ETV Bharat / bharat

ರಾಮ ಮಂದಿರ: ಸೌಹಾರ್ದತೆ, ಶಾಂತಿಗಾಗಿ ಭರತವರ್ಷ ಪುನರ್​ನಿರ್ಮಾಣ ಅಭಿಯಾನದ ಆರಂಭ - ಆರ್​ಎಸ್​​ಎಸ್

author img

By ETV Bharat Karnataka Team

Published : Jan 21, 2024, 8:45 PM IST

RSS chief Mohan Bhagwat
ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್

ಭಗವಾನ್ ರಾಮನು ದೇಶದ ಬಹುಸಂಖ್ಯಾತ ಸಮಾಜದ ಅತ್ಯಂತ ಪೂಜನೀಯ ದೇವರು ಮತ್ತು ಇಂದಿಗೂ ಇಡೀ ಸಮಾಜದಿಂದ ಆದರ್ಶವಾಗಿ ಸ್ವೀಕರಿಸಲ್ಪಟ್ಟಿದ್ದಾನೆ. ಹೀಗಾಗಿ ಅಯೋಧ್ಯೆಯ ರಾಮ ಜನ್ಮಭೂಮಿಯ ವಿವಾದದ ಪರ ಮತ್ತು ವಿರೋಧವಾಗಿ ಎದ್ದಿದ್ದ ಘರ್ಷಣೆಗೆ ಈಗ ಅಂತ್ಯ ಹಾಡಬೇಕೆಂದು ಆರ್​ಎಸ್​​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ.

ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ರಾಮ ಲಲ್ಲಾರ ಪ್ರವೇಶ ಮತ್ತು ದೇವಾಲಯದ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಸೌಹಾರ್ದತೆ, ಏಕತೆ, ಪ್ರಗತಿ, ಶಾಂತಿ ಮತ್ತು ಪ್ರತಿಯೊಬ್ಬರ ಯೋಗಕ್ಷೇಮಕ್ಕಾಗಿ ಭರತವರ್ಷ ಪುನರ್​ನಿರ್ಮಾಣ ಅಭಿಯಾನದ ಆರಂಭ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​​ಎಸ್​)ದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಹೊಸದಾಗಿ ನಿರ್ಮಿಸಿರುವ ರಾಮ ಮಂದಿರದಲ್ಲಿ ಜನವರಿ 22ರಂದ ದೇವರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯಲಿದೆ. ಇದಕ್ಕೂ ಮುನ್ನ ಆರ್‌ಎಸ್‌ಎಸ್ ವೆಬ್‌ಸೈಟ್‌ನಲ್ಲಿ ಲೇಖನವೊಂದನ್ನು ಪ್ರಕಟಿಸಲಾಗಿದೆ. ಇದರಲ್ಲಿ ಅಯೋಧ್ಯೆ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಹಿಂದೂ ಸಮಾಜದ ನಿರಂತರ ಹೋರಾಟ ಉಲ್ಲೇಖಿಸಿರುವ ಮೋಹನ್​ ಭಾಗವತ್, ವಿವಾದದ ಮೇಲಿನ ಘರ್ಷಣೆ ಮತ್ತು ಕಹಿ ಈಗಲಾದರೂ ಕೊನೆಗಾಣಬೇಕು. ವರ್ಷಗಳ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್ 2019ರ ನವೆಂಬರ್ 9ರಂದು ಸತ್ಯ ಮತ್ತು ವಾಸ್ತವವನ್ನು ಪರಿಶೀಲಿಸಿದ ನಂತರ ಮತ್ತು ಪ್ರಕರಣದ ಎಲ್ಲ ಕಡೆಗಳ ವಾದಗಳನ್ನು ಆಲಿಸಿದ ನಂತರ ಸಮತೋಲಿತ ತೀರ್ಪನ್ನು ಪ್ರಕಟಿಸಿದೆ ಎಂದು ತಿಳಿಸಿದ್ದಾರೆ.

ಭಗವಾನ್ ರಾಮನು ದೇಶದ ಬಹುಸಂಖ್ಯಾತ ಸಮಾಜದ ಅತ್ಯಂತ ಪೂಜನೀಯ ದೇವರು ಮತ್ತು ಇಂದಿಗೂ ಇಡೀ ಸಮಾಜದಿಂದ ಆದರ್ಶವಾಗಿ ಸ್ವೀಕರಿಸಲ್ಪಟ್ಟಿದ್ದಾನೆ. ಹೀಗಾಗಿ ವಿವಾದದ ಪರ ಮತ್ತು ವಿರೋಧವಾಗಿ ಎದ್ದಿದ್ದ ಘರ್ಷಣೆಗೆ ಈಗ ಅಂತ್ಯ ಹಾಡಬೇಕು. ಈ ನಡುವೆ ಉಂಟಾಗಿರುವ ಕಹಿಯೂ ಕೊನೆಗೊಳ್ಳಬೇಕು. ಸಮಾಜದ ಪ್ರಜ್ಞಾವಂತರು ವಿವಾದ ಸಂಪೂರ್ಣವಾಗಿ ಅಂತ್ಯಗೊಳ್ಳುವಂತೆ ನೋಡಿಕೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ.

ಭರತವರ್ಷ ಪುನರ್​ನಿರ್ಮಾಣದ ಅಭಿಯಾನ: ಅಯೋಧ್ಯೆ ಎಂದರೆ ಯುದ್ಧವಿಲ್ಲದ ನಗರ, ಸಂಘರ್ಷ ಮುಕ್ತ ಸ್ಥಳ. ಇಂತಹ ಸಂದರ್ಭದಲ್ಲಿ ಅಯೋಧ್ಯೆಯ ಪುನರ್​ನಿರ್ಮಾಣವು ಅಗತ್ಯವಾಗಿದೆ ಮತ್ತು ಅದು ನಮ್ಮೆಲ್ಲರ ಕರ್ತವ್ಯವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಸಂದರ್ಭವು ರಾಷ್ಟ್ರೀಯ ಹೆಮ್ಮೆಯ ಪುನರುಜ್ಜೀವನವನ್ನು ಸೂಚಿಸುತ್ತದೆ. ಇದು ಆಧುನಿಕ ಭಾರತೀಯ ಸಮಾಜದಿಂದ ಶ್ರೀರಾಮನ ಪಾತ್ರದ ಹಿಂದಿನ ಜೀವನ ದೃಷ್ಟಿಯ ಸ್ವೀಕಾರವನ್ನು ಸಹ ಸಂಕೇತಿಸುತ್ತದೆ ಎಂದು ಭಾಗವತ್ ಹೇಳಿದ್ದಾರೆ.

ಈ ಪ್ರಪಂಚವು ಒಂದು ರೀತಿಯ ಅಹಂಕಾರ, ಸ್ವಾರ್ಥ ಮತ್ತು ತಾರತಮ್ಯದಿಂದಾಗಿ ವಿನಾಶಕಾರಿ ಉನ್ಮಾದದಿಂದ ಕೂಡಿದ್ದು, ತನ್ನ ಮೇಲೆ ಅನಂತ ವಿಪತ್ತುಗಳನ್ನು ಎಳೆದುಕೊಳ್ಳುತ್ತಿದೆ. ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಲಲ್ಲಾರ ಪ್ರವೇಶ ಮತ್ತು ಪ್ರಾಣ ಪ್ರತಿಷ್ಠಾಪನೆಯು ಎಲ್ಲರ ಯೋಗಕ್ಷೇಮಕ್ಕಾಗಿ, ದ್ವೇಷವಿಲ್ಲದೆ ಎಲ್ಲರನ್ನೂ ಸ್ವೀಕರಿಸುವುದು ಮತ್ತು ಸಾಮರಸ್ಯ, ಏಕತೆ, ಪ್ರಗತಿ ಮತ್ತು ಶಾಂತಿಯ ಮಾರ್ಗವನ್ನು ತೋರಿಸುವ ಭರತವರ್ಷ ಪುನರ್​ನಿರ್ಮಾಣದ ಅಭಿಯಾನದ ಆರಂಭ ಎಂದೂ ಅಭಿಪ್ರಾಯಪಟ್ಟಿದ್ದಾರೆ.

ನಾವು ಆ ಅಭಿಯಾನದ ಸಕ್ರಿಯ ಅನುಯಾಯಿಗಳು ಮತ್ತು ಅನುಷ್ಠಾನಕಾರರು ಜನವರಿ 22ರ ಭಕ್ತಿ ಸಂಭ್ರಮದಲ್ಲಿ ದೇವಾಲಯದ ಪುನರ್​ನಿರ್ಮಾಣದ ಜೊತೆಗೆ ನಾವೆಲ್ಲರೂ ಭಾರತದ ಪುನರ್​​ರ್ಮಾಣಕ್ಕಾಗಿ ಸಂಕಲ್ಪ ಮಾಡಿದ್ದೇವೆ. ಇದರ ಮೂಲಕ ಇಡೀ ಪ್ರಪಂಚದ ಪುನರ್​​ನಿರ್ಮಾಣಕ್ಕೂ ದಾರಿ ಮಾಡಿಕೊಡುತ್ತೇವೆ. ಈ ಮಾರ್ಗದರ್ಶಿ ಬೆಳಕನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಮುಂದುವರಿಯುವುದು ಈ ಸಮಯದ ಅವಶ್ಯಕತೆಯಾಗಿದೆ ಎಂದು ತಿಳಿಸಿದ್ದಾರೆ.

ಪಾಶ್ಚಿಮಾತ್ಯ ದೇಶಗಳ ದಾಳಿಗಳಿಂದ ವಿನಾಶ - ಪರಕೀಯತೆ: ಭಾರತದ ಇತಿಹಾಸವು ಕಳೆದ ಒಂದೂವರೆ ಸಾವಿರ ವರ್ಷಗಳ ಆಕ್ರಮಣಕಾರರ ವಿರುದ್ಧ ನಿರಂತರ ಹೋರಾಟದ ಇತಿಹಾಸವಾಗಿದೆ. ಆರಂಭಿಕ ಆಕ್ರಮಣಗಳು ಲೂಟಿ ಮಾಡುವ ಮತ್ತು ಕೆಲವೊಮ್ಮೆ ಅಲೆಕ್ಸಾಂಡರ್​​ನ ಆಕ್ರಮಣದಂತೆ ವಸಾಹತುಶಾಹಿಯ ಗುರಿಯನ್ನು ಹೊಂದಿದ್ದವು. ಆದರೆ, ಇಸ್ಲಾಂ ಹೆಸರಿನಲ್ಲಿ ಪಾಶ್ಚಿಮಾತ್ಯ ದೇಶಗಳ ದಾಳಿಗಳು ಸಮಾಜದ ಸಂಪೂರ್ಣ ವಿನಾಶ ಮತ್ತು ಪರಕೀಯತೆಯನ್ನು ತಂದವು ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ತಮ್ಮ ಲೇಖನದಲ್ಲಿ ಉಲ್ಲೇಖಿಸಿದ್ದಾರೆ.

ರಾಷ್ಟ್ರ, ಸಮಾಜವನ್ನು ಮನೋಸ್ಥೈರ್ಯ ಕುಗ್ಗಿಸಲು ಧಾರ್ಮಿಕ ಸ್ಥಳಗಳನ್ನು ನಾಶಪಡಿಸುವುದು ಅವರಿಗೆ ಅಗತ್ಯವಾಗಿತ್ತು. ಆದ್ದರಿಂದ ವಿದೇಶಿ ಆಕ್ರಮಣಕಾರರು ಭಾರತದಲ್ಲಿನ ದೇವಾಲಯಗಳನ್ನು ಸಹ ನಾಶಪಡಿಸಿದರು. ಇದನ್ನೇ ಹಲವಾರು ಬಾರಿ ಮಾಡಿದರು. ಭಾರತೀಯ ಸಮಾಜದ ಮನೋಸ್ಥೈರ್ಯ ಕುಗ್ಗಿಸುವ ಗುರಿಯನ್ನೂ ಹೊಂದಿದ್ದರು. ಇದರಿಂದ ದುರ್ಬಲಗೊಂಡ ಸಮಾಜದೊಂದಿಗೆ ಅಡೆತಡೆಯಿಲ್ಲದೆ ಭಾರತವನ್ನು ಅವರು ಆಳಬಹುದು ತಿಳಿದಿದ್ದರು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಕೆಡವುವುದನ್ನೂ ಅದೇ ಉದ್ದೇಶ ಮತ್ತು ಕಾರಣದಿಂದ ಮಾಡಲಾಗಿತ್ತು. ಆಕ್ರಮಣಕಾರರ ಈ ನೀತಿಯು ಕೇವಲ ಅಯೋಧ್ಯೆ ಅಥವಾ ಯಾವುದೇ ಒಂದು ದೇವಾಲಯಕ್ಕೆ ಸೀಮಿತವಾಗಿಲ್ಲ. ಇಡೀ ಜಗತ್ತಿಗೆ ಇದೇ ಅವರ ಯುದ್ಧ ತಂತ್ರವಾಗಿತ್ತು ಎಂದು ಭಾಗವತ್ ವಿವರಿಸಿದ್ದಾರೆ.

1857ರ ಯುದ್ಧದಲ್ಲಿ ಭಾರತೀಯರ ಶೌರ್ಯ: ಭಾರತದಲ್ಲಿರುವ ಸಮಾಜದ ನಂಬಿಕೆ, ಬದ್ಧತೆ ಮತ್ತು ನೈತಿಕತೆ ಎಂದಿಗೂ ಕಡಿಮೆಯಾಗಿಲ್ಲ. ಸಮಾಜವು ತಲೆಬಾಗಲಿಲ್ಲ, ಹೋರಾಟ ಮುಂದುವರೆಯಿತು. ಆದ್ದರಿಂದ ರಾಮನ ಜನ್ಮಸ್ಥಳದ ಮೇಲೆ ಹಿಡಿತ ಸಾಧಿಸಲು ಮತ್ತು ಅಲ್ಲಿ (ಅಯೋಧ್ಯೆಯಲ್ಲಿ) ದೇವಾಲಯವನ್ನು ನಿರ್ಮಿಸಲು ಪದೇ ಪದೇ ಪ್ರಯತ್ನಿಸಲಾಯಿತು. ಅವನಿಗಾಗಿ (ರಾಮ) ಅನೇಕ ಯುದ್ಧಗಳು, ಹೋರಾಟಗಳು ಮತ್ತು ತ್ಯಾಗಗಳು ನಡೆದವು. ರಾಮ ಜನ್ಮಭೂಮಿಯ ವಿಷಯವು ಹಿಂದೂಗಳ ಮನಸ್ಸಿನಲ್ಲೇ ಬೇರೂರಿತ್ತು ಎಂದು ಹೇಳಿದ್ದಾರೆ.

ಅಲ್ಲದೇ, ಇತಿಹಾಸದ ಪುಟಗಳನ್ನು ತಿರುವಿ ಹಾಕಿರುವ ಮೋಹನ್ ಭಾಗವತ್, 1857ರಲ್ಲಿ ಬ್ರಿಟಿಷ್ ಆಡಳಿತದ ವಿರುದ್ಧ ಯುದ್ಧ ಯೋಜನೆಗಳನ್ನು ಮಾಡಲು ಪ್ರಾರಂಭಿಸಿದಾಗ ಹಿಂದೂಗಳು ಮತ್ತು ಮುಸ್ಲಿಮರು ಅವರ ವಿರುದ್ಧ ಹೋರಾಡಲು ಒಟ್ಟಿಗೆ ತಮ್ಮ ಸಿದ್ಧತೆಯನ್ನು ವ್ಯಕ್ತಪಡಿಸಿದ್ದರು. ನಂತರ ಅವರ ನಡುವೆ ಪರಸ್ಪರ ವಿಚಾರ ವಿನಿಮಯ ನಡೆಯಿತು. ಇದೇ ಸಮಯದಲ್ಲಿ ಗೋಹತ್ಯೆ ನಿಷೇಧ ಮತ್ತು ಶ್ರೀರಾಮ ಜನ್ಮಭೂಮಿಯ ವಿಮೋಚನೆಯ ವಿಷಯದ ಬಗ್ಗೆ ರಾಜಿಯಾಗುವ ಪರಿಸ್ಥಿತಿಯು ವಿಕಸನಗೊಂಡಿತು. ಬಹದ್ದೂರ್ ಶಾ ಜಾಫರ್ ಕೂಡ ಗೋಹತ್ಯೆ ನಿಷೇಧದ ಭರವಸೆ ನೀಡಿದ್ದರು. ಇದರ ಪರಿಣಾಮವಾಗಿ ಇಡೀ ಸಮಾಜವು ಒಟ್ಟಾಗಿ ಹೋರಾಡಿತು. ಆ ಯುದ್ಧದಲ್ಲಿ ಭಾರತೀಯರು ಶೌರ್ಯವನ್ನು ತೋರಿಸಿದರು. ಆದರೆ, ದುರದೃಷ್ಟವಶಾತ್ ಈ ಸ್ವಾತಂತ್ರ್ಯ ಸಂಗ್ರಾಮ ವಿಫಲವಾಯಿತು. ಆಗ ಭಾರತಕ್ಕೆ ಸ್ವಾತಂತ್ರ್ಯ ಸಿಗಲಿಲ್ಲ. ಬ್ರಿಟಿಷರ ಆಡಳಿತ ಯಾವ ಅಡ್ಡಿ ಇಲ್ಲದೇ ಉಳಿಯಿತು. ಆದರೆ, ರಾಮ ಮಂದಿರದ ಹೋರಾಟ ನಿಂತಿರಲಿಲ್ಲ ಎಂದು ಭಾಗವತ್ ತಮ್ಮ ಲೇಖನದಲ್ಲಿ ಸೇರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.