಿಷ್ಕಾರ

author img

By ETV Bharat Karnataka Team

Published : Feb 12, 2024, 4:29 PM IST

ಬಿಹಾರ ಸಿಎಂ ನಿತೀಶ್ ​ಕುಮಾರ್​ ನಿರೀಕ್ಷೆಯಂತೆ ವಿಶ್ವಾಸಮತ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ವಿಪಕ್ಷಗಳು ಸದನ ಬಹಿಷ್ಕರಿಸಿದವು.

ವಿಶ್ವಾಸಮತ ಗೆದ್ದ ನಿತೀಶ್​ಕುಮಾರ್
ವಿಶ್ವಾಸಮತ ಗೆದ್ದ ನಿತೀಶ್​ಕುಮಾರ್

ಪಾಟ್ನಾ(ಬಿಹಾರ): ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರ ವಿಧಾನಸಭೆಯಲ್ಲಿಂದು ವಿಶ್ವಾಸ ಮತ ಗೆದ್ದುಕೊಂಡಿತು. ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷಗಳು ಸದನದಿಂದ ವಾಕ್‌ಔಟ್ ನಡೆಸಿದವು. ಇದರಿಂದಾಗಿ ನೂತನ ಸರ್ಕಾರ 129-0 ಅಂತರದ ಮತಗಳಿಂದ ಬಹುಮತ ಸಾಬೀತು ಮಾಡಿತು.

ನಿರೀಕ್ಷಿತ ಬಹುಮತ ಹೊಂದಿದ್ದ ಸಿಎಂ ನಿತೀಶ್ ​ಕುಮಾರ್​, ವಿಪಕ್ಷಗಳ ಆರೋಪಗಳಿಗೆ ಪ್ರತಿದಾಳಿ ನಡೆಸಿದರು. ಇದೇ ವೇಳೆ ಬಿಜೆಪಿಯ ಇಬ್ಬರು ಡಿಸಿಎಂಗಳು ಆರ್​ಜೆಡಿಯನ್ನು ಗೂಂಡಾ ಸರ್ಕಾರಕ್ಕೆ ಹೋಲಿಸಿದರು. ದೀರ್ಘ ಚರ್ಚೆಯ ಬಳಿಕ ಸ್ಪೀಕರ್​ ಮತ ಪ್ರಕ್ರಿಯೆ ನಡೆಸಿದಾಗ ಆರ್​ಜೆಡಿ, ಕಾಂಗ್ರೆಸ್​, ಎಡಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಸದನದಿಂದ ಹೊರನಡೆದವು. ಇದರಿಂದ ಬಿಜೆಪಿ 78, ಜೆಡಿಯು 45, ಎಚ್​ಎಎಂ 4 ಹಾಗು ಇತರ ಇಬ್ಬರು ಶಾಸಕರು ಸೇರಿ 129 ಮತಗಳು ನಿತೀಶ್​ಕುಮಾರ್​ ಸರ್ಕಾರದ ಪರ ಬಿದ್ದವು.

243 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕಾಗಿ 122 ಸದಸ್ಯರ ಮತಗಳು ಬೇಕಾಗಿದ್ದವು. ವಿಪಕ್ಷಗಳ ಬಹಿಷ್ಕಾರದಿಂದಾಗಿ ನಿತೀಶ್​ ಬೆಂಬಲಿತ ಬಿಜೆಪಿ, ಎಚ್​ಎಎಂ, ಇತರರು ಸೇರಿ 129 ಶಾಸಕರು ನಿತೀಶ್ ಸರ್ಕಾರಕ್ಕೆ ಬೆಂಬಲ ಸೂಚಿಸಿದರು.

ಆರ್​ಜೆಡಿಯಿಂದ ಭ್ರಷ್ಟ ಆಡಳಿತ: ವಿಶ್ವಾಸಮತ ಯಾಚನೆ ಚರ್ಚೆಯ ವೇಳೆ ಆರ್​ಜೆಡಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ನಿತೀಶ್​ ಕುಮಾರ್​, ರಾಜ್ಯದಲ್ಲಿ ಆರ್​ಜೆಡಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಅಂದಿನ ಎಲ್ಲ ಪ್ರಕರಣಗಳನ್ನು ತನಿಖೆಗೆ ಒಳಪಡಿಸಲಾಗುವುದು. ಹಲವಾರು ಕೋಮುಗಲಭೆಗಳೂ ನಡೆದಿವೆ ಎಂದರು.

2005ಕ್ಕಿಂತಲೂ ಮೊದಲು ರಾಜ್ಯದಲ್ಲಿ ಭ್ರಷ್ಟಾಚಾರದ ಸರ್ಕಾರವಿತ್ತು. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿತ್ತು. ಆರ್​ಜೆಡಿ ತನ್ನ ಆಡಳಿತದಲ್ಲಿ ಭ್ರಷ್ಟತೆಯನ್ನೇ ತುಂಬಿಕೊಂಡಿತ್ತು. ನಮ್ಮ ಸರ್ಕಾರ ಈ ಎಲ್ಲಾ ಕೇಸ್​​ಗಳನ್ನು ತನಿಖೆಗೆ ಒಳಪಡಿಸುತ್ತದೆ ಎಂದು ಘೋಷಿಸಿದರು.

ಇನ್ನು, ಸದನ ಆರಂಭವಾದಾಗ ಮೂವರು ಆರ್​ಜೆಡಿ ಶಾಸಕರು ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತು ಅಚ್ಚರಿ ಉಂಟುಮಾಡಿದರು. ಇದು ವಿಪಕ್ಷಗಳ ತೀವ್ರ ಅಸಮಾಧಾನಕ್ಕೂ ಕಾರಣವಾಯಿತು. ಆರ್‌ಜೆಡಿ ಶಾಸಕರಾದ ಚೇತನ್ ಆನಂದ್, ನೀಲಂ ದೇವಿ ಮತ್ತು ಪ್ರಹ್ಲಾದ್ ಯಾದವ್ ಆಡಳಿತ ಪಕ್ಷಗಳ ಸಾಲಿನಲ್ಲಿ ಕುಳಿತವರು. ಅವರ ಮತವನ್ನು ಅಮಾನ್ಯ ಮಾಡಬೇಕು ಎಂದು ಆಗ್ರಹಿಸಿದ ವಿಪಕ್ಷಗಳು, ಬಿಜೆಪಿ ಮತ್ತು ಜೆಡಿಯು ಪ್ರಜಾಪ್ರಭುತ್ವವನ್ನು ಹೈಜಾಕ್​ ಮಾಡುತ್ತಿವೆ. ಸಂವಿಧಾನದ ನೀತಿಗಳನ್ನೇ ಗಾಳಿಗೆ ತೂರಿವೆ ಎಂದು ಆರೋಪಿಸಿದವು.

ಸ್ಪೀಕರ್​ ವಿರುದ್ಧ ಅವಿಶ್ವಾಸ ಪಾಸು: ಬಿಹಾರ ವಿಧಾನಸಭೆ ಸ್ಪೀಕರ್ ಮತ್ತು ಆರ್‌ಜೆಡಿ ನಾಯಕ ಅವಧ್ ಬಿಹಾರಿ ಚೌಧರಿ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. 125 ಸದಸ್ಯರು ನಿರ್ಣಯದ ಪರವಾಗಿ ಮತ ಹಾಕಿದರೆ, ವಿರುದ್ಧವಾಗಿ 112 ಸದಸ್ಯರು ಮತ ಹಾಕಿದರು. ಆದರೂ, ಸ್ಥಾನ ಬಿಟ್ಟುಕೊಡದ ಸ್ಪೀಕರ್​ ಚೌಧರಿ ವಿಶ್ವಾಸಮತಯಾಚನೆ ಮುಗಿಸಿದರು.

ಇದನ್ನೂ ಓದಿ: 9ನೇ ಬಾರಿಗೆ ಸಿಎಂ ಆಗಿ ನಿತೀಶ್​ಕುಮಾರ್ ಪ್ರಮಾಣ; ಬಿಜೆಪಿಯ ಇಬ್ಬರಿಗೆ ಡಿಸಿಎಂ ಸ್ಥಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.