ETV Bharat / bharat

ಚುನಾವಣಾ ಬಾಂಡ್‌ಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಎಸ್​ಬಿಐ

author img

By PTI

Published : Mar 12, 2024, 7:02 PM IST

Updated : Mar 12, 2024, 8:40 PM IST

ಚುನಾವಣಾ ಬಾಂಡ್‌ಗಳ ವಿವರಗಳನ್ನು ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ಇಂದು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.

sbi-submits-details-of-electoral-bonds-to-election-commission-of-india
ಚುನಾವಣಾ ಬಾಂಡ್‌ಗಳ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಎಸ್​ಬಿಐ

ನವದೆಹಲಿ: ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ (ಎಸ್​ಬಿಐ) ಚುನಾವಣಾ ಬಾಂಡ್‌ಗಳ ವಿವರಗಳನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ವರದಿಗಳ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2018 ರಿಂದ ಸುಮಾರು ಮೂವತ್ತು ಕಂತುಗಳಲ್ಲಿ 16,518 ಕೋಟಿ ರೂ.ಗಳ ಚುನಾವಣಾ ಬಾಂಡ್​ಗಳನ್ನು ವಿತರಿಸಿದೆ. ಈಗ ಬ್ಯಾಂಕ್ ಡೇಟಾವನ್ನು ಆಯೋಗಕ್ಕೆ ಒದಗಿಸಿರುವುದರಿಂದ, ಕೇಂದ್ರ ಚುನಾವಣಾ ಆಯೋಗವು ಮಾರ್ಚ್ 15 ರಂದು ಸಂಜೆ 5 ಗಂಟೆಯೊಳಗೆ ಈ ವಿವರಗಳನ್ನು ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಾಗುವಂತೆ ಮಾಡಬೇಕಾಗಿದೆ. ಈ ತಿಂಗಳ ಕೊನೆಯಲ್ಲಿ ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯ ವೇಳಾಪಟ್ಟಿ ಪ್ರಕಟಿಸಲಿದೆ ಎಂಬ ವರದಿಗಳ ನಡುವೆ ಈ ಬೆಳೆವಣೀಗೆ ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ.

ನಿನ್ನೆ ಚುನಾವಣಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸಲು ಜೂನ್ 30 ರವರೆಗೆ ಸಮಯ ವಿಸ್ತರಿಸುವಂತೆ ಕೋರಿ ಎಸ್‌ಬಿಐ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠ ವಜಾಗೊಳಿಸಿತ್ತು. ಮಂಗಳವಾರ (ಮಾರ್ಚ್‌ 12) ಎಲ್ಲಾ ದಾನಿಗಳ ವಿವರಗಳನ್ನು ಬಹಿರಂಗಪಡಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ(SBI) ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಜೊತೆಗೆ ಮಾರ್ಚ್ 15ರ ಸಂಜೆ 5 ಗಂಟೆಯೊಳಗೆ ಚುನಾವಣಾ ಬಾಂಡ್​ಗಳ ಮಾಹಿತಿ ಸಂಗ್ರಹಿಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಭಾರತ ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ ನೀಡಿತ್ತು.

ಈ ಹಿಂದೆ ಸುಪ್ರೀಂ ಕೋರ್ಟ್ ತನ್ನ ಫೆಬ್ರವರಿ 15 ರ ಆದೇಶದಲ್ಲಿ ಕೇಂದ್ರ ಸರ್ಕಾರದ ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸಿ, ಚುನಾವಣೆಯ ಸಮಯದಲ್ಲಿ ಅನಾಮಧೇಯ ರಾಜಕೀಯ ದೇಣಿಗೆಯನ್ನು ಅನುಮತಿಸುವುದು ಅಸಂವಿಧಾನಿಕ ಎಂದು ಹೇಳಿತ್ತು. ಈ ತೀರ್ಪು ಎನ್​ಡಿಎ ಸರ್ಕಾರಕ್ಕೆ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗಿತ್ತು.

ಸುಪ್ರೀಂ ತೀರ್ಪನ್ನು ರಾಷ್ಟ್ರಪತಿಗಳು ಮರುಪರಿಶೀಲಿಸಬೇಕು: ಮತ್ತೊಂದೆಡೆ, ಚುನಾವಣಾ ಬಾಂಡ್ ಯೋಜನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ರಾಷ್ಟ್ರಪತಿಗಳು ಮರುಪರಿಶೀಲಿಸುಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (ಎಸ್​ಸಿಬಿಎ) ಮುಖ್ಯಸ್ಥ ಆದಿಶ್ ಸಿ ಅಗರ್​ವಾಲ್​ ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಅಗರ್​ವಾಲ್ ಅವರು ರಾಷ್ಟ್ರಪತಿಗಳಿಗೆ ಬರೆದ ಪತ್ರದಲ್ಲಿ, ವಿವಿಧ ರಾಜಕೀಯ ಪಕ್ಷಗಳಿಗೆ ಕೊಡುಗೆ ನೀಡಿದ ಕಾರ್ಪೊರೇಟ್​ಗಳ ಹೆಸರುಗಳನ್ನು ಬಹಿರಂಗಪಡಿಸುವುದು ಅವರನ್ನು ಬಲಿಪಶುಗಳನ್ನಾಗಿ ಮಾಡಿದಂತಾಗುತ್ತದೆ. ಕಾರ್ಪೊರೇಟ್‌ಗಳ ಹೆಸರುಗಳು ಮತ್ತು ವಿವಿಧ ಪಕ್ಷಗಳಿಗೆ ಅವರು ನೀಡಿದ ದೇಣಿಗೆಯ ಪ್ರಮಾಣವನ್ನು ಬಹಿರಂಗಪಡಿಸಿದರೆ, ಕಡಿಮೆ ದೇಣಿಗೆ ಪಡೆದ ಪಕ್ಷಗಳು ಅವರನ್ನು ಪ್ರತ್ಯೇಕಿಸಿ ಕಿರುಕುಳ ನೀಡುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಇದು ದೇಣಿಗೆಗಳನ್ನು ಸ್ವೀಕರಿಸುವಾಗ ಅವರಿಗೆ ನೀಡಿದ ಭರವಸೆಯನ್ನು ಉಲ್ಲಂಘಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಚುನಾವಣಾ ಬಾಂಡ್‌: ಸಮಯಾವಕಾಶ ಕೋರಿದ್ದ ಎಸ್‌ಬಿಐ ಅರ್ಜಿ ವಜಾ, ನಾಳೆಯೊಳಗೆ ಮಾಹಿತಿ ನೀಡುವಂತೆ ಸುಪ್ರೀಂ ಆದೇಶ​

Last Updated :Mar 12, 2024, 8:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.